ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಜನದಲ್ಲಿ ಶಿಸ್ತು

Last Updated 22 ಮಾರ್ಚ್ 2018, 20:23 IST
ಅಕ್ಷರ ಗಾತ್ರ

ಯುಕ್ತ ಆಹಾರ ವಿಹಾರವೇ ಸುಖದ ಆಧಾರ. ಇಲ್ಲಿ ‘ಯುಕ್ತ’ ಎಂದರೆ ಸರಿಯಾದುದು, ಶುದ್ಧವಾದುದು, ಹಿಂಸೆ ಇಲ್ಲದುದು, ಪ್ರಮಾಣ ಸರಿಯಾದುದು, ಅಡ್ಡ ಪರಿಣಾಮ ಇಲ್ಲದುದು. ಯಂತ್ರದಂತಿರುವ ನಮ್ಮ ದೇಹಕ್ಕೆ ಆಹಾರದಿಂದಲೇ ಶಕ್ತಿ. ಇಂಥ ನಮ್ಮ ಶರೀರಕ್ಕೆ ಯಾವ ಆಹಾರ ಒಗ್ಗುತ್ತದೆ? ಯಾವುದನ್ನು; ಎಷ್ಟು ಪ್ರಮಾಣದಲ್ಲಿ, ಎಷ್ಟು ಸಲ ತೆಗೆದು ಕೊಳ್ಳ ಬೇಕು? ಅದು ಹಿಂಸೆಯಿಂದ ಮುಕ್ತವಾದುದೇ? ಅದು ಶುದ್ಧಿ ಪ್ರಕ್ರಿಯೆಗೆ ಒಳಗಾದುದೇ?- ಈ ಮೊದಲಾದ ಪ್ರಶ್ನೆಗಳಿಗೆ ಶಾಸ್ತ್ರಗ್ರಂಥಗಳಿಂದ, ಪರಂಪರೆಯ ಜ್ಞಾನದಿಂದ, ಸ್ವಂತ ಅನುಭವದಿಂದ ಉತ್ತರವನ್ನು ಕಂಡುಕೊಳ್ಳಬೇಕು. ಈ ಬಗ್ಗೆ ಜಾಗೃತವಾಗಿರಲು ಜೈನ ಧರ್ಮ ಸೂಚಿಸುತ್ತದೆ.

‘ಪಾಪದಿಂದ ಬಿಡುಗಡೆ ಹೊಂದಲು ನಾವು ಹೇಗೆ ನಡೆಯಬೇಕು, ನಿಲ್ಲಬೇಕು, ಕೂರಬೇಕು, ಮಲಗಬೇಕು; ಹೇಗೆ ಊಟಮಾಡಬೇಕು, ಮಾತನಾಡಬೇಕು?’- ಎಂದು ಮಹಾವೀರರಲ್ಲಿ ಶ್ರಮಣರು ವಿಚಾರಿಸಿದಾಗ, ಅವರು, ‘ಎಚ್ಚರಿಕೆಯಿಂದ ನಡೆಯಬೇಕು, ನಿಲ್ಲಬೇಕು, ಕೂರಬೇಕು, ಮಲಗಬೇಕು; ಎಚ್ಚರಿಕೆಯಿಂದ ಊಟಮಾಡಬೇಕು, ಮಾತನಾಡಬೇಕು’ ಎಂದರು. ಇಲ್ಲಿ ಊಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿರುವುದು ಮುಖ್ಯ. ಆದ್ದರಿಂದಲೇ ಅನ್ನವೇ ಪ್ರಾಣ ಎಂದೆನಿಸಿದೆ. ಸ್ವಾದಕ್ಕಾಗಿ, ಸ್ವಾಸ್ಥ್ಯಕ್ಕಾಗಿ, ಸಾಧನೆಗಾಗಿ ಜನ ಊಟ ಮಾಡುತ್ತಾರೆ. ರುಚಿ ನೋಡುತ್ತಾ ಊಟ ಮಾಡಬಹುದು, ಆದರೆ ರುಚಿಗಾಗಿ ಊಟ ಮಾಡಬಾರದು. ಸ್ವಾದ ಪ್ರಿಯರು ಸಹಜವಾಗಿ ನಾಲಗೆಯ ಗುಲಾಮರು. ಇವರು ಭೋಗಿಗಳು. ಸ್ವಾದದಲ್ಲಿ ಇವರಿಗೆ ಮಮತ್ವ ಹಚ್ಚಾದರೆ ರೋಗಿಗಳೂ ಆಗಬಹುದು. ಆರೋಗ್ಯಕ್ಕಾಗಿ ಭೋಜನ ಮಾಡುವುದು ಒಳ್ಳೆಯದು. ಇದರಿಂದ ಮನಸ್ಸು ಪ್ರಸನ್ನಗೊಳ್ಳುವುದು, ಇಂದ್ರಿಯಗಳು ಶಾಂತವಾಗುವುವು. ಜೀವನೋತ್ಸಾಹ ಚಿಮ್ಮುವುದು. ಇಂಥವರಿಗೆ ಒಂದು ಗುರಿ ಇರುತ್ತದೆ. ಅದರ ಸಾಧನೆಗಾಗಿ ಇವರು ಸತತವಾಗಿ ಪ್ರಯತ್ನಿಸುತ್ತಾರೆ. ಯಾರು ತಮ್ಮ ಸಾಧನೆಗಾಗಿ, ತಮ್ಮ ಶರೀರ ರಕ್ಷಣೆಗಾಗಿ ಶ್ರಮಿಸುವರೋ ಅವರೇ ಧನ್ಯರು. ಅದೇ ಭೋಜನದ ಸದುಪಯೋಗ. ಅವರು ತಪಗೈಯಲು ಹಿತ-ಮಿತವಾಗಿ ಊಟಮಾಡುತ್ತಾರೆ.

ಎಷ್ಟು ತಿನ್ನಬೇಕು? ಕಡಿಮೆ ತಿನ್ನಬೇಕು. ಕಾಲು ಭಾಗ ಗಾಳಿ, ಅರ್ಧಭಾಗ ನೀರು, ಇನ್ನುಳಿದ ಕಾಲು ಭಾಗ ಮಾತ್ರ ಅನ್ನ ತಿನ್ನಬೇಕು, ಅದು ಹಸಿವಾದಾಗ ಮಾತ್ರ. ಸೂರ್ಯನ ಪ್ರಕಾಶಕ್ಕೂ ಶುದ್ಧಭೋಜನಕ್ಕೂ ಗಾಢವಾದ ಸಂಬಂಧವಿದೆ. ಸೂರ್ಯ ಪ್ರಕಾಶದಲ್ಲಿ ಸೂಕ್ಷ್ಮ ಜೀವಿಗಳ ಉತ್ಪತ್ತಿ ಆಗುವುದಿಲ್ಲ. ಆದ್ದರಿಂದ ಭೋಜನಕ್ಕೆ ಪ್ರಾಸುಕತೆ ಪ್ರಾಪ್ತವಾಗುವುದು. ಸೂರ್ಯನಿಲ್ಲದ ರಾತ್ರಿಯಲ್ಲಿ ಆಹಾರ ಪ್ರಾಸುಕವಾಗಿರುವುದಿಲ್ಲ. ಆದ್ದರಿಂದ ಜೈನಧರ್ಮ ರಾತ್ರಿಭೋಜನ ತ್ಯಾಗವನ್ನು ಹೇಳಿದೆ. ನರಕಕ್ಕೆ ನಾಲ್ಕು ಬಾಗಿಲುಗಳಂತೆ. ಅವುಗಳಲ್ಲಿ ಒಂದು ಬಾಗಿಲು ರಾತ್ರಿಭೋಜನ ಮಾಡುವವರಿಗೆ ಮೀಸಲಾಗಿದೆ ಎಂದು ಮಹಾಭಾರತದಲ್ಲಿ ಉಲ್ಲೇಖವಿದೆ.

‘ಒಂದು ಸಲ ತಿನ್ನುವವನು ಯೋಗಿ, ಎರಡು ಸಲ ತಿನ್ನುವವನು ಭೋಗಿ, ಮೂರುಸಲ ತಿನ್ನುವವನನ್ನು ಹೊತ್ತುಕೊಂಡು ಹೋಗಿ’ ಎಂಬ ಗಾದೆಯೇ, ಎಷ್ಟು ಸಲ ತಿನ್ನಬೇಕು ಎಂಬುದಕ್ಕೆ ಉತ್ತರವಾಗಿದೆ. ಜೈನ ಮುನಿಗಳು ಶ್ರೇಷ್ಠ ಯೋಗಿಗಳು. ಅವರು ಹಗಲಿನಲ್ಲಿ ಒಂದು ಸಲ ಮಾತ್ರ, ನಿಂತುಕೊಂಡು ತಮ್ಮ ಕೈಯ ಬೊಗಸೆಗೆ ಶ್ರಾವಕರು ನೀಡುವ ಶುದ್ಧ ಆಹಾರ ಮತ್ತು ನೀರನ್ನು ಸೇವಿಸುತ್ತಾರೆ. ಎಚ್ಚರಿಕೆಯಿಂದ ಪ್ರಾಸುಕಾಹಾರ ಸೇವಿಸಬೇಕು ಎಂಬುದು ಜೈನಧರ್ಮದ ಆಶಯ. ಆದ್ದರಿಂದ ನಾವೆಲ್ಲ ಒಂದಿಲ್ಲೊಂದು ರೀತಿಯ ಶಿಸ್ತನ್ನು ಭೋಜನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT