ಗುರುವಾರ , ಏಪ್ರಿಲ್ 9, 2020
19 °C

ಲಕ್ಷ್ಮಿ ಬಾಂಬ್‌ನ ಬ್ರೇಕಿಂಗ್‌ ನ್ಯೂಸ್‌...

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಲಕ್ಷ್ಮಿ ಬಾಂಬ್‌ನ ಬ್ರೇಕಿಂಗ್‌ ನ್ಯೂಸ್‌...

ಇನ್ನೂ ಹಾಸಿಗೆಯಲ್ಲಿ ಇರುವಾಗಲೇ ಫೋನ್‌ ಬಡ್ಕೊಳಾಕತ್ತಿತ್ತು. ಕಣ್ಣುಜ್ಜಿಕೊ‌ಳ್ಳುತ್ತಲೇ ಕೈಗೆತ್ತಿಕೊಂಡೆ. ಏನ್‌ ಬ್ರೇಕಿಂಗ್‌ ನ್ಯೂಸ್‌ ಕಾದಿದೆಯೋ ಎಂಬ ಅಂಜಿಕೆಯಿಂದಲೇ ‘ಹಲೋ’ ಎಂದೆ.

‘ಏಯ್‌, ಪೇಪರ್‌ ನೋಡಿ ಏನ್‌. ಇವತ್ತ ಸಂಜೀಕ್ ನಮ್ಮ ಸಾಹೇಬ್ರು ಬ್ರೇಕಿಂಗ್‌ ನ್ಯೂಸ್‌ ಕೊಡ್ತಾರಂತ್ ಸುದ್ದಿ ಬಂದದ. ಕೆಲ ಪೇಪರ್‌ನವ್ರು ಅದನ್ನ ತಮ್ಮ ವಿಶೇಷ ಸುದ್ದಿ ಅಂತಾನೂ ಬರಕೊಂಡಾರ್‌, ನಿನಗೇನರ್‌ ಚೂರ್‌ ಪಾರ್‌ ಗೊತ್ತಿದ್ರ ನಂಗೂ ಸ್ವಲ್ಪು ಹೇಳು’ ಎಂದು ಪ್ರಭ್ಯಾ ಗೋಗರೆದ.

‘ಏಯ್‌, ಮಾರಾಯಾ, ನಾ ಇನ್ನೂ ಹಾಸ್ಗ್ಯಾಗ್‌s ಅದೀನಿ. ಯಾವ್‌ ಬ್ರೇಕಿಂಗ್‌ ನ್ಯೂಸೂ ನಂಗೊತ್ತಿಲ್ಲ, ಬೆಳಗಿನ ಸಕ್ರಿ ನಿದ್ದಿಗಿ ಬ್ರೇಕ್‌ ಹಾಕ್ದಿ ನೋಡ್‌. ಯಾರ್‌ ಮುಖಾ ನೋಡಿ ಎದ್ದಿ’ ಎಂದು ಬೈದೆ.

ಬೈಗುಳಕ್ಕೆ ಸೊಪ್ಪು ಹಾಕದೆ, ‘ಸಂಜೀಕ್‌ ಐದಕ್ಕ ಬರ್ತೀನಿ, ರೆಡಿಯಾಗಿರು. ಇನ್ನೂ ಭಾಳ್‌ ಮಂದಿಗೆ ಬ್ರೇಕಿಂಗ್‌ ನ್ಯೂಸ್‌ ಕೊಡುದದ’ ಎಂದು ಹೇಳುತ್ತಲೇ ಫೋನ್‌ ಕಟ್‌ ಮಾಡಿದ.

ಪೋನೆ ಐದಕ್ಕs ಸರಿಯಾಗಿ ಮನೆ ಬಾಗಿಲ್ದಾಗ್‌ ಅಂವಾ ಹಾಜರಾಗಿದ್ದ. ‘ಬಾರಪ್ಪಾ ಬಾ. ಎಲ್ಲದ ಬ್ರೇಕಿಂಗ್‌ ನ್ಯೂಸ್‌’ ಎಂದೆ.

‘ಏಯ್‌ ಟಿವಿನರs ಹಾಕೋ’ ಎಂದು ದಬಾಯಿಸಿದ. ಅಲ್ಲಿ ನೋಡಿದ್ರ ಏನೂ ಇದ್ದಿರಲಿಲ್ಲ. ಯಾವ್‌ ಚಾನೆಲ್‌ ತಿರುವಿದ್ರೂ ಯಾವ್ದೂ ಬ್ರೇಕಿಂಗ್ ನ್ಯೂಸ್‌ ಬರ್ತಿದ್ದಿಲ್ಲ. ಬ್ರೇಕಿಂಗ್‌ ನ್ಯೂಸ್‌ ಠುಸ್‌ ಪಟಾಕಿ ಅನ್ನೋದು ಗೊತ್ತಾಗತ್ತಿದ್ಹಂಗ್‌ ಪ್ರಭ್ಯಾನ ಮುಖ ಸುಟ್ಟ ಬದನೆಕಾಯಿ ಅಂತಾಗಿತ್ತು. ಮಾತನಾಡದೆ ಕುಂಡೆ ಸುಟ್ಟ ಬೆಕ್ಕಿನಂತೆ ಹಿಂದೆ ಕೈಕಟ್ಟಿಕೊಂಡು ಅತ್ತಿಂದಿತ್ತ ಓಡಾಡತೊಡಗಿದ.

ಅವ್ನ ಮುಖಾ ನೋಡಿ ಪಾಪ ಅನುಸ್ತು. ಸ್ವಲ್ಪ ಹವಾಸಿರಿ ಹೋಗಿ ಬಂದ್ರ ಸರಿ ಹೋಗ್ತಾನ್‌ ಅಂತ, ‘ಬಜಾರ್‌ದಾಗ್‌ ಹೋಗಿ ಚಾ ಕುಡ್ದು ಬರೋಣ ನಡಿ’ ಎಂದು ಎಳೆದುಕೊಂಡು ಹೊಂಟೆ. ಬಜಾರ್‌ ದಾರೀಲಿ ಹೊಸ ಟೆಂಟ್‌ವೊಂದ್‌ ಕಣ್ಣಿಗೆ ಬಿತ್ತು. ಹೊರಗ್‌ ತೂಗು ಹಾಕಿದ್ದ ಕುಂಡಲಿ ಭವಿಷ್ಯದ ಬೋರ್ಡ್‌ ನೋಡ್ತಾ ಇಬ್ರೂ ಕುತೂಹಲದಿಂದ ಹತ್ರಾ ಹೋದೆವು.

ಅಷ್ಟೊತ್ತಿಗೆ, ‘ಕೃತಕ ಬುದ್ಧಿಮತ್ತೆಗಿಂತ ಕುಂಡಲೀನs ಮೇಲು’ ಎಂದು ಹೇಳಿಕೆ ಕೊಟ್ಟಿದ್ದ ಕೌಶಲಾಭಿವೃದ್ಧಿ ಸಚಿವರು ಇತ್ತ ಕಡೆಯೇ ಧಾವಿಸಿ ಬರುತ್ತಿರುವುದು ನೋಡಿ ಇಬ್ಬರೂ ಟೆಂಟ್‌ ಒಳಗೆ ನುಗ್ಗಿ ಮರೆಯಲ್ಲಿ ನಿಂತೆವು.

ಶಿಷ್ಯ ಓಡುತ್ತ ಹೋಗಿ, ಸಚಿವರ ಬರುವಿಕೆಯನ್ನು ಕುಂಡಲಿ ಸ್ವಾಮಿಯ ಕಿವಿಯಲ್ಲಿ ಉಸುರಿದ.

‘ಓಹೋ ಬರಬೇಕು, ಬರಬೇಕು. ಏನ್‌ ಸಚಿವರ ಸವಾರಿ ಇತ್ತ ಕಡೆ ಬಂದಂಗ್ಹದ. ಡಾಕ್ಟ್ರ ಹತ್ತಿರ ಹೋಗುದನ್ನ ಮರ್ತು ಈ ಕಡೆ ಹೆಜ್ಜಿ ಹಾಕದಾಂಗ್‌ ಕಾಣಸ್ತದ’ ಎಂದು ಸ್ವಾಮಿ ದೇಶಾವರಿ ನಗೆ ಬೀರುತ್ತ ಸಚಿವರ ಕಾಲೆಳೆದ.

‘ನನ್ನ ಕುಂಡಲಿ ನೋಡಿ ಭವಿಷ್ಯ ಹೇಳಬೇಕಲ್ಲ’ ಎಂದು ಆಸಾಮಿ ದೈನ್ಯದಿಂದ ಕೇಳಿಕೊಂಡ.

‘ನೋಡಪಾ, ಮನುಷ್ಯರು ದೇವರಾಗಲು ಪ್ರಯತ್ನಿಸಬೇಕು’ ಎಂದು ಬೆಳಗಾವ್ಯಾಗ್‌ ನೀನs ಹೇಳ್ಕಿ ಕೊಟ್ಟಿದ್ಯಲ್ಲ. ಅದ್ಕು ಮೊದಲು, ದೇವರ ಸಮಾನರಾದ ಡಾಕ್ಟ್ರ ಮ್ಯಾಲೆ ನೀನೇ ಕೈಮಾಡಿದ್ದಿ. ಆಗ ಮನ್ಶಾ ಆಗಿದ್ದಿ ಅಥ್ವಾ ಮತ್ತೇನರ ಆಗಿದ್ದಿ. ಮಾತಾಡು ಮುಂದ ಮೈಮ್ಯಾಲೆ ಖಬರ್‌ ಇರ್ಬೇಕು ತಿಳ್ಕೊ. ಒಂದ್ ವ್ಯಾಳೆ ನಿಮ್ಮ ಪಕ್ಷನ... ಅಧಿಕಾರಕ್ಕೆ ಬಂದ್ರ ಒಂದ್‌ ವರ್ಷದ ನಂತರ ಯಡಿಯೂರಪ್ಪ ಅವರನ್ನ ಬದಿಗೆ ಸರಿಸಿ ನಿನ್ನs ಸಿಎಂ ಮಾಡು ಪ್ಲ್ಯಾನ್‌ ಅದ ಅಂತ ಗರ್ಭಗುಡಿ ಗ್ವಾಡಿಗಳು ಪಿಸುಗುಟ್ಟಾಕತ್ತಾವ್‌. ಸ್ವಲ್ಪ ನಾಲ್ಗಿ ಮ್ಯಾಲ್‌ ಹಿಡಿತ ಇರ್ಲಿ. ನಿನ್ನ ಭವಿಷ್ಯ ಛಲೋ ಅದ’ ಎಂದು ಬುದ್ಧಿವಾದ ಹೇಳಿ ಕಳಿಸಿದ.

ಕೌಶಲಾಭಿವೃದ್ಧಿ ಸಚಿವರು ಹೊರಹೋಗುತ್ತಿದ್ದಂತೆ, ‘ಗುರುಗಳೇ, ಬ್ರೇಕಿಂಗ್‌ ನ್ಯೂಸ್‌, ಬ್ರೇಕಿಂಗ್‌ ನ್ಯೂಸ್‌ ಬಂತು’ ಎಂದು ಶಿಷ್ಯ ಗಮನ ಸೆಳೆದ.

‘ಲೇ, ಮಂಗ್ಯಾನ ಮಗನ... ಚಾನೆಲ್‌ಗಳು ಬಡ್ಕೊಂಡ್ಹಂಗ್‌ ಬರೀ ಅದ್ನ ಬಡ್ಕೊಬ್ಯಾಡಾ. ಗೊತ್ತಾಯ್ತು. ಯಾರ್‌ ಬರಾಕತ್ತಾರಂತ. ಒಂದ್‌ ಮಾತ್‌ ತಲ್ಯಾಗಿಟ್ಕೊ. ದಕ್ಷಿಣೆ – ಗಿಕ್ಷಿಣೆಯನ್ನ ಚೆಕ್‌ ರೂಪದಾಗ್ ತಗೊಬ್ಯಾಡ ಮತ್ತ. ಭಾಳ್‌ ಹುಷಾರ್‌ದಾಗ್‌ ಇರು. ಇಲ್ಲಂದ್ರ ನನಗೂ ‘ಜೈಲು ಹಕ್ಕಿ ಹೆಸರು ಅಂಟ್ಕೊತದ’ ಎಂದು ದಬಾಯಿಸುತ್ತಿರುವಾಗಲೇ, ‘ಬ್ರೇಕಿಂಗ್‌ ಠುಸ್‌’ ಆಸಾಮಿ ಒಳಗೆ ಕಾಲಿಟ್ಟಿತು. ಸ್ವಾಮೀಜಿಯ ಮಾತು ಕೇಳಿಸಿಯೂ ಕೇಳಿಸಿಕೊಳ್ಳದಂತೆ ನಟಿಸುತ್ತಲೇ ಮತದಾರರ ಎದುರು ಬಲವಂತದಿಂದ ಬರಿಸಿಕೊಳ್ಳುವ ನಗು ಬರೆಸಿಕೊಂಡು ಮಾತಿಗೆ ಸುರುವಿಟ್ಟಿತು.

‘ನನ್ನ ಮುಖಾ, ಮೈಕಟ್ಟಿನ ಖದರ್‌, ವಯಸ್ಸು ನೋಡಿ ಸ್ವಲ್ಪ ನನ್ನ ಭವಿಷ್ಯಾ ಹೇಳ್ರಿ. ಉತ್ತರ ಪ್ರದೇಶ್‌ದಾಗಿನ ಉಪಚುನಾವಣಾ ಫಲಿತಾಂಶ ನೋಡಿದ್ರ ಈ ಅಮಿತ್‌ ಶಾ, ಯೋಗಿ ಆದಿತ್ಯನಾಥ ನೆಚ್ಚಿಕೊಂಡು ಕುಂತ್ರ ನಮ್ಮ ಕಥಿ ಮುಗಿದ್ಹಂಗs’ ಎಂದು ನಿಟ್ಟುಸಿರುಬಿಟ್ಟಿತು.

‘ಏಯ್‌, ಅದನ್ನೆಲ್ಲ ಯ್ಯಾಕ್‌ ತಲಿಗಿ ಹಚ್ಚಿಕೊಂಡ್ರಿ. ಪರಂ ಸೋಲಿಸಿದ್ರ ಆತಪಾ. ಏಕ್‌ ಮಾರ್‌ ದೋ ತುಕಡಾ (ಒಂದೇಟಿಗೆ ಎರಡು ತುಂಡು)’ ಎಂದು ಸ್ವಾಮೀಜಿ ಅ(ನ)ರ್ಥಗರ್ಭಿತವಾಗಿ ಹೇಳಿದ್ದು ಯಡ್ಡಿಯ ಮಡ್‌ ತಲಿಗೆ ಹೊಳಿಲಿಲ್ಲ.

‘ಏಯ್‌, ಸ್ವಲ್ಪ ಬಿಡಿಸಿ ಹೇಳ್ರಿ. ತಲಿ ಕೆಟ್‌ ಕೆರಾ ಹಿಡದೈತಿ’ ಎಂದು ತಲೆ ಕೆರೆದುಕೊಂಡ್ರು.

‘ಭಾಳ್‌ ಸಿಂಪಲ್‌ರ‍್ರೀ. ಪರಂ ಗೆದ್ರ ರಾಹುಲ್‌ ಗೆದ್ದಂಗ್ಹ, ರಾಹುಲ್‌ ಗೆದ್ರ ನಾ ಗೆದ್ದಂಗ್ಹs’ ಅಂತ ಸಿದ್ರಾಮಣ್ಣ ಹೇಳ್ಯಾನಿಲ್ಲ. ಅದ್ಕ ನಿಮ್ಮೆಲ್ಲ ಸಾಮರ್ಥ್ಯಾನ ಪಣಕ್ಕೊಡ್ಡಿ ಪರಂ ಸೋಲಿಸಿ ಬಿಡಿ. ಆಗ ನಿಮ್ಮ ರೊಟ್ಟಿ ಜಾರಿ ಏಕದಂ ತುಪ್ಪದಾಗ್‌ ಬೀಳತೈತಿ. ಪರಂ ಸೋತ್ರ ರಾಹುಲ್‌ ಸೋತಂಗ, ಸಿದ್ರಾಮೂ ಸೋತಂಗ.. ಗೆಲ್ಲೋದು ನೀವsss ಹ ಹ ಹಾ’ ಎಂದು ಕುಂಡಲಿ ಸ್ವಾಮಿ ಗಹಗಹಿಸಿ ನಕ್ಕ. ಯಡ್ಡಿಗೆ ಫಕ್ಕನೆ ಜ್ಞಾನೋದ

ಯವಾಯ್ತು. ಯುರೇಕಾ, ಯುರೇಕಾ ಎಂದು ಕೂಗುತ್ತ ಟೆಂಟ್‌ನಿಂದ ಹೊರ ಬಂದವರೇ ಕೊರಟಗೆರೆ ದಿಕ್ಕಿನತ್ತ ಓಡತೊಡಗಿದರು.

ಅಷ್ಟರಾಗ್‌ ಸ್ವಾಮೀಜಿ ಶಿಷ್ಯ, ಲಕ್ಷ್ಮೀ ಬಾಂಬ್‌, ಲಕ್ಷ್ಮೀ ಅಟಂ ಬಾಂಬ್‌ ಬರಾಕತ್ತೈತಿ ಎಂದು ಉಸುರಿದ. ಜತೆಗೆ,

‘ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ,

ಹೆಣ್ಣು ಮಾಯವೋ, ಹೊನ್ನು ಮಾಯವೋ,

ಮಣ್ಣು ಮಾಯವೋ ಕಣ್ಣು ಮುಚ್ಚಲು ಎಲ್ಲಾ ಮಾಯವೋ...

ಈಗ ಚುನಾವಣಾ ಮಾಯವೋ ಪ್ರಭುವೆ...’ ಎಂದು ಸಣ್ಣಗೆ ಹಳೆಯ ಹಾಡು ಗುನುಗುನಿಸುತ್ತಿದ್ದ.

‘ಬರಬೇಕು, ಬರಬೇಕು. ಡಬಲ್ ಧಮಾಕಾ ವೀರ. ಸಪ್ತ ಮಠಾಧೀಶರೂ ನಿದ್ದೆಯಲ್ಲೂ ಬ್ರೇಕಿಂಗ್‌ ಸುದ್ದಿಗೆ ಬೆಚ್ಚಿ ಬಿದ್ದು ಬಡಬಡಿಸುವಂತೆ ಮಾಡಿರುವ ಧೀರ. ಲಕ್ಷ್ಮೀವರ ‘ತೀರ್ಥ’ ಸ್ವಾಮಿಗಳೇ ಏನಿದು ನಿಮ್ಮ ಬಾಂಬ್‌ಗಳ ಸದ್ದು. ಚುನಾವಣೆಗೆ ನಿಲ್ಲುವ ಬಾಂಬ್‌ ಹಿಂದನ, ಅಷ್ಟಮಠಾಧೀಶರಿಗೂ ಮಕ್ಕಳಿವೆ’ ಎನ್ನುವ ಲಕ್ಷ್ಮೀ ಬಾಂಬ್‌ ಸಿಡಿಸಿದ ವೀರ ಪರಾಕ್ರಮಿಗೆ ಸ್ವಾಗತ, ಸುಸ್ವಾಗತ ಎಂದು ನಾಟಕೀಯವಾಗಿ ಹೇಳುತ್ತಲೇ ಬರಮಾಡಿಕೊಂಡ.

ಟೆಂಟ್‌ ಒಳಗೆ ಸುತ್ತಲೂ ಕಣ್ಣು ಬೀರುತ್ತ, ಕಳ್ಳ ನಗೆ ಬೀರಿದ ಸ್ವಾಮೀಜಿ, ‘ಎಲ್ಲಾ ಶ್ರೀಕೃಷ್ಣನ ಲೀಲಾವಿನೋದ. ನಂದಿಷ್ಟು ಕುಂಡ್ಲಿ ನೋಡ್ರಲಾ. ಎಲೆಕ್ಷನ್‌ದಾಗ್‌ ಗೆಲ್ತೀನಾ, ಪ್ರಮೋದ್‌ ಮಧ್ವರಾಜನ್ನ ಗೆಲ್ಲಿಸ್ತೀನಾ ಅನ್ನೋದನ್ನ ಸ್ವಲ್ಪಿ ಬಿಡಿಸಿ ಹೇಳ್ರಿ’ ಎಂದು ಬೇಡಿಕೊಂಡರು.

‘ಮಠಾಧೀಶರಿಗೆ ಮೀಸಲು ಮತಕ್ಷೇತ್ರ ಬೇಡಿಕೆ ಈಡೇರಿಸಿಕೊಂಡ್ರ ನಿಮ್ಮ ಗೆಲುವು ಭಾಳ್‌ ಸುಲಭ್‌ ಆಗ್ತೈತಿ. ಲಿಂಗಾಯತರು, ವೀರಶೈವರು, ಒಕ್ಕಲಿಗರು, ಕಾಗಿನೆಲೆ ಗುರುಗಳು ತಮ್ಮ, ತಮ್ಮ ಮಠಕ್ಕೊಂದು ಮತಕ್ಷೇತ್ರ ಕೇಳಿದ್ರ ವಿಧಾನಸೌಧ್‌ದಾಗ ಕಾವಿಧಾರಿಗಳೂ ಖಾದಿಧಾರಿಗಿಂತ್‌ ಸಖತ್‌ ಮಿಂಚ್‌ಬಹುದು ನೋಡ್‌’ ಎಂದು ಕುಂಡಲಿ ಸ್ವಾಮಿ ಪೂಸಿ ಹೊಡೆದ.

‘ಛಲೋ ಸಲಹಾ ಕೊಟ್ಟಿ ನೋಡ್‌ ಸ್ವಾಮಿ. ನಿನ್ನ ಮನಿ ತುಂಬ ಮಕ್ಕಳಾಗಲಿ. ಮೀಸಲು ಮತಕ್ಷೇತ್ರಕ್ಕ ನಮ್ಮ ಅನಂತಕುಮಾರ್‌ಗೆ ಗಂಟ್‌ ಬೀಳಬೇಕು. ಅಂವಾ ಹೆಂಗೂ ಸಂವಿಧಾನ ಬದಲ್‌ ಮಾಡಾಕ್‌ ಹೊಂಟಾನ. ಕಬ್ಣಾ ಕಾದಾಗs ಬಡಿಬೇಕ್‌’ ಎಂದು ಹೇಳುತ್ತಲೇ ಪಂಚೆ ಸರಿಪಡಿಸಿಕೊಂಡು ಹೊರನಡೆದರು.

‘ರೀ ಏಳ್ರಿ. ಸೂರ್ಯಾ ತಿರಿಗಿ ಮ್ಯಾಲೆ ಬಂದಾನ್‌. ಕುಂಡ(ಡಿ)ಲಿ ಮ್ಯಾಲ್‌ ಬಿಸಿಲ್‌ ಬಿದ್ರು ಮೈಮ್ಯಾಲೆ ಖಬರ್‌ ಇಲ್ಲ ನೋಡ್‌ ಈ ಖಬರ್‌ಗೇಡಿಗೆ’ ಎಂದ ಹೆಂಡತಿಯ ಬ್ರೇಕಿಂಗ್‌ ಸ(ಸು)ದ್ದಿಗೆ ಸಡನ್ನಾಗಿ ಎಚ್ಚರಾತು. ಇಂಥಾ ಬ್ರೇಕಿಂಗ್‌ ಸುದ್ದಿಗಿಷ್ಟು ಬೆಂಕಿ ಹಾಕಾ ಎಂದು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಲೇ ಕೌದಿ ಮಡಚತೊಡಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)