ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಿ

7
ಕೆಂಪೇಗೌಡ ಕಾನೂನು ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಿ

Published:
Updated:
ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಿ

ಚಿಕ್ಕಬಳ್ಳಾಪುರ: ‘ಕಾನೂನುಗಳು ಸತ್ಯದ ಪರವಾಗಿ ನಿಲ್ಲಬೇಕು. ವಕೀಲ ವೃತ್ತಿ ಮಾಡುವವರು ಸಮಾಜದಲ್ಲಿ ಜನಸಾಮಾನ್ಯರಿಗೆ, ನೊಂದವರಿಗೆ, ಶೋಷಿತರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಕೆಂಪೇಗೌಡ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಕಾನೂನುಗಳ ಬಗ್ಗೆ ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು. ಅಸಹಾಯಕರಿಗೆ, ದುರ್ಬಲರಿಗೆ, ಬಡವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮಲ್ಲಿರುವ ಜ್ಞಾನವನ್ನು ಸಮಾಜದ ಒಳಿತಿಗೆ ವಿನಿಯೋಗಿಸಬೇಕು. ದೇಶಕ್ಕೆ ನಮ್ಮಿಂದಾಗುವ ಸೇವೆಯನ್ನು ಸಲ್ಲಿಸಬೇಕು’ ಎಂದು ಹೇಳಿದರು.

‘ಅಂಬೇಡ್ಕರ್‌ ಅವರು ಸ್ವತಃ ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಅವಮಾನ ಅನುಭವಿಸಿ, ಕೊನೆಗೆ ಶೋಷಣೆ, ಅವಮಾನ, ನೋವುಗಳ ಹಸಿವನ್ನು ನುಂಗಿ ಶತಮಾನಗಳಿಂದ ಶೋಷಣೆಗೆ ಒಳಗಾದ ದೀನ ದಲಿತ, ಬಡವರಿಗೆ ಬೆಳಕಾಗಿ ನಿಂತರು. ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿರುವ ಕಾನೂನುಗಳನ್ನು ಅಧ್ಯಯನ ನಡೆಸಿ, ಸಂವಿಧಾನ ರಚನೆ ಮಾಡಿದರು. ಕಿತ್ತು ತಿನ್ನುವ ಬಡತನದ ನಡುವೆಯೂ ಜ್ಞಾನದ ದಾಹ ನೀಗಿಸಲು ಅನೇಕ ಪುಸ್ತಕಗಳನ್ನು ಓದಿ ಸದೃಢ ದೇಶ ಕಟ್ಟುವ ನಿಟ್ಟಿನಲ್ಲಿ ಸಂವಿಧಾನ ರೂಪಿಸಿದರು’ ಎಂದರು.

‘ಇವತ್ತಿನ ಕಾನೂನು ವಿದ್ಯಾರ್ಥಿಗಳಿಗೆ ಶೋಷಣೆ, ಅನ್ಯಾಯವನ್ನು ಕೊನೆಗಾಣಿಸಲು ತಮ್ಮ ಬದುಕಿನುದ್ದಕ್ಕೂ ಹೋರಾಡಿದ ಅಂಬೇಡ್ಕರ್ ಮತ್ತು ವರ್ಣ ಭೇದ ನೀತಿ, ಬಿಳಿಯರ ವಿರುದ್ಧ ಹೋರಾಟ ನಡೆಸಿ ದೇಶಕ್ಕೆ ನ್ಯಾಯ ಒದಗಿಸಿಕೊಟ್ಟ ಮಹಾತ್ಮಾ ಗಾಂಧೀಜಿ ಅವರ ಬದುಕು, ಚಿಂತನೆಗಳು ದಾರಿದೀಪಗಳಾಗಬೇಕು. ಸ್ಫೂರ್ತಿಯ ಚಿಲುಮೆಯಾಗಬೇಕು. ಆಗ ಮಾತ್ರ ಕಾನೂನು ಪದವೀಧರರು ಉತ್ತಮ ಸಮಾಜ ನಿರ್ಮಿಸಲು ಸಾಧ್ಯ’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ‘ದೇಶದ 125 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಇವತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳ ಕೊರತೆ ಕಾಣುತ್ತಿದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ನ್ಯಾಯಾಧೀಶರು ಕೊಡುವ ತೀರ್ಪು ನ್ಯಾಯ ಬದ್ಧವಾಗಿದ್ದಾಗ ಮಾತ್ರ ಅದು ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಕಾನೂನಗಳ ಮೂಲಕ ಜಾತ್ಯತೀತವಾದ ತತ್ವಗಳನ್ನು ಎತ್ತಿ ಹಿಡಿಯಬೇಕು. ಪ್ರತಿಯೊಬ್ಬರಿಗೂ ವಿಶ್ವ ಮಾನವ ಸಂದೇಶ ಸಾರಬೇಕು. ಸಮಾಜಕ್ಕೆ ಕೊಡುಗೆಗಳನ್ನು ನೀಡಿರುವ ಅನೇಕ ಮಹನೀಯರ ಜಯಂತಿ ಆಚರಣೆಗೆ ಸೀಮಿತಗೊಳಿಸದೇ ಅವರ ತತ್ವ, ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜ ನಿರ್ಮಿಸಲು ಶ್ರಮಿಸಬೇಕು’ ಎಂದು ಹೇಳಿದರು.

ಮುಖಂಡ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಿರುವ ಕಾನೂನು ಕಾಲೇಜು ಕೇವಲ ಒಕ್ಕಲಿಗ ಜನಾಂಗಕ್ಕೆ ಸೀಮಿತಗೊಳಿಸದೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸೇವೆಯನ್ನು ಒದಗಿಸಿ ಸಮಾನ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ’ ಎಂದರು.

ಆದಿಚುಂಚುನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಆರ್‌. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚದಲಪುರ ನಾರಾಯಣ ಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್‌.ಕೇಶವರೆಡ್ಡಿ, ಕೆಂಪೇಗೌಡ ಕಾನೂನು ಕಾಲೇಜಿನ ಅಧ್ಯಕ್ಷ ಡಾ.ಕೆ.ಪಿ ಶ್ರೀನಿವಾಸ ಮೂರ್ತಿ, ಪ್ರಾಂಶುಪಾಲೆ ಶೋಭಾ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಅಗಲಗುರ್ಕಿ ಚಂದ್ರಶೇಖರ್‌, ಭೈರೇಗೌಡ, ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry