ಮನೆಯ ಒಳಾಂಗಣಕ್ಕೆ ಕಾಡಿನ ಚಿತ್ರಣ

7

ಮನೆಯ ಒಳಾಂಗಣಕ್ಕೆ ಕಾಡಿನ ಚಿತ್ರಣ

Published:
Updated:
ಮನೆಯ ಒಳಾಂಗಣಕ್ಕೆ ಕಾಡಿನ ಚಿತ್ರಣ

‌ಉಡುಪಿನ ಬಹುತೇಕ ಫ್ಯಾಷನ್‌ಗಳು ಒಳಾಂಗಣ ವಿನ್ಯಾಸಕ್ಕೂ ಅನ್ವಯವಾಗುತ್ತವೆ. ಟ್ರೆಂಡ್‌ಗೆ ತಕ್ಕಂತೆ ಬಣ್ಣ, ಉಡುಪಿನ ವಿನ್ಯಾಸಗಳಲ್ಲಿ ಬದಲಾವಣೆಯಾಗುವಂತೆ ಒಳಾಂಗಣ ವಿನ್ಯಾಸದ ಪರಿಕರಗಳೂ ಬದಲಾವಣೆಗೆ ಒಗ್ಗಿಕೊಂಡಿವೆ. ಫ್ಲೋರಲ್‌, ವೈಲೆಟ್‌, ಕೆಮೊ... ಹೀಗೆ ಹಲವು ಮಾದರಿಗಳು ಒಳಾಂಗಣವನ್ನು ಅಲಂಕರಿಸುತ್ತಿವೆ.

ಕಾಡಿನಿಂದ ಪ್ರೇರಣೆ ಪಡೆದ, ಪ್ರಾಣಿಗಳ ಚರ್ಮವನ್ನು ಹೋಲುವ ‘ವೈಲ್ಡ್‌ ಪ್ರಿಂಟ್‌’ ವಿನ್ಯಾಸಕ್ಕೆ ಈಗ ಹೆಚ್ಚಿನ ಆದ್ಯತೆ. ಪ್ರಾಣಿಗಳ ಚಿತ್ತಾರಗಳು ಮನೆಯ ಒಳಾಂಗಣಕ್ಕೆ ಸೃಜನಶೀಲತೆಯ ಸ್ಪರ್ಶ ನೀಡುತ್ತವೆ. ಹಿಂದೆಲ್ಲ ಜಿಂಕೆ ಕೊಂಬು, ಆನೆ ದಂತ, ಹುಲಿ, ಸಿಂಹದ ಚರ್ಮಗಳನ್ನು ಮನೆಯಲ್ಲಿ ಇಡುತ್ತಿದ್ದರು. ಪ್ರಾಣಿಗಳ ಹಿಂಸೆ ತಡೆಯುವ ಉದ್ದೇಶದಿಂದ ಇವುಗಳಿಗೆ ಕಡಿವಾಣ ಹಾಕಲಾಯಿತು. ಈಗ ಆ ಸ್ಥಾನವನ್ನು ಸಿಮೆಂಟ್, ಮಾರ್ಬಲ್ ಪೌಡರ್, ಫೈಬರ್, ಮರದಿಂದ ಮಾಡಿದ ಕಲಾಕೃತಿಗಳು ತುಂಬುತ್ತಿವೆ. ಇವುಗಳ ಜೊತೆಗೆ ಸಿಂಹ, ಹುಲಿ, ಕರಡಿ, ಜಿಂಕೆ... ಹೀಗೆ ವಿವಿಧ ಪ್ರಾಣಿಗಳ ಚರ್ಮದ ಹೋಲಿಕೆಯಿರುವ ಬೆಡ್‌ಶೀಡ್‌, ದಿಂಬಿನ ಕವರ್‌ಗಳು, ಕುಷನ್‌ ಕವರ್‌ ಮನೆಯೊಳಗೆ ಕಾಡಿನ ನೋಟವನ್ನು ಕಟ್ಟಿಕೊಡುತ್ತಿವೆ. ಇವು ಮೈಯನ್ನು ಬೆಚ್ಚಗಾಗಿಸುವುದರಿಂದ ಚಳಿಗಾಲ, ಮಳೆಗಾಲದಲ್ಲಿ ಉತ್ತಮ ಆಯ್ಕೆ ಎನಿಸಿಕೊಂಡಿವೆ. ಕೊಳೆಯಾದರೂ ಎದ್ದುಕಾಣದಿರುವುದು ಇದರ ವೈಶಿಷ್ಟ್ಯ. ಪ್ರಾಣಿಗಳ ತ್ರೀಡಿ ಕಲಾಕೃತಿಗಳಿದ್ದರೆ ಹಗಲು ಮತ್ತು ರಾತ್ರಿಯ ಎಲ್ಲಾ ಬೆಳಕಿನಲ್ಲಿ ಎದ್ದುಕಾಣುವಂತೆ ವಿದ್ಯುದ್ದೀಪ ಅಳವಡಿಸುವುದು ಸದ್ಯದ ಟ್ರೆಂಡ್‌.

ಜೀಬ್ರಾ, ಹುಲಿ, ಸಿಂಹದ ಪ್ರಿಂಟ್‌ ಟ್ರೆಂಡ್‌ ಹೆಚ್ಚು ಪ್ರಚಲಿತದಲ್ಲಿದೆ. ಮೆಟ್ಟಿಲು, ನೆಲಹಾಸುಗಳು ಬಿಳಿಯ ಬಣ್ಣವೇ ಆಗಿರುವುದು ಹೆಚ್ಚು. ಆದರೆ ಮನೆಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲು ಇಚ್ಚಿಸುವವರು ಒಂದೇ ಬಣ್ಣಕ್ಕಿಂತ ನವೀನವೆನಿಸುವ ಪ್ರಾಣಿಗಳ ಪ್ರಿಂಟ್‌ ಇರುವ ಹೊದಿಕೆ ಮತ್ತು ಬಣ್ಣದ ಮೊರೆ ಹೋಗುತ್ತಿದ್ದಾರೆ. ಒಂದು ಕೋಣೆಗೆ ಮಾತ್ರವೇ ಪೂರ್ತಿಯಾಗಿ ಪ್ರಾಣಿಗಳ ಚಿತ್ತಾರ ಮಾಡುವವರೂ ಇದ್ದಾರೆ. ಸೋಫಾ, ಬೆಡ್‌ಶೀಟ್‌ಗಳಲ್ಲಿಯೂ ಪ್ರಾಣಿಗಳ ಚರ್ಮವನ್ನು ಹೋಲುವ ಹೊದಿಕೆಗಳನ್ನು ಕಾಣಬಹುದು. ಪೀಠೋಪಕರಣಗಳ ಜೊತೆಗೆ ಮನೆಯ ಗೋಡೆ, ನೆಲಹಾಸುವಿಗೂ ಪ್ರಾಣಿಗಳ ಚಿತ್ರಗಳನ್ನು ಮೆಚ್ಚುತ್ತಿದ್ದಾರೆ. ಹೆಚ್ಚಾಗಿ ಲಿವಿಂಗ್‌ ರೂಂಗೆ ಈ ವಿನ್ಯಾಸಗಳನ್ನು ಅಳವಡಿಸಲಾಗುತ್ತಿದೆ. ಈ ಥೀಮ್‌ನಲ್ಲಿ ತಿಳಿ ಬಣ್ಣಕ್ಕಿಂತ ಗಾಢ ಬಣ್ಣದ ಬಳಕೆ ಮಾಡುವುದು ರೂಢಿ.

ಜಲಪಾತಗಳ ಪ್ರತಿಕೃತಿ: ಮನೆ, ಹೋಟೆಲ್, ಕಚೇರಿ ಮುಂತಾದ ಕಡೆಗಳಲ್ಲಿ ಒಳಾಂಗಣ ಅಲಂಕಾರಕ್ಕಾಗಿ ಜಲಪಾತಗಳ ಪುಟ್ಟ ಪ್ರತಿಕೃತಿ ನಿರ್ಮಿಸಲಾಗುತ್ತದೆ.  ಕೃತಕ ಪುಟ್ಟ ಬಂಡೆ ಅಥವಾ ನೈಜ ಪುಟ್ಟ ಕಲ್ಲುಗಳನ್ನು ಬಂಡೆ ರೂಪದಲ್ಲಿ ಬಳಸಿ ಜಲಪಾತದ ಪ್ರತಿಕೃತಿ ನಿರ್ಮಿಸುತ್ತಾರೆ. ಒಣಗಿದ ಮರಗಳಿಗೆ ಫೈಬರ್ ಬಳಸಿ ಗಟ್ಟಿಗೊಳಿಸಿ ನೈಜತೆ ತುಂಬಿ ಅವುಗಳ ಮೇಲೆ ಗಿಳಿ, ನವಿಲು, ಇತರೆ ಪಕ್ಷಿಗಳು ನೈಜ ಎಂಬಂಥ ಪ್ರತಿಕೃತಿಗಳನ್ನು ನಿಲ್ಲಿಸಲಾಗುತ್ತದೆ. ಸಿಮೆಂಟ್, ಮಾರ್ಬಲ್ ಪೌಡರ್, ಫೈಬರ್, ಆವೆಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಸಹಿತ ಕಬ್ಬಿಣ ಮುಂತಾದ ವಸ್ತುಗಳನ್ನು ಬಳಸಿಕೊಂಡು ನಾನಾ ಕಲಾಕೃತಿಗಳನ್ನು ರಚಿಸಲಾಗುತ್ತದೆ. ಐಷಾರಾಮಿ ಮನೆ, ವಿಲ್ಲಾಗಳಲ್ಲಿ ಈ ರೀತಿಯ ಉದ್ಯಾನಗಳಿಗೆ ಸ್ಥಳಾವಕಾಶವೂ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry