ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದನ್ನು ಸೋಲಿಸುವುದು ಎಂದು?

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಡಾ. ಆಶ್ವಿನಿ ಎಸ್.  

‘ನಾನು ಬಂದರೆ ನೀನು ಕ್ಷೀಣಿಸಿ ಹೋಗುವೆ’ ಎಂಬ ಎಚ್ಚರಿಕೆಯನ್ನು ಹೆಸರಿನಲ್ಲೇ ಪ್ರರ್ದಶಿಸುವ ರೋಗವೇ ಕ್ಷಯ. ಮಾರ್ಚ್‌ 24, 1882ರಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ವೈದ್ಯ ಮತ್ತು ಸೂಕ್ಷ್ಮಜೀವಾಣು ತಜ್ಞನಾದ ರಾಬರ್ಟ ಕಾಚ್ ತನ್ನ ಸತತ ಪ್ರಯೋಗ ಮತ್ತು ಅಧ್ಯಯನಗಳ ಸಹಾಯದಿಂದಾಗಿ ಕ್ಷಯರೋಗವನ್ನುಂಟು ಮಾಡುವುದು ಮೈಕೊಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ (Mycobacterium Tuberculosis) ಎಂಬ ಸೂಕ್ಷ್ಮಾಣು ಎಂದು ಜಗತ್ತಿಗೇ ತೋರಿಸಿದ. ಇದರ ನೆನಪಿಗಾಗಿ ಪ್ರತಿವರ್ಷವೂ ಮಾರ್ಚ 24ರಂದು ‘ವಿಶ್ವ ಕ್ಷಯರೋಗ ದಿನ’ ಎಂದು ಆಚರಿಸಿ ಕ್ಷಯರೋಗ ವಿರುದ್ಧದ ಸಮರವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ಮಾಡುತ್ತೇವೆ

ಆಶ್ಚರ್ಯದ ವಿಷಯವೆಂದರೆ ಸೂಕ್ಷ್ಮಾಣುವನ್ನು ಪ್ರದರ್ಶಿಸುವ ಎರಡು ದಶಕಗಳ ಮೊದಲೇ 1865ರಲ್ಲಿ ಜೀನ್ ಆಂಟವಾನ್ ವಿಲ್ಲೇಮಿನ್ ಎಂಬ ವೈದ್ಯನೊಬ್ಬ ಕ್ಷಯ ಒಂದು ಸಾಂಕ್ರಾಮಿಕ ರೋಗ ಮತ್ತು ಅದು ಉಗುಳಿನಿಂದ ಪ್ರದೂಶಿತವಾದ ಗಾಳಿಯ ಸೇವನೆಯಿಂದಾಗಿ ಬರುತ್ತದೆ ಎಂದು ವಿಶ್ವಕ್ಕೆ ಮನದಟ್ಟು ಮಾಡಿಸಿದ್ದ.

ಮಕ್ಕಳತಜ್ಞನಾದ ಕ್ಲೆಮೆನ್ಸ ವಾನ್ ಪಿರ್ಕ್ವೆಟ್ 1907ರಲ್ಲಿ,  ಕ್ಷಯದ ನಿಖರ ರೋಗನಿರ್ಣಯಕ್ಕಾಗಿ ಬೇಕಾದ ಚರ್ಮಪರೀಕ್ಷೆಯನ್ನು ಕಂಡುಹಿಡಿದ. ಅಲ್ಲಿಂದ ಮುಂದೆ ಹದಿಮೂರು ವರ್ಷಗಳ ಕಾಲ, 1908ರಿಂದ 1921ರವರೆಗೆ, ಆಲ್ಬರ್ಟ್‌ ಕ್ಯಾಲ್ಮೆಟ್ಟ ಮತ್ತು ಕಾಮಿಲ್ ಗ್ಯುವೆರಿನ್ ಎಂಬ ಸೂಕ್ಷ್ಮಾಣು ವಿಜ್ಞಾನಿಗಳು ಅವಿರತ ಪ್ರಯತ್ನವನ್ನು ನಡೆಸಿ ಕ್ಷಯವನ್ನು ತಡೆಗಟ್ಟುವ ಲಸಿಕೆಯೊಂದನ್ನು ತಯಾರಿಸಿದರು. ಇದೇ ನಾವಿಂದು ನವಜಾತ ಶಿಶುವಿಗೆ ಕೊಡುವ ‘ಬಿಸಿಜಿ ಲಸಿಕೆ’.

ಕ್ಷಯರೋಗಿಯನ್ನು ಗುಣಮುಖನಾಗಿಸಲು ಬೇಕಾದ ಚಿಕಿತ್ಸೆಯ ಕುರಿತಾದ ಪ್ರಯೋಗಗಳು ಶತಮಾನದಿಂದ ನಡೆಯುತ್ತಲೇ ಇದ್ದವು; ಈಗಲೂ ನಡೆಯುತ್ತಲೇ ಇವೆ. ಮೊಟ್ಟಮೊದಲ ಬಾರಿಗೆ 1943ರಲ್ಲಿ ಸೆಲಮನ್ ವಾಕ್ಸಮನ್ ಎಂಬ ವಿಜ್ಞಾನಿ ಕ್ಷಯಕ್ಕೊಂದು ಆಲೋಪತೀಯ ಔಷಧವನ್ನು ಕಂಡು ಹಿಡಿದ. ಇಂದಿಗೂ ನಾವದನ್ನು ಕ್ಷಯದ ಚಿಕಿತ್ಸೆಗೆ ಬಳಸುತ್ತೇವೆ. ಇದರ ನಂತರ ಹಲವು ಪ್ರಯೋಗಗಳು ನಡೆದವು. ಕಡೆಗೂ 1990ರಲ್ಲಿ ಪರಿಣಾಮಕಾರಿ ಔಷಧಗಳು ಮತ್ತೆ ಅವುಗಳನ್ನು ಕೊಡುವ ವಿಧಾನಗಳು ಪತ್ತೆಯಾದವು.

ಈ ಆವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಇಂದೂ ಬಳಸುತ್ತಿದ್ದೇವೆ. 1990ರ ಆಸುಪಾಸಿನಲ್ಲೇ ಕ್ಷಯರೋಗದ ವಿರುದ್ಧ ಹೋರಾಡಲು ಬೇಕಾದ ಅರಿವು, ರೋಗ ನಿರ್ಣಾಯಕ ಪದ್ಧತಿ, ಪರಿಣಾಮಕಾರಿ ಚಿಕಿತ್ಸೆ, ಲಸಿಕೆ ಇವೇ ಮೊದಲಾದ ಶಸ್ತ್ರಗಳನ್ನು ನಾವು ಒಟ್ಟಾಗಿಸಿದ್ದೆವು. ಇವನ್ನೆಲ್ಲಾ ಸುಮಾರು ಮೂರು ದಶಕಗಳಿಂದ ಉಪಯೋಗಿಸುತ್ತಿದ್ದೇವೆ ಕೂಡ. ಆದರೂ ಯುದ್ಧದಲ್ಲಿ ಗೆಲುವು ಮಾತ್ರ ಸಿಕ್ಕಿಲ್ಲ! ಮುಂದುವರಿದ ರಾಷ್ಟ್ರಗಳು ಗೆಲುವಿನ ಹೊಸ್ತಿಲಿನಲ್ಲಿ ನಿಂತಿವೆ. ಅವರಿಗಿರುವ ಸವಲತ್ತುಗಳೇ ನಮ್ಮಲ್ಲಿಲ್ಲವೇ? ಇವೆ. ಹಾಗಾದರೆ ನಾವು ಗೆಲುವಿನ ಬಾಗಿಲಿನಿಂದ ಸಾವಿರಾರು ಮೈಲಿಗಳ ದೂರದಲ್ಲಿ ಏಕಿದ್ದೇವೆ? ವಿಶ್ಲೇಷಿಸಿದರೆ ತಿಳಿಯುವ ಕಾರಣಗಳು ಹಲವು.

ಎಚ್‍ಐವಿ ಸೋಂಕಿತರಲ್ಲಿ ಕ್ಷಯರೋಗದ ಅಪಾಯ ಮೂವತ್ತು ಪಟ್ಟು ಹೆಚ್ಚಾಗುತ್ತದೆ. ಎಚ್‍ಐವಿಯನ್ನು ನಿಯಂತ್ರಿಸದೇ ಕ್ಷಯದ ನಿಯಂತ್ರಣ ಅಸಾಧ್ಯ. ಇನ್ನೂ ಸಹಿತ ಎಚ್‍ಐವಿಯನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲ. ಹಾಗಾಗಿ ಎಚ್‍ಐವಿ ಬರದಂತೆ ನೋಡಿಕೊಳ್ಳುವುದೇ ಜಾಣ್ಮೆ. ಧೂಮಪಾನದಿಂದಲೂ ಕ್ಷಯರೋಗದ ಅಪಾಯ ಮೂರು ಪಟ್ಟು ಹೆಚ್ಚಾಗುತ್ತದೆ. ಕ್ಷಯರೋಗವು ಪಾಶ್ಚರೀಕರಣಕ್ಕೆ ಒಳಗಾಗದ ಹಾಲು ಮತ್ತು ಪ್ರಮಾಣೀಕರಿಸದ ಮಾಂಸಹಾರ ಸೇವನೆಗಳಿಂದಲೂ ಉಂಟಾಗುತ್ತದೆ.

ನಮ್ಮಲ್ಲಿ ಪಾಶ್ಚರೀಕರಣಕ್ಕೆ ಹೊಂದದೇ ಇರುವ ಹಾಲನ್ನೇ ಸೇವಿಸುವವರು ಹೆಚ್ಚು. ಏಕೆಂದರೆ ಪಾಶ್ಚರೀಕರಿಸಿದ ಹಾಲಿನಲ್ಲಿ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಎಂಬ ಅಪನಂಬಿಕೆ ಉಳ್ಳವರು ಸಾವಿರಾರು ಮಂದಿ. ಸೇವಿಸುತ್ತಿರುವ ಮಾಂಸ ಆರೋಗ್ಯವಂತ ಪ್ರಾಣಿಯದ್ದೆ ಎಂಬ ಪ್ರಮಾಣ ಕೇಳುವವರು ಬೆರಳೆಣಿಕೆಯವರಷ್ಟೇ! ಕಾಯಿಲೆಯ ಪ್ರಾರಂಭಿಕ ಹಂತದಲ್ಲಿ ಸ್ವಯಂ ಚಿಕಿತ್ಸೆಗೆ ಮೊರೆ ಹೋಗುವುದು ಹಲವರ ಅಭ್ಯಾಸ. ಕಾಯಿಲೆ ಉಲ್ಬಣಿಸಿದ ಮೇಲಷ್ಟೇ ಇವರು ವೈದ್ಯರ ಬಳಿಗೆ ತೆರಳುತ್ತಾರೆ.

ಸ್ವಚ್ಛಂದ ಲೈಂಗಿಕ ನಡೆವಳಿಕೆ, ಮಾದಕದ್ರವ್ಯ ವ್ಯಸನ ಮತ್ತು ಧೂಮಪಾನದಿಂದ ದೂರ ಇರುವುದು ಅಸಾಧ್ಯವೇ? ಲಭ್ಯವಿರುವ ಸಮತೋಲ ಆಹಾರವನ್ನು ಸೇವಿಸದಂತೆ ನಮ್ಮನ್ನು ತಡೆಯುತ್ತಿರುವುದಾದರೂ ಏನು? ಪಾಶ್ಚರೀಕರಿಸಿದ ಹಾಲನ್ನೇ ಸೇವಿಸುವುದು ಮತ್ತು ಪ್ರಮಾಣಿಕರಿಸಿದ ಮಾಂಸವನ್ನೇ ತಿನ್ನುವುದು ಕಷ್ಟಸಿದ್ಧವೇ? ಎಲ್ಲಂದರಲ್ಲಿ ಉಗುಳುವ ವರ್ತನೆಯನ್ನು ಬಿಡಲು ಕಾನೂನು ರಚನೆಯಾಗಬೇಕೆ? ಪರಿಣತ ವೈದ್ಯರ ಸಹಾಯವನ್ನು ಸೂಕ್ತ ಸಮಯದಲ್ಲಿ ಪಡೆಯಲು ನಮಗೇನು ಆಲಸ್ಯ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT