ಗವಿಪುರದ ಸರ್ಕಾರಿ ಶಾಲೆ ಉದ್ಘಾಟನೆ ಇಂದು

7
ಕುಂಟುತ್ತಾ ಸಾಗಿದ್ದ ಅಭಿವೃದ್ಧಿ ಕಾಮಗಾರಿ

ಗವಿಪುರದ ಸರ್ಕಾರಿ ಶಾಲೆ ಉದ್ಘಾಟನೆ ಇಂದು

Published:
Updated:
ಗವಿಪುರದ ಸರ್ಕಾರಿ ಶಾಲೆ ಉದ್ಘಾಟನೆ ಇಂದು

ಬೆಂಗಳೂರು: ಆರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಗವಿಪುರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿ ಕೊನೆಗೂ ಮುಗಿದಿದ್ದು, ಶನಿವಾರ (ಮಾ.24) ಉದ್ಘಾಟನೆಗೊಳ್ಳುತ್ತಿದೆ. ನಟ ರಜನಿಕಾಂತ್‌ ಈ ಶಾಲೆಯಲ್ಲಿ ಓದಿದ್ದರು.

1943ರಲ್ಲಿ ಸ್ಥಾಪನೆಗೊಂಡಿದ್ದ ಈ ಶಾಲೆಯು ಶಿಥಿಲಾವಸ್ಥೆಯಲ್ಲಿತ್ತು. ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. 2008ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ₹81.4 ಲಕ್ಷ ಮಂಜೂರು ಮಾಡಿದ್ದರು. 2012ರ ಮಾರ್ಚ್‌ 9ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಈ ಶಾಲೆಯನ್ನು ಕೆಂಪಾಂಬುಧಿ ಕೆರೆ ಸಮೀಪ ಇದ್ದ ಪಾಲಿಕೆಯ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿತ್ತು.

ಹೊಸ ಕಟ್ಟಡವನ್ನು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ಥಳೀಯ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅವರು ಶಾಸಕರ ನಿಧಿಯಿಂದ ₹20 ಲಕ್ಷ ನೀಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‌ ಅವರು ಸಂಸದರ ನಿಧಿಯಿಂದ ₹25 ಲಕ್ಷ ಬಿಡುಗಡೆ ಮಾಡಿದ್ದಾರೆ.

ಇಲ್ಲಿಂದ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಿತು ಎಂದು ಶಾಲಾ ಶಿಕ್ಷಕಿ ಬಿ.ಕೆ.ಉಮಾ ತಿಳಿಸಿದರು.

ಶಾಲೆಯನ್ನು ಮೇಲ್ದರ್ಜೆಗೆ ಏರಿಸಿರುವುದು ಶಿಕ್ಷಕರು ಹಾಗೂ ಮಕ್ಕಳಿಗೆ ಖುಷಿ ತಂದಿದೆ. ರಜನಿಕಾಂತ್‌ ಕಲಿತ ಶಾಲೆ ಎಂಬ ಕಾರಣಕ್ಕೆ ಮತ್ತಷ್ಟು ವಿದ್ಯಾರ್ಥಿಗಳು ಇಲ್ಲಿ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದರು.

ಈ ಹಿಂದೆ ಶಾಲೆಯಲ್ಲಿ 400 ಮಕ್ಕಳು ಓದುತ್ತಿದ್ದರು. ಈಗ 91 ಮಕ್ಕಳಿದ್ದಾರೆ. ಈ ಭಾಗದಲ್ಲಿರುವ ಮೂರು ಕೊಳೆಗೇರಿಗಳ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ನಂಜೇಗೌಡ, ‘ಶಾಲೆಯನ್ನು ಕಳೆದ ಶೈಕ್ಷಣಿಕ ವರ್ಷದಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಆಗಿನ್ನೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೊಸ ಕಟ್ಟಡಕ್ಕೆ ಬಂದಿದ್ದರಿಂದ ಮಕ್ಕಳ ದಾಖಲಾತಿ ಸಂಖ್ಯೆ ಏರಿಕೆಯಾಯಿತು. ಇಲ್ಲಿ ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ ನಿರ್ಮಿಸಲಾಗಿದೆ. ಆಟದ ಪರಿಕರಗಳಿವೆ’ ಎಂದರು.

**

ರಜನಿಕಾಂತ್‌ಗೆ ಆಹ್ವಾನ

‘ಶಾಲಾ ಉದ್ಘಾಟನಾ ಸಮಾರಂಭಕ್ಕೆ ರಜನಿಕಾಂತ್‌ ಅವರನ್ನು ಆಹ್ವಾನಿಸಿದ್ದೇವೆ. 2017ರ ನವೆಂಬರ್‌ನಲ್ಲಿ ಚೆನ್ನೈನಲ್ಲಿ ಅವರನ್ನು ಭೇಟಿ ಮಾಡಿದ್ದೆವು. ಹೊಸ ಕಟ್ಟಡದ ಛಾಯಾಚಿತ್ರಗಳನ್ನು ತೋರಿಸಿದ್ದೆವು. ಆದರೆ, ಅವರ ರಾಜಕೀಯ ಕಾರ್ಯಕ್ರಮಗಳಿಂದಾಗಿ ಬರುವುದು ಅನುಮಾನ’ ಎಂದು ಕರ್ನಾಟಕ ರಜನಿ ಸೇವಾ ಸಮಿತಿಯ ರಜನಿ ಮುರುಗನ್‌ ತಿಳಿಸಿದರು.

‘ಶಾಲಾ ಅಭಿವೃದ್ಧಿ ಕಾರ್ಯದಿಂದ ರಜನಿಕಾಂತ್‌ ಪ್ರಭಾವಿತರಾಗಿದ್ದಾರೆ. ಅವರು ಮೂರು ತಿಂಗಳ ಹಿಂದೆ ಮಂತ್ರಾಲಯಕ್ಕೆ ಹೋಗುವ ಮುನ್ನ ಶಾಲೆಗೆ ಭೇಟಿ ನೀಡಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry