ಏಳು ರಾಜ್ಯಗಳ ಫಲಿತಾಂಶ ಪ್ರಕಟ

7
ರಾಜ್ಯಸಭೆ ಚುನಾವಣೆ: ಉ. ಪ್ರದೇಶದಲ್ಲಿ ಎಂಟು ಸ್ಥಾನದಲ್ಲಿ ಬಿಜೆಪಿ ಮುನ್ನಡೆ

ಏಳು ರಾಜ್ಯಗಳ ಫಲಿತಾಂಶ ಪ್ರಕಟ

Published:
Updated:

ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳ 26 ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯ ಪೈಕಿ ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಮತ್ತು ಛತ್ತೀಸ್‌ಗಡದ ಫಲಿತಾಂಶ ಹೊರಬಿದ್ದಿದೆ.

ಪಶ್ಚಿಮ ಬಂಗಾಳ ಐದು ಸ್ಥಾನಗಳಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ನಾಲ್ಕು ಸ್ಥಾನ ಬಾಚಿಕೊಂಡಿದೆ. ಉಳಿದೊಂದು ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಅಭಿಷೇಕ್‌ ಮನು ಸಿಂಘ್ವಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ.

ಇಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು ಕಾಂಗ್ರೆಸ್‌ ಅಭ್ಯರ್ಥಿ ಸಿಂಘ್ವಿ ಅವರಿಗೆ ಹೆಚ್ಚಿನ ಮತಗಳನ್ನು ನೀಡಿತ್ತು. ಸಿಪಿಎಂ ಅಭ್ಯರ್ಥಿ ಸೋಲು ಕಂಡಿದ್ದಾರೆ. ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಟಿಆರ್‌ಎಸ್‌ ಜಯಭೇರಿ

ತೆಲಂಗಾಣದಲ್ಲಿ ಎಲ್ಲ ಮೂರು ಸ್ಥಾನಗಳಲ್ಲಿ ಚಂದ್ರಶೇಖರ್‌ ರಾವ್‌ ನೇತೃತ್ವದ ಆಡಳಿತಾರೂಢ ಟಿಆರ್‌ಎಸ್‌ ಜಯಭೇರಿ ಬಾರಿಸಿದೆ. ಟಿಆರ್‌ಎಸ್‌ನ ಬಿ.ಪ್ರಕಾಶ್‌, ಜೆ. ಸಂತೋಷ್‌ ಕುಮಾರ್‌, ಎ.ಬಿ. ಲಿಂಗಯ್ಯ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಬಲರಾಂ ನಾಯ್ಕ್‌ ಹೀನಾಯವಾಗಿ ಸೋತಿದ್ದಾರೆ. ಅವರು ಕೇವಲ 10 ಮತ ಪಡೆದಿದ್ದಾರೆ.

ಜಾರ್ಖಂಡ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡು ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಒಂದೊಂದು ಸ್ಥಾನದಲ್ಲಿ ಗೆದ್ದಿವೆ.

ಛತ್ತೀಸ್‌ಗಡದ ಏಕೈಕ ಸ್ಥಾನ ಆಡಳಿತಾರೂಢ ಬಿಜೆಪಿ ಪಾಲಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಸರೋಜಾ ಪಾಂಡೆ ಮೇಲ್ಮನೆ ಪ್ರವೇಶಿಸಿದ್ದಾರೆ.

ಕೇರಳದ ಒಂದು ಸ್ಥಾನದಿಂದ ಸಂಯುಕ್ತ ಜನತಾದಳ (ಶರದ್‌ ಯಾದವ್‌ ಬಣ) ಅಭ್ಯರ್ಥಿ ಎಂ.ಪಿ. ವೀರೇಂದ್ರ ಕುಮಾರ್‌ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಲ್‌ಡಿಎಫ್‌ ಬೆಂಬಲ ನೀಡಿತ್ತು. ಇಲ್ಲಿ ಯುಡಿಎಫ್‌  ಬಿ.ಬಾಬು ಪ್ರಸಾದ್‌ ಅವರನ್ನು ಕಣಕ್ಕಿಳಿಸಿತ್ತು.

ಜೆಡಿಯು ಇಬ್ಭಾಗವಾದಾಗ ಶರದ್‌ ಯಾದವ್‌ ಬೆಂಬಲಿಸಿ ವೀರೇಂದ್ರ ಕುಮಾರ್‌ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

**

ಮುಗಿಯದ ಮತ ಎಣಿಕೆ

ಅತ್ಯಂತ ಕುತೂಹಲ ಕೆರಳಿಸಿದ್ದ ಉತ್ತರ ಪ್ರದೇಶದ 10 ಸ್ಥಾನಗಳಿಗೆ ಬಿಜೆಪಿ ಮತ್ತು ಬಿಎಸ್‌ಪಿ ನಡುವೆ ನಡೆದ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಪತ್ರಿಕೆ ಶುಕ್ರವಾರ ರಾತ್ರಿ 10 ಗಂಟೆಗೆ ಅಚ್ಚಿಗೆ ಹೋಗುವಾಗ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ಎರಡನೇ ಸುತ್ತಿನ ಮತ ಎಣಿಕೆ ಕಾರ್ಯ ಆರಂಭವಾಗಿತ್ತು.

ಬಿಜೆಪಿ ಎಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮಾಜವಾದಿ ಪಕ್ಷ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿತ್ತು. ಬಿಎಸ್‌ಪಿ ಅಭ್ಯರ್ಥಿ ಬಿ.ಆರ್‌. ಅಂಬೇಡ್ಕರ್‌ ಮತ್ತು ಬಿಜೆಪಿಯ ಅನಿಲ್‌ ಅಗರವಾಲ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಮೊದಲ ಸುತ್ತಿನಲ್ಲಿ ಅಂಬೇಡ್ಕರ್‌ 32 ಮತ ಹಾಗೂ ಅಗರವಾಲ್‌ 16 ಮತ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry