ಅರೆಬರೆ ಕಾಮಗಾರಿಗಳಿಗೂ ಉದ್ಘಾಟನೆ ಭಾಗ್ಯ!

7
ಚುನಾವಣೆ ಲಾಭಕ್ಕೆ ಕಾಂಗ್ರೆಸ್‌ ತಂತ್ರ, ವಿರೋಧ ಪಕ್ಷಗಳ ಆಕ್ರೋಶ

ಅರೆಬರೆ ಕಾಮಗಾರಿಗಳಿಗೂ ಉದ್ಘಾಟನೆ ಭಾಗ್ಯ!

Published:
Updated:
ಅರೆಬರೆ ಕಾಮಗಾರಿಗಳಿಗೂ ಉದ್ಘಾಟನೆ ಭಾಗ್ಯ!

ಮಡಿಕೇರಿ: ‘ಮಂಜಿನ ನಗರಿ’ಯಲ್ಲಿ ಇಷ್ಟು ದಿವಸ ನಡೆಯುತ್ತಿದ್ದ ಕಾಮಗಾರಿಗೆ ಈಗ ಉದ್ಘಾಟನೆ ಭಾಗ್ಯ. ಗುರುವಾರ ಒಂದೇ ದಿವಸ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ ಅವರು ಮೂರು ಹೊಸ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ. ಅದರಲ್ಲಿ ಕೆಲವು ಕಟ್ಟಡಗಳ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಆದರೂ, ಲೋಕಾರ್ಪಣೆಗೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ರೇಸ್‌ಕೋರ್ಸ್‌ ರಸ್ತೆಯಲ್ಲಿ ನಿರ್ಮಿಸುತ್ತಿರುವ ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿ ಪೂರ್ಣ ಆಗದಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ನಗರಸಭೆ ಆಡಳಿತಾರೂಢ ಕಾಂಗ್ರೆಸ್‌ ಮಾತ್ರ ಉದ್ಘಾಟನೆ, ಭೂಮಿಪೂಜೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ.

ಖಾಸಗಿ ಬಸ್‌ ನಿಲ್ದಾಣ ಬಹುದಿನದ ಬೇಡಿಕೆ. ಎರಡು ವರ್ಷಗಳ ಹಿಂದೆಯೇ ಭೂಮಿ ನೆರವೇರಿಸಿದ್ದರೂ ಕಾಮಗಾರಿ ಆರಂಭಿಸಿರಲಿಲ್ಲ. ಸೀತಾರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ಬಳಿಕ ಮತ್ತೊಮ್ಮೆ ಚಾಲನೆ ನೀಡಲಾಯಿತು.

ಮಂದಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿಯು ಫೆಬ್ರುವರಿಯಿಂದ ವೇಗ ಪಡೆದುಕೊಂಡಿತ್ತು. ಆದರೂ, ಪೂರ್ಣಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.ಗುರುವಾರ ಬೆಳಿಗ್ಗೆ 10ಕ್ಕೆ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಲಾಗುತ್ತಿದೆ. ಕ್ಯಾಂಟೀನ್‌ ಕಾಮಗಾರಿ ಮಾತ್ರ ಪೂರ್ಣವಾಗಿದೆ.

ಪಕ್ಕದಲ್ಲಿರುವ ನಿಲ್ದಾಣದ ಕಾಮಗಾರಿಯೂ ಇನ್ನೂ ಪ್ರಗತಿಯಲ್ಲಿದೆ. ಬುಧವಾರ ಎರಡು ಜೆಸಿಬಿ, ಕಾಂಕ್ರೀಟ್‌ ಮಿಶ್ರಣ ಮಾಡುವ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. 10ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಕೆಲಸದಲ್ಲಿ ಮಗ್ನರಾಗಿದ್ದರು. ಮಳಿಗೆ ಕಾಮಗಾರಿಯೂ ಬಾಕಿಯಿದೆ. ಆತುರದಿಂದ ಬಣ್ಣ ಬಳಿಯಲಾಗುತ್ತಿದೆ. ನೆಲಕ್ಕೆ ಇನ್ನೂ ಟೈಲ್ಸ್‌ ಅಳವಡಿಸಿಲ್ಲ. ಬಸ್‌ ನಿಲುಗಡೆ ಸ್ಥಳದಲ್ಲಿ ಕಾಂಕ್ರೀಟೀಕರಣ ಪ್ರಗತಿಯಲ್ಲಿದೆ. ಮುಕ್ತಾಯಗೊಂಡಿರುವ ಕಾಮಗಾರಿಯೂ ಕ್ಯೂರಿಂಗ್‌ ಆಗಿಲ್ಲ. ಆಗಲೇ ಲೋಕಾರ್ಪಣೆಗೆ ಸಿದ್ಧತೆ ಮಾಡಲಾಗಿದೆ.

ಮಾರುಕಟ್ಟೆಯದ್ದು ಅದೇ ಕತೆ. ಯುಗಾದಿಯ ದಿವಸ ಮಡಿಕೇರಿಯಲ್ಲಿ ಸುರಿದ ಭಾರಿ ಮಳೆಗೆ ನೀರು ನೂತನ ಮಾರುಕಟ್ಟೆಯ ಒಳಗೆ ಪ್ರವೇಶಿಸಿತ್ತು. ನೀರು ಬಾರದಂತೆ ತಡೆಗೋಡೆ, ಚರಂಡಿ ನಿರ್ಮಾಣ ಇನ್ನೂ ಆಗಿಲ್ಲ. ವಿದ್ಯುತ್‌ ಸಂಪರ್ಕ, ಶೌಚಾಲಯ ಕಾಮಗಾರಿ ಬಾಕಿಯಿದೆ.

ಸಾಲು ಸಾಲು ಉದ್ಘಾಟನೆ: ಬುಧವಾರ ಸೀತಾರಾಂ ಅವರು ತಿತಿಮತಿಯ ಆಶ್ರಮ ಶಾಲೆಯ ಹೆಚ್ಚುವರಿ ಕೊಠಡಿ, ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿ ಪೂಜೆ, ಇಗ್ಗುತಪ್ಪ ದೇವಾಯಕ್ಕೆ ತೆರಳುವ ರಸ್ತೆಗೆ ಚಾಲನೆ ನೀಡಿದರು. ಅಷ್ಟು ಮಾತ್ರವಲ್ಲದೇ ಗುರುವಾರ ಅರೆಬರೆ ಕಾಮಗಾರಿಯನ್ನೂ ಉದ್ಘಾಟಿಸಲು ಮುಂದಾಗಿರುವುದು ಟೀಕೆಗೆ ಕಾರಣವಾಗಿದೆ.

ಚುನಾವಣೆಯಲ್ಲಿ ಲಾಭದ ತಂತ್ರ: ‘ಕೆಲವೇ ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ನೀತಿ ಸಂಹಿತೆ ಜಾರಿಯಾದರೆ ಉದ್ಘಾಟನೆ ಸಾಧ್ಯವಿಲ್ಲ. ನಮ್ಮ ಶ್ರಮದ ಯೋಜನೆಗಳಿವು; ನಾವೇ ಉದ್ಘಾಟಿಸುತ್ತಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.

**

ರಾಜಕೀಯ ‘ಗಿಮಿಕ್‌’: ಬಿಜೆಪಿ ಟೀಕೆ

ಮಡಿಕೇರಿ: ‘ಕಾಂಗ್ರೆಸ್‌ ಮುಖಂಡರು ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ. ಉದ್ಘಾಟನೆಯಾದ ಬಳಿಕ ಅದು ಜನರ ಬಳಕೆಗೆ ಲಭ್ಯವಾಗಬೇಕು. ಆದರೆ, ಯಾವ ಕಾಮಗಾರಿಯೂ ಪೂರ್ಣವಾಗಿಲ್ಲ. ಕೇವಲ ಚುನಾವಣೆಯ ಲಾಭಕ್ಕಾಗಿ ಈ ರೀತಿ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ನಗರಸಭೆ ಬಿಜೆಪಿ ಸದಸ್ಯ ಕೆ.ಎಸ್‌. ರಮೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉದ್ಘಾಟನೆಗೆ ನಮ್ಮ ವಿರೋಧವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಹೈಟೆಕ್‌ ಮಾರುಕಟ್ಟೆ ಮಾಡುತ್ತೇವೆ ಎಂದು ಹೇಳಲಾಗಿತ್ತು. ಇನ್ನೂ ಬೆಳಕಿನ ವ್ಯವಸ್ಥೆ, ಟೈಲ್ಸ್‌ ಅಳವಡಿಕೆ, ಚರಂಡಿ ನಿರ್ಮಾಣ ಪೂರ್ಣಗೊಂಡಿಲ್ಲ. ಉದ್ಘಾಟನೆ ಆದ ಬಳಿಕ ವ್ಯಾಪಾರಸ್ಥರು ಅಲ್ಲಿಗೆ ತೆರಳಬಾರದು. ಒಂದು ವೇಳೆ ವ್ಯಾಪಾರಕ್ಕೆ ಮುಂದಾದರೆ ಅಷ್ಟಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗುತ್ತದೆ. ಇಂದಿರಾ ಕ್ಯಾಂಟೀನ್‌ ರೆಡಿಮೆಡ್‌ ಕೇಕ್‌ನಂತಿದೆ. ಇಲ್ಲಿನ ಮಳೆಗೆ ಅದು ಬಿದ್ದು ಹೋಗುವ ಸಾಧ್ಯತೆಯಿದೆ. ಬಸ್‌ ಸಂಚಾರಕ್ಕೆ ಮಾರ್ಗ ನಿಗದಿಯಾಗಿಲ್ಲ. ಬಸ್‌ ನಿಲುಗಡೆಗೆ ವ್ಯವಸ್ಥೆಯಾಗಿಲ್ಲ. ಕಾಂಗ್ರೆಸ್‌ ಆಡಳಿತವು ಜಿಲ್ಲೆಯ ಜನರನ್ನು ಮಂಗ ಮಾಡಲು ಹೊರಟಿದೆ’ ಎಂದು ದೂರಿದರು.

**

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸದ ವೇಳಾಪಟ್ಟಿಯಂತೆ ಉದ್ಘಾಟನೆ ದಿನ, ಸಮಯ ನಿಗದಿ ಪಡಿಸಲಾಗಿದೆ. ಮಾರುಕಟ್ಟೆ ಸುಸಜ್ಜಿತವಾಗಿದೆ. ಅದರ ಬಗ್ಗೆ ಸಂಶಯಬೇಡ.

– ಬಿ. ಶುಭಾ, ಪೌರಾಯುಕ್ತರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry