‘ಪ್ರಯಾಣಿಕರ ಗಮನಕ್ಕೆ’ ಒಂದು ಸಂಜೆಯ ಕಥೆ!

7

‘ಪ್ರಯಾಣಿಕರ ಗಮನಕ್ಕೆ’ ಒಂದು ಸಂಜೆಯ ಕಥೆ!

Published:
Updated:
‘ಪ್ರಯಾಣಿಕರ ಗಮನಕ್ಕೆ’ ಒಂದು ಸಂಜೆಯ ಕಥೆ!

ಒಂದು ಬಸ್ಸಿನಲ್ಲಿ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆ ನಡುವಿನ ಅವಧಿಯಲ್ಲಿ ನಡೆಯುವ ಘಟನೆಗಳನ್ನು ಪೋಣಿಸಿ ನಿರ್ದೇಶಕ ಮನೋಹರ್ ಅವರು ಸಿನಿಮಾ ಸಿದ್ಧಪಡಿಸಿದ್ದಾರೆ. ಇದಕ್ಕೆ ಅವರು ‘ಪ್ರಯಾಣಿಕರ ಗಮನಕ್ಕೆ’ ಎಂಬ ಹೆಸರಿಟ್ಟಿದ್ದಾರೆ. ತಮ್ಮ ಸಿನಿಮಾ ಕಥೆಗೂ ಪ್ರಯಾಣಕ್ಕೂ ಏನೋ ಒಂದು ಸಂಬಂಧ ಇದೆ ಎಂಬುದನ್ನು ಶೀರ್ಷಿಕೆ ಮೂಲಕವೇ ಹೇಳುವ ಯತ್ನ ಮಾಡಿದ್ದಾರೆ.

ಮನೋಹರ್ ಅವರು ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿ, ಸಿನಿತಂಡದ ಮೂಲಕ ಚಿತ್ರದ ಬಗ್ಗೆ ತುಸು ಮಾಹಿತಿ ನೀಡಲು ಚಿಕ್ಕ ಕಾರ್ಯಕ್ರಮ ಆಯೋಜಿಸಿದ್ದರು.

‘ಸಿನಿಮಾ ಪೂರ್ಣಗೊಂಡಿದೆ. ನಾವು ಇದರಲ್ಲಿ ಪಾತ್ರಗಳನ್ನು ಕಟ್ಟಿರುವ ರೀತಿ ವಿಭಿನ್ನವಾಗಿದೆ. ಇದರಲ್ಲಿ ಎಂಟು ಪಾತ್ರಗಳು ಬರುತ್ತವೆ. ಒಂದು ಮಿನಿ ಬಸ್ಸು ಬೆಂಗಳೂರಿನ ಹೃದಯ ಭಾಗದಿಂದ ಹೊರ ವಲಯಕ್ಕೆ ಹೋಗುವಾಗ ಆ ಪಾತ್ರಗಳು ಅನುಭವಿಸುವುದನ್ನೇ ಕಥೆ ರೂಪಕ್ಕೆ ತಂದಿದ್ದೇನೆ’ ಎಂದರು ಮನೋಹರ್. ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಈ ಚಿತ್ರದ ಪ್ರಮುಖ ಪಾತ್ರಗಳು.

ಸಿನಿಮಾದಲ್ಲಿ ಎರಡು ಹಾಡುಗಳು ಇರಲಿವೆಯಂತೆ. ಆ ಹಾಡುಗಳು ಸಾಂದರ್ಭಿಕವಾಗಿ ಬಂದುಹೋಗುತ್ತವೆಯೇ ವಿನಾ, ಹಾಡು ಇರಲೇಬೇಕು ಎಂಬ ಕಾರಣಕ್ಕೆ ಸೃಷ್ಟಿಸಿದ್ದಲ್ಲ ಅವು ಎಂದು ಮನೋಹರ್ ಹೇಳಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್‌ ಪ್ರದೇಶದಲ್ಲಿ ಒಂದು ಹಾಡನ್ನು ಚಿತ್ರೀಕರಿಸಲಾಗಿದ್ದು, ಕತ್ತಲಾದ ನಂತರ ಅಲ್ಲಿ ತೆರೆದುಕೊಳ್ಳುವ ಬೇರೆಯದೇ ಜಗತ್ತನ್ನು ಈ ಹಾಡಿನಲ್ಲಿ ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಮೆಜೆಸ್ಟಿಕ್ ಪ್ರದೇಶದಲ್ಲಿ ನಡೆಯುವುದನ್ನು ನೈಜವಾಗಿ ತೋರಿಸಬೇಕು ಎಂಬ ಉದ್ದೇಶದಿಂದ ಕ್ಯಾಮೆರಾವನ್ನು ಮರೆಯಲ್ಲಿ ಇರಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆಯಂತೆ.

‘ಮನೆ ಬಿಟ್ಟು ಓಡಿಹೋಗುತ್ತಿರುವ ಹುಡುಗ ಮತ್ತು ಹುಡುಗಿ, ಒಬ್ಬಳು ಮುಗ್ಧ ಹುಡುಗಿ, ಇನ್ನೊಬ್ಬಳು ಪಾಶ್ ಹುಡುಗಿ, ಹೆಂಡತಿಯನ್ನು ಭೇಟಿ ಮಾಡಲು ಹೋಗುತ್ತಿರುವ ಅಜ್ಜ... ಇವೆಲ್ಲ ಈ ಚಿತ್ರದ ಪಾತ್ರಗಳು’ ಎಂದು ಮನೋಹರ್ ತಿಳಿಸಿದರು.

ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಉದ್ದೇಶ ಇದೆ ಎಂದು ನಿರ್ಮಾಪಕ ಸುರೇಶ್ ಹೇಳಿದರು.

ಸಂಗೀತ ನಿರ್ದೇಶಕರಾಗಿ ವಿಜೇತ್ ಕೃಷ್ಣ ಅವರಿಗೆ ಇದು ನಾಲ್ಕನೆಯ ಸಿನಿಮಾ. ‘ಇದು ಹೊಸಬರು ಮಾಡಿರುವ ಸಿನಿಮಾ ಎನ್ನಲು ಕಷ್ಟವಾಗುತ್ತದೆ’ ಎಂದರು ವಿಜೇತ್. ಭರತ್ ಸರ್ಜಾ ಈ ಚಿತ್ರ ನಾಯಕ, ಅಮಿತಾ ರಂಗನಾಥ್ ನಾಯಕಿ. ಕಿರಣ್ ಹಂಪಾಪುರ ಛಾಯಾಗ್ರಹಣ ಚಿತ್ರಕ್ಕಿದೆ. ದೀಪಕ್ ಶೆಟ್ಟಿ ಅವರು ಒಂದು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry