ಕೊನೆಗೂ ಗೌಡರ ‘ಗಾಳ’ ಕಚ್ಚಿದ ನರಸಿಂಹಮೂರ್ತಿ

7
ಫಲಿಸಿದ ದೇವೇಗೌಡರ ತಂತ್ರಗಾರಿಕೆ, ಬೆಂಗಳೂರಿನಲ್ಲಿ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಲಿರುವ ಬಿಜೆಪಿ ಮುಖಂಡ

ಕೊನೆಗೂ ಗೌಡರ ‘ಗಾಳ’ ಕಚ್ಚಿದ ನರಸಿಂಹಮೂರ್ತಿ

Published:
Updated:

ಚಿಕ್ಕಬಳ್ಳಾಪುರ/ ಗೌರಿಬಿದನೂರು: ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಟಿಕೆಟ್‌ ಕೆ.ಜೈಪಾಲ್‌ ರೆಡ್ಡಿ ಅವರಿಗೆ ಖಚಿತ ಎನ್ನುವ ಸುಳಿವು ಸಿಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಸಿ.ಆರ್.ನರಸಿಂಹಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಲು ಹೊರಟಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ‘ಶುಕ್ರವಾರ (ಮಾ.23) ಮಧ್ಯಾಹ್ನ ಸಾವಿರಾರು ಬೆಂಬಲಿಗರೊಂದಿಗೆ ನರಸಿಂಹಮೂರ್ತಿ ಅವರು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ ಯಾಗಲಿದ್ದಾರೆ’ ಎಂದು ತಿಳಿಸಿದರು.

ಜೈಪಾಲ್ ರೆಡ್ಡಿ ಅವರ ಬಿಜೆಪಿ ಸೇರ್ಪಡೆಗೊಂಡ ನಂತರ ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಶುರುವಾದ ಆಂತರಿಕ ಬೇಗುದಿಯನ್ನು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಶಮನಗೊಳಿಸುವ ಪ್ರಯತ್ನ ಮಾಡಲಾಗಿತ್ತು.

ಬಳಿಕ ಎಲ್ಲ ಮುಖಂಡರೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಉಸ್ತುವಾರಿ, ಶಾಸಕ ಎಸ್.ಆರ್.ವಿಶ್ವನಾಥ್ ‘ಗೌರಿಬಿದನೂರು ಬಿಜೆಪಿ ಮುಖಂಡ ರಲ್ಲಿ ಯಾವುದೇ ಭಿನ್ನಾಭಿ ಪ್ರಾಯಗಳು ಉಳಿ ದಿಲ್ಲ’ ಎಂದು ಹೇಳಿ ಒಗ್ಗಟ್ಟು ಪ್ರದರ್ಶಿಸುವ ಕೆಲಸ ಮಾಡಿದ್ದರು.

ಇದೇ ವೇಳೆ ಅವರು, ‘ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮತ್ತು ಮುಕ್ತವಾಗಿ ಜನಾಭಿಪ್ರಾಯ ತೆಗೆದು ಕೊಂಡು ವರಿಷ್ಠರು ಯಾರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧರಿಸುತ್ತಾರೆ. ಹೀಗಾಗಿ ಹಳಬರಿಗಾಗಲಿ, ಹೊಸಬರಿ ಗಾಗಲಿ ಅಥವಾಗ ಬೇರೆ ಕಡೆಯಿಂದ ಬಂದವರಿಗಾಗಲಿ ಯಾರಿಗೇ ಟಿಕೆಟ್ ದೊರೆತರು ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎನ್ನುವ ಸಲಹೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದಿದ್ದರು.

ಆದರೆ ಯಡಿಯೂರಪ್ಪ ಅವರ ಮನೆಯಲ್ಲಿ ಭಿನ್ನಮತದ ಬಿರುಕಿಗೆ ಹಾಕಿದ ತೇಪೆ ಗಟ್ಟಿಯಾಗಲೇ ಇಲ್ಲ. ಅಸಮಾಧಾನ ‘ಬಣ’ ರಾಜಕೀಯಕ್ಕೆ ಶುರುವಿಟ್ಟುಕೊಂಡಿತ್ತು.

ಒಂದು ವಾರದ ಹಿಂದೆಯಷ್ಟೇ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ನೇತೃತ್ವದಲ್ಲಿ ನರಸಿಂಹಮೂರ್ತಿ ಅವರು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ನಡುವೆ ಮಾ.20ರಂದು ಮತ್ತೆ ಎಲ್ಲ ಸ್ಥಳೀಯ ಮುಖಂಡರಿಗೆ ಯಡಿಯೂರಪ್ಪ ಅವರ ನಿವಾಸಕ್ಕೆ ಬುಲಾವ್ ಬಂದಿತ್ತು. ಅಂದಿನ ಸಭೆಯಲ್ಲಿ ಎಲ್ಲ ಮುಖಂಡರಿಂದ ವೈಯಕ್ತಿಕ ಅಭಿಪ್ರಾಯ ಪಡೆದು ಟಿಕೆಟ್‌ಗೆ ಮುಖಂಡ ಎನ್.ಎಂ. ರವಿ ನಾರಾಯಣರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು ಎನ್ನಲಾಗಿದೆ.

ಆದರೆ ಮಾ.21 ರಂದು ವಿಶ್ವನಾಥ್ ಅವರು ಮುಖಂಡರಾದ ಎನ್.ಜ್ಯೋತಿರೆಡ್ಡಿ ಹಾಗೂ ರವಿ ನಾರಾಯಣರೆಡ್ಡಿ ಅವರಿಗೆ ಕರೆ ಮಾಡಿ ಅಂತಿಮವಾಗಿ ವರಿಷ್ಠರು ಜೈಪಾಲ್ ರೆಡ್ಡಿ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ.

ಈ ವಿಚಾರವನ್ನು ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ತಿಳಿಸುವಂತೆ ಸೂಚನೆ ನೀಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ನರಸಿಂಹಮೂರ್ತಿ ಅವರು ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ, ಅವರ ಸಲಹೆಯಂತೆ ಬಿಜೆಪಿ ತೊರೆಯುವ ಅಂತಿಮ ನಿರ್ಧಾರ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ಸತತ ಮೂರು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಒಂದು ಬಾರಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ನರಸಿಂಹಮೂರ್ತಿ ಅವರು ತಮ್ಮದೇ ಆದ ವರ್ಚಸ್ಸು, ಜತೆಗೆ ಬೆಂಬಲಿಗರನ್ನು ಹೊಂದಿರುವುದು ಅವರ ನಿರ್ಧಾರ ಬಗ್ಗೆ ಎಲ್ಲರೂ ಕುತೂಹಲದ ದೃಷ್ಟಿ ಹಾಯಿಸುವಂತಾಗಿದೆ.

ಇನ್ನೊಂದೆಡೆ ನರಸಿಂಹಮೂರ್ತಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ನಾವೆಲ್ಲರೂ ಒಟ್ಟಾಗಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಿ.ಮಂಜುನಾಥರೆಡ್ಡಿ, ಆರ್.ಅಶೋಕ್ ಕುಮಾರ್ ಹಾಗೂ ಎನ್.ವೇಣುಗೋಪಾಲ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಯ್ದು ನೋಡುವ ತಂತ್ರದಿಂದ ಹೊರಬಂದು ನರಸಿಂಹಮೂರ್ತಿ ಅವರು ತೆಗೆದುಕೊಂಡ ಈ ನಿರ್ಧಾರ ಬಿಜೆಪಿಗೆ ಏಟು ನೀಡುವ ಸಾಧ್ಯತೆ ಇದೆ ಎನ್ನುವ ವಿಶ್ಲೇಷಣೆಗಳು ಹರಿದಾಡುತ್ತಿವೆ.

**

ನಿಜವಾದ ವದಂತಿ

ಜೆಡಿಎಸ್ ಜಿಲ್ಲೆಯಲ್ಲಿ ಗೌರಿಬಿದನೂರು ಹೊರತುಪಡಿಸಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಇದರಿಂದಾಗಿ ಗೌರಿಬಿದನೂರಿನಲ್ಲಿ ನರಸಿಂಹಮೂರ್ತಿ ಅವರು ಬಿಜೆಪಿ ತೊರೆದು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಿದಾಡಲು ಆರಂಭಿಸಿತ್ತು.

ನರಸಿಂಹಮೂರ್ತಿ ಅವರು ಜೆಡಿಎಸ್‌ನಿಂದ ರಾಜಕೀಯ ಜೀವನ ಆರಂಭಿಸಿದವರು. ‘ಕಮಲ’ ಪಾಳೆಯದ ಕಿತ್ತಾಟ ಅರಿತ ಚತುರ ರಾಜಕಾರಣಿ ದೇವೇಗೌಡರು ತಮ್ಮ ಹಳೆಯ ಭದ್ರಕೋಟೆ ಎನಿಸಿಕೊಂಡಿದ್ದ ಗೌರಿಬಿದನೂರನ್ನು ಮತ್ತೊಮ್ಮೆ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಅದಕ್ಕೆ ನರಸಿಂಹಮೂರ್ತಿ ಅವರೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ತಮ್ಮ ಆಪ್ತರ ಮೂಲಕ ತಮ್ಮ ಹಳೆಯ ಶಿಷ್ಯನನ್ನು ಪುನಃ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವು.

ಆದರೆ ನರಸಿಂಹಮೂರ್ತಿ ಅವರ ಸಮ್ಮುಖದಲ್ಲೇ ವಿಶ್ವನಾಥ್ ಅವರನ್ನು ಈ ಕುರಿತು ಕೇಳಿದಾಗ, ‘ನರಸಿಂಹಮೂರ್ತಿ ಅವರು ಜೆಡಿಎಸ್‌ನಲ್ಲಿರುವ ಅವ್ಯವಹಾರ, ಅನ್ಯಾಯ ನೋಡಿ ಆ ಪಕ್ಷದಿಂದ ಹೊರಗೆ ಬಂದವರು. ಒಂದೊಮ್ಮೆ ಜೆಡಿಎಸ್‌ನವರು ಅವರಿಗೆ ಗಾಳ ಹಾಕಲು ಪ್ರಯತ್ನಿಸಿದರೂ ಆ ಗಾಳಕ್ಕೆ ಬೀಳುವ ಮೀನು ನರಸಿಂಹಮೂರ್ತಿ ಅವರಲ್ಲ. ಅವರು ನಿಷ್ಠಾವಂತ ಮತ್ತು ಪ್ರಭಾವಿ ಮುಖಂಡರು. ಕೆಲ ಗೊಂದಲಗಳು ಇಂತಹ ಉಹಾಪೋಹಗಳಿಗೆ ಕಾರಣವಾಗಿತ್ತು. ಅವರೇ ಅಲ್ಲ ಬೇರೆ ಯಾರು ಕೂಡ ಆ ರೀತಿ ಮಾಡುವುದಿಲ್ಲ’ ಎಂದು ಉತ್ತರಿಸಿದರು. ಅದಾಗಿ ಒಂದು ತಿಂಗಳು ಕಳೆಯುವ ಮುನ್ನವೇ ನರಸಿಂಹಮೂರ್ತಿ ಅವರು ಬಿಜೆಪಿ ಮನೆ ಖಾಲಿ ಮಾಡಿ ಮಾತೃ ಪಕ್ಷದ ಹಾದಿ ಹಿಡಿದಿದ್ದಾರೆ.

**

ಮಾತೃ ಪಕ್ಷದ ಹಾದಿಯತ್ತ...

‘ನರಸಿಂಹಮೂರ್ತಿ ಅವರು ಜೆಡಿಎಸ್‌ನಲ್ಲಿರುವ ಅವ್ಯವಹಾರ, ಅನ್ಯಾಯ ನೋಡಿ ಆ ಪಕ್ಷದಿಂದ ಹೊರಗೆ ಬಂದವರು. ಒಂದೊಮ್ಮೆ ಜೆಡಿಎಸ್‌ನವರು ಅವರಿಗೆ ಗಾಳ ಹಾಕಲು ಪ್ರಯತ್ನಿಸಿದರೂ ಆ ಗಾಳಕ್ಕೆ ಬೀಳುವ ಮೀನು ಅಲ್ಲ ಎಂದು ಶಾಸಕ ಮತ್ತು ಬಿಜೆಪಿ ಜಿಲ್ಲಾ ಉಸ್ತುವಾರಿ ಎಸ್‌. ಆರ್‌. ವಿಶ್ವನಾಥ್ ಹೇಳಿದ್ದರು.

‘ನರಸಿಂಹಮೂರ್ತಿ ಅವರು ನಿಷ್ಠಾವಂತ ಮತ್ತು ಪ್ರಭಾವಿ ಮುಖಂಡರು. ಕೆಲ ಗೊಂದಲಗಳು ಉಹಾಪೋಹಗಳಿಗೆ ಕಾರಣವಾಗಿತ್ತು. ಅವರೇ ಅಲ್ಲ, ಬೇರೆ ಯಾರು ಕೂಡ ಆ ರೀತಿ ಮಾಡುವುದಿಲ್ಲ’ ಎಂದು ನರಸಿಂಹಮೂರ್ತಿ ಅವರ ಸಮ್ಮುಖದಲ್ಲಿಯೇ ಉತ್ತರಿಸಿದ್ದರು. ಅದಾಗಿ ಒಂದು ತಿಂಗಳು ಕಳೆಯುವ ಮುನ್ನವೇ ನರಸಿಂಹಮೂರ್ತಿ ಬಿಜೆಪಿ ಮನೆ ಖಾಲಿ ಮಾಡಿ ಮಾತೃ ಪಕ್ಷದ ಹಾದಿ ಹಿಡಿದಿದ್ದಾರೆ.

**

ಒಂದು ದಶಕದಿಂದ ಬಿಜೆಪಿ ಸಂಘಟನೆಗಾಗಿ ದುಡಿದು ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ವರಿಷ್ಠರ ನಿರ್ಧಾರದಿಂದ ಬೇಸತ್ತು ಪಕ್ಷ ತೊರೆಯುವ ತೀರ್ಮಾನಕ್ಕೆ ಬಂದೆ

ಸಿ.ಆರ್.ನರಸಿಂಹಮೂರ್ತಿ ,ಬಿಜೆಪಿ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry