ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಕ್ಕುಗಳಿಗೆ ನಿರಂತರ ಚ್ಯುತಿ

ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ
Last Updated 23 ಮಾರ್ಚ್ 2018, 12:38 IST
ಅಕ್ಷರ ಗಾತ್ರ

ಶಿಕಾರಿಪುರ: ಸಮಾನತೆಯನ್ನು ಸಂವಿಧಾನ ನೀಡಿದರೂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ಬರುವಂತಹ ಪರಿಸ್ಥಿತಿ ಇನ್ನೂ ಸಮಾಜದಲ್ಲಿ ಇದೆ ಎಂದು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಿತ್ತಲ ಗ್ರಾಮದಲ್ಲಿ ಗುರುವಾರ ಮಹಿಳಾ ದಿನಾಚರಣೆ ಪ್ರಯುಕ್ತ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ಬಸವೇಶ್ವರ ಸಹಕಾರಿ ಒಕ್ಕೂಟ, ಪರಿಸರ ಪ್ರವಾಸೋದ್ಯಮ ಸಂಸ್ಥೆ ಹಾಗೂ ಹಿತ್ತಲ ಗ್ರಾಮ ಪಂಚಾಯ್ತಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಯ ನಿಯಮಗಳನ್ನು ಇನ್ನೂ ಬದಲಾಯಿಸಲು ಸಾಧ್ಯವಾಗಿಲ್ಲ. ಪುರುಷರು ತಾವು ಹೊಂದಿದ್ದ
ಸೌಲಭ್ಯ ಹಾಗೂ ಹಕ್ಕುಗಳನ್ನು ಕಳೆದುಕೊಳ್ಳಲು ತಯಾರಿಲ್ಲ. ಈಗಲೂ ಮನೆಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ ನಿಂತಿಲ್ಲ ಎಂದು ಹೇಳಿದರು.

ಪ್ರಸ್ತುತ ಮಹಿಳೆ ಮನೆ ಒಳಗೆ ಹೊರಗೆ ಪುರುಷನಿಗೆ ಸರಿಸಮವಾಗಿ ದುಡಿಯುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಪುರುಷರು ಮಹಿಳೆಯರಿಗೆ ಸಹಕಾರ ನೀಡಬೇಕು. ಸ್ತ್ರೀ ಸಬಲೀಕರಣ ರಾಷ್ಟ್ರದ ಅಭಿವೃದ್ಧಿಗೆ ಪೂರಕ. ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು ಮಹಿಳೆಯರನ್ನು ತಲುಪುವಂತಾಗಬೇಕು ಎಂದು ಸಲಹೆ ನೀಡಿದರು.

ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಅಲ್ಲಮಪ್ರಭು, ಅಕ್ಕಮಹಾದೇವಿ, ಅಜಗಣ್ಣ, ಮುಕ್ತಾಯಕ್ಕ, ಸತ್ಯಕ್ಕ ಈ ತಾಲ್ಲೂಕಿನಲ್ಲಿ ಜನ್ಮತಾಳಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ದೇಶದಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿದರು.

ಸಮ್ಮೇಳನ ಉದ್ಘಾಟಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎ. ಪರಮೇಶ್ವರಪ್ಪ ಮಾತನಾಡಿ, ‘ಒಂದು ಮಗು ನಾಡಿನ ಉತ್ತಮ ಪ್ರಜೆಯಾಗಲು ಮಹಿಳೆ ಕಾರಣವಾಗುತ್ತಾಳೆ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ಪುರುಷನಿಗೆ ಸರಿಸಮವಾಗಿ ಬೆಳವಣಿಗೆ ಹೊಂದುತ್ತಿದ್ದಾಳೆ ಎಂದು ಶ್ಲಾಘಿಸಿದ ಅವರು, ಮಹಿಳೆಯರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಬಾರದು’ ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕವಿ ಮನಸ್ಸು ಇರುತ್ತದೆ. ಈ ಕವಿ ಮನಸ್ಸಿಗೆ ಬರವಣಿಗೆ ರೂಪ ನೀಡಬೇಕು. ಮಹಿಳೆಯರು ಸಾಹಿತ್ಯ ಕ್ಷೇತ್ರದ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಮಹಿಳಾ ಸಾಹಿತಿಗಳಿಗೆ ಹೆಚ್ಚು ಪ್ರಾಮುಖ್ಯ ದೊರೆಯಬೇಕು. ಅವರಿಗೆ ಜ್ಞಾನಪೀಠ ಬರುವಂತಾಗಬೇಕು’ ಎಂದು ಹೇಳಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂಚನಾಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಮತಾಸಾಲಿ ಗದಿಗೆಪ್ಪ, ರೇಣುಕಾ ಹನುಮಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜಪ್ಪ, ಉಪಾಧ್ಯಕ್ಷೆ ಚಂದ್ರಿಬಾಯಿ, ಕವಯತ್ರಿ ಪುಷ್ಪಲತಾ ಮಂಜಾಚಾರ್‌, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕಾನೂರು ಮಲ್ಲಿಕಾರ್ಜುನ್, ಗೌರವಾಧ್ಯಕ್ಷ ಬಿ.ಡಿ. ಭೂಕಾಂತ್‌, ಪದಾಧಿಕಾರಿಗಳಾದ ಮಂಜಾಚಾರ್, ನಾಗರಾಜ್‌, ಬಿ.ವಿ. ಕೊಪ್ಪದ್‌, ಪುಟ್ಟಪ್ಪಗೌಡ್ರು, ಸುಭಾಶ್ಚಂದ್ರ ಸ್ಥಾನಿಕ್‌, ಜಯಣ್ಣ, ಚುರ್ಚಿಗುಂಡಿ ಶಿವಪ್ಪ, ಬೇಗೂರು ಶಿವಪ್ಪ, ಚಂದ್ರಕಲಾ, ಸವಿತಾ ಸುರೇಶ್‌ ಉಪಸ್ಥಿತರಿದ್ದರು.

ಸಮ್ಮೇಳನ ಉದ್ಘಾಟನೆ ಮುನ್ನ ಸರ್ವಾಧ್ಯಕ್ಷೆ ಡಾ.ರಾಜೇಶ್ವರಿ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಸಮ್ಮೇಳನದಲ್ಲಿ ‘ಮಹಿಳೆ ಅಂದು –ಇಂದು’ ಹಾಗೂ ‘ಜಾನಪದ ಹಾಗೂ ಸಾಂಸ್ಕೃತಿಕ ಗೋಷ್ಠಿ’ ವಿಷಯ ಕುರಿತು ಗೋಷ್ಠಿಗಳು ನಡೆದವು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT