7
ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ

ಪ್ರತಿಪಕ್ಷಗಳ ನಡುವೆ ವಾಗ್ವಾದ

Published:
Updated:

ಶಿರಸಿ: ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನಿಲ ಭಾಗ್ಯ ಯೋಜನೆಗಳ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ರಾಜ್ಯದ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಸಿಲಿಂಡರ್ ನೀಡಲು ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಆದರೆ ಈವರೆಗೆ ಒಬ್ಬ ಫಲಾನುಭವಿಗೂ ಸಿಲಿಂಡರ್ ಸಿಕ್ಕಿಲ್ಲ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಆರೋಪಿಸಿದರು. ‘ರಾಜ್ಯ ಸರ್ಕಾರದ ಯೋಜನೆ ಇನ್ನೂ ಅರ್ಜಿ ಪಡೆಯುವ ಹಂತದಲ್ಲಿದೆ. ಎಲ್ಲ ವಿಲೇವಾರಿ ಆದ ಮೇಲೆ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತದೆ’ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸದಸ್ಯೆ ರತ್ನಾ ಶೆಟ್ಟಿ ಸಮರ್ಥಿಸಿಕೊಂಡರು.

‘ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಸಿಲಿಂಡರ್ ದೊರೆತಿದೆ. ನಾವು ಜನರಿಗೆ ಸೌಲಭ್ಯ ನೀಡಿದ ಮೇಲೆ ಅದನ್ನು ಹೇಳಿಕೊಳ್ಳುತ್ತೇವೆ. ಅದನ್ನು ಕೊಡುವ ಮೊದಲೇ, ಪ್ರಚಾರ ತೆಗೆದುಕೊಳ್ಳುವುದಿಲ್ಲ’ ಎಂದು ಸದಸ್ಯರಾದ ನರಸಿಂಹ ಹೆಗಡೆ, ರವಿ ಹಳದೋಟ ಕಟಕಿಯಾಡಿದರು.

ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 3500 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಕಾಲೇಜು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯವೂ ಇಲ್ಲ. ಹೊಸ ಕಟ್ಟಡದಲ್ಲಿ ಅಪೂರ್ಣ ವ್ಯವಸ್ಥೆಯಿದೆ. ಆದಷ್ಟು ಶೀಘ್ರ ಕಾಲೇಜಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಚಂದ್ರು ದೇವಾಡಿಗ ಒತ್ತಾಯಿಸಿದರು.

ಪೊಲೀಸ್ ಭದ್ರತೆ ಬೇಕು: ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಕೆಲವೊಮ್ಮೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಸಂದರ್ಭ ಉಂಟಾಗುತ್ತಿದೆ. ಪ್ರತಿ ಗ್ರಾಮ ಸಭೆ ನಡೆಯುವಾಗ ಪೊಲೀಸರು ಇರಬೇಕು ಎಂದು ಶ್ರೀಲತಾ ಕಾಳೇರಮನೆ ಆಗ್ರಹಿಸಿದರು. ಪಶುಸಂಗೋಪನಾ ಇಲಾಖೆಗೆ ನೀಡುವ ಚುಚ್ಚುಮದ್ದು, ಔಷಧಗಳು ಕಾಳಸಂತೆಯಲ್ಲಿ ಸಿಗುತ್ತಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರವಿ ಹಳದೋಟ ಆಗ್ರಹಿಸಿದರು.

ಅಕ್ರಮ–ಸಕ್ರಮದ ಅಡಿಯಲ್ಲಿ 1978ರ ಪೂರ್ವದ 2488 ಪ್ರಕರಣಗಳು ಜಿಲ್ಲೆಯಲ್ಲಿ ಬಾಕಿ ಇವೆ. ಅವುಗಳಲ್ಲಿ ತಾಲ್ಲೂಕಿನಲ್ಲಿ 722 ಪ್ರಕರಣಗಳು ಇದ್ದು, ಯಾವೊಬ್ಬ ಫಲಾನುಭವಿಗೂ ಪಟ್ಟಾ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ಯಾವ ಹಂತದಲ್ಲಿದೆ ಎಂದು ಸಹ ಗೊತ್ತಾಗುತ್ತಿಲ್ಲ ಎಂದು ಚಂದ್ರು ದೇವಾಡಿಗ ದೂರಿದರು. ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry