ಮರು ಚಿಂತನೆಗೆ ‘ಸುಪ್ರೀಂ’ ಸೂಚನೆ

7

ಮರು ಚಿಂತನೆಗೆ ‘ಸುಪ್ರೀಂ’ ಸೂಚನೆ

Published:
Updated:

ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿ.ಜಿ) ಪ್ರವೇಶ ನೀಡಲು ರೂಪಿಸಲಾಗಿರುವ ಮಾನದಂಡಗಳನ್ನು ಮಾರ್ಪಡಿಸುವತ್ತ ಮರುಚಿಂತನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಡಾ.ಕೃತಿ ಲಖಿನಾ ಸೇರಿದಂತೆ 39 ಜನ ಕನ್ನಡೇತರ ವಿದ್ಯಾರ್ಥಿಗಳು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹಾಗೂ ನವೀನ್‌ ಸಿನ್ಹಾ ಅವರನ್ನು ಒಳಗೊಂಡ ಪೀಠದ ಸೂಚನೆಯ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸುವುದಾಗಿ ವಕೀಲ ಬಸವಪ್ರಭು ಪಾಟೀಲ ತಿಳಿಸಿದರು.

2018ನೇ ಸಾಲಿನ ವೈದ್ಯಕೀಯ ಮತ್ತು ದಂತವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಪ್ರವೇಶಕ್ಕೆ ಅಗತ್ಯವಿರುವ ಪ್ರವೇಶ ಪರೀಕ್ಷೆ (ಎನ್‌ಇಇಟಿ) ಎದುರಿಸುವ ಕನ್ನಡೇತರರು ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು, ಕರ್ನಾಟಕ ಮೂಲದ ಅಥವಾ 10 ವರ್ಷ ಕರ್ನಾಟಕದಲ್ಲೇ ಶಿಕ್ಷಣ ಪಡೆದಿರುವವರು ಅರ್ಹರು ಎಂಬ ಮಾನದಂಡ ಸರಿಯಾದುದಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅಭಿಪ್ರಾಯಪಟ್ಟಿದೆ. ಹಾಗಾಗಿ ಮಾನದಂಡಗಳನ್ನು ಮಾರ್ಪಾಡು ಮಾಡಲು ಚಿಂತನೆ ನಡೆಸಬೇಕು ಎಂದು ಹೇಳಿದ ನ್ಯಾಯಪೀಠ, ಮಾರ್ಚ್‌ 27ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

ವಿಶೇಷ ಸ್ಥಾನಮಾನ ಆಂಧ್ರದಲ್ಲಿ ರಸ್ತೆ ತಡೆ

ಹೈದರಾಬಾದ್‌: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳು ಗುರುವಾರ ರಸ್ತೆ ತಡೆ ನಡೆಸಿವೆ. ಇದರಿಂದಾಗಿ ರಾಜ್ಯದ 13 ಜಿಲ್ಲೆಗಳಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಎಸ್‌ಎಸ್‌ಸಿ ಪರೀಕ್ಷಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ವಿಜಯವಾಡ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಪರ್ಯಾಯ ಮಾರ್ಗಗಳನ್ನು ರೂಪಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೂ ಮೊದಲು ಪರೀಕ್ಷಾ ಕೇಂದ್ರಗಳಿಗೆ ಹಾಜರಾಬೇಕು ಎಂದು ಅಭ್ಯರ್ಥಿಗಳಿಗೆ ಪೊಲೀಸರಿಗೆ ಸೂಚಿಸಿದ್ದರು.

ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲು ಮುಂದಾಗುವ ಎಲ್ಲ ರಾಜಕೀಯ ಪಕ್ಷಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry