ರೂಟ್‌ ಆಫೀಸರ್‌ ಅಮಾನತಿಗೆ ಶಿಫಾರಸು

7

ರೂಟ್‌ ಆಫೀಸರ್‌ ಅಮಾನತಿಗೆ ಶಿಫಾರಸು

Published:
Updated:
ರೂಟ್‌ ಆಫೀಸರ್‌ ಅಮಾನತಿಗೆ ಶಿಫಾರಸು

ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುತ್ತಿದ್ದ ಜೀಪ್‌ನಲ್ಲಿ ಶುಕ್ರವಾರ ಪರೀಕ್ಷಾರ್ಥಿಯೊಬ್ಬನಿಗೆ ಪ್ರಯಾಣಿಸಲು ಅವಕಾಶ ನೀಡಿದ್ದ ಮಾರ್ಗ ಅಧಿಕಾರಿ, ಶಿವನೂರು ಶಾಲೆಯ ಚಿತ್ರಕಲಾ ಶಿಕ್ಷಕ ಕೆ.ಬಿ. ಗುಮ್ತಾಜ ಅವರ ಅಮಾನತಿಗೆ ಚಿಕ್ಕೋಡಿ ಡಿಡಿಪಿಐ ಎಂ.ಜಿ. ದಾಸರ ಶಿಫಾರಸು ಮಾಡಿದ್ದಾರೆ.

ಅಥಣಿಯ ತಹಶೀಲ್ದಾರ್‌ ಕಚೇರಿಯಲ್ಲಿ ಸಂಗ್ರಹಿಸಿಟ್ಟಿದ್ದ ಪ್ರಶ್ನೆ ಪತ್ರಿಕೆಗಳನ್ನು, ಶೇಗುಣಿಸಿ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಜೀಪ್‌ನಲ್ಲಿ ಇಡಲಾಗಿತ್ತು. ಇದೇ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಜೀಪ್‌ ಏರಿ ಕುಳಿತಿದ್ದ. ಇದನ್ನು ಯಾರೋ ಮೊಬೈಲ್‌ನಲ್ಲಿ ಕ್ಲಿಕ್ಕಿಸಿ, ಡಿಡಿಪಿಐ ಅವರಿಗೆ ರವಾನಿಸಿದ್ದರು.

ವರದಿ ಸಲ್ಲಿಕೆ: ‘ಘಟನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ನ್ಯಾಮಗೌಡ ನೀಡಿರುವ ವರದಿ ಆಧರಿಸಿ, ಗುಮ್ತಾಜ ಅವರನ್ನು ಅಮಾನತು ಮಾಡುವಂತೆ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ಪತ್ರ ಬರೆದಿದ್ದಾಗಿ ಡಿಡಿಪಿಐ ತಿಳಿಸಿದ್ದಾರೆ.

ಮೇಲ್ವಿಚಾರಕ ಅಮಾನತು (ಮುದ್ದೇಬಿಹಾಳ ವರದಿ) : ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ.

ಇದಕ್ಕೆ ಕಾರಣನಾದ ವಿದ್ಯಾರ್ಥಿ ಪ್ರಶಾಂತ ಗಿರೀಶ ಹಡಪದ ಎಂಬಾತನನ್ನು ಡಿಬಾರ್‌ ಮಾಡಲಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕೊಠಡಿ ಮೇಲ್ವಿಚಾರಕ, ಚಿರ್ಚಿನಕಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಚ್‌.ಬಿ.ಲಮಾಣಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಹ್ಲಾದ ಟಿ.ಬೊಂಗಾಳೆ ಮಾಹಿತಿ ನೀಡಿದ್ದಾರೆ.

‘ವಿಬಿಸಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಶಾಂತ, ಕೊಠಡಿಯೊಳಗಿನಿಂದ ಕಿಟಕಿಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನಿಗೆ ತನ್ನ ಬಳಿಯಿದ್ದ ಪ್ರಶ್ನೆ ಪತ್ರಿಕೆ ನೀಡಿದ್ದಾನೆ. ಪ್ರಶ್ನೆ ಪತ್ರಿಕೆ ಪಡೆದಾತ ಮೊಬೈಲ್‌ನಲ್ಲಿ ಅದರ ಫೋಟೊ ತೆಗೆದುಕೊಂಡು ವಾಟ್ಸ್‌ಆ್ಯಪ್‌ ಮೂಲಕ ಬಹಿರಂಗಗೊಳಿಸಿದ್ದಾನೆ. ಆತನಿಗಾಗಿ ಶೋಧ ನಡೆದಿದೆ. ಯಾರ ಕೈಗೆ ಪ್ರಶ್ನೆ ಪತ್ರಿಕೆ ನೀಡಿದ್ದೇನೆ ಎಂಬ ವಿವರ ನೀಡದ ಕಾರಣ ವಿದ್ಯಾರ್ಥಿಯನ್ನು ಪೊಲೀಸ್‌ ವಶಕ್ಕೆ ನೀಡಲಾಗಿದೆ’ ಎಂದು ಡಿಡಿಪಿಐ ತಿಳಿಸಿದರು.

ಕರ್ತವ್ಯದಲ್ಲಿದ್ದ ಮುಖ್ಯಶಿಕ್ಷಕ ಸಾವು

ಗುತ್ತಲ (ಹಾವೇರಿ ಜಿಲ್ಲೆ): ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸ್ಥಾನಿಕ ಜಾಗೃತ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಹಾವೇರಿ ತಾಲ್ಲೂಕಿನ ವರದಾಹಳ್ಳಿಯ ಆಲದಮ್ಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಹೊನ್ನಪ್ಪ ಎಚ್.ಕೊರವರ (57) ಶುಕ್ರವಾರ ಇಲ್ಲಿನ ಆರ್.ಕೆ. ಆಂಗ್ಲ ಮಾಧ್ಯಮ ಶಾಲೆಯ ಬಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

9 ವಿದ್ಯಾರ್ಥಿಗಳು ಡಿಬಾರ್‌

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನ ಒಂಬತ್ತು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ.

ಪ್ರಥಮ ಭಾಷಾ ವಿಷಯದ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಧಾರವಾಡದ ಆರು, ಚಿಕ್ಕೋಡಿ, ಬಾಗಲಕೋಟೆ, ಕಲಬುರ್ಗಿಯಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry