ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತ ಧರ್ಮ: ನಿರ್ಣಯ ರದ್ದುಗೊಳಿಸಿ’

ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಧಾನಿಗೆ ಮನವಿ
Last Updated 23 ಮಾರ್ಚ್ 2018, 8:15 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಸರ್ಕಾರದ ಚುನಾವಣೆಯನ್ನು ಎದುರಿಗಿಟ್ಟುಕೊಂಡು ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ನಿರ್ಣಯವು ಕಾಂಗ್ರೆಸ್‌ನ ಒಡೆದು ಆಳುವ ನೀತಿಯಾಗಿದೆ. ಲಿಂಗಾಯತ ಸಮಾಜಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿರ್ಣಯ ತೆಗದುಕೊಂಡಿದ್ದು, ಈ ನಿರ್ಣಯವನ್ನು ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊ ಳ್ಳಲಾಗಿದೆ. ವಾಸ್ತವದಲ್ಲಿ ಶೈವರು ಮತ್ತು ವೈಷ್ಣವರು ಹಿಂದೂ ಧರ್ಮದ ಮೂಲಭೂತ ಅಂಗಗಳಾಗಿದ್ದಾರೆ. ಅವತಾರಿ ಕಾರ್ಯ ಮಾಡುವ ಮತ್ತು ಆಧ್ಯಾತ್ಮಿಕ ಉನ್ನತ ಸಂತರೇ ಧರ್ಮ ಸಂಸ್ಥಾಪನೆಯ ಕಾರ್ಯ ಮಾಡ ಬಲ್ಲರು. ಹೀಗಾಗಿ ಆ ರೀತಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವೇ ರಾಜಕಾರಣಿಗಳಿಗಿಲ್ಲ. ಕಾಂಗ್ರೆಸ್ ಆ ರೀತಿ ಮಾಡುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವನ್ನು ವೀರಶೈವ ಧರ್ಮಗುರುಗಳು ತೀವ್ರವಾಗಿ ವಿರೋಧಿಸಿದ್ದಾರೆ. ದೇಶದಾದ್ಯಂತ ವೀರಶೈವ-ಲಿಂಗಾಯತ ಸಮಾಜವನ್ನು ಪ್ರತಿನಿಧಿಸುವ ಅಖಿಲ ಭಾರತೀಯ ವೀರಶೈವ ಮಹಾಸಭಾವು ಇದನ್ನು ವಿರೋಧಿಸಿದೆ. ಮಹಾತ್ಮಾ ಬಸವೇಶ್ವರರ ಹೆಸರಿನಲ್ಲಿ ಧರ್ಮವನ್ನು ಒಡೆಯುವುದು ಯೋಗ್ಯವಲ್ಲ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧ ಪಂಡಿತಾರಾಧ್ಯರು ಹೇಳಿದ್ದಾರೆ. ರಂಭಾಪುರಿ ಮತ್ತು ಕಾಶಿ ಜಗದ್ಗುರುಗಳು ಸಹ ಇದನ್ನು ವಿರೋಧಿಸಿದ್ದಾರೆ. ವಾಸ್ತವದಲ್ಲಿ ಲಿಂಗಾಯತ ಶಬ್ದವೇ ಧರ್ಮವಾಚಕವಲ್ಲ. ಅದು ಒಂದು ದೀಕ್ಷಾಸಂಸ್ಕಾರವಾಗಿದೆ ಎಂದು ತಿಳಿಸಿದರು.

2013 ರಲ್ಲಿ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಇದೇ ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಈಗ ಅದೇ ಕಾಂಗ್ರೆಸ್ ಸರ್ಕಾರ ಈಗ ಕೇವಲ ಮತಗಳ ರಾಜಕಾರಣಕ್ಕಾಗಿ ಸ್ವತಂತ್ರ ಲಿಂಗಾಯತ ಧರ್ಮದ ನಿರ್ಣಯ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮಧುಸೂದನ್ ಅಯ್ಯರ್, ತುಳುನಾಡು ರಕ್ಷಣಾ ವೇದಿಕೆಯ ಜ್ಯೋತಿ, ಹಿಂದೂ ಮಹಾಸಭಾದ ಧರ್ಮೇಂದ್ರ, ಲೋಕೇಶ್ ಕುತ್ತಾರ್, ಉದಯಶಂಕರ, ಸತೀಶ್, ಸುಜಯಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಚಂದ್ರ ಮೊಗೇರ ಇದ್ದರು. ನಂತರ ಜಿಲ್ಲಾಧಿಕಾರಿ
ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT