4
ಕೆರೆ ದಂಡೆಯಲ್ಲಿ ಇಂಗುಗುಂಡಿ ನಿರ್ಮಾಣ; ರೈತರಿಗೆ ವರ

ಜಿಲ್ಲೆಯ ಅಂತರ್ಜಲ ಮಟ್ಟ ಉತ್ತಮ!

Published:
Updated:

ಕಲಬುರ್ಗಿ: ನೀರಿನ ಅತಿಯಾದ ಬಳಕೆ ಮತ್ತು ಕೊರತೆಯ ಮಧ್ಯೆಯೂ ಜಿಲ್ಲೆಯಾದ್ಯಂತ ಐದು ವರ್ಷಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ.

ಹಿಂದಿನ ಐದು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ ಸ್ವಲ್ಪ ಏರಿಕೆ ಕಂಡು ಬಂದಿದೆ. ಆಳಂದ ತಾಲ್ಲೂಕಿನಲ್ಲಿ 2013ರಲ್ಲಿ ಅಂತರ್ಜಲದ ಸರಾಸರಿ ಮಟ್ಟ 17.17 ಮೀಟರ್ ಇದ್ದರೆ, 2017ರಲ್ಲಿ ಈ ಪ್ರಮಾಣ 9.81 ಮೀಟರ್ ಇದೆ. ಚಿಂಚೋಳಿ, ಚಿತ್ತಾಪುರ ಮತ್ತು ಕಲಬುರ್ಗಿ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಉತ್ತಮವಾಗಿದೆ. ಚೆಕ್ ಡ್ಯಾಂ, ಮಲ್ಟಿ ಆರ್ಚ್ ಚೆಕ್‌ ಡ್ಯಾಂಗಳ ನಿರ್ಮಾಣದಿಂದ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕೃಷಿ ಹೊಂಡ ಮತ್ತು ಇಂಗುಗುಂಡಿಗಳ ನಿರ್ಮಾಣದಿಂದ ಅಂತರ್ಜಲಮಟ್ಟದಲ್ಲಿ ಏರಿಕೆಯಾಗಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತವೆ.

‘ಕೇಂದ್ರೀಯ ಅಂತರ್ಜಲ ಮಂಡಳಿಯ ಅಂತರ್ಜಲ ನಿರ್ದೇಶನಾಲಯದ ಪ್ರಕಾರ ರಾಜ್ಯದ ಅಂತರ್ಜಲ ಬಳಕೆ ಪ್ರಮಾಣ ಶೇ 64ರಷ್ಟಿದ್ದರೆ, ಕಲಬುರ್ಗಿ ಜಿಲ್ಲೆಯಲ್ಲಿ ಈ ಪ್ರಮಾಣ ಶೇ 32ರಷ್ಟಿದೆ. 2016–17ರಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಈ ವರ್ಷ ನೀರಿನ ಸಮಸ್ಯೆ ಅಷ್ಟಾಗಿ ಕಂಡು ಬರುತ್ತಿಲ್ಲ’ ಎಂದು ಜಿಲ್ಲಾ ಅಂತರ್ಜಲ ಕಚೇರಿ ಮೂಲಗಳು ಹೇಳುತ್ತವೆ.

‘ಅಂತರ್ಜಲವನ್ನು ಅನಿಯಮಿತವಾಗಿ ಮತ್ತು ವಿವೇಚನಾರಹಿತವಾಗಿ ಬಳಸುತ್ತಿರುವುದರಿಂದ ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರಿಗೂ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 2012ರಲ್ಲಿ ಅಂತರ್ಜಲ ಸಂಪನ್ಮೂಲದ ಅತಿಬಳಕೆಯ ನಿಯಂತ್ರಣ ಅಧಿನಿಯಮವನ್ನು ಜಾರಿಗೆ ತಂದಿದೆ. ಈ ಅಧಿನಿಯಮದ ಪ್ರಕಾರ ಅಂತರ್ಜಲ ಅತಿಬಳಕೆ ಪ್ರದೇಶಗಳಲ್ಲಿ ಹೊಸದಾಗಿ ಬಾವಿ, ಕೊಳವೆಬಾವಿ ಕೊರೆಸಲು ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ’ ಎಂಬುದು ಮೂಲಗಳ ವಿವರಣೆ.

ಕೊಳವೆ ಬಾವಿಗಳ ಸಂಖ್ಯೆ: ಜಿಲ್ಲೆಯಲ್ಲಿ 918 ಗ್ರಾಮಗಳಿವೆ. ನೀರಾವರಿಗಾಗಿ 8,556 ಬಾವಿಗಳನ್ನು ಕೊರೆಯಲಾಗಿದ್ದು, ಕುಡಿಯುವ ನೀರಿಗಾಗಿ 7,168 ಕೈಪಂಪು, ಕಿರುನೀರು ಸರಬರಾಜು ಯೋಜನೆಯಡಿ 1,500 ಮತ್ತು ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 1,205 ಸೇರಿ ಒಟ್ಟು 9,873 ಬಾವಿಗಳನ್ನು ಕೊರೆಯಲಾಗಿದೆ. ಕಲಬುರ್ಗಿ ನಗರಕ್ಕೆ ಭೀಮಾ, ಕಾಗಿಣಾ ಮತ್ತು ಬೆಣ್ಣೆತೊರಾ ಜಲಾಶಯಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ತಪ್ಪದ ಬವಣೆ:ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಉತ್ತಮವಾಗಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿರುತ್ತದೆ. ಅದರಲ್ಲೂ ಆಳಂದ ಮತ್ತು ಕಲಬುರ್ಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಸ್ಥಿತಿ ಇಂದಿಗೂ ಇದೆ.

ಇಂಗುಗುಂಡಿ ನಿರ್ಮಾಣ:ಕಲಬುರ್ಗಿ ತಾಲ್ಲೂಕು ಪಂಚಾಯಿತಿಯು ಉದ್ಯೋಗ ಖಾತರಿ ಯೋಜನೆಯಡಿ ಕಳೆದ ವರ್ಷ ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿದ್ದು, ಇದರಿಂದ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.

ತಾಲ್ಲೂಕಿನ ಭೀಮಳ್ಳಿ, ಭೂಪಾಲ ತೆಗನೂರ, ಡೊಂಗರಗಾಂವ್, ಹರಸೂರ, ಕವಲಗಾ (ಬಿ), ಮರಗುತ್ತಿ, ಮೇಳಕುಂದಾ (ಬಿ), ನಾಗೂರ, ಓಕಳಿ, ಪಟ್ಟಣ, ಸಣ್ಣೂರ, ತಾಜಸುಲ್ತಾನಪುರ ಹಾಗೂ ಹತಗುಂದ ಗ್ರಾಮಗಳ ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry