ನಕಲು ಮುಕ್ತ ಪರೀಕ್ಷೆಗೆ ಸಹಕರಿಸಿ

7
ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆ: ಬಿಇಒ ಎಸ್‌.ಡಿ.ಗಾಂಜಿ ಸೂಚನೆ

ನಕಲು ಮುಕ್ತ ಪರೀಕ್ಷೆಗೆ ಸಹಕರಿಸಿ

Published:
Updated:

ಮುದ್ದೇಬಿಹಾಳ: ‘ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅತಿ ಸೂಕ್ಷ್ಮ ಎಂದು ಪರಿಗಣಿಸಲು ಮೇಲಧಿಕಾರಿಗಳು ಆದೇಶಿಸಿದ್ದಾರೆ. ಹೀಗಾಗಿ ರಾಜಕೀಯ ಬಣಗಳ ಮೇಲಾಟಕ್ಕೆ, ಗುದ್ದಾಟಕ್ಕೆ ಅವಕಾಶ ಕಲ್ಪಿಸದಂತೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು’ ಎಂದು ಸ್ಥಳೀಯ ಪೊಲೀಸ್ ಠಾಣೆ ಪಿಎಸೈ ಜಿ.ಎಸ್.ಪಾಟೀಲ ಮನವಿ ಮಾಡಿದರು.

ಇಲ್ಲಿನ ಬಿ.ಆರ್‌.ಸಿ ಕಚೇರಿ ಸಭಾಂಗಣ ದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11, ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಕೇಂದ್ರಗಳು ಬರುತ್ತವೆ. ಎಲ್ಲ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತದೆ. ಹೋಮಗಾರ್ಡ್‌ ನೇಮಕಕ್ಕೂ ಚಿಂತನೆ ನಡೆದಿದೆ’ ಎಂದರು.

ಬಿಇಒ ಎಸ್.ಡಿ.ಗಾಂಜಿ ಮಾತನಾಡಿ, ‘ನಕಲು ಮುಕ್ತ ಪರೀಕ್ಷೆಗೆ ಸಿಬ್ಬಂದಿ ನೆರವಾಗಬೇಕು. ತಾಲ್ಲೂಕಿನಲ್ಲಿ 5 ಕ್ಲಸ್ಟರ್‌ ವಲಯಗಳಿದ್ದು, ಮುದ್ದೇಬಿಹಾಳ ವಲಯದಲ್ಲಿ 5, ತಾಳಿಕೋಟೆ, ಹಿರೂರ, ಬ.ಸಾಲವಾಡಗಿ ವಲಯಗಳಲ್ಲಿ ತಲಾ 2, ನಾಲತವಾಡ ವಲಯದಲ್ಲಿ 3, ಢವಳಗಿ, ಬಳಬಟ್ಟಿ, ರಕ್ಕಸಗಿಯಲ್ಲಿ ತಲಾ 1 ಸೇರಿ ಒಟ್ಟು 17 ಪರೀಕ್ಷಾ ಕೇಂದ್ರಗಳಿವೆ. 206 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 4,869 ವಿದ್ಯಾರ್ಥಿಗಳು ಪರೀಕ್ಷೆ ಎದು

ರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆ ವಿಷಯದಲ್ಲಿ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಪಾಲಕರು ತಮ್ಮ ಮಕ್ಕಳಿಗೆ ನಕಲು ಕೊಡಲು ಕೇಂದ್ರದ ಬಳಿ ಬರದಂತೆ ನೋಡಿಕೊಳ್ಳಬೇಕು. ಮೊಬೈಲ್‌ ಬಳಕೆ ನಿಷೇಧ ಇದ್ದು ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ವಿಷಯ ಶಿಕ್ಷಕರು ತಮ್ಮ ವಿಷಯದ ಪರೀಕ್ಷೆ ಸಂದರ್ಭ ಪರೀಕ್ಷಾ ಕೇಂದ್ರದಲ್ಲಿ ಕಂಡುಬಂದರೆ ಅಂಥವರ ವಿರುದ್ಧ ಕ್ರಮ ಕೈಕೊಳ್ಳಲಾಗುತ್ತದೆ’ ಎಂದರು.

ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ತಹಶೀಲ್ದಾರ್ ಎಂ.ಎ.ಎಸ್.ಬಾಗವಾನ ಮಾತನಾಡಿ, ‘ಪ್ರಶ್ನೆಪತ್ರಿಕೆ ಆಯಾ ಕೇಂದ್ರಗಳಿಗೆ ಸಕಾಲಕ್ಕೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅನಿವಾರ್ಯವಾಗುತ್ತದೆ. ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರದಲ್ಲಿ ಇರದಂತೆ ನೋಡಿ ಕೊಳ್ಳಬೇಕು' ಎಂದರು.

ಪರೀಕ್ಷಾ ನೋಡಲ್ ಅಧಿಕಾರಿ ಎಂ.ಎಸ್.ಮನಹಳ್ಳಿ, ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಅನಿತಾ ಸಜ್ಜನ ಸೇರಿದಂತೆ ಎಲ್ಲ 17 ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಭಾಗವಹಿಸಿದ್ದರು. ಅಶೋಕ ಮಣಿ ಸ್ವಾಗತಿಸಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಣ ಸಂಯೋಜಕ ಆರ್.ಜಿ.ಕಿತ್ತೂರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry