ವೈದ್ಯಕೀಯ ವೃತ್ತಿಯಲ್ಲಿ ಮಾನವೀಯತೆ ಮುಖ್ಯ

7
ದೇವರಾಜು ಅರಸು ವೈದ್ಯಕೀಯ ಮಹಾವಿದ್ಯಾಲಯದ ಘಟಿಕೋತ್ಸವದಲ್ಲಿ ಸುದರ್ಶನ್ ಬಲ್ಲಾಳ್

ವೈದ್ಯಕೀಯ ವೃತ್ತಿಯಲ್ಲಿ ಮಾನವೀಯತೆ ಮುಖ್ಯ

Published:
Updated:

ಕೋಲಾರ: ‘ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆಗಿಂತ ಮಾನವೀಯತೆ ಮುಖ್ಯ’ ಎಂದು ಬೆಂಗಳೂರಿನ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ ಪ್ರೈವೆಟ್‌ ಲಿಮಿಟೆಡ್‌ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ನಡೆದ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಎಂಟನೇ ಘಟಿಕೋತ್ಸವದಲ್ಲಿ ಮಾತನಾಡಿ, ‘ಹಣಕ್ಕಿಂತ ಜೀವ ದೊಡ್ಡದು. ವೈದ್ಯರು ಈ ಸಂಗತಿ ಅರಿತು ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ಬದ್ಧತೆ ತೋರಿದಾಗ ಮಾತ್ರ ಸಮಾಜದಲ್ಲಿ ಗೌರವ ಗಳಿಸಲು ಸಾಧ್ಯ’ ಎಂದರು.

ದೇಶದಲ್ಲಿ ವೈದ್ಯಕೀಯ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಹಣ ಮಾಡುವ ದಂಧೆಯಾಗಿದೆ. ವೈದ್ಯರಿಗೆ ಸೇವಾ ಮನೋಭಾವ ಇಲ್ಲವಾಗಿದೆ. ದೇಶದಲ್ಲಿ ವೈದ್ಯಕೀಯ ಪದವಿ ಪಡೆದು ಹಣ ಸಂಪಾದನೆಗಾಗಿ ವಿದೇಶಕ್ಕೆ ಹೋಗುತ್ತಿರುವುದು ವಿಷಾದಕರ ಎಂದು ಕಳವಳ ವ್ಯಕ್ತಪಡಿಸಿದರು.

ರೋಗಿ ಹಾಗೂ ವೈದ್ಯರ ಸಂಬಂಧ ಪ್ರಮುಖವಾದದು. ರೋಗಿಗಳಿಗೆ ವಿಶ್ವಾಸದಿಂದ ಚಿಕಿತ್ಸೆ ನೀಡಿದರೆ ಶೇ 100ರಷ್ಟು ಗುಣಮುಖರಾಗುತ್ತಾರೆ. ವೈದ್ಯರು ಶಿಕ್ಷಣದ ಜತೆಗೆ ವೃತ್ತಿ ಕೌಶಲ ತರಬೇತಿ ಪಡೆದಾಗ ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಪದವಿ ಪಡೆದ ಮಾತ್ರಕ್ಕೆ ವೈದ್ಯ ಎನಿಸಿಕೊಳ್ಳಲು ಆಗುವುದಿಲ್ಲ. ಪ್ರಾಮಾಣಿಕವಾಗಿ ಬಡವರಿಗೆ ಆರೋಗ್ಯ ಸೇವೆ ನೀಡಿದರೆ ಪದವಿಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಅತ್ಯುತ್ತಮ ಆಯ್ಕೆ: ‘ಮೂತ್ರಪಿಂಡ ಸಮಸ್ಯೆಗೆ ಕಸಿ ಮಾಡುವುದು ಅತ್ಯುತ್ತಮ ಆಯ್ಕೆ. ಮೂತ್ರಪಿಂಡ ಕಳವು ಹಾಗೂ ಕೆಲ ಗೊಂದಲಗಳಿಂದಾಗಿ ಈ ಹಿಂದೆ ಮೂತ್ರಪಿಂಡ ದಾನ ಮತ್ತು ಕಸಿ ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಶೇ 95ರಷ್ಟು ಮೂತ್ರಪಿಂಡ ಕಸಿ ಪ್ರಕರಣಗಳು ಯಶಸ್ವಿಯಾಗುತ್ತಿವೆ. ಇತ್ತೀಚೆಗೆ ಕೆಲ ವೈದ್ಯಕೀಯ ಸಂಸ್ಥೆಗಳು ನಡೆಸಿದ ಹೃದಯ ಕಸಿಯೂ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

ದೇಶದಲ್ಲಿ ವೈದ್ಯಕೀಯ ಕ್ಷೇತ್ರವು ಶೇ 80ರಷ್ಟು ಖಾಸಗೀಕರಣಗೊಂಡಿದೆ. ಹೀಗಾಗಿ ಬಡ ರೋಗಿಗಳು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಸುಧಾರಿತ ಯಂತ್ರೋಪಕರಣ ಬಳಸಿ ಶಸ್ತ್ರಚಿಕಿತ್ಸೆ ಮಾಡುವುದು ಒಳ್ಳೆಯದು ಎಂದು ಸಲಹೆ

ನೀಡಿದರು.

ಯಾವುದೇ ವೃತ್ತಿಯಲ್ಲಿ ಸಮಸ್ಯೆಗಳು ಸಾಮಾನ್ಯ. ಆದರೆ ಸಮಸ್ಯೆಗೆ ಎದೆಗುಂದದೆ ಧೈರ್ಯದಿಂದ ಎದುರಿಸುವ ಶಕ್ತಿ ಪ್ರತಿಯೊಬ್ಬರಲ್ಲೂ ಬರಬೇಕು. ಅಂಗಾಂಗ ದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು

ಹೇಳಿದರು.

60 ಸಾವಿರ ವಿದ್ಯಾರ್ಥಿಗಳು:‘ದೇಶದಲ್ಲಿ 580ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಪ್ರತಿ ವರ್ಷ ಸುಮಾರು 60 ಸಾವಿರ ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಕೋರ್ಸ್‌ಗಳಿಗೆ ದಾಖಲಾಗುತ್ತಿದ್ದಾರೆ. ಈ ಪೈಕಿ ಶೇ 30ರಷ್ಟು ಮಂದಿ ಮಾತ್ರ ಸ್ನಾತಕೋತ್ತರ ಪದವೀಧರರಾಗುತ್ತಿದ್ದಾರೆ. ಉಳಿದವರು ಎಂಬಿಬಿಎಸ್ ಪದವಿಗೆ ಮಾತ್ರ ಸೀಮಿತವಾಗುತ್ತಿದ್ದಾರೆ’ ಎಂದು ವಿವರಿಸಿದರು.

ಮಹಾವಿದ್ಯಾಲಯದ ಉಪಕುಲಪತಿ ಡಾ.ಸಿ.ವಿ.ರಘುವೀರ್ ವಾರ್ಷಿಕ ವರದಿ ವಾಚಿಸಿದರು. ಎಂಬಿಬಿಎಸ್, ಸ್ನಾತ್ತಕೋತ್ತರ ಪದವೀಧರರರಿಗೆ ಪದವಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಡಾ.ಸಿ.ಸೌಮ್ಯ, ಡಾ.ಪೂಜಾ, ಡಾ.ಕೆ.ಎಂ.ಅಭಿಷೇಕ್, ಡಾ.ಪ್ರಿಯಾಂಕಾ ಮತ್ತು ಡಾ.ಕಾವ್ಯಾ ಚಿನ್ನದ ಪದಕ ಗಳಿಸಿದರು.

ಮಹಾವಿದ್ಯಾಲಯದ ಕುಲಪತಿ ಡಾ.ಎಸ್.ಕುಮಾರ್, ಉಪಾಧ್ಯಕ್ಷ ಡಾ.ರಾಜೇಶ್‌ ಎನ್.ಜಗದಾಳೆ, ಕುಲಸಚಿವ ಡಾ.ಎ.ವಿ.ಎಂ.ಕುಟ್ಟಿ, ಪ್ರಾಂಶುಪಾಲ ಡಾ.ಹರೇಂದ್ರ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಡಿ.ವಿ.ಎಲ್‌.ಎನ್.ಪ್ರಸಾದ್ ಭಾಗವಹಿಸಿದ್ದರು.

**

ಅಂಗಾಂಗ ಕಸಿಯಲ್ಲಿ ಅಮೆರಿಕ ಹಾಗೂ ಬೇರೆ ರಾಷ್ಟ್ರ ಗಳಿಗೆ ಹೋಲಿಸಿದರೆ ಭಾರತದಲ್ಲಿ ಶೇ 10 ರಷ್ಟು ಮಾತ್ರ ಸಮಸ್ಯೆ ಎದುರಾಗುತ್ತಿದೆ

–ಡಾ.ಎಚ್.ಸುದರ್ಶನ್ ಬಲ್ಲಾಳ್,ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ ಪ್ರೈವೆಟ್‌ ಲಿಮಿಟೆಡ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry