ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ

7
ದನಗಳ ಜಾತ್ರೆಯ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮನವಿ

ಗೋ ಸಂತತಿ ನಶಿಸದಂತೆ ರಕ್ಷಣೆ ಅಗತ್ಯ

Published:
Updated:

ಮಾಗಡಿ: ಸತ್ಯ– ಅಹಿಂಸೆ ಮುಂದೆ ಅಸತ್ಯ– ಹಿಂಸೆ ನಾಶವಾಗಿ ಹೋಗುತ್ತದೆ ಎಂಬ ಸತ್ಯ ಸಂದೇಶವನ್ನು ಸಾರಿರುವ ಗೋವಿನ ಸಂತತಿ ಮತ್ತು ಗೋಮಾಳ ಹಾಗೂ ಗೋಪಾಲಕರನ್ನು ನಾಶವಾಗದಂತೆ ಉಳಿಸಿಕೊಳ್ಳಬೇಕು ಎಂದು ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ ಮಾಲೀಕ ಮಹೇಂದ್ರ ಮುನೋತ್ ಜೈನ್‌ ತಿಳಿಸಿದರು.

ದನಗಳ ಜಾತ್ರೆಯಲ್ಲಿ ಬುಧವಾರ ಗೋವಿನ ಸಂತತಿ ಉಳಿಸುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಂಧೂ ಕೊಳ್ಳದ ನಾಗರಿಕತೆಯ ಕಾಲದಿಂದಲೂ ಸಮಾಜದೊಂದಿಗೆ ಬೆರೆತುಗೊಂಡು ವ್ಯವಸಾಯಗಾರನ ಜೊತೆಯಾಗಿ ದುಡಿಯುವ ವರ್ಗಕ್ಕೆ ದಾರಿ ಮಾಡಿಕೊಟ್ಟಿರುವ ರಾಸುಗಳನ್ನು ನಾವು ಪ್ರಿತಿಸಬೇಕು. ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುವ ಬದಲು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಬೇಕು. ನೀನ್ಯಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು ಮತ್ತು ಗೋವಿನ ಹಾಡನ್ನು ಪ್ರತಿಯೊಂದು ಮನೆಯಲ್ಲೂ ಮಕ್ಕಳಿಗೆ ಕಲಿಸುವುದರ ಮೂಲಕ ನಮ್ಮ ಪೂರ್ವಿಕರ ಪಶುಪಾಲನಾ ಪರಂಪರೆಯನ್ನು ಮುಂದುವರೆಸುವ ಅಗತ್ಯವಿದೆ’ ಎಂದರು.

ದನಗಳ ಜಾತ್ರೆಯಲ್ಲಿ ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ದೇವರ ಹಟ್ಟಿ ಚಿಕ್ಕಣ್ಣ ಸ್ವಾಮಿ ಪೂಜಾರಿ ಪಾಪಣ್ಣ ಮಾತನಾಡಿ, ‘ನಮಗೆ ಪಶುಗಳೇ ದೇವರು. ಹಣಕ್ಕಿಂತ ಹಸುಗಳು ಮುಖ್ಯ ಎಂಬ ಸತ್ಯದ ಸಂದೇಶ ಬಿತ್ತಿರಿಸಬೇಕು. ಹಸು ಸಾಕುವ ಗೋ ಪಾಲಕರಿಗೆ ವಿಶೇಷ ಅನುಕೂಲ ಮಾಡಿಕೊಡಬೇಕು. ವಿನಾಶದತ್ತ ಸಾಗಿರುವ ಗೋ ಸಂತತಿ ಉಳಿಸಲು ಅರಿವು ಮೂಡಿಸುತ್ತಿರುವ ಮುನೋತ್‌ ಜೈನ್‌ ಅವರ ಶ್ರಮವನ್ನು ನಾವೆಲ್ಲರೂ ಮನನ ಮಾಡಿಕೊಳ್ಳಬೇಕು’ ಎಂದರು.

ಬೆಲೆಬಾಳುವ ರಾಸುಗಳನ್ನು ಪ್ರದರ್ಶನಕ್ಕೆ ಇಟ್ಟಿರುವ ರೈತ ಜುಟ್ಟನ ಹಳ್ಳಿ ಜಯರಾಮಯ್ಯ, ಚಂದ್ರಪ್ಪ, ಕುಂಬಳ ಗೂಡಿನ ಪಟೇಲ್‌ ನರಸೇಗೌಡ, ಪಟೇಲ್‌ ನಾಗರಾಜು, ಪಟೇಲ್‌ ಕೆ.ಎನ್‌.ದೇವರಾಜು, ತಮ್ಮಯ್ಯಣ್ಣ, ರಮೇಶ್‌, ತಿರುಮಲೆ ಮಲ್ಲಿಗೆ ನಾಗರಾಜು ಗೋ ಸಂತತಿ ಉಳಿಸುವ ಮಹತ್ವ ಕುರಿತು ಮಾತನಾಡಿದರು.

ಮಾರುತಿ ಮೆಡಿಕಲ್ಸ್‌ ವತಿಯಿಂದ ಜಾತ್ರೆಯಲ್ಲಿನ ರಾಸುಗಳಿಗೆ 3 ದಿನದಿಂದ 4 ಟ್ರ್ಯಾಕ್ಟರ್‌ಗಳಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. ಜಾಲಮಂಗಲ ಬಸವರಾಜು, ನಾಯ್ಡು ಹಾಗೂ ರೈತರು ಇದ್ದರು.

ರೈತರಿಗೆ ಉಚಿತವಾಗಿ ಪ್ರಜಾವಾಣಿ ಪತ್ರಿಕೆಗಳನ್ನು ವಿತರಿಸಿದರು. ಗೋವುಗಳ ಬಳಿ ಹೋಗಿ ರೈತರೊಂದಿಗೆ ಪಶುಪಾಲನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಮಹೇಂದ್ರ ಜೈನ್‌ ಸಂವಾದ ಮಾಡಿದರು.

**

ಹಳ್ಳಿಕಾರ್‌ ಹಸು ತಳಿ ರಕ್ಷಣೆಗೆ ಪ್ರೋತ್ಸಾಹ

ಮಹೇಂದ್ರ ಮುನೋತ್ ಜೈನ್‌ ಮಾತನಾಡಿ, ಹುಲ್ಲು, ನೀರು ಇಲ್ಲ ಎಂಬ ಕಾರಣಕ್ಕೆ ಪುಣ್ಯಕೋಟಿಯ ಸಂತಾನ ನಾಶವಾಗಬಾರದು. ಮೈಸೂರಿನ ಯದುವಂಶದ ಅರಸರು ಪ್ರತಿಯೊಂದು ಗ್ರಾಮದ ಬಳಿ ನೂರಾರು ಎಕರೆ ಗೋಮಾಳ ಮತ್ತು ಗುಂಡು ತೋಪನ್ನು ಬೆಳೆಸಿ, ಹಳ್ಳಿಕಾರ್‌ ತಳಿಯ ಹಸುಗಳು ಮತ್ತು ಹೋರಿಗಳನ್ನು ಸಾಕುವವರಿಗೆ ಪ್ರೋತ್ಸಾಹ ನೀಡಿದ್ದರು. ಹಳ್ಳಿಕಾರ್‌ ನಾಟಿ ಹಸುಗಳ ಸಂತತಿ ನಶಿಸದಂತೆ ಎಚ್ಚರಿಕೆ ವಹಿಸದಿದ್ದರೆ, ಕನ್ನಡ ನಾಡಿನ ಭವ್ಯ ಪರಂಪರೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದರು.

ಕೆರೆ, ಕಟ್ಟೆ, ಗೋ ಕಟ್ಟೆ, ಗೋ ಮಾಳಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಹಳ್ಳಿಕಾರ್‌ ತಳಿಯ ರಾಸುಗಳನ್ನು ಸಾಕುವ ರೈತರಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಬೇಕು. ತುರು-ಕರು ಇಲ್ಲದ ಊರು ನರಕಕ್ಕೆ ಸಮಾನ ಎಂಬ ಹಿರಿಯರ ಮಾತು ಬಾವು ಅರಿಯಬೇಕು. ತಿರುವೆಂಗಳನಾಥ ರಂಗನಾಥ ಸ್ವಾಮಿ ದನಗಳ ಜಾತ್ರಾ ಬಯಲು ಮತ್ತು ಕಲ್ಯಾಣಿಗಳನ್ನು ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry