ಕಾವೇರಿ ತೀರ್ಪು: ಮೇಲ್ಮನವಿ ಇಲ್ಲ

7

ಕಾವೇರಿ ತೀರ್ಪು: ಮೇಲ್ಮನವಿ ಇಲ್ಲ

Published:
Updated:
ಕಾವೇರಿ ತೀರ್ಪು: ಮೇಲ್ಮನವಿ ಇಲ್ಲ

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯದ ಸಂಸದರ ಸಭೆ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದರಾಮಯ್ಯ, ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಪ್ರಸ್ತಾಪವನ್ನು ಸಂಸತ್‌ನಲ್ಲಿ ತಮಿಳುನಾಡು ಸದಸ್ಯರು ಮಂಡಿಸಿದರೆ ಅದಕ್ಕೆ ರಾಜ್ಯದ ಸಂಸದರು ಒಕ್ಕೊರಲ ವಿರೋಧ ವ್ಯಕ್ತಪಡಿಸಬೇಕು. ರಾಜ್ಯದ ನೀರಿನ ಹಕ್ಕನ್ನು ಕಾಯಲು ಎಂದಿನಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲಿ (2007ರಲ್ಲಿ) ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಶಿಫಾರಸು ಮಾಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಇದೇ ವರ್ಷದ ಫೆ.16ರಂದು ನೀಡಿದ ತೀರ್ಪಿನಲ್ಲಿ ಮಂಡಳಿ ರಚನೆಯ ಪ್ರಸ್ತಾಪವೇ ಇಲ್ಲ. ಅದನ್ನು ಗಮನಿಸಿದರೆ ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂಕೋರ್ಟ್‌ ಒಪ್ಪದೇ ಇರುವುದು ಸ್ಪಷ್ಟ. ರಾಜ್ಯದ ಪರ ನಿಲುವನ್ನು ವ್ಯಕ್ತಪಡಿಸುವಾಗ ಈ ವಿಷಯ

ವನ್ನು ಗಮನದಲ್ಲಿಟ್ಟುಕೊಳ್ಳಿ ಎಂದೂ ಅವರು ಸಂಸದರಲ್ಲಿ ಕೋರಿದರು.

ಸಭೆ ಬಳಿಕ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಜಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸುವ ಫಾಲಿ ಎಸ್‌. ನಾರಿಮನ್‌ ಹಾಗೂ ಶ್ಯಾಮ ದಿವಾನ್‌ ಅವರ ಸಲಹೆಯಂತೆ ಮೇಲ್ಮನವಿ ಸಲ್ಲಿಸದೇ ಇರುವ ಒಮ್ಮತದ ತೀರ್ಮಾನವನ್ನು ಸಭೆ ಕೈಗೊಂಡಿದೆ. ಯಾವ ಕಾರಣದಿಂದ ಈ ನಿಲುವು ತೆಗೆದುಕೊಳ್ಳುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ ಎಂಬುದನ್ನು ಸಂಸದರಿಗೆ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯದ ಹಿತ ಕಾಪಾಡುವ ವಿಷಯದಲ್ಲಿ ಫಾಲಿ ನಾರಿಮನ್ ಸಲಹೆಯಂತೆ ಮುನ್ನಡೆಯಲು ಎಲ್ಲ ಸಂಸದರೂ ಒಪ್ಪಿಗೆ ಸೂಚಿಸಿದರು ಎಂದು ಹೇಳಿದರು.

ತೀರ್ಪಿನ ಅನುಷ್ಠಾನ ಮಾಡಲು ವ್ಯವಸ್ಥೆ ರೂಪಿಸುವ ಕುರಿತು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಕರೆದಿದ್ದ ಸಭೆಯಲ್ಲಿ ನಾಲ್ಕೂ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು, ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ರಾಜ್ಯದ ನಿಲುವನ್ನು ಲಿಖಿತವಾಗಿ ಮಂಡಿಸಲಾಗಿದೆ ಎಂದರು.

ಜಲಾಶಯ ನಮ್ಮ ಸ್ವತ್ತು: ಜಲಾಶಯಗಳನ್ನು ಯಾವ ಸಂಸ್ಥೆ ಅಥವಾ ಮಂಡಳಿಯ ಸುಪರ್ದಿಗೆ ನೀಡದಂತೆ ಎಚ್ಚರವಹಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry