ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಮಕ್ಕಳಂತೆ ಟಿಪ್ಪಣಿ ಮಾಡಿಕೊಂಡಿದ್ದೆ

ಕಾಗೋಡು ಗರಡಿಯಲ್ಲಿ ಪಳಗಿದೆ; ಧರ್ಮಸಿಂಗ್‌, ಖರ್ಗೆ ಸಹಕಾರ ಮರೆಯಲಾರೆ
Last Updated 23 ಮಾರ್ಚ್ 2018, 7:02 IST
ಅಕ್ಷರ ಗಾತ್ರ

ಚಿಂಚೋಳಿ: ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಮ್ಮ ಆಸನದತ್ತ ಮರಳುವಾಗ ಅಧ್ಯಕ್ಷರ ಹಿಂದಿನಿಂದ ಮರಳಬೇಕು ಎಂಬ ನಿಯಮವಿದೆ. ಈ ನಿಯಮ ನನಗೆ ಗೊತ್ತಿರಲಿಲ್ಲ. ಪ್ರಮಾನವಚನ ಸ್ವೀಕರಿಸಿ ಮರಳುವಾಗ ಅಧ್ಯಕ್ಷರ ಎದುರಿನಿಂದ ಹೋಗಲು ಹೆಜ್ಜೆಹಾಕಿದೆ. ಜತೆಗಿದ್ದ ಮಾಲೀಕಯ್ಯ ಗುತ್ತೇದಾರ ಹಿಂದಕ್ಕೆ ಎಳೆದು ದಾರಿ ತೋರಿದರು.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ್ ಶಾಸಕನಾದ ಮೊದಲ ದಿನಗಳನ್ನು ಹೀಗೆ ಮೆಲುಕು ಹಾಕಿದರು.

ತಾಂಡಾಗಳ ಊರಿನಿಂದ ಬಂದಿರುವ ಅವರು ಎಂಬಿಬಿಎಸ್‌ ಪದವೀಧರರು. ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದ್ದ ಅವರಿಗೆ ಎಲ್ಲವೂ ಹೊಸದು. ಸದನದ ನಡಾವಳಿಗಳು ಅಷ್ಟಾಗಿ ತಿಳಿದಿರಲಿಲ್ಲ. ಆದರೆ, ಸಮಸ್ಯೆಗೆ ತಮ್ಮದೇಯಾದ ದಾರಿಯನ್ನು ಕಂಡುಕೊಂಡಿದ್ದರು.

’ಮೊದಲ ಅಧಿವೇಶನದಲ್ಲಿ ನಡೆಯುತ್ತಿದ್ದ ಚರ್ಚೆಯ ವಿಷಯ ಪ್ರಶ್ನೋತ್ತರಗಳನ್ನು ಶಾಲಾ ಮಕ್ಕಳಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಇದನ್ನು ಗಮನಿಸಿದ ಕೆಲವು ಶಾಸಕರು ಚರ್ಚೆಯ ಸಮಗ್ರ ಮಾಹಿತಿಯ ಮುದ್ರಿತ ಪುಸ್ತಕ ನೀಡುತ್ತಾರೆ. ನೋಟ್ಸ್‌ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದಿದ್ದರು. ಹಲವು ತಿಂಗಳ ನಂತರ ದಾಖಲಿಸಿಕೊಂಡಿದ್ದ ಮಾಹಿತಿಯನ್ನು ಕೆಲವು ಶಾಸಕರು ಪರಿಶೀಲಿಸಿ ಬೆನ್ನುತಟ್ಟಿದ್ದರು’ ಎಂದು ಮಂದಹಾಸ ಬೀರಿದರು ಜಾಧವ್.

ಶಾಸಕರಾದ ಮೊದಲು ಮೂರು ತಿಂಗಳು ಅಧಿವೇಶನ ಮತ್ತು ಕಚೇರಿಗಳ ಭೇಟಿಗಾಗಿ ಸಮಯ ಮೀಸಲಾಗಿ‌ಟ್ಟಿದ್ದರು. ಅಧಿವೇಶನದಲ್ಲಿದ್ದಾಗ ಕ್ಷೇತ್ರದ ಜನರ ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ. ಈ ವರ್ತನೆ ಬಗ್ಗೆ ಕ್ಷೇತ್ರದಲ್ಲಿ ಅಪಪ್ರಚಾರವೂ ನಡೆಯಿತು.

ಕಾಗೋಡು ಗರಡಿಯಲ್ಲಿ ಪಳಗಿದ್ದು:’ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರಿಂದ ಹೆಚ್ಚಾಗಿ ಕಲಿತಿದ್ದೇನೆ. ಅಧಿವೇಶನದ ಚಟುವಟಿಕೆ, ಸಹಭಾಗಿತ್ವ, ನಡಾವಳಿಗೆಗಳ ಬಗ್ಗೆ ಪ್ರಾಥಮಿಕ ಜ್ಞಾನ ಬಂದಿದ್ದೇ ಅವರಿಂದ. ಪ್ರತಿದಿನ ಪ್ರಶ್ನೆಗಳನ್ನು ಕೇಳತೊಡಗಿದೆ. ಅಧಿಕ ಪ್ರಶ್ನೆ ಕೇಳಿದ ಶಾಸಕ ಜತೆಗೆ ಅಧಿವೇಶನದಲ್ಲಿ ಹೆಚ್ಚಾಗಿ ಪಾಲ್ಗೊಂಡ ಶಾಸಕ ಎಂಬ ಹೆಗ್ಗಳಿಕೆ ನನ್ನದು. ಕಾಗೋಡು ಅವರಿಗೆ ನಾನು ಋಣಿ’ ಎಂದು ಹೆಮ್ಮೆಪಡುತ್ತಾರೆ.

ಸದನಲ್ಲಿ ಅವರಿಗೆ ಮೀಸಲಾದ ಆಸನ ಆಡಳಿತ ಮತ್ತು ವಿರೋಧಪಕ್ಷಗಳ ಮಧ್ಯದಲ್ಲಿತ್ತು. ಡಾ.ಉಮೇಶ್‌ ಜಾಧವ್ ಯಾವ ಪಕ್ಷದವರು ಎಂಬ ಗೊಂದಲ ಅನೇಕರಲ್ಲಿತ್ತು. ಅಧಿಕ ಪ್ರಶ್ನೆ ಕೇಳು ವೈಖರಿ ಕಂಡವರು ಆಡಳಿತ ಪಕ್ಷದವರಲ್ಲ ಎಂದೇ ಭಾವಿಸಿದ್ದರಂತೆ. ಒಮ್ಮೆ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ತಾಂಡಾಗಳ ಅಂಕಿ–ಸಂಖ್ಯೆಯ ಮಾಹಿತಿ ತಪ್ಪಾಗಿ ನೀಡಿದ್ದರು. ‘ಈ ಉತ್ತರ ಅಸಮರ್ಪಕವಾಗಿದೆ. ಮಾಹಿತಿ ಹೊಂದಿಕೆ ಆಗಲ್ಲ’ ಎಂದು ಏರು ದನಿಯಲ್ಲಿಯೇ ಜಾಧವ್‌ ಪ್ರಶ್ನಿಸಿದ್ದರು. ಸಚಿವರು ಇವರನ್ನು ವಿರೋಧ ಪಕ್ಷದವರು ಎಂದು ಭಾವಿಸಿ ಸರಿಯಾದ ಉತ್ತರ ನೀಡಿದ್ದರು.

’ನನಗೆ ಇಒ(ಕಾರ್ಯನಿರ್ವಹಣಾಧಿಕಾರಿ) ಎಇಇ (ಸಹಾಯಕ ಕಾರ್ಯನಿರ್ವಹಣಾಧಿಕಾರಿ) ಎಂದರೇನೆಂಬುದು ಗೊತ್ತಿರಲಿಲ್ಲ. ಶಾಸಕತ್ವ ಮಹತ್ವ ಅಷ್ಟಾಗಿ ಗೊತ್ತಿರಲಿಲ್ಲ. ಖುರ್ಚಿ ತಾನಾಗಿಯೇ ಎಲ್ಲವನ್ನೂ ಕಲಿಸಿತು’ ಎಂದು ವಿನಮ್ರವಾಗಿ ಒಪ್ಪಿಕೊಳ್ಳುತ್ತಾರೆ.

ಹುಬ್ಬಳ್ಳಿಯಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುವಾಗ ತರಗತಿಯಲ್ಲಿ ಅಧ್ಯಾಪಕರು ಹೇಳಿದ್ದನ್ನು ದಾಖಲಿಸಿಕೊಳ್ಳುವುದು ಅವರ ರೂಢಿ. ತಕ್ಷಣಕ್ಕೆ ಗೊತ್ತಾಗದ ಸಂಗತಿಗಳು ನೋಟ್ಸ್‌ ಓದಿದಾಗ ಅರ್ಥವಾಗುತ್ತಿತ್ತು. ಈ ಸೂತ್ರವನ್ನು ಅವರು ಸದನಲ್ಲೂ ಅನುಸರಿಸಿದರು. ಪ್ರತಿಯೊಂದು ಚರ್ಚೆಯ ಸಾರ ದಾಖಲಿಸಿಕೊಂಡರು. ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ದೊರೆಯುವ ಅನುದಾನ, ಯೋಜನೆಗಳ ಮಾಹಿತಿ ನಿಖರವಾಗಿ ಲಭಿಸಿತು. ಈ ರೂಢಿ ಈಗಲೂ ಇದೆ.

ನಿದ್ದೆಗೂ ಜಾರಿದರು: ಒಂದು ಸದನದಲ್ಲಿಯೇ ನಿದ್ದೆಗೆ ಜಾರಿದರು. ಈ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರ
ವಾಯಿತು. ಇದನ್ನು ನೋಡಿದ ಮಾಜಿ ಸಚಿವ ಶರಣಬಸಪ್ಪ ದರ್ಶರ್ನಾಪುರ ಶಾಸಕರ ಆಪ್ತ ಸಹಾಯಕಗೆ ಕರೆ ಮಾಡಿ ‘ನಿಮ್ಮ ಸಾಹೇಬರು ನಿದ್ದೆ ಮಾಡುತ್ತಿದ್ದಾರಂತೆ. ಟಿವಿಯಲ್ಲಿ ಬರುತ್ತಿದೆ. ಎಚ್ಚರಗೊಳ್ಳಲು ತಿಳಿಸು’ ಎಂದಿದ್ದರು.

‘ಅದೇ ಕೊನೆ, ಅಂದಿನಿಂದ ಅಧಿವೇಶನದಲ್ಲಿ ಒಂದು ಕ್ಷಣವೂ ನಿದ್ದೆಗೆ ಜಾರಿಲ್ಲ’ ಎನ್ನುತ್ತಾರೆ ಜಾಧವ್.

’ಒಂದು ದಿನ ಬೆಳಿಗ್ಗೆ ನಾಡಗೌಡರು ಕರೆ ಮಾಡಿ ನೀವು ಸಂಸದೀಯ ಕಾರ್ಯದರ್ಶಿಗಳಾಗುತ್ತಿದ್ದೀರಿ’ ಎಂದರು. ಇದು ಜೋಕ್‌ ಎಂದು ಭಾವಿಸಿ ನಕ್ಕು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ಬಸವರಾಜ ರಾಯರಡ್ಡಿ ಕರೆಮಾಡಿ ಇದೇ ವಿಷಯ ತಿಳಿಸಿದರು. ಆದರೂ ನಂಬಲಿಲ್ಲ. ಮಾವ ಪ್ರಕಾಶ ರಾಠೋಡ ಸಂಸದೀಯ ಕಾರ್ಯದರ್ಶಿಯಾಗುತ್ತಿರುವುದು ಸತ್ಯ ಎಂದು ತಿಳಿಸಿದರು. ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ’ ಎನ್ನುವ ವಿಶ್ವಾಸದಲ್ಲಿ ಮಾತಿಗೆ ವಿರಾಮ ನೀಡಿದರು.
**
ಹೆಜ್ಜೆ ಗುರುತು..
ಚಿಂಚೋಳಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ದಾಖಲಿಸಿದ ಡಾ.ಉಮೇಶ ಜಾಧವ್‌ ಕಾಳಗಿ ತಾಲ್ಲೂಕಿನ ಬೆಡಸೂರು ತಾಂಡಾದವರು.

ಕಲಬುರ್ಗಿಯ ವಿಜಯ ವಿದ್ಯಾಲಯ, ಶರಣಬಸವೇಶ್ವರ ಕಾಲೇಜು ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭಾಸ ಮಾಡಿದ್ದಾರೆ.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಧರ್ಮಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದೊಂದಿಗೆ ಕಾಂಗ್ರೆಸ್‌ ಉಮೇದುವಾರರಾಗಿ ಕಣಕ್ಕಿಳಿದು 26 ಸಾವಿರ ಮತಗಳ ಅಂತರದಲ್ಲಿ ಪ್ರಚಂಡ ಗೆಲುವು ಕಂಡರು. ಅವರ ತಂದೆ ಗೋಪಾಲದೇವ ಜಾಧವ್‌ ಸ್ವಾತಂತ್ರ್ಯಯೋಧರು. ರಾಜಕಾರಣದಲ್ಲಿ ತಂದೆ ಕಹಿ ಉಂಡಿದ್ದರು. ಆದರೆ ಚಿಂಚೋಳಿ ಕ್ಷೇತ್ರದ ಮೂಲಕ ಉಮೇಶ ಜಾಧವ್‌ ಸಿಹಿ ಅನುಭವ ನೀಡಿದರು.
**
ಶಾಸಕನಾದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದೆ. ಅವರು ಬೇರೆ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡಬೇಡ, ಕುಟುಂಬದವರಿಗೆ ಕಾಮಗಾರಿಗಳ ಗುತ್ತಿಗೆ ನೀಡಬೇಡ. ಬಡವರ ಬಗ್ಗೆ ಕಾಳಜಿ ಇರಲಿ ಎಂದಿದ್ದರು. ಈ ಮಾತುಗಳೇ ನನಗೆ ವೇದವಾಕ್ಯ. 
– ಡಾ. ಉಮೇಶ ಜಾಧವ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT