ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎನ್‌ಬಿ: 41 ಸಾವಿರ ‘ಎಲ್‌ಒಯು’ ವಿತರಣೆ

Last Updated 22 ಮಾರ್ಚ್ 2018, 20:18 IST
ಅಕ್ಷರ ಗಾತ್ರ

ನವದೆಹಲಿ: ವಜ್ರಾಭರಣ ವ್ಯಾಪಾರಿ ಎಸಗಿರುವ ಕೋಟ್ಯಂತರ ರೂಪಾಯಿಗಳ ವಂಚನೆ ಹಗರಣದಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), 2011ರಿಂದೀಚೆಗೆ 41,178 ಸಾಲ ಮರು ಪಾವತಿ ಖಾತರಿ ಪತ್ರಗಳನ್ನು (ಎಲ್‌ಒಯು) ವಿತರಿಸಿದೆ.

ಇವುಗಳ ಪೈಕಿ 1,590 ‘ಎಲ್‌ಒಯು’ ಗಳನ್ನು ನೀರವ್‌ ಮೋದಿ, ಮೆಹುಲ್‌ ಸೋಕ್ಸಿ ಮತ್ತು ಅವರಿಗೆ ಸೇರಿದ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ನಕಲಿ ‘ಎಲ್‌ಒಯು’ಗಳನ್ನು ಬಳಸಿಕೊಂಡು ನೀರವ್‌ ಮೋದಿ ಮತ್ತು ಇತರರು ‘ಪಿಎನ್‌ಬಿ’ಗೆ ₹ 13 ಸಾವಿರ ಕೋಟಿಗಳಷ್ಟು ವಂಚನೆ ಎಸಗಿದ್ದಾರೆ. ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ವಿದೇಶ ವ್ಯಾಪಾರಕ್ಕೆ ಸಾಲ ಪಡೆಯಲು ನೀಡಲಾಗುತ್ತಿದ್ದ ‘ಎಲ್‌ಒಯು’ ಮತ್ತು  ‘ಲೆಟರ್‌ ಆಫ್‌ ಕಂಪರ್ಟ್‌’ ನೀಡುವುದನ್ನು ಸ್ಥಗಿತಗೊಳಿಸಿದೆ.

ವಿದೇಶಗಳಲ್ಲಿನ ದೇಶಿ ಬ್ಯಾಂಕ್‌ಗಳ ಶಾಖೆಗಳಲ್ಲಿ ನಕಲಿ ‘ಎಲ್‌ಒಯು’ ನೀಡಿ ಪಡೆದಿರುವ ಸಾಲದ ವಿವರಗಳು ಸದ್ಯಕ್ಕೆ ಲಭ್ಯ ಇಲ್ಲ ಎಂದು ‘ಪಿಎನ್‌ಬಿ’ ಮಾಹಿತಿ ನೀಡಿದೆ.

‘ಪಿಎನ್‌ಬಿ’ಯು ಇದುವರೆಗೆ ವಿತರಿಸಿರುವ ‘ಎಲ್‌ಒಯು’ಗಳ ಸಂಪೂರ್ಣ ಮಾಹಿತಿ ತನ್ನ ಬಳಿ ಇಲ್ಲವೆಂದು ಆರ್‌ಬಿಐ ತಿಳಿಸಿದೆ.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

**

ಸಾಲ ವಿತರಣೆಗೆ ಕಠಿಣ ಕ್ರಮ

₹ 13 ಸಾವಿರ ಕೋಟಿಗಳ ಹಗರಣಕ್ಕೆ ಗುರಿಯಾಗಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸಾಲ ವಿತರಿಸುವ ಪ್ರಕ್ರಿಯೆಯನ್ನು ಕಠಿಣಗೊಳಿಸಿದ್ದು, ವಂಚನೆ ತಡೆಗಟ್ಟಲು ಹೊಸ ನಿಗಾ ವ್ಯವಸ್ಥೆ ಜಾರಿಗೆ ತಂದಿದೆ.

ಸಾಲ ಮಂಜೂರಾತಿಯಲ್ಲಿ ಗರಿಷ್ಠ ಮಟ್ಟದ ಪಾರದರ್ಶಕತೆ ಅಳವಡಿಸಿಕೊಳ್ಳಲು ಸಾಲ ಮಂಜೂರಾತಿ ಮೊದಲು ಅರ್ಜಿಗಳನ್ನು ಪರಾಮರ್ಶಿಸುವ ಮತ್ತು ಮಂಜೂರು ಮಾಡಿದ ನಂತರ ಸಾಲಗಳ ಸದ್ಬಳಕೆ, ಮರುಪಾವತಿ ಮೇಲೆ ನಿಗಾ ಇಡುವ ಮೇಲ್ವಿಚಾರಣಾ ತಂಡಗಳನ್ನು ರಚಿಸಿದೆ. ’ಮಿಷನ್‌ ಪರಿವರ್ತನ್‌’ ಕಾರ್ಯಕ್ರಮದ ಅಂಗವಾಗಿ ಈ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT