‘ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ ರಚಿಸಿ’

7

‘ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ ರಚಿಸಿ’

Published:
Updated:

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಯೋಜನೆ (ಸ್ಕೀಂ) ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಗುರುವಾರ ತನ್ನ ಸಲಹೆ ನೀಡಿರುವ ರಾಜ್ಯ ಸರ್ಕಾರ, ‘ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ’ ರಚಿಸುವಂತೆ ಕೋರಿದೆ.

ಕೇಂದ್ರದ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ಸಲಹೆ ನೀಡಿರುವ ರಾಜ್ಯ ಸರ್ಕಾರ, ಕಾವೇರಿ ನದಿ ನೀರಿ ನಿರ್ವಹಣಾ ಮಂಡಳಿ ಕುರಿತು ಯಾವುದೇ ರೀತಿಯ ಪ್ರಸ್ತಾಪ ಮಾಡಿಲ್ಲ.

ಇದೇ 9ರಂದು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಇಲ್ಲಿ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾವೇರಿ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ, ಒಂದು ವಾರದೊಳಗೆ ಸೂಕ್ತ ಸಲಹೆಗಳನ್ನು ನೀಡುವಂತೆ ಸೂಚಿಸಲಾಗಿತ್ತು.

ಕಾವೇರಿ ಜಲವಿವಾದ ಕುರಿತಂತೆ ಕಳೆದ ಫೆಬ್ರುವರಿ 16ರಂದು ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಅಂತರರಾಜ್ಯ ಜಲ ವಿವಾದ ಕಾಯ್ದೆ– 1956ರ (1980ರ ತಿದ್ದುಪಡಿ) ಸೆಕ್ಷನ್‌ 6‘ಎ’ ಅಡಿ ಆರು ವಾರದೊಳಗೆ ಸ್ಕೀಂ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಅನುಷ್ಠಾನ ಸಮಿತಿ: ಕಾವೇರಿ ವಿವಾದ ಕುರಿತು 2007ರ ಫೆಬ್ರುವರಿ 5ರಂದು ನ್ಯಾಯಮಂಡಳಿ ನೀಡಿದ್ದ ಐತೀರ್ಪು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ವಿಲೀನಗೊಂಡಂತಾಗಿದೆ. ಕೇಂದ್ರದ ಜಲಸಂಪನ್ಮೂಲ ಸಚಿವರು ಅಧ್ಯಕ್ಷರಾಗಿರುವ ಹಾಗೂ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಜಲಸಂಪನ್ಮೂಲ ಸಚಿವರು ಸದಸ್ಯರಾಗಿರುವ, ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯು ಸದಸ್ಯ ಕಾರ್ಯದರ್ಶಿ ಆಗಿರುವ ‘ಕಾವೇರಿ ನಿರ್ಣಯ ಅನುಷ್ಠಾನ ಸಮಿತಿ’ ರಚಿಸುವ ಮೂಲಕ ಸ್ಕೀಂ ರೂಪಿಸಬೇಕು.

ಪ್ರಧಾನ ಕಚೇರಿ: ಸಮಿತಿ ಕಾರ್ಯ ಚಟುವಟಿಕೆಗಾಗಿ ಪ್ರಧಾನ ಕಚೇರಿ ಎಲ್ಲಿ ಇರಬೇಕು ಎಂಬುದನ್ನು ಆಯಾ ರಾಜ್ಯಗಳ ಅಭಿಪ್ರಾಯ ಪಡೆಯುವ ಮೂಲಕ ಸಮಿತಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry