₹ 5,000 ಕೋಟಿ ಅಘೋಷಿತ ಆಸ್ತಿ

7

₹ 5,000 ಕೋಟಿ ಅಘೋಷಿತ ಆಸ್ತಿ

Published:
Updated:
₹ 5,000 ಕೋಟಿ ಅಘೋಷಿತ ಆಸ್ತಿ

ಬೆಂಗಳೂರು: ‘‍ಪ್ರಸಕ್ತ ಹಣಕಾಸು ವರ್ಷದಲ್ಲಿ ಗೋವಾ ಮತ್ತು ಕರ್ನಾಟಕದಲ್ಲಿ ನಡೆಸಿದ 50 ದಾಳಿಗಳಲ್ಲಿ  ₹ 5,259 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ’ ಎಂದು ಆದಾಯ ತೆರಿಗೆ (ಐ.ಟಿ) ಇಲಾಖೆಯ ಕರ್ನಾಟಕ ಮತ್ತು ಗೋವಾ ವೃತ್ತದ ಪ್ರಧಾನ ಮುಖ್ಯ ಆಯುಕ್ತ ರಜನೀಶ್ ಕುಮಾರ್ ತಿಳಿಸಿದರು.

ಈ ಪ್ರಕರಣದ ಎಲ್ಲ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದರು.

‘ಇದಲ್ಲದೇ ಎರಡೂ ರಾಜ್ಯಗಳಲ್ಲಿ 600ಕ್ಕೂ ಹೆಚ್ಚು ಸರ್ವೆ ನಡೆಸಲಾಗಿದೆ. ಈ ವೇಳೆ ₹ 2,994 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ. 500ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾರಿ ಮೊತ್ತದ ಆದಾಯ ಸಲ್ಲಿಕೆ ಮಾಡದೇ ಇರುವುದು ಕಂಡು ಬಂದಿದೆ. ಒಟ್ಟು 50 ದಾಳಿ ‍ನಡೆಸಲಾಗಿದೆ’ ಎಂದರು.

‘ನೋಟು ರದ್ದತಿ ನಂತರ ₹ 1 ಕೋಟಿಗೂ ಅಧಿಕ ಹಳೇ ನೋಟುಗಳನ್ನು ಜಮಾ ಮಾಡಿರುವ 571 ಜನ ಇದುವರೆಗೂ ರಿಟರ್ನ್ ಸಲ್ಲಿಸಿಲ್ಲ. ಅದೇ ರೀತಿ ₹ 10 ಲಕ್ಷಕ್ಕೂ ಅಧಿಕ ಮೊತ್ತವನ್ನು ಬ್ಯಾಂಕ್‍ಗೆ ಜಮಾ ಮಾಡಿರುವ 21,628 ಪ್ರಕರಣಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲ. ಇವರೆಲ್ಲರಿಗೂ ನೋಟಿಸ್ ನೀಡಲಾಗಿದೆ’ ಎಂದು ವಿವರಿಸಿದರು.

‘ಉದ್ಯೋಗಿಗಳಿಂದ ಟಿಡಿಎಸ್ ಕಡಿತ ಮಾಡಿಕೊಂಡು ಅದನ್ನು ಇಲಾಖೆಗೆ ಜಮಾ ಮಾಡದೆ ಇರುವ 500 ಕಂಪನಿಗಳನ್ನು ಪತ್ತೆ ಮಾಡಲಾಗಿದೆ. ಇಂತಹ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದೂ ಅವರು ಹೇಳಿದರು.

ಬಂಧನ: ಮತ್ತೊಂದು ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರು, ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಬಹುದೆಂದು ಯೋಚಿಸಿ, ಬೇರೆಯವರ ಖಾತೆಗಳಿಗೆ ಹಣ ಜಮಾ ಮಾಡಿ ನಂತರ ಅದನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಸರ್ವೆ ವೇಳೆ ಆ ವ್ಯಕ್ತಿ, ₹ 2.15 ಕೋಟಿ ಅಘೋಷಿತ ಆದಾಯ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ₹ 87 ಲಕ್ಷ ತೆರಿಗೆ ಪಾವತಿ ಮಾಡಿದ್ದಾರೆ. ಇವರನ್ನು ಬಂಧಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಒಂದು ಲಕ್ಷ ಕೋಟಿ ಸಂಗ್ರಹ ನಿರೀಕ್ಷೆ:

‘ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಪ್ರಸಕ್ತ ಹಣುಕಾಸು ವರ್ಷದ ಅಂತ್ಯಕ್ಕೆ ₹ 1 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ನಿರೀಕ್ಷೆ ಇದೆ. ಈವರೆಗೆ ₹ 98 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು, ಈ ತಿಂಗಳ ಅಂತ್ಯಕ್ಕೆ ನಿಗದಿತ ಗುರಿ ದಾಟುವ ವಿಶ್ವಾಸವಿದೆ’ ಎಂದರು.

ಮತ್ಸ್ಯೋದ್ಯಮಿಗಳು ಬಲೆಗೆ...!

‘ಮಂಗಳೂರಿನಲ್ಲಿ ಮತ್ಸ್ಯೋದ್ಯಮದಲ್ಲಿ ತೊಡಗಿಕೊಂಡವರು ತೆರಿಗೆ ವ್ಯವಸ್ಥೆಯಿಂದ ದೂರವೇ ಇದ್ದರು. ಇವರೆಲ್ಲಾ ತೆರಿಗೆ ಕಟ್ಟದೆ ನುಣುಚಿಕೊಳ್ಳುತ್ತಿದ್ದರು. ಆದರೆ, ದಾಖಲೆಗಳನ್ನು ಆಧರಿಸಿ ಅಂತಹವರನ್ನು ಹುಡುಕಿ ತೆರಿಗೆ ವ್ಯಾಪ್ತಿಯೊಳಗೆ ತರುತ್ತಿದ್ದೇವೆ’ ಎಂದು ರಜನೀಶ್ ಕುಮಾರ್ ಹೇಳಿದರು.

‘ವಿದೇಶಗಳಿಗೆ ಮೀನು ರಫ್ತು ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರೂ ಇವರಲ್ಲಿ ಬಹುತೇಕರು ನಯಾ ಪೈಸೆ ತೆರಿಗೆ ಕಟ್ಟುತ್ತಿರಲಿಲ್ಲ’ ಎಂದರು.

* 2016-17 ಮತ್ತು 2017-18ನೇ ಸಾಲಿನ ತೆರಿಗೆ ಸಲ್ಲಿಕೆಗೆ ಇದೇ 31ರವರೆಗೆ ಅವಕಾಶ ಇದೆ. ಪಾವತಿಸದಿದ್ದರೆ ಅಂತಹವರ ವಿರುದ್ಧ ಐಟಿ ಕಾಯ್ದೆ ಅನ್ವಯ ಕ್ರಮ ಅನಿವಾರ್ಯವಾಗಲಿದೆ.

–ರಜನೀಶ್ ಕುಮಾರ್, ಐ.ಟಿ.ಪ್ರಧಾನ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry