ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುವನ್ನು ಕಾಪಾಡಿತು ಮೀನು!

Last Updated 31 ಜುಲೈ 2018, 11:58 IST
ಅಕ್ಷರ ಗಾತ್ರ

ಅಶ್ವಮೇಧಯಾಗಕ್ಕೆ ಸಿದ್ಧತೆಗಳು ನಡೆಯುವಷ್ಟರಲ್ಲಿ ಇದುವರೆಗಿನ ಕೆಲವು ವಿವರಗಳ ವಿಶ್ಲೇಷಣೆಯನ್ನು ನೋಡೋಣ. ಈ ಭೂಮಂಡಲವನ್ನು ಮೊದಲು ಆಳಿದ ಚಕ್ರವರ್ತಿ ಎಂದರೆ ಮನು. ಅವನಿಂದ ಆರಂಭಿಸಿ ಇಕ್ಷ್ವಾಕುವಂಶದ ಮಹಾರಾಜರು ಆಳ್ವಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ವಂಶದ ಈಗಿನ ಮಹಾರಾಜನೇ ದಶರಥ. ಅವನೇ ಈಗ ಕೋಸಲೆಯ ರಾಜ. ರಾಮಾಯಣದ ಆರಂಭವಾಗಿರುವುದು ಇಲ್ಲಿಂದ.

ನಮಗೆ ಮನುವಿನ ಹೆಸರು ಗೊತ್ತಿದೆ. ಆಗಾಗ ಬೌದ್ಧಿಕ ವಲಯಗಳಲ್ಲಿ ಚರ್ಚೆಗೆ ಆಹ್ವಾನವನ್ನು ನೀಡುತ್ತಲೇ ಇರುವ ಹೆಸರದು. ಆದರೆ ಆ ‘ಮನುವಾದ’ದ ಮನು ಈ ಮನುವಲ್ಲ! ಸ್ಮೃತಿಕಾರ ಮನು ಬೇರೆ; ಭೂಮಂಡಲದ ಮೊದಲ ಚಕ್ರವರ್ತಿ ಮನು ಬೇರೆ.

ಭಾರತೀಯರಿಗೆ ರಾಮಾಯಣವು ಮಹಾಕಾವ್ಯವೂ ಹೌದು, ಇತಿಹಾಸವೂ ಹೌದು, ಪುರಾಣವೂ ಹೌದು, ವೇದವೂ ಹೌದು. ಈ ಅಂಶವನ್ನು ರಾಮಾಯಣದ ಅಧ್ಯಯನದುದ್ದಕ್ಕೂ ನಾವು ಮರೆಯುವಂತಿಲ್ಲ. ‘ಇತಿಹಾಸ’ ಎಂದರೆ, ನಮ್ಮ ಕಾಲದ ಇತಿಹಾಸದ ಪರಿಕಲ್ಪನೆಯೊಂದಿಗೆ ರಾಮಾಯಾಣದ ಇತಿಹಾಸತ್ವವನ್ನು ಮುಖಾಮುಖಿ ಮಾಡಲಾಗದು. (ಇಂದಿನ ಇತಿಹಾಸದ ಲಕ್ಷಣದಲ್ಲೂ ಏಕಾಭಿಪ್ರಾಯವಿಲ್ಲವೆನ್ನಿ!) ಆಧುನಿಕ ಇತಿಹಾಸ ತನ್ನ ಎಣಿಕೆಗೆಂದು ಆರಿಸಿಕೊಳ್ಳುವ ಕಾಲದ ಮಾನದಂಡದ ರೂಪ ಸರಳರೇಖಾತ್ಮಕವಾದುದು (Linear). ಆದರೆ ಪ್ರಾಚೀನ ಭಾರತೀಯ ಪರಿಕಲ್ಪನೆಯಲ್ಲಿ ಅದರ ಸ್ವರೂಪವು ಚಕ್ರೀಯವಾಗಿರುತ್ತದೆ (Cyclic). ಭಾರತೀಯ ಪ್ರಜ್ಞಾವಾಹಿನಿಯಲ್ಲಿ ‘ಮೊದಲು’ ಎಂದು ಹೇಳುವುದು ದಿಟವಾದ ‘ಮೊದಲು’ ಅಲ್ಲವಷ್ಟೆ; ಅದು ಸಾಪೇಕ್ಷವಾದ ಒಕ್ಕಣೆ. 'What happens first is not necessarily the beginning' ಎನ್ನುವ ಮಾತು ಈ ಸಂದರ್ಭದಲ್ಲಿ ಅನ್ವಯವಾದೀತು. ಹೀಗಾಗಿ ಮನುವಿನಿಂದ ಈ ಭೂಮಿಯ ಆಳ್ವಿಕೆ ಆರಂಭವಾಯಿತು ಎಂದರೆ, ಅವನೇ ಮೊದಲ ‘ಮನು’ ಅಲ್ಲ!

ಒಟ್ಟು ಹದಿನಾಲ್ಕು ಮನುಗಳಿದ್ದಾರೆ ಎನ್ನುತ್ತದೆ ಪರಂಪರೆ. ಸ್ವಾಯಂಭುವ, ಸ್ವರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ, ವೈವಸ್ವತ, ಸೂರ್ಯಸಾವರ್ಣಿ, ಧರ್ಮಸಾವರ್ಣಿ, ದಕ್ಷಸಾವರ್ನಿ, ರುದ್ರಸಾವರ್ಣಿ, ಬ್ರಹ್ಮಸಾವರ್ಣಿ, ಇಂದ್ರಸಾವರ್ಣಿ ಮತ್ತು ವೇದಸಾವರ್ಣಿ – ಇವರೇ ಮನುಗಳು. ಒಂದೊಂದು ಮನ್ವಂತರಕ್ಕೆ ಒಬ್ಬೊಬ್ಬ ಮನು; ಇದು ವ್ಯವಸ್ಥೆ. ಚತುರ್ಮುಖಬ್ರಹ್ಮನ ಒಂದು ಹಗಲಿನಲ್ಲಿ ಈ ಹದಿನಾಲ್ಕು ಮನುಗಳೂ ಭೂಲೋಕವನ್ನು ಆಳುತ್ತಾರೆ. (ಮನ್ವಂತರ ಎಂದರೆ ಎಷ್ಟು ವರ್ಷಗಳು ಎಂಬ ಲೆಕ್ಕಾಚಾರವನ್ನು ಈ ಮೊದಲು ನೋಡಿದ್ದೇವೆ.) ಈಗ ಆರು ಮನ್ವಂತರಗಳು ಉರುಳಿ, ಏಳನೆಯದಾದ ವೈವಸ್ವತ ಮನ್ವಂತರ ನಡೆಯುತ್ತಿದೆ; ಎಂದರೆ ಈ ಮನ್ವಂತರದ ಚಕ್ರವರ್ತಿ ವೈವಸ್ವತ. ಅವನ ಮನ್ವಂತರದ ಬಳಿಕ ಮತ್ತೊಂದು, ಆಮೇಲೆ ಇನ್ನೊಂದು, ತರುವಾಯ ಮತ್ತೊಂದು – ಹೀಗೆ ಸೃಷ್ಟಿ–ಸ್ಥಿತಿ–ಲಯಗಳು ಚಕ್ರದಂತೆ ಸಾಗುತ್ತಲೇ ಇರುತ್ತವೆ.

ನಮ್ಮ ಕಾಲದ ಮನು, ಸೂರ್ಯನ ಮಗ. ‘ವೈವಸ್ವತ’ ಎಂದು ಅವನಿಗೆ ಹೆಸರು ಸಂದಿರುವುದು ಈ ಕಾರಣದಿಂದಲೇ. 'ವಿವಸ್ವಾನ್‌’ ಎಂದರೆ ಸೂರ್ಯ.

ವೈವಸ್ವತಮನುವಿನ ಉಲ್ಲೇಖ ವೇದವಾಙ್ಮಯದಲ್ಲೂ ಹಲವು ಪುರಾಣಗಳಲ್ಲೂ ಬಂದಿದೆ. ‘ಶತಪಥಬ್ರಾಹ್ಮಣ’ದಲ್ಲಿರುವ ಕಥೆಯು ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಮಹಾಭಾರತದಲ್ಲೂ ಕಾಣಿಸಿಕೊಳ್ಳುತ್ತದೆ.

ಮಹರ್ಷಿಮನುವು ವಿಶಾಲಾ ಎಂಬ ಅರಣ್ಯದಲ್ಲಿ ಒಂಟಿಕಾಲಿನಲ್ಲಿ ನಿಂತು ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದ. ಅವನು ಚೀರಿಣೀನದಿಯ ದಡದಲ್ಲಿ ತಪಸ್ಸನ್ನು ಆಚರಿಸುತ್ತಿದ್ದಾಗ ಒಂದು ದಿನ ಹೀಗಾಯಿತು: ನದಿಯಲ್ಲಿದ್ದ ಪುಟ್ಟ ಮೀನೊಂದು ಅವನೊಂದಿಗೆ ಮಾತನಾಡಿತು. ‘ಅಯ್ಯಾ ಮಹರ್ಷಿಯೇ! ನಾನೊಂದು ಪುಟ್ಟ ಮೀನು. ಈ ನದಿಯಲ್ಲಿರುವ ದೊಡ್ಡ ದೊಡ್ಡ ಮೀನುಗಳಿಂದ ನನಗೆ ಅಪಾಯ ಎದುರಾಗುತ್ತಿದೆ. ನನ್ನ ಜಾತಿಯ ದೊಡ್ಡವರಿಂದ ಭಯಪಡುತ್ತಿರುವ ನನ್ನನ್ನು ರಕ್ಷಿಸುವುದು ನಿನ್ನ ಕರ್ತವ್ಯ. ಬಲಹೀನರನ್ನು ಬಲವಂತರು ಹೀಗೆ ಪೀಡಿಸುವುದು ಬಹಳ ಹಿಂದಿನ ಕಾಲದಿಂದಲೇ ನಡೆದುಕೊಂಡ ಬಂದಿರುವ ಆಚಾರವೇ ಹೌದೆನ್ನು! ಈ ಅಲ್ಪಜೀವಿಯ ಮಾತನ್ನು ನಾನೇನು ಕೇಳುವುದು ಎಂದು ಉದಾಸೀನ ಮಾಡಬೇಡ. ಸರಿಯಾದ ಸಮಯದಲ್ಲಿ ನಾನೂ ಕೂಡ ನಿನಗೆ ನೆರವಾಗುವೆ’ ಎಂದಿತು, ಆ ಮೀನು.

ಮೀನಿನ ಮಾತುಗಳನ್ನು ಕೇಳಿ ವೈವಸ್ವತಮನುವಿನ ಮನಸ್ಸು ಕರುಣೆಯಿಂದ ಒದ್ದೆಯಾಯಿತು. ಅದನ್ನು ತನ್ನ ಬೊಗಸೆಯಲ್ಲಿ ಮೇಲೆತ್ತಿ ತನ್ನಲ್ಲಿದ್ದ ಮಣ್ಣಿನ ಪಾತ್ರೆಯಲ್ಲಿ ತೇಲಿಬಿಟ್ಟ. ಅದನ್ನು ತನ್ನ ಮಗುವಿನಂತೆಯೇ ಜೋಪಾನವಾಗಿ ನೋಡಿಕೊಳ್ಳುತ್ತಿದ್ದ. ಸ್ವಲ್ಪ ಸಮಯ ಕಳೆದ ಬಳಿಕ ಆ ಮೀನು ಪಾತ್ರೆಯನ್ನು ತುಂಬುವಷ್ಟು ದೊಡ್ಡದಾಗಿ ಬೆಳೆಯಿತು. ‘ಈ ಪಾತ್ರೆಯಲ್ಲಿ ನಾನು ಇರಲು ಕಷ್ಟವಾಗುತ್ತಿದೆ’ ಎಂದಿತು. ಮನು ಅದನ್ನು ಅಲ್ಲಿಂದ ಎತ್ತಿಕೊಂಡು ಹೋಗಿ ಒಂದು ದೊಡ್ಡ ಬಾವಿಯಲ್ಲಿ ಬಿಟ್ಟ. ಕೆಲವು ವರ್ಷಗಳ ಬಳಿಕ ಆ ಮೀನಿಗೆ ಬಾವಿಯೂ ಚಿಕ್ಕದಾಯಿತು. ‘ಇಲ್ಲಿರಲು ಕಷ್ಟವಾಗುತ್ತಿದೆ; ನನ್ನನ್ನು ವಿಶಾಲವಾದ ಗಂಗಾನದಿಯಲ್ಲಿ ಬಿಟ್ಟುಬಿಡು’ ಎಂದಿತು ಅದು. ಮನು ಹಾಗೆಯೇ ಮಾಡಿದ. ಹಲವು ವರ್ಷಗಳು ಉರುಳಿದವು. ಈಗ ಆ ಮೀನು ಗಂಗಾನದಿಯಷ್ಟು ದೊಡ್ಡದಾಗಿ ಬೆಳೆದಿತ್ತು. ಈ ಸಲ ತನ್ನನ್ನು ಸಮುದ್ರದಲ್ಲಿಯೇ ಬಿಡುವಂತೆ ಅದು ಮನುವನ್ನು ಪ್ರಾರ್ಥಿಸಿಕೊಂಡಿತು. ತನ್ನ ತಪಃಶಕ್ತಿಯಿಂದ ಮನು ಆ ಮತ್ಸ್ಯವನ್ನು ಸುಲಭವಾಗಿ ಒಯ್ದು ಸಮುದ್ರದಲ್ಲಿ ಬಿಟ್ಟ. ಆಗ ಅದು ಅವನನ್ನು ಉದ್ದೇಶಿಸಿ ‘ಮಹರ್ಷಿಯೇ! ನೀನು ತುಂಬ ಜೋಪಾನವಾಗಿಯೂ ಶ್ರದ್ಧೆಯಿಂದಲೂ ನನ್ನನ್ನು ರಕ್ಷಿಸಿರುವೆ. ಕಾಲ ಒದಗಿದಾಗ ನೀನೇನು ಮಾಡಬೇಕೆಂದು ಹೇಳುವೆನು, ಕೇಳು: ಇನ್ನು ಸ್ವಲ್ಪ ಕಾಲದಲ್ಲಿಯೇ ಈ ಭೂಮಿಯಲ್ಲಿ ಪ್ರಳಯ ಸಂಭವಿಸುತ್ತದೆ. ಈ ಪ್ರಳಯದಲ್ಲಿ ಯಾವುದೇ ಚರಾಚರಪ್ರಾಣಿಗಳೂ ಉಳಿಯುವುದಿಲ್ಲ. ಅಂಥ ಸಮಯದಲ್ಲಿ ನೀನೊಂದು ಸುಭದ್ರವಾದ ನಾವೆಯೊಂದನ್ನು ಸಿದ್ಧಗೊಳಿಸಿಕೋ. ಅದರಲ್ಲಿ ಸಪ್ತರ್ಷಿಗಳೂ ಇರತಕ್ಕದ್ದು. ಎಲ್ಲ ರೀತಿಯ ಬೀಜಗಳನ್ನೂ ನಾವೆಯಲ್ಲಿ ಎಚ್ಚರಿಕೆಯಿಂದ ಶೇಖರಿಸಿಡು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಕಾಯುತ್ತಿರು. ಆಗ ನಾನು ನಿನ್ನಲ್ಲಿಗೆ ಬರುತ್ತೇನೆ’ ಎಂದು ಹೇಳಿ ಸಮುದ್ರದ ಆಳಕ್ಕೆ ಹೊರಟುಹೋಯಿತು.

ಇದಾದ ಬಳಿಕ ಕೆಲವು ವರ್ಷಗಳು ಉರುಳಿದವು. ಆ ಮೀನು ಹೇಳಿದಂತೆ ಪ್ರಳಯದ ಲಕ್ಷಣಗಳು ಗೋಚರಿಸತೊಡಗಿದವು. ಅದು ಹೇಳಿದಂತೆ ನೌಕೆಯೊಂದನ್ನು ಮನು ಸಿದ್ಧಪಡಿಸಿಕೊಂಡ. ಮನುವನ್ನೂ ನೌಕೆಯನ್ನೂ ಆ ಮಹಾಮತ್ಸ್ಯವು ಜಲಪ್ರಳಯದಿಂದ ಕಾಪಾಡಿತು. ‘ಮತ್ತೊಮ್ಮೆ ಭೂಮಿಯಲ್ಲಿ ನಿನ್ನಿಂದ ಸೃಷ್ಟಿಕಾರ್ಯ ನಡೆಯಲಿ’ ಎಂದು ಅದು ಮನುವಿಗೆ ವರವನ್ನೂ ನೀಡಿತು. ಆ ಮಹಾಮತ್ಸ್ಯವೇ ಮಹಾವಿಷ್ಣು. ಹೀಗೆ ಇಡೀ ಸೃಷ್ಟಿಗೇ ಮೂಲಪುರುಷನಾದವನು ವೈವಸ್ವತಮನು. ಮತ್ಸ್ಯಾವತಾರ ಮೊದಲನೆಯ ಅವತಾರವೂ ಹೌದಷ್ಟೆ!

ಇಲ್ಲಿ ನಾವು ಗಮನಿಸಬೇಕಾದದ್ದು ಈ ಕಥೆಯ ಧ್ವನಿ. ಬೈಬಲ್‌ನಲ್ಲಿಯೂ ಇದಕ್ಕೆ ಸಂವಾದಿಯಾದ ಕಥೆಯಿದೆ.

‘ಮನು’ ಸೃಷ್ಟಿಯ ಮೊದಲ ಮಾನವ; ಅದು ವ್ಯಕ್ತಿಯ ಹೆಸರು ಅಲ್ಲ; ಅದೊಂದು ‘ಪದವಿ’ಗಯ ಸಂಕೇತ. ‘ಭೂಚರ, ಖೇಚರ, ಜಲಚರ ಪ್ರಾಣಿಗಳೆಲ್ಲವೂ ಮನುವಿನಿಂದ ಸೃಷ್ಟವಾದವು. ಆದರೂ ಈ ಎರಡು ಕಾಲಿನ ನರನಿಗೆ ‘ಮನುಷ್ಯ’, ‘ಮಾನವ’ ಎಂಬ ಹೆಸರು ಯೋಗರೂಢವಾಗಿ ನಿಂತಿದೆ. ಜ್ಞಾನಾರ್ಥಕ ‘ಮನ’ ಧಾತುವಿನಿಂದ ‘ಮನು’ ಶಬ್ದವು ನಿಷ್ಪನ್ನವಾಗಿದೆ. ‘ಮನಸ್‌’, ‘ಮನನ’ ಎಂಬ ಶಬ್ದಗಳ ಮೂಲವೂ ‘ಮನ’ ಧಾತುವೇ. ಮನೋಬಲ, ಮನನಶಕ್ತಿ ಈ ಮನುಷ್ಯನಲ್ಲಿ ಇತರ ಜಂತುಗಳಿಗಿಂತ ಅಧಿಕವಾಗಿ ಗೋಚರಿಸುವುದರಿಂದ ಮನುವಂಶದವನೆಂಬ ಕೀರ್ತಿಗೆ ಈ ನರನು ಪಾತ್ರನಾಗಿದ್ದಾನೆ. ಇಂಗ್ಲಿಷಿನಲ್ಲಿರುವ MAN ಶಬ್ದದ ಮೂಲವೂ ‘ಮಾನವ’ ಶಬ್ದವೇ ಎಂಬುದನ್ನು ಗಮನಿಸಬೇಕು. ಸಂಸ್ಕೃತದಲ್ಲಿಯೂ ‘ನರ’ ಎಂಬ ಒಂದು ಶಬ್ದವನ್ನು ಬಿಟ್ಟರೆ ಮನುಷ್ಯನಿಗೆ ಮಾತ್ರ ಪರ್ಯಾಯವಾಗತಕ್ಕ ಇನ್ನೊಂದು ಸರಿಯಾದ ಶಬ್ದವಿಲ್ಲ. ಜನ, ಮರ್ತ್ಯ, ಪುಮಾನ್‌, ಪುರುಷ ಇವೆಲ್ಲವೂ ಅನ್ಯಾರ್ಥ ಸಾಧಾರಣ ಶಬ್ದಗಳು. ಈ ಜಗತ್ತಿನಲ್ಲಿರುವ ಸಕಲ ನರರೂ ಮನುಜರೇ’ – ಎನ್‌. ರಂಗನಾಥಶರ್ಮಾ ಅವರ ಈ ಮಾತುಗಳು ಇಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT