ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನೆಂದರೆ ಮಡಿಲು... ಮಗಳೆಂದರೆ ಜೋಗುಳ...

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲ; ಆ ಕಾಲದಲೊಂದು ಅಮ್ಮ–ಮಗಳ ಜೋಡಿ... ಆ ಅಮ್ಮನೋ ಹುಟ್ಟಿನಿಂದಲೂ ಅಮ್ಮನೇ ಇವಳು ಎಂಬಂಥವಳು! ಮಗಳೋ ಮಗಳೆಂದರೆ ಹೀಗೇ ಎನ್ನುವಂಥವಳು!! ಇಂತಹ ಅಮ್ಮ–ಮಗಳ ಜುಗಲ್‌ಬಂದಿ ಮನೆಯಂಗಳದ ಎಲ್ಲರಿಗೂ ಒಮ್ಮೊಮ್ಮೆ ಅಸಾಧ್ಯ ಕಿರಿಕಿರಿ. ಮತ್ತೊಮ್ಮೆ ಭರಪೂರ ಮನೋರಂಜನೆ. ಆದರೆ ಅವರಿಬ್ಬರೂ ತಮ್ಮ ಏಕಾಂತದಲ್ಲಿ ತೆಕ್ಕೆ ಬೀಳುತ್ತಾರೆ. ಅಮ್ಮನೆಂದರೆ ಮಡಿಲು, ಮಗಳೆಂದರೆ ಜೋಗುಳ ಎನ್ನುವ ಹಾಗೆ.

ಚಿಕ್ಕಂದಿನಿಂದಲೂ ತನಗೆ ಸಿಕ್ಕ ಪಾಠದ ಜೊತೆಗೆ ತಾನು ಕಂಡುಂಡ ಪಠ್ಯವನ್ನೂ ಮಗಳಿಗೆ ಕಲಿಸತೊಡಗುತ್ತಾಳೆ ಅಮ್ಮ. ‘ಅಲ್ಲಿ ಕೂರಬೇಡ, ಇಲ್ಲಿ ನಿಲ್ಲಬೇಡ, ಅದೇನು? ಅಷ್ಟು ಜೋರು ನಗು, ಅವರೊಂದಿಗೆಂತ ಮಾತು ನಿಂಗೆ, ಆರು ಗಂಟೆ ಒಳಗೆ ಮನೇಲಿರಬೇಕು, ಮೈ ಕಾಣೋ ಬಟ್ಟೆ ಹಾಕ್ಬೇಡ, ಚಂಡಿ ಹಾಗೆ ಕೂದಲೆಂತಕ್ಕೆ ಸೆಲುವೆರೆದುಕೊಂಡಿದೀಯಾ, ಗಂಡಸರ ಜೊತೆ ಮಾತು ಕಮ್ಮಿ ಮಾಡು, ಗಂಡು ಹುಡುಗರ ಬಟ್ಟೆ ಯಾಕೆ ಹಾಕ್ಕೊಳ್ತೀಯಾ?’ – ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತ ಪ್ರತಿಯೊಂದನ್ನೂ ನಿರ್ಬಂಧಿಸುತ್ತಾಳೆ, ನಿಯಂತ್ರಿಸತೊಡಗುತ್ತಾಳೆ ಅಮ್ಮ. ಇದೇ ಕಾರಣ ಅಮ್ಮ–ಮಗಳ ಜಗಳದ ಜುಗಲ್‌ಬಂದಿಗೂ ನಾಂದಿಯಾಗುತ್ತದೆ.

ಆದರೆ ಅದು ಹಾಗಲ್ಲ, ಅಮ್ಮ–ಮಗಳ ಸಂಬಂಧದ ಭಾವಕೋಶ ಬಹಳ ವಿಸ್ತೃತವಾದದ್ದು. ಅವರ ಜಗಳ ಹುಸಿಮುನಿಸಿನ ಮೊಟ್ಟೆಯೊಳಗಿನ ಅಪರಿಮಿತ ಪ್ರೀತಿ.

ಅಮ್ಮ ಮಾಡಬೇಡ ಅಂದದ್ದನ್ನೇ ಹಚ್ಚಿಕೊಂಡು, ಯಾಕೆ ಮಾಡಬಾರದೆಂದು? ಕೇಳುತ್ತಾಳೆ ಮಗಳು. ಅವಳನ್ನು ಸಮಾಧಾನಪಡಿಸುವಂಥ ಉತ್ತರಗಳಿಲ್ಲ ಅಮ್ಮನಲ್ಲಿ. ಚಡಪಡಿಸುತ್ತಾಳೆ. ತನ್ನ ನಾಲಗೆ, ಗಂಟಲು, ಹೃದಯ, ಮೆದುಳು – ಎಲ್ಲೆಲ್ಲೂ ಬೆದಕುತ್ತಾಳೆ. ಊಹ್ಞೂ! ಎಲ್ಲೆಂದರೆ ಎಲ್ಲೂ ಇಲ್ಲ. ಇರುವುದೆಲ್ಲ ಒಡೆದ ಕನ್ನಡಿಯೊಳಗಿನ ಗಂಟಿನಂತೆ ಚದುರಿ ಹಂಚಿಹೋದ ಚಿತ್ರಗಳು. ಈಗ ಮಗಳನ್ನು ಸಮಾಧಾನಿಸಲೇ ಬೇಕು.

ಇಂಚಿಂಚೆ ಹೊರಬರತೊಡಗುತ್ತಾಳೆ. ಕೊನೆಗೆ ಯಾರೊಂದಿಗೂ, ಯಾವುದೇ ಕಾರಣಕ್ಕೂ ಪೊರೆ ಕಳಚದವಳು ಮಗಳೆದುರು ಬಟಾಬಯಲಾಗಿ ನಿಲ್ಲುತ್ತಾಳೆ. ಮಗಳೆಂದರೆ ಸಾಯುವಷ್ಟು ಪ್ರೀತಿ ಅವಳಿಗೆ. ಹೆಣ್ಣುಮಗುವೇ ಬೇಡ ಎನ್ನುವ ಅವಳ ಆಂತರ್ಯದಲ್ಲಿ ಗಂಡುಮಗುವಿನ ಮೇಲಿನ ಮೋಹಕ್ಕಿಂತ ತನ್ನ ಸುಕುಮಾರಿ ಈ ದುಷ್ಟ ಜಗತ್ತಿಗೆ ಬರುವುದೇ ಬೇಡ ಎನ್ನುವ ಕಕ್ಕುಲಾತಿಯ ಭಾರವೇ ಹೆಚ್ಚು. 

ಮಗಳು ಅರಿಯಬೇಕು ಅಮ್ಮನೊಳಗಿನ ಅಮ್ಮನನ್ನು. ಆವಾಹಿಸಿಕೊಳ್ಳಬೇಕು ಅವಳನ್ನು ಅವಳಂತಾಗಲು. ಮಗಳೋ ಅವಳೂ ಅಮ್ಮನಂತವಳು. ಅಮ್ಮನನ್ನು ಅನುಕರಿಸಿ ಬೆಳೆದ ಅಮ್ಮನ ಪಡಿಯಚ್ಚು. ಅಮ್ಮನಂತೆ ತಲೆ ಬಾಚಿಕೊಳ್ಳುತ್ತಾಳೆ, ಹೂ ಮುಡಿಯುತ್ತಾಳೆ, ತುಂಡು ಬಟ್ಟೆಯನ್ನೇ ಸೀರೆಯೆಂದು ಉಡುತ್ತಾಳೆ, ಗೆಜ್ಜೆ ಕಟ್ಟಿ ಮನೆ ತುಂಬಾ ರಿಂಗಣಿಸುತ್ತಾಳೆ, ಅಡುಗೆಯ ಆಟ, ಗಂಡ-ಹೆಂಡಿರ ಆಟ – ಎಲ್ಲವೂ ಅಮ್ಮನನ್ನು ಅನುಕರಿಸಲು ಮಾಡಿದವುಗಳೇ. ನಡೆ–ನುಡಿ ಎಲ್ಲದರಲ್ಲೂ ‘ನೂಲಿನಂತೆ ಸೀರೆ ಅಮ್ಮನಂತೆ ಮಗಳು’ ಎಂಬಂತೆ ಅಮ್ಮನ ಮಗಳು. ಆದರೂ ಅವಳು ಅಮ್ಮನಲ್ಲ. ಆದರೆ ಅಮ್ಮ ಒಮ್ಮೆ ಬರಿದೆ ಮಗಳಾಗಿದ್ದವಳು. ಮಗಳತನ ಅವಳಿಗೆ ಗೊತ್ತು. ಅದರ ಮುಗ್ಧತೆ, ಅಬೋಧತೆಯ ಜೊತೆಗೆ ಎಡವಿಸಲಿಕ್ಕೆಂದೇ ಎಡತಾಕುವ ಎಡರುತೊಡರುಗಳು. ಎಲ್ಲದರ ಪರಿವೆಯೂ ಅವಳಿಗಿದೆ.

ತನ್ನ ಮಗಳಿಗೆ ಸಣ್ಣದಾಗಿ ತರಚುವುದೂ ಅವಳಿಗಿಷ್ಟವಿಲ್ಲ. ಹೆಣ್ಣನ್ನು ಹಣ್ಣಿನಂತೆ ಹಂಚಿಕೊಂಡವರ ಕಥೆಯನ್ನು ಧರ್ಮವೆಂದುಕೊಂಡ ನೆಲದಲ್ಲಿ ಮಗಳನ್ನು ಗರ್ಭದಲ್ಲಿದ್ದಂತೇ ನೋಡಿಕೊಳ್ಳುವ ದರ್ದನ್ನು ತಪವೆಂಬಂತೆ ಹೆಗಲೇರಿಸಿಕೊಳ್ಳುತ್ತಾಳೆ. ಅವಳನ್ನೊಂದು ಬೆಚ್ಚನೆಯ ಗೂಡಿಗೆ ಸೇರಿಸಿಯೇ ದಣಿವಾರಿಸಿಕೊಳ್ಳುತ್ತಾಳವಳು.

ಇನ್ನು ಮಗಳ ಸರದಿ... ಅಮ್ಮನಂತಾಡುತ್ತಿದ್ದವಳಿಗೀಗ ಅಮ್ಮನಾಗುವುದು ಎಂದರೆ ಏನು – ಎನ್ನುವುದರ ಅರಿವಾಗತೊಡಗುತ್ತದೆ. ಕಣ್ಣಲ್ಲಿ ನೀರಿಟ್ಟುಕೊಂಡು ಸುಳ್ಳೆಪಳ್ಳೆ ನಗೆ ತರಿಸಿಕೊಳ್ಳಲಿ ಹೇಗೆ? ಒಳಗೆ ಅಸಾಧ್ಯ ನೋವಿಟ್ಟುಕೊಂಡು ಚುಚ್ಚುವ ಮಾತುಗಳ ಸಹಿಸಲಿ ಹೇಗೆ? ತನು ದಣಿದಿದ್ದರೂ ತನಗೆಂತದ್ದೂ ಆಗಿಲ್ಲವಂತ ಹೇಳುವುದು ಹೇಗೆ? ಕಾಯಿಲೆಯಲ್ಲೂ ತನ್ನವರಿಗೆ ಮಾಡಿ ಉಣಬಡಿಸಿ ಕಾಪಿಡಲಿ ಹೇಗೆ? ಎಲ್ಲಕ್ಕೂ ಉತ್ತರವಾಗಿ ಕಣ್ಮುಂದೆ ಸುಳಿವವಳು ಅಮ್ಮ.

ಮಗಳೀಗ ಹಡೆದೂ ಅಮ್ಮನಾಗಿದ್ದಾಳೆ. ಅವಳೀಗ ತನ್ನಿಷ್ಟದ ಮೊಸರು ತನ್ನ ಮಗಳಿಗೂ ಇಷ್ಟವೆನ್ನುವ ಕಾರಣಕ್ಕೆ ತನಗದು ಇಷ್ಟವೇ ಇಲ್ಲವೆಂದು ಹಸಿಹಸಿ ಸುಳ್ಳು ಹೇಳಿ ಮಗಳಿಗೆ ತಿನ್ನಿಸುತ್ತಾಳೆ. ಗಂಟೆ ಹನ್ನೊಂದಾದರೂ ಅವಳಿಗೆ ಹಸಿವಾಗುವುದೇ ಇಲ್ಲ; ಸರಿ ರಾತ್ರಿಯವರೆಗೂ ಅಡುಗೆಮನೆಯಲ್ಲೇ ನಿಲ್ಲುತ್ತಾಳೆ. ಮತ್ತೆ ಬೆಳ್ಳಂಬೆಳಗ್ಗೆ ಅಡುಗೆಮನೆಯಲ್ಲಿ ಹಾಜರ್. ಕೇಳಿದರೆ ನನಗೆ ನಿದ್ದೆಯೇ ಬರುವುದಿಲ್ಲ ಎನ್ನುತ್ತಾಳೆ. ಇದೆಲ್ಲ ತಾಳ್ಮೆ ಅಮ್ಮನದ್ದೇ. ಮಗಳಿಗದು ರುಜುವಾತಾಗಿದೆ.

ಅಮ್ಮ ಹೇಳಿಕೊಟ್ಟದ್ದಕ್ಕಿಂತಲೂ ಭಿನ್ನವಾಗಿ ಎದೆಗಿಳಿದಿದ್ದಾಳೆ. ಅದು ಅವಳ ಭಾಷಣವಲ್ಲ, ಹೃದಯದ ಭಾಷೆ. ಅದು ಯಾವಾಗ ಅವಳು ನನ್ನೊಳಗೆ ಈ ರೀತಿ ಇಳಿದಿದ್ದು? ಪ್ರಶ್ನಿಸಿಕೊಳ್ಳುವ ಮಗಳಿಗೆ ತನ್ನ ಮೇಲೆ ತನಗೇ ಗುಮಾನಿ. ನಿಧಾನಿ ಅಮ್ಮ ಮುಖವಾಗಿ, ದನಿಯಾಗಿ ಹೊರ ಹೊಮ್ಮಿದ್ದಕ್ಕಿಂತಲೂ ಕಾಲ್ಗೆಜ್ಜೆಯ ಘಲುವಾಗಿ, ಕೈಬಳೆಯ ಕಿಂಕಿಣಿಯಾಗಿ, ನಿಟ್ಟುಸಿರ ಸದ್ದಾಗಿ ತಾಕಿದವಳು. ಮಗಳು ಅಮ್ಮನ ಹಾದಿಗೆ ಮೆಲುವಾಗಿ ಇಳಿಯುತ್ತಾಳೆ ತೊಡರುತ್ತ ಕೊನೆಗೆ ದೃಢವಾಗಿ ಎದೆಯುಬ್ಬಿಸಿ ನಡೆಯತೊಡಗುತ್ತಾಳೆ. ಹಾಗೆ ಸಾಗುತ್ತಾ ಸಾಗುತ್ತಾ ಅಮ್ಮನೇ ಆಗಿಬಿಡುತ್ತಾಳೆ.

ಮಗಳು ತನ್ನ ಬಟ್ಟೆಯ ಹಿಂಬದಿ ಮೊದಲ ಬಾರಿಗೆ ಕೆಂಪಾದಾಗ ಹೇಳಲು ಓಡಿದ್ದು ಅಮ್ಮನಲ್ಲಿಗೆ. ತಿಂಗಳ ತಾಪತ್ರಯದಲ್ಲಿ ಮದ್ದು, ಕಷಾಯ ಎಂದು ಕುಡಿಸಿ ಕಾಲು ನೀವುತ್ತಿದ್ದವಳೂ ಇದೇ ಅಮ್ಮನೇ. ಹುಡುಗನೊಬ್ಬ ಬೆನ್ನು ಬಿದ್ದಿದ್ದಾನೆಂದು ಹೇಳಿಕೊಂಡದ್ದೂ ಅವಳಲ್ಲಿಯೇ. ಕೊನೆಗೆ ತನ್ನ ಪ್ರೀತಿಯ ರಾಜಕುಮಾರನ ಹೆಸರನ್ನು ಮೊದಲ ಬಾರಿ ಉಸುರಿದ್ದೂ ಅವಳ ಕಿವಿಯಲ್ಲಿಯೇ. ಅವಳು ಅಮ್ಮನಲ್ಲ ಗೆಳತಿ. ಈಗ ಮಗಳ ಸರದಿ ಬಂದಿರುವಾಗ ಆತ್ಮವಿಶ್ವಾಸವಾಗಿ ಆವರಿಸಿದವಳೂ ಅವಳೇ. ಅವರಿಬ್ಬರದೊಂದು ಅಪರೂಪದ ಜೋಡಿ. ಅಮ್ಮನೆಂದರೆ ಮಡಿಲು. ಮಗಳೆಂದರೆ ಜೋಗುಳ ಎನ್ನುವ ಹಾಗೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT