ವಿಶ್ವ ಜಲದಿನ: ಹೆಚ್ಚುತ್ತಿರುವ ಹಾಹಾಕಾರ

7
ಜಿಲ್ಲೆಯಲ್ಲಿ 66 ಜಲ ಸಮಸ್ಯಾತ್ಮಕ ಹಳ್ಳಿಗಳು, ಹುರಳಿಹಾಳಕ್ಕೆ ಟ್ಯಾಂಕರ್ ನೀರು ಪೂರೈಕೆ

ವಿಶ್ವ ಜಲದಿನ: ಹೆಚ್ಚುತ್ತಿರುವ ಹಾಹಾಕಾರ

Published:
Updated:
ವಿಶ್ವ ಜಲದಿನ: ಹೆಚ್ಚುತ್ತಿರುವ ಹಾಹಾಕಾರ

ಹಾವೇರಿ: ಇಂದು ಅಂತರರಾಷ್ಟ್ರೀಯ (ಮಾ.22) ಜಲದಿನ. ಜಿಲ್ಲೆಯಲ್ಲಿ ಈಗಾಗಲೇ ನೀರಿನ ಹಾಹಾಕಾರ ಹೆಚ್ಚಿದ್ದು, ತಾಲ್ಲೂಕಿನ ಹುರುಳಿಹಾಳಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸ ಲಾಗುತ್ತಿದೆ, ನೀರಿನ ಸಮಸ್ಯೆ ಉದ್ಭವಿಸ ಬಹುದಾದ 66 ಹಳ್ಳಿಗಳನ್ನು ಗುರುತಿಸ ಲಾಗಿದ್ದು, ಅಂತರ್ಜಲ ಮಟ್ಟವೂ 2.5 ಮೀ. ಕುಸಿದಿದೆ.

ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ, ಕುಮುದ್ವತಿ ನದಿಯಲ್ಲಿ ಹರಿವು ನಿಂತಿದ್ದು, ಕಳೆದೊಂದು ದಶಕದಿಂದ ವಾರ್ಷಿಕ ನೀರಿನ ಹರಿವು ಆರು ತಿಂಗಳಿಗೂ ಕಡಿಮೆಯಾಗಿರುವುದು ಆತಂಕ ಮೂಡಿಸಿದೆ. 1,400ಕ್ಕೂ ಹೆಚ್ಚಿನ ಕೆರೆಗಳ ಪೈಕಿ ತುಂಗಾ ಮೇಲ್ದಂಡೆ ಯೋಜನೆ ಹಾಗೂ ಇತರ ಏತ ನೀರಾವರಿ ಯೋಜನೆಗಳ ಮೂಲಕ ತುಂಬಿಸಿದ ಕೆರಗಳನ್ನು ಹೊರತು ಪಡಿಸಿ, ಬಹುತೇಕ ಭಣಗುಟ್ಟುತ್ತಿವೆ.

‘ಜಿಲ್ಲೆಯಲ್ಲಿ 410 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದು, ಸದ್ಯ 6 ಅನ್ನು ಬಳಸಿಕೊಂಡು ನೀರು ಪೂರೈಸಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಾಯಕ ಜೆ. ಹುಲ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಜಿಲ್ಲೆಯಲ್ಲಿ 15 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ವರದಾ ತೀರದ 8 ಮತ್ತು ತುಂಗಭದ್ರಾ ತೀರದಲ್ಲಿ 7 ಇವೆ. ಈ ಪೈಕಿ ವರದಾ ನದಿ ಬತ್ತಿ ಹೋಗಿದ್ದು, ಯೋಜನೆಗೆ ಕೊಳವೆಬಾವಿ ನೀರನ್ನು ಆಶ್ರಯಿಸ ಲಾಗಿದೆ. ತುಂಗಭದ್ರಾ ನದಿಯಲ್ಲೂ ನೀರಿನ ಕೊರತೆಯ ಕಾರಣ ಕೇವಲ 3 ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುವಂತೆ ಜಿಲ್ಲಾಡಳಿತ ಮನವಿ ಸಲ್ಲಿಸಿದೆ.

ಶುದ್ಧ ಕುಡಿಯುವ ನೀರಿನ ಘಟಕ: ಜಿಲ್ಲೆಗೆ ಒಟ್ಟು 742 ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆಗೊಂಡಿದ್ದು, 446 ಕಾಮಗಾರಿ ಪೂರ್ಣಗೊಂಡಿವೆ. ಈ ಪೈಕಿ 36 ದುರಸ್ತಿಯಲ್ಲಿದ್ದು, 410 ಚಾಲ್ತಿಯಲ್ಲಿವೆ. ಅಲ್ಲದೇ, 25 ಘಟಕಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.

ಸಮಸ್ಯಾತ್ಮಕ ಹಳ್ಳಿಗಳು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 66 ಹಳ್ಳಿಗಳನ್ನು ಗುರುತಿಸಲಾಗಿದೆ. ಹಿರೇಕೆರೂರ–13, ರಾಣೆಬೆನ್ನೂರು ಮತ್ತು ಶಿಗ್ಗಾವಿಯ ತಲಾ–11,ಬ್ಯಾಡಗಿ ಮತ್ತು ಹಾವೇರಿಯ ತಲಾ–9, ಹಾನಗಲ್–7, ಸವಣೂರ–6 ಹಳ್ಳಿಗಳಿವೆ ಎಂದು ಕಾರ್ಯನಿರ್ವಾಯಕ ಎಂಜಿನಿಯರ್ ವಿನಾಯಕ ಜೆ. ಹುಲ್ಲೂರ ತಿಳಿಸಿದರು.

ವಿಶ್ವ ಜಲದಿನ: ‘ನೀರಿನ ಪ್ರಕೃತಿ’ (Nature of water) 2018ರ ಜಲದಿನದ ಘೋಷಣೆಯಾಗಿದೆ. ನಾವು ಎದುರಿಸುವ ನೀರಿನ ಸವಾಲುಗಳಿಗೆ ನೈಸರ್ಗಿಕ ಪರಿಹಾರಗಳನ್ನು ಅನ್ವೇಷಿಸುವುದು ಇದರ ಉದ್ದೇಶವಾಗಿದೆ. ಅಲ್ಲದೇ, ಪ್ರತಿಯೊಬ್ಬರಿಗೂ ಸುರಕ್ಷಿತ ನೀರನ್ನು ಖಾತ್ರಿಪಡಿಸುವುದು ಮತ್ತು ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮತ್ತು ಮಾಲಿನ್ಯ ವನ್ನು ಕಡಿಮೆ ಮಾಡುವ ಗುರಿಗಳನ್ನು ಒಳಗೊಂಡಿದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಅಶೋಕ ಪಾತೇನವರ ತಿಳಿಸಿದರು.

ಜೀವ ಜಲ: 700 ಕೋಟಿ ಮಾನವರು, ಪ್ರಾಣಿ, ಪಕ್ಷಿ, ಸೂಕ್ಷ್ಮಾಣು, ಕ್ರಿಮಿ, ಕೀಟಗಳಿಗೆಲ್ಲದಕ್ಕೂ ನೀರು ಜೀವಜಲ. ಸದ್ಯದ ಸಂಶೋಧನೆಗಳ ಪ್ರಕಾರ ಭೂಮಿ ಮಾತ್ರ ವಾಸಯೋಗ್ಯವಾಗಿದೆ. ಮನುಷ್ಯ ದೇಹದ ಒಟ್ಟು ತೂಕದಲ್ಲಿ ಶೇ 60ರಿಂದ 65ರಷ್ಟು ಭಾಗ ನೀರು ಇರುತ್ತದೆ ಎಂದು ಅವರು ವಿವರಿಸಿದರು. ನೀರಿಲ್ಲದೆ ಬದುಕಿಲ್ಲ. ಆದರೆ, ಒಂದು ಲೀಟರ್ ನೀರಿಗೆ ₹ 15ರಿಂದ ₹20 ಖರ್ಚು ಮಾಡುವ ಸ್ಥಿತಿ ಬಂದಿದೆ. ಮುಂದಿನ ಮಹಾಯುದ್ಧವು ನೀರಿ ಗಾಗಿಯೇ ನಡೆಯಬಹುದು ಎಂಬುದು ಹಿರಿಯ ತಜ್ಞರ ಅಭಿಪ್ರಾಯ.

**

‘₹2 ಕೋಟಿ ಬಿಡುಗಡೆ’

‘ರಾಜ್ಯ ಸರ್ಕಾರವು ಜಿಲ್ಲೆಗೆ ₹2 ಕೋಟಿ ಬಿಡುಗಡೆ ಮಾಡಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹30 ಲಕ್ಷ ಹಂಚಿಕೆ ಮಾಡಲಾಗಿದೆ. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿಗಳು ಪ್ರತಿ ವಾರ ಸಭೆ ನಡೆಸಿ, ಕ್ರಮ ಕೈಗೊಳ್ಳುತ್ತಿವೆ. ತುರ್ತು ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry