ದಂಡ ಕಟ್ಟಲಾಗದೆ ವಾಹನ ಬಿಟ್ಟರು

7
46 ದ್ವಿಚಕ್ರ ವಾಹನ ಹರಾಜು ಹಾಕಲು ಕೆ.ಆರ್.ಠಾಣೆ ಪೊಲೀಸರ ಸಿದ್ಧತೆ

ದಂಡ ಕಟ್ಟಲಾಗದೆ ವಾಹನ ಬಿಟ್ಟರು

Published:
Updated:

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದು ದಂಡ ಪಾವತಿ ಸಲು ವಿಫಲವಾದ ಹಾಗೂ ದಾಖಲಾತಿ ಪತ್ತೆಯಾಗದ 46 ದ್ವಿಚಕ್ರ ವಾಹನ ಹರಾಜು ಹಾಕಲು ಕೆ.ಆರ್‌.ಸಂಚಾರ ಠಾಣೆಯ ಪೊಲೀಸರು ಮುಂದಾಗಿದ್ದಾರೆ.

ಹರಾಜು ಪ್ರಕ್ರಿಯೆಗೆ ಸಂಬಂಧಿಸಿ ದಂತೆ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ವಾಹನಗಳ ಮಾಲೀಕರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಆದರೂ, ದಾಖಲಾತಿ ಹಾಜರುಪಡಿಸಲು ವಿಫಲರಾದ ಪರಿಣಾಮ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಪೊಲೀಸರು ಸಜ್ಜಾಗಿದ್ದಾರೆ.

ಈ ವಾಹನಗಳನ್ನು ಪೊಲೀಸರು 5ರಿಂದ 8 ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದರು. ಸಂಚಾರ ನಿಯಮ ಉಲ್ಲಂಘಿಸಿದ್ದ ಈ ಬೈಕ್‌ಗಳು ತಪಾಸಣೆಯ ವೇಳೆ ಪೊಲೀಸರಿಗೆ ಪತ್ತೆಯಾಗಿದ್ದವು. ಕೈನೆಟಿಕ್‌ ಹೊಂಡ, ಸುಜಕಿ ಸಮ್ರಾಯ್‌, ಹೀರೊ ಪುಕ್‌ ಸೇರಿ ಹಳೆ ಮಾದರಿ ವಾಹನಗಳೇ ಹೆಚ್ಚಾಗಿವೆ.

ನೋಂದಣಿ ಪುಸ್ತಕ (ಆರ್‌ಸಿ) ಹೊಂದಿರದ, ಚಾಲನಾ ಪರವಾನಗಿ (ಡಿಎಲ್‌) ಇಲ್ಲದೇ ವಾಹನ ಓಡಿಸಿದ, ಹೆಲ್ಮೆಟ್‌ ಧರಿಸದ, ವೇಗದ ಮಿತಿ ಉಲ್ಲಂಘನೆ, ಮದ್ಯ ಸೇವಿಸಿ ಚಾಲನೆ ಮಾಡಿದ್ದು ಸೇರಿ ಹಲವು ಬಗೆಯ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳು ಇಲ್ಲಿವೆ. ಇವುಗಳನ್ನು ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಆರ್‌) ಮೈದಾನದಲ್ಲಿ ಇಡಲಾಗಿದೆ.

‘ತಪಾಸಣೆಯ ವೇಳೆ ಸಂಚಾರ ನಿಯಮ ಉಲ್ಲಂಘಿಸಿದ್ದು ಖಚಿತವಾದರೆ ದಂಡ ವಿಧಿಸುತ್ತೇವೆ. ಸ್ಥಳದಲ್ಲಿ ದಂಡ ಪಾವತಿಸಲು ಹಾಗೂ ದಾಖಲಾತಿ ಹಾಜರುಪಡಿಸಲು ವಿಫಲವಾದರೆ ಮಾತ್ರ ವಶಕ್ಕೆ ಪಡೆಯುತ್ತೇವೆ. ಬಹುದಿನ ಗಳವರೆಗೆ ಮಾಲೀಕರು ಪತ್ತೆಯಾಗದೇ ಇದ್ದರೆ ಹರಾಜು ಹಾಕಲು ಅವಕಾಶವಿದೆ’ ಎಂದು ಕೆ.ಆರ್‌.ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಡಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹರಾಜು ಪ್ರಕ್ರಿಯೆಗೆ ಇಲಾಖೆ ಅನುಮತಿ ನೀಡಿದ ಬಳಿಕ ವಾಹನದ ಮಾಲೀಕರ ವಿಳಾಸಕ್ಕೆ ನೋಟಿಸ್‌ ಕಳುಹಿಸುತ್ತೇವೆ. 3 ನೋಟಿಸ್ ತಲುಪಿದ ಬಳಿಕವೂ ವಾಹನ ಪಡೆಯಲು ಬಾರದಿದ್ದರೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುತ್ತದೆ. ಆಗಲೂ ಮಾಲೀಕರು ಪತ್ತೆಯಾಗದಿದ್ದರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾ ಗುತ್ತದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಹರಾಜು ಹಾಕಿ ಸರ್ಕಾರಕ್ಕೆ ಹಣ ಪಾವತಿಸುವುದು ನಿಯಮ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry