ಗೊಬ್ಬರ ತಯಾರಿಕೆ ಪ್ರಕ್ರಿಯೆ ಆರಂಭ

7
ಕಸ ವಿಲೇವಾರಿ ನಿರ್ವಹಣೆಗೆ ಸೂಕ್ತ ಕ್ರಮ: ಶಿಲ್ಪಾ ರಾಜಶೇಖರ್‌

ಗೊಬ್ಬರ ತಯಾರಿಕೆ ಪ್ರಕ್ರಿಯೆ ಆರಂಭ

Published:
Updated:

ಚಿಕ್ಕಮಗಳೂರು: ಕಸ ವಿಲೇವಾರಿ ನಿರ್ವಹಣೆ ನಿಟ್ಟಿನಲ್ಲಿ ಇಂದಾವರ ಬಳಿಯ ಘನತ್ಯಾಜ್ಯ ಘಟಕದಲ್ಲಿ ‘ಸಾಯಿಲ್‌ ಕ್ಯಾಪಿಂಗ್‌’, ಕೊಳವೆ ಬಾವಿ ನಿರ್ಮಾಣ, ಅಗ್ನಿ ಅವಘಡ ನಿಯಂತ್ರಣಕ್ಕೆ ಕೊಳವೆ ಮಾರ್ಗ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕೆ.ಎಂ.ಶಿಲ್ಪಾರಾಜಶೇಖರ್‌ ಇಲ್ಲಿ ಗುರುವಾರ ತಿಳಿಸಿದರು.

ಟೆಂಡರ್‌ ಪ್ರಕಿಯೆ ಪೂರ್ಣಗೊಳಿಸಿ, ಕಾರ್ಯಾದೇಶ ನೀಡಲಾಗಿದ್ದು, ಪ್ರಸ್ತುತ ಪ್ರಾಯೋಗಿಕವಾಗಿ ಗೊಬ್ಬರ ತಯಾರಿಕೆ ಘಟಕವನ್ನು ಆರಂಭಿಸಲಾಗಿದೆ. ನಗರದಲ್ಲಿ ಎರಡು ದಿನಕ್ಕೊಮ್ಮೆ ಮನೆಮನೆ ಕಸ ಸಂಗ್ರಹ ಮಾಡಲಾಗುತ್ತಿದೆ. ನಗರದ ಕಸ ನಿರ್ವಹಣೆ ಹೊಣೆಗಾರಿಕೆಯನ್ನು ಐಟಿಸಿ ಕಂಪೆನಿಗೆ ವಹಿಸಲಾಗಿದೆ. ಐಟಿ ಸಿಯವರು ಮೂರು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ನಿರ್ವಹಣೆ ಕಾರ್ಯ ಆರಂಭಿಸಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಅಮೃತ್‌ ಯೋಜನೆಯಡಿ ನಗರದ ನೀರು ಪೂರೈಕೆ ವ್ಯವಸ್ಥೆ ಉನ್ನತೀಕರಣಕ್ಕೆ ₹110 ಕೋಟಿ ಅನುದಾನ ನಿಗದಿಪಡಿಸಲಾಗಿದೆ. 24X7 ನೀರು ಪೂರೈಕೆ ನಿಟ್ಟಿನಲ್ಲಿ 1,2, 3, 4 ಮತ್ತು 5ನೇ ವಾರ್ಡ್‌ನಲ್ಲಿ ಕಾಮಗಾರಿ ಪ್ರಗತಿ ಯಲ್ಲಿದೆ. ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಈ ಯೋಜನೆಯಲ್ಲಿ ಉದ್ಯಾನ ಗಳ ಅಭಿವೃದ್ಧಿಗೆ ₹ 3 ಕೋಟಿ ಹಾಗೂ ಮಳೆ ನೀರು ಚರಂಡಿ ನಿರ್ಮಾಣಕ್ಕೆ ₹ 10,75 ಕೋಟಿ ನಿಗದಿಪಡಿಸಲಾಗಿದೆ ಎಂದರು.

‘ನಗರೋತ್ಥಾನ ಯೋಜನೆಯಡಿ ಎರಡನೇ ಹಂತದಲ್ಲಿ ₹ 3.59 ಕೋಟಿ ವೆಚ್ಚದಲ್ಲಿ ನಗರದ ವಿವಿಧ ರಸ್ತೆಗಳ ಡಾಂಬರೀಕರಣ, ಕಾಮಗಾರಿ ನಿರ್ವಹಿಸಲಾಗಿದೆ. 14ನೇ ಹಣಕಾಸು ಯೋಜನೆಯಲ್ಲಿ ₹ 5.12 ಕೋಟಿ ಅನುದಾನ ನಿಗದಿಯಾಗಿದೆ. ಈ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅಂಬೇಡ್ಕರ್‌ ವಸತಿ ಯೋಜನೆಯಲ್ಲಿ 92 ಅರ್ಜಿಗಳು ಸಲ್ಲಿಕೆಯಾಗಿದ್ದು, 41 ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ವಾಜಪೇಯಿ ವಸತಿ ಯೋಜನೆಯಲ್ಲಿ 132 ಅರ್ಜಿಗಳು ಸಲ್ಲಿಕೆ ಯಾಗಿವೆ. 42 ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ’ ಎಂದರು.

ನಗರಸಭೆಯಲ್ಲಿ ಆನ್‌ಲೈನ್‌ನಲ್ಲಿ ಇ–ಖಾತಾ ವ್ಯವಸ್ಥೆ ಅನುಷ್ಠಾನಗೊಳಿಸಿದ್ದು, ನಗರವನ್ನು ಪ್ಲಾಸ್ಟಿಕ್‌ ಮುಕ್ತವನ್ನಾಗಿಸಲು ಕ್ರಮ ವಹಿಸಲಾಗಿದೆ ಎಂದರು.

ನಗರಸಭೆ ಸದಸ್ಯ ಮುತ್ತಯ್ಯ ಮಾತನಾಡಿ, ದಂಟರಮಕ್ಕಿ ಕೆರೆಯೊ ಳಗಿನ ದಿಬ್ಬದಲ್ಲಿ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಶಿಲ್ಪಿಯು ಈ ಪ್ರತಿಮೆಯನ್ನು ಸರಿಯಾಗಿ ಪೂರ್ಣಗೊಳಿಸಿಲ್ಲ. ಬೆಂಗಳೂರಿನ ಶಿಲ್ಪಿಯೊಬ್ಬರಿಗೆ ಸರಿಪಡಿಸುವ ಕೆಲಸ ಒಪ್ಪಿಸಿದ್ದೇವೆ ಎಂದು ಹೇಳಿದರು.

‘ಈ ಮೊದಲು ಪ್ರತಿಮೆ ನಿರ್ಮಾಣಕ್ಕೆ ₹ 16 ಲಕ್ಷ ವೆಚ್ಚವಾಗಿತ್ತು. ಸರಿಪಡಿಸುವುದಕ್ಕೆ ₹ 7.5 ಲಕ್ಷ ವೆಚ್ಚ ವಾಗಲಿದೆ. ನಾವು ಗೆಳೆಯರು ಒಗ್ಗೂಡಿ ಈ ವೆಚ್ಚ ಭರಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ರಾಜಶೇಖರ್‌, ಎಚ್‌.ಡಿ.ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry