ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿವ ಎಂ.ಬಿ. ಪಾಟೀಲಗೆ ₹ 25 ಕೋಟಿ ಕಿಕ್‌ಬ್ಯಾಕ್‌’

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಕಲಿ ಕಾರ್ಯಾನುಭವ ಪ್ರಮಾಣ ಪತ್ರ ಸಲ್ಲಿಸಿದ ಕಂಪನಿಗೆ ₹158 ಕೋಟಿ ಮೊತ್ತದ ಗುತ್ತಿಗೆ ಕೊಡಿಸುವ ಮೂಲಕ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ₹ 25 ಕೋಟಿ ಕಿಕ್‌ ಬ್ಯಾಕ್ ಪಡೆದಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಈ ಕುರಿತ ದಾಖಲೆ ಬಿಡುಗಡೆ ಮಾಡಿದ ಅವರು, ‘ವಿಶ್ವೇಶ್ವರಯ್ಯ ಜಲ ನಿಗಮ ₹4,999 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ತಮಗೆ ಬೇಕಾದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸುವ ಮೂಲಕ ಪಾಟೀಲರು ಹಣ ಲೂಟಿ ಹೊಡೆಯುತ್ತಿದ್ದಾರೆ.ಇದೇ 24ರಂದು ಮತ್ತೊಂದು ಬೃಹತ್ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

ಇಲ್ಲಿಯವರೆಗೆ ಸಿದ್ದರಾಮಯ್ಯನವರದ್ದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದುಕೊಂಡಿದ್ದೆವು. ಈ ಹಗರಣ ನೋಡಿದರೆ ಇದು 30 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬುದು ಗೊತ್ತಾಗುತ್ತದೆ. ಈ ಕಿಕ್‌ ಬ್ಯಾಕ್‌ನಲ್ಲಿ ಪಾಟೀಲರ ಮತ್ತು ಮುಖ್ಯಮಂತ್ರಿ ಪಾಲು ಎಷ್ಟು ಎಂಬುದು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

‘ನಮ್ಮದು 10 ಪರ್ಸೆಂಟ್ ಕಮಿಷನ್ ಸರ್ಕಾರವಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕುತ್ತಿದ್ದಾರೆ. ಈಗ ದಾಖಲೆ ಬಿಡುಗಡೆ ಮಾಡಿದ್ದೇವೆ. ನಿಮ್ಮ ಸರ್ಕಾರ ಎಷ್ಟು ಪಾರದರ್ಶಕ ಎಂಬುದನ್ನು ಈಗ ಹೇಳಿ’ ಎಂದು ಒತ್ತಾಯಿಸಿದ ಯಡಿಯೂರಪ್ಪ, ‘ಪಾಟೀಲರನ್ನು ಕೂಡಲೇ ಸಂಪುಟದಿಂದ  ಕೈಬಿಡಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಅಕ್ರಮದ ಆರೋಪ: ವಿಶ್ವೇಶ್ವರಯ್ಯ ಜಲ ನಿಗಮವು ಭದ್ರಾ ಮೇಲ್ದಂಡೆ ಯೋಜನೆಯಡಿ 2.9 ಕಿ.ಮೀ ಉದ್ದ ಚಿತ್ರದುರ್ಗ ಶಾಖಾ ನಾಲೆಯ ಕಾಮಗಾರಿಗೆ ಟೆಂಡರ್ ಕರೆದಿತ್ತು. ತಮಿಳುನಾಡು ಮೂಲದ ‘ನ್ಯಾಷನಲ್ ಪ್ರಾಜೆಕ್ಟ್ಸ್‌ ಕನ್ ಸ್ಟ್ರಕ್ಷನ್‌ ಕಾರ್ಪೊರೇಶನ್ ಲಿಮಿಟೆಡ್‌’ಗೆ (ಎನ್‌ಪಿಸಿಸಿ) ₹ 158 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಲು ಇದೇ ವರ್ಷದ ಜನವರಿ 1ರಂದು ಕಾರ್ಯಾದೇಶ ಪತ್ರ ನೀಡಲಾಗಿದೆ.

ಈ ಟೆಂಡರ್‌ನಲ್ಲಿ ‘ಎನ್‌ಪಿಸಿಸಿ’ ಹಾಗೂ ‘ಅಮ್ಮ ಕನ್‌ಸ್ಟ್ರಕ್ಷನ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌’ ಭಾಗವಹಿಸಿದ್ದವು. ಈ ಎರಡೂ ಸಂಸ್ಥೆಗಳು ಹಿಂದೆ ಕಾಮಗಾರಿ ನಿರ್ವಹಿಸಿದ ಬಗ್ಗೆ ನಕಲಿ ಕಾರ್ಯಾನುಭವ ಪ್ರಮಾಣ ಪತ್ರಗಳನ್ನು (ವರ್ಕ್‌ ಡನ್ ಸರ್ಟಿಫಿಕೇಟ್‌) ಸಲ್ಲಿಸಿವೆ. ಮಣಿಪುರದಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದಾಗಿ ಎನ್‌ಪಿಸಿಸಿ ಹಾಗೂ ತ್ರಿಪುರಾದಲ್ಲಿ ಕಾಮಗಾರಿ ನಡೆಸಿರುವುದಾಗಿ ಅಮ್ಮ ಕಂಪನಿ ಪ್ರಮಾಣ ಪತ್ರ ಸಲ್ಲಿಸಿವೆ. ಎರಡೂ ರಾಜ್ಯಗಳ ಮಧ್ಯೆ 628 ಕಿ.ಮೀ ದೂರ ಇದೆ. ವಿವಿಧ ಸರ್ಕಾರಿ ಸಂಸ್ಥೆಗಳ ಕಾರ್ಯಪಾಲಕ ಎಂಜಿನಿಯರ್ ಹೆಸರಿನಲ್ಲಿ ಈ ಕಂ‍‍ಪನಿಗಳು ಸಲ್ಲಿಸಿರುವ ಪ್ರಮಾಣ ಪತ್ರಗಳ ಸಹಿ ಒಂದೇ ರೀತಿ ಇದೆ ಎಂದು ಯಡಿಯೂರಪ್ಪ ಹೇಳಿದರು.

‘ತಮ್ಮ ರಾಜ್ಯದಲ್ಲಿ ಅಂತಹ ಕಾಮಗಾರಿಗಳನ್ನು ಈ ಕಂಪನಿಗಳು ನಡೆಸಿಲ್ಲ ಹಾಗೂ ಪ್ರಮಾಣ ಪತ್ರವನ್ನು ನಾವು ನೀಡಿಲ್ಲ’ ಎಂದು ತ್ರಿಪುರದ ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್‌ ಕನ್ ಸ್ಟ್ರಕ್ಷನ್ ಲಿಮಿಟೆಡ್‌ ಮತ್ತು ಮಣಿಪುರ ರಾಜ್ಯದ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಗಳ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದಾರೆ. ಈ ರೀತಿ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವ ಕುರಿತು ಕರ್ನಾಟಕ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಅಷ್ಟಾದ ಮೇಲೂ ಗುತ್ತಿಗೆ ರದ್ದುಪಡಿಸುವ ಕೆಲಸವನ್ನು ಸಚಿವ ಎಂ.ಬಿ. ಪಾಟೀಲ ಮಾಡಿಲ್ಲ’ ಎಂದೂ ಅವರು ದೂರಿದರು.

ಪಾಟೀಲರನ್ನು ನೇಣಿಗೇರಿಸಿ: ಬಿಎಸ್‌ವೈ

‘ಜನರ ಹಣ ಲೂಟಿ ಹೊಡೆಯುತ್ತಿರುವ ಸಚಿವ ಎಂ.ಬಿ. ಪಾಟೀಲರನ್ನು ನೇಣಿಗೆ ಏರಿಸಬೇಕು’ ಎಂದು ಯಡಿಯೂರಪ್ಪ ಹೇಳಿದರು.

‘ಲೂಟಿ ಮಾಡಿದ್ದು ಗೊತ್ತಾಗಬಾರದು ಎಂದು ಬೇರೆ ರಾಜ್ಯದವರಿಗೆ ಗುತ್ತಿಗೆ ನೀಡಲಾಗುತ್ತಿದೆ. ಪಾಟೀಲ ಎಂಬ ಮನುಷ್ಯ ತನ್ನ ಮೇಲೆ ಆದಾಯ ತೆರಿಗೆ (ಐ.ಟಿ) ದಾಳಿ ಆಗಲಿದೆ ಎಂದು ವಾರಕ್ಕೊಮ್ಮೆ ಹೇಳಿಕೊಂಡು ಓಡಾಡುತ್ತಿದ್ದಾನೆ. ಆತನ ಮೇಲೆ ಐ.ಟಿ ದಾಳಿ ನಡೆದರೆ ಸಾಲದು. ನೇಣಿಗೇರಿಸಬೇಕು’ ಎಂದರು.

‘ಮುಖ್ಯಮಂತ್ರಿ ಕುಮ್ಮಕ್ಕಿನಿಂದ ಆತ ಹಾಗೆ ಮಾಡುತ್ತಿದ್ದಾನೆ. ಈ ದೊಡ್ಡ ಮನುಷ್ಯನ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ. 24 ಗಂಟೆಯೊಳಗೆ ಈ ಹಗರಣದ ಬಗ್ಗೆ ಅವರು ಸ್ಪಷ್ಟನೆ ನೀಡಲಿ’ ಎಂದು ಸವಾಲು ಹಾಕಿದರು.

ಆರೋಪದಲ್ಲಿ ಹುರುಳಿಲ್ಲ: ಎಂ.ಬಿ.ಪಾಟೀಲ

ಬೆಂಗಳೂರು: ‘ಎನ್‌ಪಿಸಿಸಿ ಕಂಪನಿಗೆ ನೀಡಿದ್ದ ಭದ್ರಾ ಮೇಲ್ದಂಡೆ ಕಾಮಗಾರಿ ಗುತ್ತಿಗೆ ರದ್ದು ಮಾಡಿ, ಕಪ್ಪು ಪಟ್ಟಿಗೆ ಸೇರಿಸಿರುವುದರಿಂದ ಅಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

‘ನಾನು ಈ ಯೋಜನೆಯಲ್ಲಿ ₹ 25 ಕೋಟಿ ಕಿಕ್‌ ಬ್ಯಾಕ್‌ ಪಡೆದಿರುವುದಾಗಿ ಯಡಿಯೂರಪ್ಪ ಮಾಡಿರುವ ಆರೋಪ ಸುಳ್ಳು’ ಎಂದು ಪಾಟೀಲ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಎನ್‌ಪಿಸಿಸಿ ಕಂಪನಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ನೀಡಿದ್ದ ದಾಖಲೆ ಮತ್ತು ಪ್ರಮಾಣ ಪತ್ರಗಳು ನಕಲಿ ಎಂದು ಗೊತ್ತಾಯಿತು. ಇದೇ 19 ರಂದು ನಡೆದ ಟೆಂಡರ್‌ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚಿಸಲಾಯಿತು. ಮುಖ್ಯ ಎಂಜಿನಿಯರ್‌ ಶಿಫಾರಸಿನ ಮೇರೆಗೆ ಕಾಮಗಾರಿ ಟೆಂಡರ್‌ ರದ್ದುಪಡಿಸಲು ನಿರ್ಣಯಿಸಲಾಯಿತು. ಶೀಘ್ರವೇ ಮರು ಟೆಂಡರ್‌ ಕರೆಯಲು ಅಧಿಸೂಚನೆ ಹೊರಡಿಸಿದ್ದು, ಎನ್‌ಪಿಸಿಸಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಬಿಡ್ಡುದಾರರ ಠೇವಣಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ತಲೆಬುಡವಿಲ್ಲದ ಇಂತಹ ಆರೋಪ ಮಾಡುವ ಮೂಲಕ ಯಡಿಯೂರಪ್ಪ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಹಿಂದೆ ತಿಕೋಟಕ್ಕೆ ಬಂದು ಹಗರಣ ಬಯಲು ಮಾಡುತ್ತೇನೆ ಎಂದಿದ್ದರು. ಏನೂ ಮಾಡಲಿಲ್ಲ. ಈಗ ಮತ್ತೆ ಅವರ ಪಟಾಕಿ ಠುಸ್‌ ಆಗಿದೆ. ಯಡಿಯೂರಪ್ಪ ಮೂರ್ಖ, ನನ್ನನ್ನು ನೇಣಿಗೆ ಹಾಕುತ್ತೇನೆ ಎಂದಿದ್ದಾರೆ. ಅವರಿಗೆ ಬೇಕಿದ್ದರೆ ನಾನೇ ಹಗ್ಗ ತಂದು ಕೊಡುತ್ತೇನೆ. ಲಿಂಗಾಯತರನ್ನು ನೇಣಿಗೆ ಹಾಕಿದರು, ಬಸವಣ್ಣನನ್ನು ನೇಣಿಗೆ ಹಾಕಿದರು. ಈಗ ನನನ್ನು ನೇಣಿಗೆ ಹಾಕಲಿ ಬಿಡಿ’ ಎಂದರು.

‘ಬಿಎಸ್‌ವೈ ಬಿಜೆಪಿಯನ್ನು ನೇಣು ಹಾಕುತ್ತಾರೆ. ಇಲ್ಲದಿದ್ದರೆ ಬಿಜೆಪಿಯವರೇ ಬಿಎಸ್‌ವೈಗೆ ನೇಣು ಹಾಕುತ್ತಾರೆ. ಅವರ ವಯಸ್ಸಿಗೆ ಗೌರವ ಕೊಡುತ್ತಾ ಬಂದಿದ್ದೇನೆ. ಈಗ ಅವರು ಜೋಕರ್‌ ಆಗಿ ಪರಿವರ್ತನೆಗೊಂಡಿದ್ದಾರೆ.   ಚೆಕ್‌ ಮೂಲಕ ಹಣ ತೆಗೆದುಕೊಂಡವರು ಯಾರು ಎಂಬುದು ಜಗತ್ತಿಗೇ ಗೊತ್ತು’ ಎಂದು ಎಂ.ಬಿ.ಪಾಟೀಲ ಹರಿಹಾಯ್ದರು.

‘ಯಡಿಯೂರಪ್ಪ ಆರೋಪ ಮಾಡಿದ್ದರೂ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ವಯಸ್ಸಾಗಿರುವುದರಿಂದ ಅರಳುಮರುಳು ಆಗಿರಬಹುದು. ಆ ವಯಸ್ಸಿನಲ್ಲಿ ನಮಗೂ ಹಾಗೆ ಆಗಬಹುದು. ಯಾವುದೇ ವಿಚಾರ ಮಾತನಾಡುವುದಕ್ಕೆ ಮೊದಲು ಯಡಿಯೂರಪ್ಪ ತಜ್ಞರ ಬಳಿ ಮಾಹಿತಿ ತೆಗೆದುಕೊಳ್ಳಬೇಕು’ ಎಂದೂ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT