ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿ’

ಬೇಡ ಜಂಗಮ ಸಮುದಾಯದ ಮುಖಂಡರಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
Last Updated 23 ಮಾರ್ಚ್ 2018, 8:41 IST
ಅಕ್ಷರ ಗಾತ್ರ

ಬಾಗಲಕೋಟೆ: ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಸಮಾಜದ ಸದಸ್ಯರು ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹುನಗುಂದ ಹಾಗೂ ಬೆಳಗಾವಿಯಲ್ಲಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿದೆ ಆದರೆ ಇಲ್ಲಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾನೂನುಬದ್ಧವಾಗಿ ಪ್ರಮಾಣಪತ್ರ ಕೊಡುವಂತೆ ಆಗ್ರಹಿಸಿದರು.

ಬಾಗಲಕೋಟೆಯ ನಿವಾಸಿ ಮಲ್ಲಿಕಾರ್ಜುನ ಹಿರೇಮಠ ಎಂಬುವವರು 30 ದಿನಗಳ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ 21 ದಿನಗಳ ಅವಧಿ ಮುಗಿದರೂ ಪ್ರಮಾಣಪತ್ರ ನೀಡದಿದ್ದಾಗ ಆಕ್ರೋಶಗೊಂಡ ಸಮಾಜದ ಸದಸ್ಯರು ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ದಾಖಲಿಸಿದರು. ಆದರೆ ಈ ವೇಳೆ ತಹಶೀಲ್ದಾರ್ ವಿನಯಕುಲಕರ್ಣಿ ಕಚೇರಿಯಲ್ಲಿ ಇರಲಿಲ್ಲ. ಕಾದು ಕುಳಿತರೂ ಅವರು ಬರಲಿಲ್ಲ. ಈ ವೇಳೆ ಕಚೇರಿ ಸಿಬ್ಬಂದಿಯೊಂದಿಗೆ ಕೆಲವರು ವಾಗ್ವಾದ ನಡೆಸಿದರು. ತಹಸೀಲ್ದಾರ್‌ ಮೊಬೈಲ್‌ಫೋನ್‌ ಸ್ವಿಚ್ಡ್‌ ಆಫ್‌ ಆಗಿದ್ದ ಕಾರಣ ಕೊನೆಗೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮರಳಿದರು.

ವರದಿ ಕೊಟ್ಟಿದ್ದಾರೆ: ‘ಮಲ್ಲಿಕಾರ್ಜುನ ಹಿರೇಮಠ ಬೇಡ ಜಂಗಮ ಸಮುದಾಯಕ್ಕೆ ಸೇರಿದ್ದಾರೆ ಎಂದು ಕಂದಾಯ ಅಧಿಕಾರಿ ಪಂಚನಾಮೆ ವರದಿ ಸಲ್ಲಿಸಿದ್ದಾರೆ. ಅದನ್ನು ಆಧರಿಸಿ ಪ್ರಮಾಣಪತ್ರ ನೀಡುವಂತೆ ಗ್ರೇಡ್‌2 ತಹಶೀಲ್ದಾರ್‌ಗೆ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ಪ್ರಮಾಣಪತ್ರ ನೀಡಲು ನ್ಯಾಯಾಲಯದ ಆದೇಶವಿದೆ. ಆದರು ಅದು ಪಾಲನೆಯಾಗುತ್ತಿಲ್ಲ’ ಎಂದು ಬೇಡ ಜಂಗಮರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲೋಕೇಶ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

‘ಹುನಗುಂದ ತಹಶೀಲ್ದಾರ್ ಕೊಟ್ಟಿರುವ ಪ್ರಮಾಣಪತ್ರ ತೋರಿಸಿದರೂ ಇಲ್ಲಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹುನಗುಂದ ತಾಲ್ಲೂಕು ಬಾಗಲಕೋಟೆ ಜಿಲ್ಲೆಯ ಹೊರತಾಗಿದೆಯೇ ಎಂದು ಪ್ರಶ್ನಿಸಿದ ಡಾ.ಲೋಕೇಶ್, ಪ್ರಮಾಣಪತ್ರ ಕೇಳಿದರೆ ಕ್ರಿಮಿನಲ್ ಕೇಸ್ ಆಗಲಿದೆ ಎಂದು ಸುಮ್ಮನೆ ನಮ್ಮನ್ನು ಹೆದರಿಸುತ್ತಿದ್ದಾರೆ. ಸಂವಿಧಾನ ಬದ್ಧವಾಗಿ ನಮಗಿರುವ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT