ಸಮಸ್ಯೆಗಳ ತಾಂಡವ; ಗ್ರಾಮಸ್ಥರ ಆಕ್ರೋಶ

7

ಸಮಸ್ಯೆಗಳ ತಾಂಡವ; ಗ್ರಾಮಸ್ಥರ ಆಕ್ರೋಶ

Published:
Updated:

ಸುಂಟಿಕೊಪ್ಪ: ರಸ್ತೆ ಕಾಮಗಾರಿಯಲ್ಲಿ ರಾಜಕೀಯ, ಕೆರೆಯಲ್ಲಿ ಆಕ್ರಮ ಗಣಿಗಾರಿಕೆ, ಕಾಡಾನೆ ಹಾವಳಿ, ಮರ ತೆರವುಗೊಳಿಸುವಲ್ಲಿ ಅರಣ್ಯ ಇಲಾಖೆಯ ನಿರಾಸಕ್ತಿ, ಮಹಿಳೆಗೆ ಕಿರುಕುಳ ಪ್ರಕರಣ ಸೇರಿದಂತೆ ಹಲವು ವಿಷಯಗಳು ಈಚೆಗೆ ನಡೆದ ನಾಕೂರು ಶಿರಂಗಾಲ ಗ್ರಾಮಸಭೆಯಲ್ಲಿ ಚರ್ಚೆಗೆ ಬಂದವು.

‌‌ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿ.ಆರ್.ರಂಜನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ತುಸು ಬಿಸಿಯಾಗೇ ಇತ್ತು. ಅದರಲ್ಲೂ ಗ್ರಾಮದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳ ಬಗ್ಗೆ ಜನರೂ ಆಕ್ರೋಶ ವ್ಯಕ್ತಪಡಿಸಿದರು.

‘ನಾಕೂರಿನಿಂದ ಬಸವನಹಳ್ಳಿಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಎಸ್.ಪಿ.ನಿಂಗಪ್ಪ ಅವರು ಬೇಲಿ ತೆರವುಗೊಳಿಸಿ ಸಹಕಾರ ನೀಡುತ್ತಿಲ್ಲ’ ಎಂದು ಜಿ.ಪಂ ಸದಸ್ಯೆ ಕುಮುದಾ ಧರ್ಮಪ್ಪ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಂಗಪ್ಪ ಅವರು, ‘ಶಾಸಕ ಅಪ್ಪಚ್ಚು ರಂಜನ್ ಅವರ ಪರಿಶ್ರಮದಿಂದ ₹ 9 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ನೀವು ಗ್ರಾಮದ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ತಂದು ಕೆಲಸ ಮಾಡಿಸಿ’ ಎಂದರು. ಇದಕ್ಕೆ ಕೆಲ ಸದಸ್ಯರೂ ದನಿಗೂಡಿಸಿದಾಗ ವಾಗ್ವಾದ ಆರಂಭವಾಯಿತು.

ಗ್ರಾ.ಪಂ ಸದಸ್ಯ ಕೆ.ಪಿ.ವಸಂತ್ ಮಾತನಾಡಿ, ಇಲ್ಲಿ ರಾಜಕೀಯ ಚರ್ಚೆ ಬೇಡ. ಅಭಿವೃದ್ಧಿಗೆ ಸಹಕಾರ ಕೊಡಿ’ ಎಂದರು.

ಸಂಬಾರ ಶೆಟ್ಟಿ ಕೆರೆಯಲ್ಲಿ ಆಕ್ರಮ ಗಣಿಗಾರಿಕೆ ನಡೆಯುತ್ತಿದೆ ಅದನ್ನು ತಡೆಗಟ್ಟಬೇಕು ಎಂದು ಜಿ.ಟಿ. ರಾಮಯ್ಯ, ಕೆ.ಆರ್.ಮಂಜುನಾಥ್ ಹೇಳಿದರು.

ಗ್ರಾಮಸಭೆಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹಾಯಕರನ್ನು ಕಳುಹಿಸುತ್ತಿದ್ದು, ಸಮಸ್ಯೆಗಳಿಗೆ ಕಾರಣವಾಗಿದೆ. ರಸ್ತೆ ಬದಿಯಲ್ಲಿ ಇರುವ ಮರಗಳನ್ನು ತೆರವುಗೊಳಿಸುವಂತೆ ಕಳೆದ 10 ವರ್ಷಗಳಿಂದ ಕೇಳುತ್ತಿದ್ದರೂ ಸ್ಪಂದಿಸಿಲ್ಲ. ಕಾಡಾನೆ ಹಾವಳಿ ಬಗ್ಗೆಯೂ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿದ್ದ ಜನ ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ಅಭಿಜಿತ್ ಎಂಬಾತ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನನ್ನ ಮೇಲೆಯೇ ಮೊಕದ್ದಮೆ ಹಾಕಿ ದಂಡ ಕಟ್ಟಿಸಿದ್ದಾರೆ. ಈ ಬಗ್ಗೆ ವಿಚಾರಿಸಿ ನ್ಯಾಯ ದೊರಕಿಸಿಕೊಡಿ’ ಎಂದು ಮಹಿಳೆಯೊಬ್ಬರು ಸಭೆ ಮುಂದೆ ಕೋರಿದರು.

ತಾ.ಪಂ ಸದಸ್ಯೆ ಎಚ್.ಡಿ.ಮಣಿ ಮಾತನಾಡಿ, ತಾಲ್ಲೂಕು ಪಂಚಾಯಿತಿ ಅನುದಾನ ಅಲ್ಪ ಪ್ರಮಾಣದಲ್ಲಿ ದೊರೆಯುತ್ತಿದ್ದು, ಮೂರು ಪಂಚಾಯಿತಿಗಳಿಗೂ ಸಮಾನವಾಗಿ ಹಂಚಬೇಕಾಗಿದೆ. ಆದ್ದರಿಂದ ಅಭಿವೃದ್ಧಿ ಕೆಲಸಗಳೂ ಕಡಿಮೆಯಾಗಿವೆ’ ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ವಸಂತಾ, ಬಿಜು, ಅಂಬೇಕಲ್ ಚಂದ್ರಶೇಖರ್, ಸತೀಶ, ರಾಣಿಚನ್ನಮ್ಮ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

**

ವಿದ್ಯುತ್ ತಂತಿ ತುಳಿದು ಕಾಡಾನೆ ಸಾವಿಗೀಡಾದರೆ ಅರಣ್ಯಾಧಿಕಾರಿಗಳು ‘ಸೆಸ್ಕ್’ ಎಂಜಿನಿಯರ್ ಮೇಲೆ ದಾವೆ ಹೂಡುತ್ತಾರೆ. ಬಂಧನ ಭೀತಿಯಿಂದ ನಾವು ತಲೆಮರೆಸಿಕೊಳ್ಳುವಂತಾಗಿದೆ.

–ರಮೇಶ್‌, ‘ಸೆಸ್ಕ್’ ಎಂಜಿನಿಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry