ಕ್ರೀಡಾಪಟು ಖಳನಟನಾದ ಕಥೆ

7

ಕ್ರೀಡಾಪಟು ಖಳನಟನಾದ ಕಥೆ

Published:
Updated:
ಕ್ರೀಡಾಪಟು ಖಳನಟನಾದ ಕಥೆ

‘ಮಹಾಭಾರತ’ ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರದ ಮೂಲಕ ಗಮನ ಸೆಳೆದಿದ್ದ ಯುವನಟ ಚೆಲುವರಾಜ್ ಅವರು ಜೀ ಕನ್ನಡ ವಾಹಿನಿಯ ‘ನಾಗಿಣಿ’ ಧಾರಾವಾಹಿಯಲ್ಲಿ ಭೈರವ ಬಾಬಾ ಪಾತ್ರದ ಮೂಲಕ ಖಳನಟನ ಖದರಲ್ಲಿ ಮಿಂಚುತ್ತಿದ್ದಾರೆ.

ಎತ್ತರದ ಮೈಕಟ್ಟು. ಹುರಿಗೊಳಿಸಿದ ಮಾಂಸಖಂಡಗಳು. ಆಕರ್ಷಕ ದೇಹ ಹೊಂದಿರುವ ಅವರು ನೆಗೆಟಿವ್ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಮಿಂಚಬೇಕೆನ್ನುವ ಹಂಬಲ ಅವರದು. ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ‘ಸಮರ್ಥ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಚೆಲುವರಾಜ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದವರು. ಆದರೆ, ಅನಿರೀಕ್ಷಿತ ಕಾರಣಗಳಿಂದ ಆ ಕ್ಷೇತ್ರ ತೊರೆದು ಅಭಿನಯ ರಂಗವನ್ನು ಪ್ರವೇಶಿಸಿದ್ದಾರೆ. ‘ನಾನು ಮೂಲತಃ ವಾಲಿಬಾಲ್ ಆಟಗಾರ. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. ಇದ್ದಕ್ಕಿದ್ದಂತೆ ಕಾಲು ನೋವಿನ ಸಮಸ್ಯೆ ಕಾಡಿದ್ದರಿಂದ ಆಟವಾಡುವುದನ್ನು ನಿಲ್ಲಿಸಬೇಕಾಯಿತು. ಜೊತೆಗೆ ನನ್ನ ಪದವಿ ಶಿಕ್ಷಣವೂ ಮೊಟಕುಗೊಂಡಿತು. ಆದರೆ, ಧೈರ್ಯಗೆಡದೆ ಚಿಕ್ಕಂದಿನಿಂದಲೂ ಹಂಬಲಿಸಿದ್ದ ಕ್ಷೇತ್ರಕ್ಕೆ ಕಾಲಿಡಬೇಕೆನ್ನುವ ದೃಢ ನಿಶ್ಚಯ ಮಾಡಿದೆ. ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾ ಅಭಿನಯದಲ್ಲಿ ಡಿಪ್ಲೊಮ ಪೂರೈಸಿದ್ದೇನೆ' ಎಂದು ತಮ್ಮ ಬದುಕಿನ ಕಥನ ಬಿಚ್ಚಿಡುತ್ತಾರೆ. ಆಗ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ ಸ್ನೇಹಿತರನ್ನು ಸ್ಮರಿಸಲು ಅವರು ಮರೆಯುವುದಿಲ್ಲ.

2009ರಲ್ಲಿ ನಾನು ಕಿರುತೆರೆಗೆ ಕಾಲಿಟ್ಟೆ. ನೃತ್ಯ ಗುರು ಚಾಮರಾಜ್ ಮಾಸ್ಟರ್ ಅವರ ಪ್ರೋತ್ಸಾಹದಿಂದಾಗಿ ಕಿರುತೆರೆಯಲ್ಲಿ ಅಭಿನಯಿಸಬೇಕೆನ್ನುವ ನನ್ನ ಕನಸು ನನಸಾಯಿತು. ನಿರ್ದೇಶಕ ಎಸ್. ನಾರಾಯಣ್ ಅವರ ಸಹೋದರ ಎಸ್. ಗೋವಿಂದ್ ನಿರ್ದೇಶನದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸಂಬಂಧ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸುವ ಅವಕಾಶ ನನಗೆ ಲಭಿಸಿತು ಎಂದರು.

‘ಬಳಿಕ ಉದಯ ವಾಹಿನಿಯಲ್ಲೇ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರ ನಿರ್ವಹಿಸುವ ಅವಕಾಶವೂ ಒದಗಿ ಬಂತು. ಇದು ಬಣ್ಣದ ಬದುಕಿನಲ್ಲಿ ನೆಲೆಯೂರಲು ನನಗೆ ಪ್ರೇರಕ ಶಕ್ತಿಯಾಯಿತು. ಈ ಧಾರಾವಾಹಿಯ ಅಭಿನಯದ ವೇಳೆ ಹಿರಿಯ ನಟರಾದ ರಮೇಶ್ ಪಂಡಿತ್, ಅನಂತವೇಲು ಅವರು ನೀಡಿದ ಪ್ರೋತ್ಸಾಹವೇ ಮುಂದೆ ‘ನಾಗಿಣಿ’ ಧಾರಾವಾಹಿಯಲ್ಲಿ ಭೈರವ ಬಾಬಾನ ಪಾತ್ರವನ್ನು ಸುಲಲಿತವಾಗಿ ನಿರ್ವಹಿಸಲು ಸಹಾಯಕವಾಯಿತು’ ಎಂದು ಕಿರುತೆರೆಯ ಪಯಣವನ್ನು ಬಿಡಿಸಿಟ್ಟರು.

ಜೀ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿಬಂದ ‘ವಾರಸ್ದಾರ’ ಧಾರಾವಾಹಿಯಲ್ಲೂ ಚೆಲುವರಾಜ್ ಅವರು ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದರು.

‘ನಟನಾ ಬದುಕಿನಲ್ಲಿ ನನಗೆ ಆರಂಭದಿಂದಲೂ ಖಳನಟನ ಪಾತ್ರಗಳೇ ಲಭಿಸಿವೆ. ನನಗೂ ಇಂತಹ ಪಾತ್ರಗಳೇ ಇಷ್ಟ. ಪಾತ್ರ ಚಿಕ್ಕದಾದರೂ ಸರಿ. ಅದು ಮೌಲ್ಯಯುತವಾಗಿರಬೇಕು ಮತ್ತು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತಿರಬೇಕು. ಅಂತಹ ಪಾತ್ರಗಳು ಸಿಕ್ಕಿದರೆ ನಟಿಸುತ್ತೇನೆ. ಸಿನಿಮಾಗಳಲ್ಲಿ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ’ ಎಂದೂ ತಮ್ಮ ಮನದ ಇಂಗಿತ ವ್ಯಕ್ತಪಡಿಸುತ್ತಾರೆ.

ಕ್ರೀಡಾಪಟುವಾಗಿದ್ದ ಕಾರಣ ಸಹಜವಾಗಿಯೇ ಫಿಟ್‌ನೆಸ್ ಹೊಂದಿರುವ ಚೆಲುವರಾಜ್, ಪಾತ್ರಗಳಿಗೆ ತಕ್ಕನಾದ ಮೈಕಟ್ಟು ಹೊಂದಲು ಜಿಮ್‌ನಲ್ಲೂ ವರ್ಕೌಟ್‌ ಮಾಡುತ್ತಾರೆ.

ಪರಭಾಷೆಯ ಧಾರಾವಾಹಿ, ಸಿನಿಮಾಗಳಲ್ಲೂ ಅವಕಾಶ ಸಿಕ್ಕರೆ ಅಭಿನಯಿಸಲು ಸಿದ್ಧ ಎನ್ನುತ್ತಾರೆ.ಚನ್ನರಾಯಪಟ್ಟಣದಲ್ಲಿ ಚಾಮರಾಜ ಕಲಾ ಮಂದಿರ ಸಂಸ್ಥೆ ಸ್ಥಾಪಿಸಿ ಯುವ ಪ್ರತಿಭೆಗಳಿಗೆ ನೃತ್ಯ, ಅಭಿನಯ ತರಬೇತಿ ನೀಡುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry