ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್: ಕೇನ್‌ ವಿಲಿಯಮ್ಸನ್‌ ಸುಂದರ ಶತಕ

Last Updated 23 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆಕ್ಲೆಂಡ್‌, ನ್ಯೂಜಿಲೆಂಡ್‌ (ಎಎಫ್‌ಪಿ): ಶತಕ ಗಳಿಸಿ ದಾಖಲೆ ಬರೆದ ನಾಯಕ ಕೇನ್ ವಿಲಿಯಮ್ಸನ್‌ ಅವರ ನೆರವಿನಿಂದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರಿ ಮುನ್ನಡೆಯತ್ತ ಹೆಜ್ಜೆ ಹಾಕಿದೆ.

ನ್ಯೂಜಿಲೆಂಡ್‌, ತನ್ನ ಮೊಟ್ಟಮೊದಲ ಹೊನಲು ಬೆಳಕಿನ ಪಂದ್ಯದ ಮೊದಲ ದಿನ ಎದುರಾಳಿಗಳನ್ನು 58 ರನ್‌ಗಳಿಗೆ  ಆಲೌಟ್ ಮಾಡಿತ್ತು. ಮೊದಲ ದಿನದಾಟದ ಮುಕ್ತಾಯದ ವೇಳೆ ಮೂರು ವಿಕೆಟ್‌ಗಳಿಗೆ 175 ರನ್‌ ಗಳಿಸಿತ್ತು. ಎರಡನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಕೇವಲ 23 ಓವರ್‌ಗಳ ಆಟ ನಡೆದಿತ್ತು.

ಮೊದಲ ದಿನ 91 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಉಳಿದಿದ್ದ ಕೇನ್ ವಿಲಿಯಮ್ಸನ್‌ ಶುಕ್ರವಾರ ಒಂಬತ್ತನೇ ಓವರ್‌ನಲ್ಲಿ ಜೇಮ್ಸ್‌ ಆ್ಯಂಡರ್ಸನ್‌ ಎಸೆತವನ್ನು ತಳ್ಳಿ ಒಂದು ರನ್‌ ಗಳಿಸುವುದರೊಂದಿಗೆ ಶತಕ ಪೂರೈಸಿದರು. ಟೆಸ್ಟ್‌ನಲ್ಲಿ ಇದು ಅವರ 18ನೇ ಶತಕ.  ಇದರೊಂದಿಗೆ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎಂಬ ಶ್ರೇಯ ಅವರದಾಯಿತು.

ಎಂಟು ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ವಿಲಿಯಮ್ಸನ್‌ ತಂಡದ ಇನಿಂಗ್ಸ್‌ಗೆ ಜೀವ ತುಂಬಿದರು. ಟಾಮ್ ಲಥಾಮ್ ಜೊತೆ 84 ರನ್‌ ಸೇರಿಸಿದ ಅವರು ರಾಸ್ ಟೇಲರ್‌ ಜೊತೆ 31 ಮತ್ತು ಹೆನ್ರಿ ನಿಕೋಲ್ಸ್ ಜೊತೆ 83 ರನ್ ಸೇರಿಸಿ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು.

ಇನಿಂಗ್ಸ್‌ನ 84ನೇ ಓವರ್‌ನಲ್ಲಿ ಆ್ಯಂಡರ್ಸನ್‌ ಎಸೆತದಲ್ಲಿ ವಿಲಿಯಮ್ಸನ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ತಂಡ 229 ರನ್‌ ಗಳಿಸಿದ್ದಾಗ ಮತ್ತೆ ಮಳೆ ಸುರಿಯತೊಡಗಿತು. ಹೀಗಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು.

ನಾಯಕನ ಜೊತೆ ಗುರುವಾರ ಔಟಾಗದೇ ಉಳಿದಿದ್ದ ಹೆನ್ರಿ ನಿಕೋಲ್ಸ್‌ ಶುಕ್ರವಾರವೂ ಉತ್ತಮ ಆಟವಾಡಿದರು. (49; 143 ಎಸೆತ, 3 ಬೌಂ)   ಔಟಾಗದೇ ಉಳಿದಿದ್ದಾರೆ. ಅವರೊಂದಿಗೆ 17 ರನ್‌ ಗಳಿಸಿದ ಬಿ.ಜೆ.ವಾಟ್ಲಿಂಗ್ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 20.4 ಓವರ್‌ಗಳಲ್ಲಿ 58;

ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌ (ಗುರುವಾರದ ಅಂತ್ಯಕ್ಕೆ 69 ಓವರ್‌ಗಳಲ್ಲಿ 3ಕ್ಕೆ 175): 92.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 229 (ಕೇನ್ ವಿಲಿಯಮ್ಸನ್‌ 102, ಹೆನ್ರಿ ನಿಕೋಲ್ಸ್‌ ಬ್ಯಾಟಿಂಗ್‌ 49, ವಾಟ್ಲಿಂಗ್‌ ಬ್ಯಾಟಿಂಗ್‌ 17; ಜೇಮ್ಸ್ ಆ್ಯಂಡರ್ಸನ್‌ 53ಕ್ಕೆ3, ಸ್ಟುವರ್ಟ್‌ ಬ್ರಾಡ್‌ 37ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT