ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳೆಯರ ತಂಡಕ್ಕೆ ನಿರಾಸೆ

ಆಸ್ಟ್ರೇಲಿಯಾ ಎದುರಿನ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ: ಮಿಂಚಿದ ಬೆತ್ ಮೂನಿ
Last Updated 22 ಮಾರ್ಚ್ 2018, 19:38 IST
ಅಕ್ಷರ ಗಾತ್ರ

ಮುಂಬೈ: ತವರಿನಲ್ಲಿ ಆಡಿದ ತ್ರಿಕೋನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ಮಹಿಳೆಯರ ತಂಡ ನಿರಾಸೆ ಅನುಭವಿಸಿದೆ. ಗುರು ವಾರ  ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸೋತಿತು.

ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಬಳಗ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 152 ರನ್ ಕಲೆಹಾಕಿತು. 18.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ ಆಸ್ಟ್ರೇಲಿಯಾ ಗುರಿ ತಲುಪಿತು.

ಫಾರ್ಮ್‌ಗೆ ಮರಳಿದ ಜೂಲನ್‌: ಭಾರತದ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ (30ಕ್ಕೆ3) ಅವರ ಪ್ರಭಾವಿ ದಾಳಿ ಮಾಡಿದರು. ಆದರೂ  ಆಸ್ಟ್ರೇಲಿಯಾ ವನಿತೆಯರು ಉತ್ತಮ ಇನಿಂಗ್ಸ್ ಕಟ್ಟಿದರು. ಆಸ್ಟ್ರೇಲಿಯಾದ ಬೆತ್ ಮೂನಿ (45, 32ಎ, 8ಬೌಂ) ಔಟಾಗುವ ಮೊದಲೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಆ ಬಳಿಕ ಜೂಲನ್ ಎರಡು ವಿಕೆಟ್‌ಗಳನ್ನು ಪಡೆದರು.

ಈ ಹಂತದಲ್ಲಿ ಆಸ್ಟ್ರೇಲಿಯಾ ಒತ್ತಡಕ್ಕೆ ಒಳಗಾಯಿತು. ಆದರೆ ಎಲಿಸಾ ವಿಲಾನಿ (39) ಹಾಗೂ ನಾಯಕಿ ಮೆಗ್ ಲ್ಯಾನಿಂಗ್ (ಅಜೇಯ 35) ತಾಳ್ಮೆಯಿಂದ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪೂನಮ್ ಯಾದವ್‌ (22ಕ್ಕೆ1) ಆತಿಥೇಯ ತಂಡಕ್ಕೆ ಅಲ್ಪ ಮಟ್ಟಿಗೆ ಆಸರೆಯಾದರು. ಕರ್ನಾಟಕದ ರಾಜೇ ಶ್ವರಿ ಗಾಯಕವಾಡ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ.

ಸ್ಮೃತಿ ಮಂದಾನ ಆಸರೆ: ಮಿಥಾಲಿ ರಾಜ್‌ 18 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್‌ (13) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಹಂತದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ ಸ್ಮೃತಿ ಮಂದಾನ (67, 41ಎ, 11ಬೌಂ, 2ಸಿ) ಅಂಗಳದಲ್ಲಿ ಮಿಂಚು ಹರಿಸಿದರು. 11 ಬೌಂಡರಿ ಬಾರಿಸಿದ ಅವರು ಎರಡು ಸಿಕ್ಸರ್‌ಗಳಿಂದ ತಂಡದ ಮೊತ್ತ ಹೆಚ್ಚಿಸಿದರು. ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲೂ ಅವರು ಮಿಂಚಿದ್ದರು. ಮದ್ಯಮಕ್ರಮಾಂಕದ ಆಟಗಾರ್ತಿಯರ ವೈಫಲ್ಯ ಈ ಪಂದ್ಯ ದ ಲ್ಲಿಯೂ ಮುಂದುವರಿಯಿತು. ಜೆಮಿಮಾ ರಾಡ್ರಿಗಸ್‌ (1), ಕರ್ನಾಟಕದ ವೇದಾ ಕೃಷ್ಣಮೂರ್ತಿ (15) ಆಸ್ಟ್ರೇಲಿಯಾದ ಬೌಲರ್‌ಗಳನ್ನು ಎದುರಿಸುವಲ್ಲಿ ಎಡವಿದರು. ಭಾರತ ತಂಡವು ಈಚೆಗೆ  ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ 0–3 ರಿಂದ ಸೋತಿತ್ತು.

ಸಂಕ್ಷಿಪ್ತ ಸ್ಕೋರು

ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 152 (ಸ್ಮೃತಿ ಮಂದಾನ 67, ಅನುಜಾ ಪಾಟೀಲ್‌ 35; ಆಷ್ಲೆ ಗಾರ್ಡನರ್‌ 22ಕ್ಕೆ2).

ಆಸ್ಟ್ರೇಲಿಯಾ: 8.1 ಓವರ್‌ಗಳಲ್ಲಿ 4 ವಿಕೆಟ್‌ಗೆ 156 (ಬೆತ್ ಮೂನಿ 45; ಜೂಲನ್ ಗೋಸ್ವಾಮಿ 30ಕ್ಕೆ3).

ಫಲಿತಾಂಶ: ಆಸ್ಟ್ರೇಲಿಯಾ ಮಹಿಳೆಯರ ತಂಡಕ್ಕೆ 6 ವಿಕೆಟ್‌ಗಳ ಜಯ.

**

ಹಿಂದಿನ ಸೋಲುಗಳಿಂದ ಪಾಠ ಕಲಿತಿಲ್ಲ: ಮಂದಾನ

‘ಆಸ್ಟ್ರೇಲಿಯಾ ಎದುರು ನಾವು ಈಗಾಗಲೇ ಏಕದಿನ ಸರಣಿ ಆಡಿದ್ದೇವೆ. ಆದರೆ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ. ಇದರಿಂದಾಗಿ ಸೋಲು ಎದುರಿಸಬೇಕಾಯಿತು’ ಎಂದು ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

‘ಹಿರಿಯ ಆಟಗಾರ್ತಿಯರನ್ನು ನೋಡಿ ಉಳಿದವರು ಕಲಿಯಬೇಕು. ಜೂಲನ್ ಹಾಗೂ ಮಿಥಾಲಿ ಈಗಲೂ ಫಾರ್ಮ್‌ನೊಂದಿಗೆ ಆಡುತ್ತಾರೆ. ಆದರೆ ಯುವ ಬ್ಯಾಟ್ಸ್‌ವುಮನ್‌ಗಳು ಹಾಗೂ ಬೌಲರ್‌ಗಳು ವಿಫಲರಾಗುತ್ತಿದ್ದಾರೆ’ ಎಂದು ಮಂದಾನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT