4
ಮಳೆ ನೀರು ಸಂಗ್ರಹ ಯೋಜನೆ ಅಳವಡಿಕೆ: ಇಲ್ಲೊಬ್ಬ ಮಾದರಿ ರೈತ

ವ್ಯವಸಾಯಕ್ಕೆ ಮಳೆ ನೀರೇ ಆಧಾರ

Published:
Updated:
ವ್ಯವಸಾಯಕ್ಕೆ ಮಳೆ ನೀರೇ ಆಧಾರ

ಮಾಲೂರು: ನೀರಿನ ಕೊರತೆ ನೀಗಿಸಲು ಸರ್ಕಾರ ಮಳೆ ನೀರು ಸಂಗ್ರಹ ಯೋಜನೆ ರೂಪಿಸಿದ್ದು, ಇದರ ಬಗ್ಗೆ ಜನರು ಉತ್ಸಾಹ ತೋರುತ್ತಿಲ್ಲ. ಆದರೆ ಇಲ್ಲೊಬ್ಬ ರೈತ ಮಳೆ ನೀರು ಸಂಗ್ರಹ ಯೋಜನೆ ಅಳವಡಿಸಿಕೊಂಡು ಆ ನೀರಿನಿಂದಲೇ ವ್ಯವಸಾಯ ನಡೆಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಇರಬನಹಳ್ಳಿ ಗ್ರಾಮದ ರೈತ ಶಂಕರ್ ರೆಡ್ಡಿ ತಮ್ಮ ತೋಟದ ಹಸಿರು ಮನೆಯ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸಿ ಬೇಸಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಹೊಂಡ ತುಂಬಿದೆ.

ಅಂತರ್ಜಲ ಪಾತಾಳಕ್ಕೆ: ಕೃಷಿಯಿಂದಲೇ ಜೀವನ ಸಾಗಿಸುವ ರೈತ ಕುಟುಂಬದಲ್ಲಿ ಜನಿಸಿದ ಶಂಕರ್ ರೆಡ್ಡಿ ಆರಂಭದಿಂದಲೂ ವ್ಯವಸಾಯವನ್ನೇ ನೆಚ್ಚಿಕೊಂಡವರು. ಇರುವ ಭೂಮಿಯಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದರು.

ಕೊಳವೆ ಬಾವಿಗಳು ಬತ್ತಿ ಹೋಗಿ ಅಂತರ್ಜಲ ಮಟ್ಟ 1500 ಅಡಿಗಳಿಗೆ ಕುಸಿಯುತ್ತಿದ್ದಂತೆ ತಮ್ಮ ಪಾಲಿಗೆ ಬಂದ 2.5 ಎಕರೆ ಭೂಮಿಯಲ್ಲಿ ಕೊರೆದ ಬಾವಿಯಲ್ಲಿ ಸಿಕ್ಕಿದ್ದು ಒಂದೂವರೆ ಇಂಚಿನಷ್ಟು ನೀರು ಮಾತ್ರ. ಅಂತಹ ಪರಿಸ್ಥಿತಿಯಲ್ಲಿ ಮಳೆ ನೀರು ಸಂಗ್ರಹಣೆ ಪದ್ಧತಿಯಿಂದ ಸಂಗ್ರಹಿಸಿದ ನೀರನ್ನು ತೋಟಕ್ಕೆ ಬಳಕೆ ಮಾಡುವ ಯೋಜನೆ ಬಗ್ಗೆ ಅರಿವು ಪಡೆದ ಇವರು, ಕಳೆದ ವರ್ಷ ತಮ್ಮ ತೋಟದ 1.14 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಹಸಿರು ಮನೆಯ ನೀರನ್ನೇ ಬಳಸಿಕೊಳ್ಳಲು ಮುಂದಾದರು.

ಪ್ಲಾಸ್ಟಿಕ್ ಹಾಳೆ ಬಳಕೆ: ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಹೊಂಡ ನಿರ್ಮಿಸಿ ಸಂಗ್ರಹಿಸುವ ಸಿದ್ಧತೆ ಮಾಡಿಕೊಂಡು ಸಿಮೆಂಟ್ ತೊಟ್ಟಿ ನಿರ್ಮಿಸಲು ಮುಂದಾದರು. ಆದರೆ ನಿರ್ಮಾಣದ ವೆಚ್ಚ ಅಧಿಕವಾಗುವುದ

ರಿಂದ ಕಡಿಮೆ ವೆಚ್ಚದಲ್ಲಿ ಹೊಂಡ ನಿರ್ಮಿಸುವ ನಿಟ್ಟಿನಲ್ಲಿ 60 ಅಡಿ ಅಗಲ, 80 ಅಡಿ ಉದ್ದ ಮತ್ತು 15 ಅಡಿ ಆಳದ ಹೊಂಡವನ್ನು ನಿರ್ಮಿಸಿದರು. ನೀರು ಭೂಮಿಯಲ್ಲಿ ಹಿಂಗದಂತೆ 500 ಮೈಕ್ರಾನ್ ಪ್ಲಾಸ್ಟಿಕ್ ಹಾಳೆ ಹಾಕಿ ನೀರು ಸಂಗ್ರಹಿಸಿದ್ದಾರೆ.

ನೀರು ಭೂಮಿಯಲ್ಲಿ ಇಂಗದಂತೆ ₹ 1.30 ಲಕ್ಷ ವೆಚ್ಚದಲ್ಲಿ ಹೊಂಡ ನಿರ್ಮಾಣ ಮಾಡಿ 700 ಚ.ಮೀ ಪ್ಲಾಸ್ಟಿಕ್ ಹಾಳೆ ‌ಹಾಕಿಸಲಾಗಿದೆ. ಬಿದ್ದ ಮಳೆಯ ನೀರು ಒಂದೆ ಕಡೆಗೆ ನಿಲ್ಲುವಂತೆ ವ್ಯವಸ್ಥೆ ಕಲ್ಪಿಸಿದ್ದು, ನೀರನ್ನು ಹೊಂಡಕ್ಕೆ ಸಾಗಿಸಲು 2x2 ಅಗಲದ ಚರಂಡಿಯನ್ನು ನಿರ್ಮಿಸಲಾಗಿದೆ.‌ ಇದರಿಂದ 3 ಸೆಂ.ಮೀ ಮಳೆಯಾದರೂ 5 ಲಕ್ಷ ಲೀಟರ್ ನೀರು ಹೊಂಡದಲ್ಲಿ ಸಂಗ್ರಹವಾಗುತ್ತದೆ.

ನೀರಿನೊಂದಿಗೆ ಹರಿದು ಬರುವ ಮಣ್ಣನ್ನು ಪ್ರಥಮ ಹಂತದಲ್ಲೇ ತಡೆದು ನೀರನ್ನು ಮಾತ್ರ ಹೊಂಡಕ್ಕೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಹೊಂಡದಲ್ಲಿನ ನೀರನ್ನು ತೋಟಕ್ಕೆ ನೇರವಾಗಿ ಹರಿಸುವ ಬದಲಿಗೆ ಫಿಲ್ಟರ್ ಅಳವಡಿಸುವ ಮೂಲಕ ನೀರಿನಲ್ಲಿರುವ ಕಸ–ಕಡ್ಡಿಗಳನ್ನು ಶುದ್ಧೀಕರಿಸಿ ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಇದರಿಂದ 1.14 ಎಕರೆ ಪ್ರವೇಶದ ಹಸಿರು ಮನೆಯಲ್ಲಿ ಕ್ಯಾಪ್ಸಿಕಂ ನಾಟಿ ಮಾಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹೊಂಡ ಅರ್ಧ ಭಾಗ ತುಂಬಿದ್ದು, ಇನ್ನೂ 3 ತಿಂಗಳ ಅವಧಿಯ ತೋಟಗಾರಿಕೆ ಬೆಳೆಯನ್ನು ಬೆಳೆಯ ಬಹುದಾಗಿದೆ.

ರೈತರು ಕೃಷಿ ಚಟುವಟಿಕೆಗೆ ಕೊಳವೆ ಬಾವಿಗಳನ್ನೇ ನಂಬಿಕೊಳ್ಳದೆ ಮಳೆ ನೀರು ಸಂಗ್ರಹಣೆ ಪದ್ಧತಿಯನ್ನು ಅಳವಡಿಸಿಕೊಂಡು ಹನಿ ನೀರಾವರಿ ಬಳಸಿಕೊಂಡು ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ರೈತ ಶಂಕರ್ ರೆಡ್ಡಿ ‘ಪ್ರಜಾವಾಣಿ’ ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry