ಕ್ಷಯರೋಗ ಇರಲಿ ಎಚ್ಚರ...

7

ಕ್ಷಯರೋಗ ಇರಲಿ ಎಚ್ಚರ...

Published:
Updated:
ಕ್ಷಯರೋಗ ಇರಲಿ ಎಚ್ಚರ...

ಎಂಬತ್ತೆಂಟು ವರ್ಷದ ನನ್ನ ಅಜ್ಜಿ, ಇಂದಿಗೂ ಸಣ್ಣ ವಯಸ್ಸಿನಲ್ಲಿಯೇ ಕ್ಷಯರೋಗಕ್ಕೆ ತುತ್ತಾಗಿ ವಿಧಿವಶರಾದ ತನ್ನ ಅಣ್ಣನನ್ನು ನೆನಪಿಸಿಕೊಂಡು ದುಃಖಿಸುತ್ತಾರೆ. ಹೌದು, ಕ್ಷಯರೋಗ ಬಹಳ ಹಿಂದಿನ ಕಾಲದಿಂದಲೂ ಮನುಕುಲವನ್ನು ಕಾಡುತ್ತಾ ಬಂದಿರುವ ಕಾಯಿಲೆ. ಹಲವು ದಶಕಗಳ ಸತತ ಪ್ರಯತ್ನದ ನಂತರವೂ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ವಿಶ್ವದಾದ್ಯಂತ, ಮುಖ್ಯವಾಗಿ ಭಾರತದಲ್ಲಿ ಇಂದಿಗೂ ಅದು ಬಹಳ ಗಂಭೀರ ಕಾಯಿಲೆಯೆಂದೇ ಗುರುತಿಸಿಕೊಂಡಿದೆ.

ಇದರ ಗಂಭೀರತೆಗೆ ಕಾರಣಗಳು ಹಲವು.

ಈ ಕಾಯಿಲೆಯು ತಪಾಸಣೆಯಿಂದ ಧೃಡಪಟ್ಟ ನಂತರ ಸುಮಾರು ಆರು ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆಯಬೇಕು. ಸಾಕಷ್ಟು ಸಂದರ್ಭಗಳಲ್ಲಿ ಕಾರಣಾಂತರಗಳಿಂದ ರೋಗಿಯು ಅರ್ಧದಲ್ಲಿಯೇ ಚಿಕಿತ್ಸೆಯನ್ನು ನಿಲ್ಲಿಸುವ ಹಾಗೂ ಕಾಯಿಲೆಯು ಮರುಕಳಿಸುವ ಸಾಧ್ಯತೆಗಳಿರುತ್ತವೆ. ಅಲ್ಲದೆ, ಕ್ಷಯರೋಗಿಯೊಬ್ಬ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿದಾಗ ಆತನಲ್ಲಿ ಔಷಧಕ್ಕೆ ಪ್ರತಿರೋಧಶಕ್ತಿಯನ್ನು ಬೆಳೆಸಿಕೊಂಡ ಸೂಕ್ಷ್ಮಾಣುಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದು ಬಹಳ ಅಪಾಯಕಾರಿ.

ಬಡತನ, ಅನರಕ್ಷತೆ, ಅಪೌಷ್ಟಿಕತೆ, ಜನಸಂದಣಿ, ಅಸಮರ್ಪಕವಾದ ವಸತಿ ಸೌಲಭ್ಯ, ಅಸ್ವಚ್ಛತೆ, ಹಾಗೂ ವ್ಯಕ್ತಿಯ ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳು ಸಹ ಪರೋಕ್ಷವಾಗಿ ಜನರನ್ನು ಕಾಯಿಲೆಯ ಅಪಾಯಕ್ಕೆ ನೂಕುತ್ತವೆ. ಆದ್ದರಿಂದಲೇ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದು ಇಂದಿಗೂ ಕಾಣಿಸಿಕೊಳ್ಳುತ್ತಿದೆ.

ಇಂದಿಗೂ ಕ್ಷಯರೋಗದಿಂದ ಬಳಲುವ ರೋಗಿಯನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅದಕ್ಕೆ ಮುಖ್ಯ ಕಾರಣಗಳೆಂದರೆ, ಕ್ಷಯರೋಗಕ್ಕೆ ಚಿಕಿತ್ಸೆಯಿಲ್ಲ ಎಂಬ ನಂಬಿಕೆ ಮತ್ತು ಆತನು ಕಾಯಿಲೆಯನ್ನು ಇತರರಿಗೆ ಹರಡಬಲ್ಲ ಎಂಬ ಅಂಶ. ಆದರೆ, ಚಿಕಿತ್ಸೆಯನ್ನು ಪ್ರಾರಂಭಿಸಿದ ಸುಮಾರು ಹದಿನೈದು ದಿನಗಳ ಒಳಗಾಗಿ ರೋಗಿಯು ಕಾಯಿಲೆಯನ್ನು ಹರಡುವುದು ನಿಯಂತ್ರಣಕ್ಕೆ ಬರುತ್ತದೆ.

ಕ್ಷಯರೋಗವು ಮುಖ್ಯವಾಗಿ ಶ್ವಾಸಕೋಶಗಳ ಕಾಯಿಲೆಯಾಗಿದ್ದರೂ, ದೇಹದ ಇತರ ಅಂಗಾಂಗಗಳಾದ ಮೆದುಳು ಹಾಗೂ ಮೆದುಳಿನ ಕವಚಗಳು, ಎಲುಬು ಮತ್ತು ಕೀಲು, ಕರುಳುಗಳ ಮೇಲೆಯೂ ಇದು ಪರಿಣಾಮ ಬೀರಬಹುದು.

ಎಚ್‌ಐವಿ ಸೋಂಕಿತರು, ಮಧುಮೇಹಿಗಳು, ಕ್ಯಾನ್ಸರ್‌ನಿಂದ ಬಳಲುವವರಲ್ಲಿಯೂ ಕ್ಷಯರೋಗ ಹೆಚ್ಚಾಗಿ ಕಂಡು ಬರುತ್ತದೆ. ಈ ಕಾಯಿಲೆಗಳಿಂದ ಬಳಲುವ ವ್ಯಕ್ತಿಗಳಲ್ಲಿ ಕ್ಷೀಣಿಸಿದ ರೋಗನಿರೋಧಕಶಕ್ತಿಯು ಕ್ಷಯರೋಗದ ಸೂಕ್ಷ್ಮಾಣುವಿನ ಬೆಳವಣಿಗೆಗೆ ಪೂರಕವಾಗುವುದು ಇದಕ್ಕೆ ಕಾರಣ. ಔಷಧಕ್ಕೆ ಪ್ರತಿರೋಧಶಕ್ತಿಯನ್ನು ಬೆಳೆಸಿಕೊಂಡ ಕ್ಷಯರೋಗದ ಸೂಕ್ಷ್ಮಾಣುಗಳು ಇತ್ತೀಚಿನ ದಿನಗಳಲ್ಲಿ ವೈದ್ಯರಿಗೆ ಬಹಳ ದೊಡ್ಡ ಸವಾಲಾಗಿವೆ. ಇಂತಹ ರೋಗಿಗಳ ಚಿಕಿತ್ಸೆ ನಿಜಕ್ಕೂ ಕಷ್ಟಕರ.

ಹಾಗಾಗಿಯೇ ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲೆಂದೇ ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವದಾದ್ಯಂತ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತದೆ. 1882ರ ಆ ದಿನವೇ ವಿಜ್ಞಾನಿ ರಾಬರ್ಟ್ ಕೋಚ್ ಕ್ಷಯರೋಗಕ್ಕೆ ಕಾರಣವಾದ ಸೂಕ್ಷ್ಮಾಣು ‘ಮೈಕೋ ಬ್ಯಾಕ್ಟೀರಿಯಂ’ ಅನ್ನು ಕಂಡುಹಿಡಿದದ್ದು. ಈ ಆಚರಣೆಯ ಮುಖ್ಯ ಉದ್ದೇಶ ಈ ಕಾಯಿಲೆಯಿಂದ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಹಾಗೂ ವೈಯಕ್ತಿಕಸ್ಥಿತಿಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು.

‘ಕ್ಷಯರೋಗ ಮುಕ್ತ ವಿಶ್ವದ ನಿರ್ಮಾಣಕ್ಕಾಗಿ ನಾಯಕರು ಬೇಕಾಗಿದ್ದಾರೆ’ – ಇದು ಈ ವರ್ಷದ ಧ್ಯೇಯವಾಕ್ಯ. ನಿಜ, ಕ್ಷಯರೋಗದ ನಿರ್ಮೂಲನೆ ಒಬ್ಬರಿಂದ ಸಾಧ್ಯವಿಲ್ಲ; ಸಮಾಜದ ಎಲ್ಲ ಹಂತದ ಜನರ ಭಾಗವಹಿಸುವಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ 1993ರಲ್ಲಿಯೇ ‘ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ’ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಅಡಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಈ ಕಾಯಿಲೆಯ ನಿಯಂತ್ರಣ ಹಾಗೂ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ.

ಎಲ್ಲಾ ಸರ್ಕಾರಿ ಕ್ಷಯರೋಗ ಕೇಂದ್ರಗಳಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ ಕೆಲವು ತಪಾಸಣೆಗಳನ್ನೂ ಹಾಗೂ ಚಿಕಿತ್ಸೆಯನ್ನು ಉಚಿತವಾಗಿಯೇ ಕೊಡಲಾಗುತ್ತಿದೆ. ಚಿಕಿತ್ಸೆ ಉಚಿತವಿದ್ದರೂ ಕಾರಣಾಂತರಗಳಿಂದ ರೋಗಿಯು ಚಿಕಿತ್ಸೆಯನ್ನು ಪೂರ್ಣಗೊಳಿಸದೇ ಇರುವ ಸಂದರ್ಭಗಳೇ ಹೆಚ್ಚು. ಈ ನಿಟ್ಟಿನಲ್ಲಿಯೇ ಸರ್ಕಾರ ರೋಗಿಯೊಬ್ಬನಿಗೆ ಚಿಕಿತ್ಸೆಯನ್ನು ಪೂರ್ಣಗೊಳ್ಳಲು ಸಹಕರಿಸಿದ ಸರ್ಕಾರಿ ಆರೋಗ್ಯ ಕಾರ್ಯಕರ್ತರಿಗೆ ಬಹುಮಾನದ ರೂಪದಲ್ಲಿ ಒಂದಿಷ್ಟು ಹಣವನ್ನು ಕೊಡಲೂ ಮುಂದಾಗಿದೆ.

ಖಾಸಗಿ ವೈದ್ಯ ಸಂಸ್ಥೆಗಳಲ್ಲಿಯೂ ಈ ಬಗೆಯ ಸರ್ಕಾರಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಲಿದ್ದು, ಅಲ್ಲಿ ಬರುವ ಕ್ಷಯರೋಗಿಗಳ ಬಗ್ಗೆಯೂ ಸರ್ಕಾರ ಗಮನವಹಿಸುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಖಾಸಗಿ ವೈದ್ಯರು ತಾವು ಪತ್ತೆ ಹಚ್ಚಿದ ಕ್ಷಯರೋಗಿಗಳ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ಸರ್ಕಾರಿ ಕೇಂದ್ರಗಳಿಗೆ ತಿಳಿಸಬೇಕೆಂದು ಸೂಚಿಸಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ವೈದ್ಯರು ಶಿಕ್ಷೆಗೆ ಅರ್ಹರಾಗುವರೂ ಎಂದೂ ತಿಳಿಸಿದೆ. 

ನೆನಪಿರಲಿ...

* ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆರಂಭದಲ್ಲಿಯೇ ರೋಗವನ್ನು ಪತ್ತೆ ಮಾಡಿ, ಸರಿಯಾದ ಚಿಕಿತ್ಸೆಯನ್ನು ಮಾಡಿದರೆ ಇದರಿಂದ ಯಾವುದೇ ಅಪಾಯವಿಲ್ಲ.

* ಚಿಕಿತ್ಸೆಗೆ ಒಳಪಡಿಸಿದ ಹದಿನೈದು ದಿನಗಳೊಳಗಾಗಿ ಕಾಯಿಲೆಯು ನಿಯಂತ್ರಣಗೊಂಡು, ರೋಗಿಯ ಉಸಿರಿನಲ್ಲಿ ಸೂಕ್ಷ್ಮಾಣುಗಳು ಹೊರಬರುವುದು ನಿಲ್ಲುತ್ತದೆ.

* ಚಿಕಿತ್ಸೆಯ ಜೊತೆಯಲ್ಲಿ ಪೌಷ್ಟಿಕ ಆಹಾರದ ಸೇವನೆಯೂ ಮುಖ್ಯವೆನಿಸುತ್ತದೆ.

ವೈದ್ಯರನ್ನು ಸಂಪರ್ಕಿಸಿ

ಈ ಕೆಳಗಿನ ಲಕ್ಷಣಗಳು ನಿಮ್ಮಲ್ಲಿ ಅಥವಾ ನಿಮ್ಮ ಹತ್ತಿರದವರಲ್ಲಿ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

* ಹದಿನೈದಕ್ಕಿಂತಲೂ ಹೆಚ್ಚು ದಿನಗಳವರೆಗೆ ಕಾಡುವ ಸೌಮ್ಯಸ್ವರೂಪದ ಜ್ವರ. ಅದರಲ್ಲಿಯೂ ಸಂಜೆಯ ವೇಳೆಗೆ ಹೆಚ್ಚಾಗುವ ಜ್ವರ.

* ಹದಿನೈದಕ್ಕಿಂತಲೂ ಹೆಚ್ಚು ದಿನಗಳವರೆಗೆ ಕಾಡುವ ಕೆಮ್ಮು–ಕಫ.

* ದೇಹದ ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು.

* ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು

* ರಾತ್ರಿಯ ವೇಳೆ ಬೆವರುವಿಕೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry