ತಡಸ: ನೂತನ ಬಸ್‌ ನಿಲ್ದಾಣ ಉದ್ಘಾಟನೆ

7

ತಡಸ: ನೂತನ ಬಸ್‌ ನಿಲ್ದಾಣ ಉದ್ಘಾಟನೆ

Published:
Updated:

ಶಿಗ್ಗಾವಿ: ‘ರಸ್ತೆ ಮತ್ತು ಸಾರಿಗೆ ಸಂಸ್ಥೆ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ಕ್ರಾಂತಿಕಾರಿಕ ಬದಲಾವಣೆ ತಂದಿದ್ದು, ಅದರಿಂದ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದರು.

ತಾಲ್ಲೂಕಿನ ತಡಸ ಗ್ರಾಮದಲ್ಲಿ ಮಂಗಳವಾರ ನೂತನ ಬಸ್‌ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ನಾಲ್ಕು ಸಾರಿಗೆ ವಿಭಾಗಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸಿಬ್ಬಂದಿ ಅಂತರ ವರ್ಗಾವಣೆಯಲ್ಲಿ ಸಡಿಲಿಕೆ ಮಾಡಿದೆ. ಶೇ 12.5 ರಷ್ಟು ಬೋನಸ್ ನೀಡಲಾಗಿದೆ. ಅಲ್ಲದೆ ಈ ನಿಲ್ದಾಣಕ್ಕೆ ಸುಮಾರು ₹ 2.38 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.

‘ರೈತ ಸಾರಥಿ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರುವ ಮೂಲಕ ಪ್ರಯಾಣಿಕರಿಗೆ ಮತ್ತು ರೈತರಿಗೆ ನೆರವು ನೀಡಲಾಗಿದೆ. ಹೀಗಾಗಿ ರಾಜ್ಯದ 5 ಲಕ್ಷ ರೈತರ ಟ್ರ್ಯಾಕ್ಟರ್‌ ಚಾಲಕರಿಗೆ ಉಚಿತ ಪರವಾನಗಿ ಪತ್ರ ವಿತರಿಸಲಾಗಿದೆ. ಅಲ್ಲದೆ ರಾಜ್ಯದ ಸುಮಾರು 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವ ಮೂಲಕ ಹೊಸ ದಾಖಲೆ ಮಾಡಲಾಗಿದೆ’ ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸುಮಾರು ₹ 120 ಕೋಟಿ ನಷ್ಟದಲ್ಲಿದೆ. ಸಾರಿಗೆ ಇಲಾಖೆಗೆ ಅತಿ ಹೆಚ್ಚು ಆದಾಯ ಒದಗಿಸುವ ಮುಂಬೈ, ಹೈದರಾಬಾದ್, ಕರ್ನಾಟಕ ಭಾಗಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ತೆರಿಗೆ ರಿಯಾಯಿತಿ ಜತೆಗೆ ಆರ್ಥಿಕ ಸಹಾಯ ನೀಡಿದಾಗ ಸಂಸ್ಥೆ ಅಭಿವೃದ್ಧಿ ಸಾಧ್ಯ. ಸಚಿವರು ಈ ಕುರಿತು ಗಮನ ಹರಿಸಬೇಕು’ ಎಂದರು.

‘ಶಿಗ್ಗಾವಿ ಹಳೇ ಬಸ್‌ ನಿಲ್ದಾಣ ನವೀಕರಿಸಿ ವಾಣಿಜ್ಯ ಮಳಿಗೆ ನಿರ್ಮಿಸಿದಾಗ ಸಂಸ್ಥೆಗೆ ಉತ್ತಮ ಆದಾಯ ಸಿಗುತ್ತದೆ. ಪಟ್ಟಣದ ಹೊರವಲಯದಲ್ಲಿರುವ ಸುಮಾರು 12 ಎಕರೆ ಜಾಗ ವಿವಾದದಲ್ಲಿದ್ದು, ಅಲ್ಲಿ ತಾಂತ್ರಿಕ ಕಾರ್ಯಾಗಾರ ಆರಂಭಿಸಬೇಕು. ಹಾವೇರಿ ವಿಭಾಗಕ್ಕೆ ಹೆಚ್ಚಿನ ಬಸ್‌ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಮುಖ್ಯ ನಿರ್ದೇಶಕ ಪಾಂಡುರಂಗ ನಾಯಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸೈಯ್ಯದ್‌ ಅಜ್ಜಂಫೀರ ಖಾದ್ರಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಸದಸ್ಯೆ ಮಮ್ತಾಜಬಿ ತಡಸ, ಎಪಿಎಂಸಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಾಕರ ವೆರ್ಣೇಕರ, ಉಪಾಧ್ಯಕ್ಷೆ ಸೋಮವ್ವ ಗಾಣಿಗೇರ, ರಾಜಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry