ಶೀಘ್ರ ವೈದ್ಯಕೀಯ ಕಾಲೇಜು ಸ್ಥಾಪನೆ

7
ದೊಡ್ಡಬಳ್ಳಾಪುರ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಸಚಿವ ಕೃಷ್ಣಬೈರೇಗೌಡ ಹೇಳಿಕೆ

ಶೀಘ್ರ ವೈದ್ಯಕೀಯ ಕಾಲೇಜು ಸ್ಥಾಪನೆ

Published:
Updated:

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿದೆ. ಇದಕ್ಕೆ ಅಗತ್ಯ ಇರುವ ಭೂಮಿ ಮೀಸಲಿರಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಅವರು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಾಗೂ ಇಂದಿರಾ ಕ್ಯಾಂಟೀನ್‌, ಡಾ.ಬಾಬುಜಗಜೀವನ ರಾಂ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆಯ ಯೋಜನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುವುದು. ‘ನಮ್ಮದು ಬರೀ ಶಂಕುಸ್ಥಾಪನೆ ಸರ್ಕಾರ ಅಲ್ಲ. ಕೆಲಸ ಮಾಡಿ ತೋರಿಸಿದ್ದೇವೆ. ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾದ ₹45 ಕೋಟಿಯ ಜಿಲ್ಲಾಧಿಕಾರಿ ಆಡಳಿತ ಭವನ, ₹6 ಕೋಟಿ ವೆಚ್ಚದ ಜಗಜೀವನ ರಾಂ ಭವನ, ₹17ಕೋಟಿ ವೆಚ್ಚದ ವಾಜಪೇಯಿ ವಸತಿ ಶಾಲೆ ಸೇರಿದಂತೆ ಹಲವಾರು ಕಾಮಗಾರಿಗಳು ಮುಕ್ತಾಯವಾಗಿ ಇಂದು ಉದ್ಘಾಟನೆಗೊಂಡಿವೆ’ ಎಂದರು.

ತೀವ್ರ ಬರಗಾಲದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಸಹಕಾರ ಸಂಘಗಳಲ್ಲಿದ್ದ ₹50,000 ಸಾಲ ಮನ್ನಾ ಮಾಡಲಾಗಿದೆ. ಆದರೆ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ದೇವನಹಳ್ಳಿ ಕ್ಷೇತ್ರದ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ವಿರೋಧ ಪಕ್ಷದ ಶಾಸಕ ಎನ್ನುವುದನ್ನು ನೋಡದೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗೆ ಅಭಿನಂದನೆ ತಿಳಿಸಿದ ಅವರು, ಜೆಡಿಎಸ್‌ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರು ಪಕ್ಷದ ಸಿದ್ಧಾಂತ ಮೈಗೂಡಿಸಿಕೊಂಡು ಬೆಳೆದವರು. ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇವಲ ನಾಮ ಫಲಕದ ಕಲ್ಲಿನಲ್ಲಿ ಹೆಸರು ಇರಲಿ ಎನ್ನುವ ಉದ್ದೇಶದಿಂದ ಕೆಲಸ ಮಾಡದೆ ಜನರ ಹೃದಯದಲ್ಲಿ ಉಳಿಯುವಂತೆ ಕೆಲಸ ಮಾಡಿರುವ ಸಾರ್ಥಕತೆ ನನಗಿದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಹಿಂದೆಂದೂ ನಡೆಯದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದೆ ಇವೆ. ಇದನ್ನು ನೋಡಿ ಕ್ಷೇತ್ರವನ್ನು ನಂಬರ್‌ ಒನ್‌ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರ ಸಹಕಾರ ಮುಖ್ಯ ಹಾಗೂ ಚುನಾವಣೆಯಲ್ಲಿ ಆರ್ಶೀವದಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಆರ್‌.ಜಿ. ವೆಂಕಟಾಚಲಯ್ಯ ಮಾತನಾಡಿದರು. ಸಮಾರಂಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಸಂಸತ್‌ ಸದಸ್ಯ ಎಂ.ವೀರಪ್ಪ ಮೊಯಿಲಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಪ್ರಸಾದ್‌, ಉಪಾಧ್ಯಕ್ಷೆ ಅನಂತಕುಮಾರಿ, ಬಮೂಲ್‌ ಅಧ್ಯಕ್ಷ ಎಚ್‌.ಅಪ್ಪಯ್ಯ, ಜಿಲ್ಲಾಧಿಕಾರಿ ಎಸ್‌.‌ಪಾಲಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ಉಪಾಧ್ಯಕ್ಷೆ ಜಯಲಕ್ಷ್ಮಿನಟರಾಜ್‌, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ನಿರ್ದೇಶಕ ಆದಿತ್ಯ ನಾಗೇಶ್‌, ಖಾದಿ ಮತ್ತು ಗ್ರಾಮೋದ್ಯೊಗ ಮಂಡಳಿ ಸದಸ್ಯ ಡಿ.ಜಿ. ರಾಜಗೋಪಾಲ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ, ಕನ್ಯಾಕುಮಾರಿ ಶ್ರೀನಿವಾಸ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮುನಿಶಾಮಣ್ಣ ಇದ್ದರು.

**

‘ಹಗರಣಗಳ ರಹಿತ ಸರ್ಕಾರ’

‘ಐದು ವರ್ಷಗಳ ಹಗರಣ ರಹಿತ, ಸುಭದ್ರ ಆಡಳಿತ ನೀಡಿದ್ದೇವೆ. ನಮ್ಮ ಐದು ವರ್ಷಗಳ ಆಡಳಿತದಲ್ಲಿನ ಕೆಲಸಗಳನ್ನು ತುಲನೆ ಮಾಡಿ ಮತ್ತೊಮ್ಮೆ ಅಧಿಕಾರ ನೀಡಿ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರದಲ್ಲಿ ಅಧಿಕಾರದ ಆಸೆಗಾಗಿ ಮೂರು ಜನ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯ ಕಿತ್ತಾಟಗಳಿಗೆ, ರೆಸಾರ್ಟ್‌ ರಾಜಕೀಯಕ್ಕೆ ಅವಕಾಶ ಇಲ್ಲದಂತೆ ಆಡಳಿತ ನೀಡಿರುವ ಹೆಮ್ಮೆ ನಮಗಿದೆ. ಇಡೀ ದೇಶದ ಯಾವುದೇ ರಾಜ್ಯದಲ್ಲೂ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತ ಅಕ್ಕಿ ನೀಡಿರುವ ನಿದರ್ಶನ ಇಲ್ಲ. ರಾಜ್ಯದಲ್ಲಿ ಮಾತ್ರ ಅನ್ನಭಾಗ್ಯ ಯೋಜನೆ ಮೂಲಕ ಪ್ರತಿಯೊಬ್ಬರಿಗೆ 7ಕೆ.ಜಿಯಂತೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಗುಜರಾತ್‌ ರಾಜ್ಯದಲ್ಲಿ ಇಂದಿಗೂ ಸಹ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಲಾಗಿದೆ. ಆದರೆ, ನಮ್ಮಲ್ಲಿ ರಾಜ್ಯ ಸರ್ಕಾರ ಕೆಪಿಟಿಸಿಎಲ್‌ಗೆ ಪ್ರತಿ ವರ್ಷ ₹10 ಸಾವಿರ ಕೋಟಿ ಹಣ ನೀಡುವ ಮೂಲಕ ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ’ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry