ಅಂತರ್ಜಲ ವೃದ್ಧಿಗೆ ವೇದಾವತಿ ಯೋಜನೆ

7
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿ

ಅಂತರ್ಜಲ ವೃದ್ಧಿಗೆ ವೇದಾವತಿ ಯೋಜನೆ

Published:
Updated:
ಅಂತರ್ಜಲ ವೃದ್ಧಿಗೆ ವೇದಾವತಿ ಯೋಜನೆ

ಹಳೇಬೀಡು: ಹಳ್ಳದಲ್ಲಿ ನೀರು ಇಂಗಿ ಅಂತರ್ಜಲ ಹೆಚ್ಚಿಸುವುದು ಹಾಗೂ ನದಿಗಳ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ವೇದಾವತಿ ನದಿ ಪುನಶ್ಚೇತನ ಕಾಮಗಾರಿಗೆ ಈಗ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಆರಂಭದಲ್ಲಿ ಅನುಕೂಲತೆಯ ಅರಿವಿಲ್ಲದೆ ಸಾಕಷ್ಟು ಮಂದಿ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ವರ್ಷದ ಹಿಂಗಾರು ಮಳೆ ಬಿದ್ದಾಗ ಹಳ್ಳ ನೀರು ಕುಡಿದಿದ್ದರಿಂದ ನಿಂತುಹೋಗಿದ್ದ ಕೆಲವು ಕೊಳವೆಬಾವಿಗಳಲ್ಲಿ ಕೆಲವು ದಿನ ಜಲ ಬಂತು. ಹೀಗಾಗಿ, ರೈತರಲ್ಲಿ ಈ ಯೋಜನೆಯ ಬಗ್ಗೆ ಆಸಕ್ತಿ ಬಂದಿದೆ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಹರೀಶ್‌.

ಕಾಮಗಾರಿ ಕೈಗೊಂಡಿರುವ ವೇದಾವತಿ ನದಿಗೆ ಸಂಬಂಧಿಸಿದ ಹಳ್ಳ ಸಾಮಾನ್ಯವಾದುದಲ್ಲ. ಸಮೃದ್ಧ ಮಳೆ ಸುರಿದು ಹಳ್ಳದಲ್ಲಿ ನೀರು ಹರಿದರೆ ಹಳೇಬೀಡಿನ ದ್ವಾರಸಮುದ್ರ ಕೆರೆ ಸೇರಿದಂತೆ ಹಲವಾರು ಕೆರೆಗಳನ್ನು ತುಂಬಿಸುತ್ತದೆ. ಹಳ್ಳದಲ್ಲಿ ವೇಗವಾಗಿ ನೀರು ಹರಿದರೆ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಜಲಾಶಯ ತಲುಪುತ್ತದೆ. ಚಿತ್ರದುರ್ಗದ ಮಾರಿಕಣಿವೆವರೆಗೆ ನೀರು ಹರಿಯುವ ವ್ಯವಸ್ಥೆಯೇ ವೇದಾವತಿ ನದಿಯಾಗಿದೆ.

‘ಗ್ರಾಮೀಣ ಪ್ರದೇಶದ ಜನತೆಯ ಕೈಗೆ ಒಂದು ವರ್ಷಕ್ಕೆ ನೂರು ದಿನ ಕೆಲಸ ಕೊಡುವುದರೊಂದಿಗೆ ದೇಶದ ಜೀವನಾಡಿಯಾದ ನದಿಗಳನ್ನು ಉಳಿಸಲು ಕೇಂದ್ರ ಸರ್ಕಾರ ಎನ್‌.ಆರ್.ಇ.ಜಿ ಯೋಜನೆ ಅಡಿಯಲ್ಲಿ ನದಿಗಳ ಪುನಶ್ಚೇತನ ಹಾಗೂ ಹಳ್ಳದ ಸುತ್ತಮುತ್ತ ಅಂತರ್ಜಲ ಹೆಚ್ಚಿಸುವ ಕಾರ್ಯ ಕೈಗೊಂಡಿದೆ. ಮಳೆ ಸಮೃದ್ಧವಾಗಿ ಸುರಿದರೆ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪುತ್ತದೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ ಗೋವಿಂದಪ್ಪ ಪ್ರತಿಕ್ರಿಯಿಸುತ್ತಾರೆ.

ಹಳ್ಳದಲ್ಲಿ ಮಣ್ಣುತೆಗೆದು ಕಲ್ಲು, ಜಲ್ಲಿ ಮರಳು ತುಂಬಿಸಿ ಅದರ ಮುಂದೆ ಕಲ್ಲುಗುಂಡಿನ ತಡೆ ಮಾಡಲಾಗಿದೆ. ಹರಿಯುವ ನೀರು ಒಂದು ಸ್ಥಳದಲ್ಲಿ ನಿಂತು ಭೂಮಿಯಲ್ಲಿ ಇಂಗುತ್ತದೆ. ಹಳ್ಳದಲ್ಲಿ ತೇವಾಂಶ ಕಾಪಾಡುವುದರೊಂದಿಗೆ ಸುತ್ತ ಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಇಂತಹ ಒಂದು ಕಾಮಗಾರಿಗೆ ₹ 59,000 ವೆಚ್ಚವಾಗುತ್ತದೆ.

‘ಇಂಗುಗುಂಡಿ ನಿರ್ಮಿಸಿ ಮಧ್ಯದಲ್ಲಿ ರಿಂಗ್ ಅಳವಡಿಸುವ ಕಾಮಗಾರಿಯನ್ನೂ ಕೈಗೊಳ್ಳಲಾಗಿದೆ. ಇದರಿಂದ ಮಳೆ ನೀರು ಭೂಮಿಯಲ್ಲಿ ಇಂಗುವುದಲ್ಲದೆ, ರಿಂಗ್‌ಬಾವಿಯಲ್ಲಿ ನೀರು ನಿಲ್ಲುತ್ತದೆ. ಈ ಕಾಮಗಾರಿಯಿಂದಲೂ ಅಂತರ್ಜಲ ವೃದ್ಧಿಸುತ್ತದೆ. ರಿಂಗ್‌ ಬಾವಿಯೊಂದಿಗೆ ಇಂಗುಗುಂಡಿ ನಿರ್ಮಿಸುವ ಕಾಮಗಾರಿಗೆ ಸರ್ಕಾರ ₹ 58,000 ವೆಚ್ಚಮಾಡುತ್ತಿದೆ’ ಎಂದು ಪಿಡಿಒ ಕೆ.ಹರೀಶ್‌

ವಿವರಿಸಿದರು.

**

ಮರ ಬೆಳೆಸಲೂ ಕಾಳಜಿ ವಹಿಸಿ

‘ವೇದಾವತಿ ನದಿ ಪುನಶ್ಚೇತನ ಕಾಮಗಾರಿ ಕಳೆದ ವರ್ಷದ ಬರಗಾಲದಲ್ಲಿ ಆರಂಭವಾಯಿತು. ಹೀಗಾಗಿ ಕಾಮಗಾರಿಯಿಂದ ಅಂತರ್ಜಲ ಹೆಚ್ಚುವ ವಿಶ್ವಾಸ ಜನರ ಮನಸ್ಸಿನಲ್ಲಿ ಮೂಡಲಿಲ್ಲ. ಮಳೆಗಾಲ ಸಮೃದ್ಧವಾದರೆ ಅಂತರ್ಜಲ ವೃದ್ಧಿಸುತ್ತದೆ. ಬೇಸಿಗೆಯಲ್ಲಿಯೂ ಕೊಳವೆಬಾವಿಯಲ್ಲಿ ನೀರು ಜಿನುಗುತ್ತದೆ ಎಂಬ ಆಶಾಭಾವನೆ ಬಂದಿದೆ. ಮೋಡ ಆಕರ್ಷಿಸಿ ಮಳೆ ಸುರಿಸುವಂತಹ ಗೋಣಿ, ಆಲ ಮೊದಲಾದ ಬೃಹತ್‌ ಮರ ಬೆಳೆಸುವುದಕ್ಕೂ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು’ ಎನ್ನುತ್ತಾರೆ ರೈತ ಸುರೇಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry