ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಆದೇಶಿಸಿದ ರಾಥೋಡ್

ಸಾಯ್‌ ಸಿಂಥೆಟಿಕ್ ಟ್ರ್ಯಾಕ್, ಈಜುಕೊಳ ಕಾಮಗಾರಿ
Last Updated 22 ಮಾರ್ಚ್ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕ್ರೀಡಾ ತರಬೇತಿ ಕೇಂದ್ರದಲ್ಲಿರುವ ಸಿಂಥೆಟಿಕ್ ಆಥ್ಲೆಟಿಕ್ ಟ್ರ್ಯಾಕ್ ಮತ್ತು ಈಜುಕೊಳದ ನಿರ್ಮಾಣವು ಕಳಪೆಯಾಗಿದೆ. ಲೋಪ ವೆಸಗಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸಾಯ್ ಆವರಣದಲ್ಲಿರುವ ಎಲ್ಲ ಸೌಲಭ್ಯಗಳನ್ನೂ ಅವರು ಪರಿಶೀಲಿಸಿದರು. ಟ್ರ್ಯಾಕ್‌ನ ಒಂದು ಭಾಗದಲ್ಲಿ ಕಿತ್ತು ಹೋಗಿರುವ ಸಿಂಥೆಟಿಕ್ ಹೊದಿಕೆ. ಈಜುಕೊಳದಲ್ಲಿ ಗೋಡೆಯ ಟೈಲ್‌ಗಳು ಉದುರಿದ್ದನ್ನು ನೋಡಿದ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕರ ತೆರಿಗೆ ಹಣವನ್ನು ವಿನಿಯೋಗಿಸಲಾಗುತ್ತದೆ. ಅದು ಸರಿಯಾಗಿ ಬಳಕೆಯಾಗದೆ ಕ್ರೀಡಾಪಟುಗಳಿಗೆ ಅನ್ಯಾಯವಾಗುವುದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಸಹಿಸುವುದಿಲ್ಲ. ಈ ಲೋಪಕ್ಕೆ ಕಾರಣರಾದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಈ ಕೇಂದ್ರದಲ್ಲಿ ಅವ್ಯವಸ್ಥೆಗಳ ಬಗ್ಗೆ ಬಹಳ ದಿನಗಳಿಂದ ಕೇಳುತ್ತಿದ್ದೆ. ಇದೀಗ ಎಲ್ಲವನ್ನೂ ನೋಡಿದ್ದೇನೆ. ಸಿಂಥೆಟಿಕ್ ಟ್ರ್ಯಾಕ್ ಕನಿಷ್ಠ ಏಳು ವರ್ಷವಾದರೂ ಉತ್ತಮ ಸ್ಥಿತಿಯಲ್ಲಿರಬೇಕು. ಆದರೆ ಇಲ್ಲಿ ಹಾಕಿದ ಸಿಂಥೆಟಿಕ್ ಎರಡು ವರ್ಷದಲ್ಲಿಯೇ ದುರ್ಬಲವಾಗಿದೆ. ದೇಶದ ಪ್ರತಿಷ್ಠಿತ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಇದೂ ಒಂದಾಗಿದೆ. ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸುವ ತಂಡಗಳು ಇಲ್ಲಿ ತರಬೇತಿ ಪಡೆಯುತ್ತವೆ. ಆ ಕ್ರೀಡಾ ಪಟುಗಳು ವಿಶ್ವದ ಹಲವೆಡೆ ಭಾರತವನ್ನು ಪ್ರತಿನಿಧಿಸಲು ಹೋಗುತ್ತಾರೆ. ಅವರಿಗೆ ನಾವು ಉತ್ತಮ ಸೌಲಭ್ಯಗಳನ್ನು ಕೊಟ್ಟರೆ  ಶ್ರೇಷ್ಠ ಫಲಿತಾಂಶ ಪಡೆಯಲು ಸಾಧ್ಯವಿದೆ’ ಎಂದರು.

‘ಇಲ್ಲಿ ರಾಷ್ಟ್ರೀಯ ವಾಲಿಬಾಲ್ ತಂಡದ ಶಿಬಿರ ನಡೆಸಲು ಅವಕಾಶ ನೀಡಲಾಗಿದೆ. ಹಾಕಿ ತಂಡಗಳೂ ಇಲ್ಲಿ ಅಭ್ಯಾಸ ಮಾಡುತ್ತಿವೆ.  ಆಟಗಾರರು ಉತ್ತಮ ಊಟ ಮತ್ತು ವಸತಿ ಸೌಲಭ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ.  ಆಹಾರ ಭತ್ಯೆ ಹೆಚ್ಚಳ ಮತ್ತು ವಸತಿ ಸೌಲಭ್ಯದ ಉನ್ನತಿಕರಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರವು ಕ್ರೀಡೆಯ ಅಭಿವೃದ್ಧಿಗಾಗಿ ಮತ್ತು ಕ್ರೀಡಾಪಟುಗಳ ತರಬೇತಿ, ಉದ್ಯೋಗಕ್ಕಾಗಿ ಹೆಚ್ಚು ಹಣವನ್ನು ವಿನಿಯೋಗಿಸಲಿದೆ. ಖೇಲೋ ಇಂಡಿಯಾ ಮುಖಾಂತರ ಗ್ರಾಮಾಂತರ ಪ್ರದೇಶಗಳ ಮಕ್ಕಳ ಪ್ರತಿಭೆಯನ್ನು ಪೋಷಿಸುವ ಕಾರ್ಯ ಆರಂಭವಾಗಿದೆ’  ಎಂದು ರಾಥೋಡ್ ಹೇಳಿದರು.

‘ಕಲಾವಿದರು, ಬಾಲಿವುಡ್, ನೃತ್ಯ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಾರೆ. ಆದರೆ ಅವರಿಗೆ ಹೆಚ್ಚು ಹಣವನ್ನು ವಿನಿಯೋಗಿಸುವುದಿಲ್ಲ. ಆದರೆ ಕ್ರೀಡಾಪಟುಗಳ ಬೆಳವಣಿಗೆಗೆ ಸರ್ಕಾರವು ಕೋಟ್ಯಂತರ ಹಣವನ್ನು ಹೂಡುತ್ತದೆ. ಏಕೆಂದರೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭಾಪ್ರದರ್ಶನ ಮಾಡುತ್ತಾರೆ. ದೇಶಕ್ಕೆ ಪದಕ ಮತ್ತು ಗೌರವ ತರುತ್ತಾರೆ. ಆ ಮೂಲಕ ಯುವ ಜನಾಂಗಕ್ಕೆ ಆದರ್ಶ ವ್ಯಕ್ತಿಗಳಾಗುತ್ತಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT