ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾಕ್ಟರ್‌!

7
ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಮನದಾಳದ ಮಾತು

ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾಕ್ಟರ್‌!

Published:
Updated:
ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದ ಡಾಕ್ಟರ್‌!

ಯಾದಗಿರಿ: ‘ನಾನು ರಾಜಕೀಯ ಬದುಕಿನ ಬೆನ್ನತ್ತಿ ಹೋದವನಲ್ಲ’ ಎನ್ನುತ್ತಲೇ ಕಾಂಗ್ರೆಸ್‌ನ ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಮಾತಿಗಿಳಿದರು.

‘ಈ ಭಾಗದ ಶಿಕ್ಷಣ, ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿ ನನ್ನ ಮಂತ್ರವಾಗಿತ್ತು. ಕಲಬುರ್ಗಿಯಲ್ಲಿ ನರ್ಸಿಂಗ್‌ ಹೋಂ ಸ್ಥಾಪಿಸಿ ವೈದ್ಯಕೀಯ ಕ್ಷೇತ್ರವನ್ನು ಬಲಪಡಿಸುವುದು ಗುರಿಯಾಗಿತ್ತು. ಅದರಂತೆ ಕೈಯಲ್ಲಿದ್ದ ಎಲ್ಲ ಹಣವನ್ನು ನರ್ಸಿಂಗ್‌ ಹೋಂ ನಿರ್ಮಾಣಕ್ಕೆ ವಿನಿಯೋಗಿಸಿದ್ದೆ. ಅಂಥ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ವೀರೇಂದ್ರ ಪಾಟೀಲರು ರಾಜಕೀಯ ಪ್ರವೇಶಿಸುವಂತೆ ಒತ್ತಾಯ ಮಾಡಿದರು’ ಎಂದು ತಮ್ಮ ರಾಜಕೀಯ ಪ್ರವೇಶ ದಿನಗಳನ್ನು ನೆನಪಿಸಿಕೊಂಡರು.

‘ಪ್ರಾಮಾಣಿಕತೆ, ಶೈಕ್ಷಣಿಕ ಅರ್ಹತೆ ಹಾಗೂ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವುದರಿಂದ ಮತಕ್ಷೇತ್ರದ ಅಭಿವೃದ್ಧಿ ಸಾಧ್ಯ. ಈ ಎಲ್ಲ ಅರ್ಹತೆ ನಿಮ್ಮಲ್ಲಿವೆ. ನೀವು ರಾಜಕೀಯಕ್ಕೆ ಬರಬೇಕು’ ಎಂದು ವೀರೇಂದ್ರ ಪಾಟೀಲರು ಒತ್ತಾಯಿಸಿದರು. ಒಂದಷ್ಟು ಯೋಚನೆ ಮಾಡಲು ಕಾಲಾವಕಾಶ ಕೋರಿದೆ. ಅವರು ಆಯ್ತು ಎಂದರು.

ಒಂದೆರಡು ದಿನಗಳ ನಂತರ ಅವರನ್ನು ಕಂಡೆ. ‘ಇದ್ದ ಹಣ ನರ್ಸಿಂಗ್‌ ಹೋಂ ನಿರ್ಮಾಣಕ್ಕೆ ವಿನಿಯೋಗಿಸಿದ್ದೇನೆ. ಚುನಾವಣಾ ವೆಚ್ಚ ಭರಿಸಲು ನನ್ನಲ್ಲಿ ಆರ್ಥಿಕ ಶಕ್ತಿ ಇಲ್ಲ’ ಎಂದು ತಿಳಿಸಿದೆ. ‘ನೀವು ಗೆಲ್ಲುವ ಕುದುರೆ. ಪಕ್ಷ ನಿಮ್ಮ ಚುನಾವಣಾ ವೆಚ್ಚ ಭರಿಸಲಿದೆ’ ಎಂದು ವೀರೇಂದ್ರ ಪಾಟೀಲರು ಭರವಸೆ ನೀಡಿದರು.

‘1978ರಲ್ಲಿ ಉತ್ತರ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. 10 ಪೈಸೆಗೊಂದರಂತೆ ಅಂಚೆ ಕಚೇರಿಯಿಂದ ಏಳು ಸಾವಿರ ಅಂಚೆ ಕಾರ್ಡ್‌ ತರಿಸಿದೆ. ಶಿಕ್ಷಕರ ಕ್ಷೇತ್ರದಲ್ಲಿ ಆಗ ಇದ್ದದ್ದು ಬರೀ ಏಳು ಸಾವಿರ ಮತದಾರರು ಮಾತ್ರ. ಅವರಿಗೆಲ್ಲರಿಗೂ ಕಾರ್ಡ್ ಕಳುಹಿಸಿ, ಮತ ನೀಡುವಂತೆ ಮನವಿ ಮಾಡಿದೆ’ ಎಂದು ಮಾಲಕರಡ್ಡಿ ಮೊದಲ ಮತಯಾಚನೆಯ ಅನುಭವ ಬಿಚ್ಚಿಟ್ಟರು.

‘ಅದೇ ವರ್ಷದ ಜೂನ್‌ ತಿಂಗಳಿನಲ್ಲಿ ಚುನಾವಣೆ ನಡೆಯಿತು. 7 ಸಾವಿರ ಮತಗಳಲ್ಲಿ 5 ಸಾವಿರ ಮತ ಚಲಾವಣೆಯಾಗಿದ್ದವು. ಅವುಗಳಲ್ಲಿ 2,899 ಮತ ಪಡೆದು ಗೆಲುವು ಸಾಧಿಸಿದೆ’ ಎಂದು ಮೊದಲ ಚುನಾವಣಾ ವಿಜಯೋತ್ಸವವನ್ನು ನೆನೆದು ಸಂಭ್ರಮಿಸಿದರು.

‘ಜುಲೈ ತಿಂಗಳಿನಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಮಳೆಯಲ್ಲೇ ಕ್ಷೇತ್ರ ಸುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಶಾಲೆಗಳ ದುಃಸ್ಥಿತಿ ಕಂಡು ಬೇಸರ ಅನ್ನಿಸಿತು. ವಿಧಾನ ಪರಿಷತ್‌ನಲ್ಲಿ ವಿಷಯ ಮಂಡಿಸಿದೆ. ನಾನು ಮೊದಲೇ ಪ್ರೊಫೆಸರ್‌ ಆಗಿದ್ದವನು. ಒಂದೂವರೆ ಗಂಟೆ ನಿರಂತರ ವಿಷಯ ಮಂಡಿಸಿದೆ. ಅದು ಪತ್ರಿಕೆಗಳಲ್ಲಿ ಸುದ್ದಿ ಆಯಿತು. ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ತಕ್ಷಣ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ಶಿಕ್ಷಕರಿಗಿಂತ ನಾನೇ ಹೆಚ್ಚು ಸಂಭ್ರಮಿಸಿದೆ’ ಎಂದು ಶಾಸಕ ಮಾಲಕರಡ್ಡಿ ಹೇಳಿದರು.

**

ಮಾಲಕರಡ್ಡಿ ಏರಿದ ಮೆಟ್ಟಿಲುಗಳು..

ಡಾ.ಎ.ಬಿ.ಮಾಲಕರಡ್ಡಿ 1936 ಡಿಸೆಂಬರ್ 13ರಂದು ಯಾದಗಿರಿ ತಾಲ್ಲೂಕಿನ ಅರಕೇರಿ (ಬಿ) ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಯಾದಗಿರಿಯ ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಮಾಡಿದರು.

1957ರ ಸೆಪ್ಟೆಂಬರ್‌ 6ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ವೈದ್ಯಕೀಯ ಕಾಲೇಜಿನ ಪ್ರಥಮ ತಂಡದ ವಿದ್ಯಾರ್ಥಿ. ಎಂಬಿಬಿಎಸ್‌, ಎಂ.ಡಿ (ಮೆಡಿಸಿನ್‌) ಪದವೀಧರರು. ಪ್ರಾಧ್ಯಾಪಕರಾಗುವುದರೊಂದಿಗೆ ಕಲಬುರ್ಗಿ ನಗರದ ‘ಕನ್ಸಲ್ಟಿಂಗ್ ಫಿಜಿಷಿಯನ್’ ಎಂದೇ ಹೆಸರುವಾಸಿಯಾಗಿದ್ದರು. ಎಚ್‌ಕೆಇ ಸೂಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು.

ಇವರು ಎಚ್‌ಕೆಇ ಸೂಸೈಟಿ ಅಧ್ಯಕ್ಷರಾಗಿದ್ದಾಗ ಕಲಬುರ್ಗಿಯಲ್ಲಿ ಪ್ರಥಮವಾಗಿ ‘ಹೋಮಿಯೋಪಥಿ’ ಕಾಲೇಜು ಆರಂಭಿಸಿದರು. ಆರೋಗ್ಯ ಸಚಿವರಾಗಿದ್ದಾಗ ಓಪೆಕ್ಸ್‌ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್’ ಪ್ರಾರಂಭಿಸಿದರು. ಶಾಸಕರಾಗಿ, ಗುಂಡೂರಾವ್‌ ಅವಧಿಯಲ್ಲಿ ಎರಡು ವರ್ಷ ವಿಧಾನಸಭೆಯ ಉಪಸಭಾಪತಿಯಾಗಿ, ವೀರಪ್ಪ ಮೊಯಿಲಿ, ಎಸ್‌.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು.

**

1978 ಪದವೀಧರ ಶಿಕ್ಷಕರ ಚುನಾವಣೆ (ಉತ್ತರ ಈಶಾನ್ಯ ಕ್ಷೇತ್ರ)– 2,899 ಪಡೆದ ಮತಗಳು–ಗೆಲುವು

1985 ವಿಧಾನಸಭೆ ಚುನಾವಣೆ–24,374 ಪಡೆದ ಮತಗಳು–ಸೋಲು

1989 ವಿಧಾನಸಭೆ ಚುನಾವಣೆ–36,054 ಪಡೆದ ಮತಗಳು–ಗೆಲುವು

1994 ವಿಧಾನಸಭೆ ಚುನಾವಣೆ–23,359 ಪಡೆದ ಮತಗಳು–ಗೆಲುವು

1999 ವಿಧಾನಸಭೆ ಚುನಾವಣೆ–33,243 ಪಡೆದ ಮತಗಳು–ಗೆಲುವು

2004 ವಿಧಾನಸಭೆ ಚುನಾವಣೆ–25,788 ಪಡೆದ ಮತಗಳು– ಸೋಲು

2008 ವಿಧಾನಸಭೆ ಚುನಾವಣೆ–36,348 ಪಡೆದ ಮತಗಳು–ಗೆಲುವು

2013 ವಿಧಾನಸಭೆ ಚುನಾವಣೆ–40,434 ಪಡೆದ ಮತಗಳು–ಗೆಲುವು

**

ಹಿಂದೆ ರಾಜಕೀಯದಲ್ಲಿ ಆದರ್ಶ, ಮೌಲ್ಯಗಳಿದ್ದವು. ಬಡವನೂ ಶಾಸಕ ನಾಗುವ ಕಾಲವದು. ಜಾಗತಿಕ, ಉದಾರೀಕರಣದ ನಂತರ ಯಾವ ಮೌಲ್ಯ, ಆದರ್ಶಗಳೂ ಉಳಿದಿಲ್ಲ.

–ಡಾ.ಎ.ಬಿ.ಮಾಲಕರಡ್ಡಿ , ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry