ರಾಜರು ಕಟ್ಟಸಿದ್ದ ಸರಣಿ ಕೆರೆಗಳು ಮಂಗಮಾಯ!

7
ಚಿಕ್ಕಮಂಡ್ಯ ಕೆರೆಯ ಒಡಲಲ್ಲಿ ಕೆಎಚ್‌ಬಿ ಕಾಲೊನಿ, ಜನರಿಗೆ ಬೇಕು ಜಲ ಸಾಕ್ಷರತೆ

ರಾಜರು ಕಟ್ಟಸಿದ್ದ ಸರಣಿ ಕೆರೆಗಳು ಮಂಗಮಾಯ!

Published:
Updated:
ರಾಜರು ಕಟ್ಟಸಿದ್ದ ಸರಣಿ ಕೆರೆಗಳು ಮಂಗಮಾಯ!

ಮಂಡ್ಯ: ಜೀವಜಲದ ಸಂರಕ್ಷಣೆಗಾಗಿ ಮೈಸೂರು ಮಹಾರಾಜರು ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದ ಐತಿಹಾಸಿಕ ಕೆರೆಗಳು ಈಗ ಮಂಗಮಾಯವಾಗಿವೆ. ಭೂಗಳ್ಳರ ಕೈಚಳಕ, ಒತ್ತುವರಿ, ಲೇಔಟ್‌ಗಳು ಕೆರೆಯಂಗಳವನ್ನು ನುಂಗಿ ಹಾಕಿವೆ.

ಜಿಲ್ಲೆಯಲ್ಲಿ ಮೈಸೂರು ಒಡೆಯರು ನೂರಾರು ‘ಸರಣಿ ಕೆರೆ’ಗಳನ್ನು ಕಟ್ಟಿಸಿದ್ದರು. ಒಂದು ಕೆರೆ ತುಂಬಿದರೆ ಅದರ ಕೆಳಭಾಗದಲ್ಲಿ ಬರುವ ಸಣ್ಣ ಪುಟ್ಟ ಕೆರೆ, ಕಟ್ಟೆಗಳು ಒಡಲು ತುಂಬಿಕೊಳ್ಳುತ್ತಿದ್ದವು. ಮಂಡ್ಯ ತಾಲ್ಲೂಕಿನ ಕೋಣನಹಳ್ಳಿಯ ಕೆರೆ, ಚಿಕ್ಕಮಂಡ್ಯ ಕೆರೆ ತುಂಬಿದರೆ ಹತ್ತಾರು ಸಣ್ಣಪುಟ್ಟ ಕೆರೆ ಕಟ್ಟೆಗಳು ನೀರು ಬಸಿದುಕೊಳ್ಳುತ್ತಿದ್ದವು. ನಾಗಮಂಗಲ ತಾಲ್ಲೂಕಿನ ಪಾಲಕೆರೆ ಹಲವು ಕಟ್ಟೆ ತುಂಬಿಸಿ ಸಾವಿರಾರು ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತಿತ್ತು.

ಮದ್ದೂರು ತಾಲ್ಲೂಕಿನ ಸೂಳೆಕೆರೆ, ಮಳವಳ್ಳಿ ಕೆರೆ, ಕೆ.ಆರ್‌.ಪೇಟೆ ತಾಲ್ಲೂಕಿನ ಮೆಣಸ ಕೆರೆ ತುಂಬಿ ತನ್ನ ಹರಿವಿನಲ್ಲಿ ಬರುವ ಹಳ್ಳಕೊಳ್ಳಗಳನ್ನು ತುಂಬಿಸುತ್ತಿದ್ದವು. ಆದರೆ ಈಗ ಕೆರೆಯಂಗಳ ಒತ್ತವರಿಯಾಗಿದ್ದು ದಿನೇ ದಿನೇ ಅದರ ವಿಸ್ತೀರ್ಣ ಕಡಿಮೆಯಾಗುತ್ತ ಬಂದಿದೆ. ಕೆರೆಯ ಒಡಲು ಮಾಯವಾಗಿರುವ ಕಾರಣ ಅಂತರ್ಜಲ ಮಟ್ಟವೂ ಕುಸಿದಿದೆ. ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

‘ಮೈಷುಗರ್‌ ಕಾರ್ಖಾನೆ ಸ್ಥಗಿತಗೊಳ್ಳಲು ನೀರಿನ ಕೊರತೆಯೂ ಒಂದು ಕಾರಣ. ಚಿಕ್ಕಮಂಡ್ಯ ಕೆರೆಯಿಂದ ಕಾರ್ಖಾನೆಗೆ ನೀರು ಪೂರೈಸಲಾಗುತ್ತಿತ್ತು. ಆದರೆ ಕೆರೆ ಮಾಯವಾದ ಕಾರಣ ಕಾರ್ಖಾನೆಗೆ ನೀರು ಪೂರೈಕೆ ಕಷ್ಟವಾಯಿತು. ಈಗ ಕೆಆರ್‌ಎಸ್‌ ತುಂಬಿದರೆ ಮಾತ್ರ ಕಾರ್ಖಾನೆಗೆ ನೀರು ಸಿಗುತ್ತದೆ. ಅಲ್ಲಿರುವ ಕೊಳವೆಬಾವಿಗಳು ಬತ್ತಿ ಹೋಗಿವೆ’ ಎಂದು ರೈತ ಮುಖಂಡ ಕೆ.ಬೋರಯ್ಯ ಹೇಳಿದರು.

ನಗರದಲ್ಲಿದ್ದ ಹೊಸಹಳ್ಳಿ ಕೆರೆ 21 ಎಕರೆ ವಿಸ್ತೀರ್ಣ ಹೊಂದಿತ್ತು. ನಗರಸಭೆಯವರು ಅಕ್ರಮ ಖಾತೆಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ನಿವೇಶನಹಳ್ಳಿ ಖಾಸಗಿ ವ್ಯಕ್ತಿಗಳಿಗೆ ಮಾರಿಕೊಂಡರು. ರೈತರ ಭೂಮಿಗೆ ನೀರುಣಿಸುತ್ತಿದ್ದ ಕೆರೆಯನ್ನು ಇಂಚಿಂಚೂ ಕೊಂದರು. ಅತ್ಯಂತ ವಿಶಾಲವಾಗಿದ್ದ ಗುತ್ತಲು ಕೆರೆ ಒತ್ತವರಿ ಭೂತದಿಂದ ತನ್ನ ವಿಸ್ತೀರ್ಣವನ್ನು ದಿನೇ ದಿನೇ ಕಳೆದುಕೊಳ್ಳುತ್ತಲೇ ಹೋಗುತ್ತಿದೆ. ಸದ್ಯ ಕೆರೆಯಂಗಳ 160 ಎಕರೆಗೆ ಬಂದು ನಿಂತಿದೆ. ಕೆರೆಯ ಅಕ್ಕಪಕ್ಕದ ಜಾಗವನ್ನು ನಗರಸಭೆಯೇ ನುಂಗಿ ಹಾಕಿದ್ದು ವಿವಿಧ ಸಮಾಜಗಳ ರುದ್ರಭೂಮಿಗಾಗಿ ಜಾಗ ಮಂಜೂರು ಮಾಡಿದೆ ಎಂದು ಜನರು ಆರೋಪಿಸುತ್ತಾರೆ.

‘ದಾಖಲೆಗಳನ್ನು ತಿದ್ದುಪಡಿ ಮಾಡಿ ಗುತ್ತಲು ಕೆರೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆ. ಸರ್ವೆ ನಂಬರ್‌ ಬದಲಾವಣೆಗೆ ಮಾಡಿ ಕೆರೆ ಜಾಗವನ್ನು ಕಬಳಿಸಿದ್ದಾರೆ. ಹೆಚ್ಚು ಮಳೆ ಬಂದಾಗ ಗುತ್ತಲು ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗುತ್ತದೆ. ನೀರು ನುಗ್ಗುವ ಮನೆಗಳೆಲ್ಲವೂ ಕೆರೆಯ ಜಾಗವೇ ಆಗಿವೆ’ ಎಂದು ಗುತ್ತಲು ನಿವಾಸಿ ಶಿವರಾಮು ಹೇಳಿದರು.

ಕೆರೆ ಅಂಗಳದಲ್ಲಿ ಕೆಎಚ್‌ಬಿ ಕಾಲೊನಿ : ನಗರದ ನಾಗಮಂಗಲ ರಸ್ತೆಯಲ್ಲಿರುವ ‘ಚಿಕ್ಕಮಂಡ್ಯ ಕೆರೆ’ ಒಂದು ಕಾಲದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು. 430 ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆಯ ಜಾಗದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಲೇಟೌಟ್‌ ರೂಪಿಸಿ ನಿವೇಶನ ಮಾರಾಟ ಮಾಡಿದೆ. ಕೆರೆಯ ಒಡಲಲ್ಲಿ ಕೆಎಚ್‌ಬಿ ಕಾಲೊನಿ ಹಾಗೂ ವಿವೇಕಾನಂದ ಬಡಾವಣೆ ನಿರ್ಮಾಣವಾಗಿದ್ದು, ಕೆರೆ ಬಯಲು ಖಾಸಗಿ ಲೇಔಟ್‌ ಆಗಿ ರಿಯಲ್‌ ಎಸ್ಟೇಟ್‌ ದಂಧೆ ತಲೆ ಎತ್ತಿದೆ.

‘ಐತಿಹಾಸಿಕ ಚಿಕ್ಕಮಂಡ್ಯ ಕೆರೆಯನ್ನು ನಾವು ಭೂಪಟದಲ್ಲಿ ಗುರುತಿಸಬಹುದು. ಆದರೆ ಕೆರೆ ಇದ್ದ ಸ್ಥಳಕ್ಕೆ ಹೋಗಿ ನೋಡಿದರೆ ಸಿಮೆಂಟ್‌ ಕಾಡು ತಲೆ ಎತ್ತಿದೆ. ಸರ್ಕಾರವೇ ಕೆರೆಯನ್ನು ಇನ್ನಿಲ್ಲವಾಗಿಸಿದೆ. ಈಗಲೂ ಭಾರಿ ಮಳೆಯೊಂದು ಸುರಿದರೆ ಅಲ್ಲಿರುವ ಎರಡೂ ಕಾಲೊನಿಗಳು ನೀರಿನಲ್ಲಿ ಮುಳುಗುತ್ತವೆ. ಆ ದಿನ ಖಂಡಿತಾ ಬರುತ್ತದೆ’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ಹಳ್ಳಿಯಲ್ಲೂ ಕೆರೆಗಳ ಒತ್ತುವರಿ : ಜಿಲ್ಲೆಯ ಹಳ್ಳಿಹಳ್ಳಿಗಳಲ್ಲೂ ಕೆರೆಗಳ ಇತಿಹಾಸವನ್ನು ಕಬಳಿಸಿದ್ದಾರೆ. 73 ಎಕರೆ ವಿಸ್ತೀರ್ಣ ಹೊಂದಿದ್ದ ಪಣಕನಹಳ್ಳಿ ಕೆರೆ ಜಾಗ ಒತ್ತುವರಿಗೆ ಒಳಗಾಗಿದ್ದು ಕೇವಲ ಭೂಪಟದಲ್ಲಿ ಮಾತ್ರ ಕೆರೆಯನ್ನು ಗುರುತಿಸುವಂತಾಗಿದೆ. ಭತ್ತ, ಕಬ್ಬು ಬೆಳೆಯುತ್ತಿದ್ದ ಆ ಕೆರೆಯ ಅಚ್ಚುಕಟ್ಟಿನ ರೈತರು ಈಗ ಕೇವಲ ರಾಗಿ, ಜೋಳ ಬೆಳೆಯುವಂತಾಗಿದೆ. ಗೋಪಾಲಪುರ ಕೆರೆ 74 ಎಕರೆ ವಿಸ್ತೀರ್ಣ ಹೊಂದಿದೆ ಎಂದು ದಾಖಲೆ ಹೇಳುತ್ತದೆ. ಆದರೆ ಕೆರೆಯ ಮುಂದೆ ನಿಂತು ನೋಡಿದರೆ ಕೆರೆ ಭೂಮಿ ಏನಾಯಿತು ಎಂಬ ಪ್ರಶ್ನೆ ಮೂಡುತ್ತದೆ. ಸಾತನೂರು, ಹೊಳಲು ಗ್ರಾಮಗಳ ಕೆರೆಗಳು ಒತ್ತುವರಿಗೆ ಒಳಗಾಗಿದ್ದು ನೀರು ನಿಲ್ಲಲು ಜಾಗವೇ ಇಲ್ಲವಾಗಿದೆ.

2016 ಎಕರೆ ವಿಸ್ತೀರ್ಣ ಹೊಂದಿದ್ದ ಮದ್ದೂರು ತಾಲ್ಲೂಕಿನ ಸೂಳೆಕೆರೆ ಈಗ 938 ಎಕರೆಗೆ ಬಂದು ನಿಂತಿದೆ. ಮಳವಳ್ಳಿ, ಪಾಂಡಪುರ, ಕೆ.ಆರ್‌.ಪೇಟೆ ಕೆರೆಗಳ ವಿಸ್ತೀರ್ಣವೂ ದಿನೇ ದಿನೇ ಕುಗ್ಗುತ್ತಾ ಬರುತ್ತಿದೆ.

‘ಜನಗಳಲ್ಲಿ ಜಲ ಸಾಕ್ಷರತೆ ಇಲ್ಲವಾಗಿದೆ. ನದಿ ನೀರು ಹರಿಯುವ ಕಾಲುವೆಯಲ್ಲಿ ಚರಂಡಿ ನೀರು ಹರಿಸುತ್ತಿರುವುದು ಅಮಾನವೀಯ. ಈ ಬಗ್ಗೆ ಹಲವು ಬಾರಿ ಅರಿವು ಕಾರ್ಯಕ್ರಮ ನಡೆಸಿದ್ದೇವೆ. ಆದರೂ ಕೊಳಚೆ ನೀರು ಹರಿಸುವುದನ್ನು ನಿಲ್ಲಿಸಿಲ್ಲ’ ಎಂದು ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಮಂಗಲ ಎಂ.ಯೋಗೀಶ್‌ ಹೇಳಿದರು.

**

ಕೊಳಚೆ ನೀರಿನಿಂದ ಕೊಕ್ಕರೆ ಸಾವು?

ಮದ್ದೂರು ತಾಲ್ಲೂಕಿನ ಕೊಕ್ಕರೆಬೆಳ್ಳೂರು ಪಕ್ಷಧಾಮದ ಕೊಕ್ಕರೆಗಳ ಸರಣಿ ಸಾವಿಗೆ ಕೊಳಚೆ ನೀರು ಸೇವನೆಯೇ ಕಾರಣ ಎಂಬ ಅಭಿಪ್ರಾಯವಿದ. ಈ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ.

‘ಮದ್ದೂರು ಪುರಸಭೆ ಶುದ್ಧೀಕರಣಗೊಳಿಸದ ಒಳಚರಂಡಿ ನೀರನ್ನು ಶಿಂಷಾ ನದಿಗೆ ಹರಿಬಿಡುತ್ತಿದೆ. ನದಿ ತಟದಲ್ಲಿರುವ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಗಳ ಪಕ್ಷಿಗಳು ಕೊಳಚೆ ನೀರು ಕುಡಿದು ಸಾಯುತ್ತಿವೆ’ ಎಂದು ಜನವಿಕಾಸ ಸಂಘಟನೆ ಅಧ್ಯಕ್ಷ ನ.ಲಿ.ಕೃಷ್ಣ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry