4
ಮೇಯರ್‌ ಪೀಠದ ಎದುರು ಧರಣಿ ನಡೆಸಿದ ಬಿಜೆಪಿ, ಜೆಡಿಎಸ್‌ ಸದಸ್ಯರು:

ಶಿಷ್ಟಾಚಾರ ಉಲ್ಲಂಘನೆ: ಅಧಿಕಾರಿಗಳ ಅಮಾನತಿಗೆ ಪಟ್ಟು

Published:
Updated:
ಶಿಷ್ಟಾಚಾರ ಉಲ್ಲಂಘನೆ: ಅಧಿಕಾರಿಗಳ ಅಮಾನತಿಗೆ ಪಟ್ಟು

ಬೆಂಗಳೂರು: ‘ರಾಜರಾಜೇಶ್ವರಿನಗರ ವಲಯದ ಎಚ್‌ಎಂಟಿ ವಾರ್ಡ್‌ನಲ್ಲಿ ರಸ್ತೆ ಕಾಮಗಾರಿಯ ಉದ್ಘಾಟನಾ ಫಲಕ ಅಳವಡಿಕೆ ವಿಷಯದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯೆ ಆಶಾ ಸುರೇಶ್‌ ಮೇಯರ್‌ ಪೀಠದ ಎದುರು ಶುಕ್ರವಾರ ಧರಣಿ ನಡೆಸಿದರು.

ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಆಶಾ, ‘ಪೀಣ್ಯ ಸಮೀಪ ಉದ್ಯಾನದ ಬಳಿ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಇದೇ 15ರಂದು ನಡೆಯಿತು. ನಾಮಫಲಕದಲ್ಲಿ ಬಿಬಿಎಂಪಿ ಲೋಗೊ ಇದೆ. ಆದರೆ, ಮೇಯರ್‌, ಆಯುಕ್ತರು ಹಾಗೂ ನನ್ನ ಹೆಸರಿಲ್ಲ. ಆರ್‌.ಆರ್‌.ನಗರದ ಕಾರ್ಯನಿರ್ವಾಹಕ ಎಂಜಿನಿಯರ್‌ (ಇಇ) ನಂದೀಶ್‌, ಸ್ಥಳೀಯ ಶಾಸಕ ಮುನಿರತ್ನ ಪರವಾಗಿ ಕೆಲಸ ಮಾಡಲು ನೇಮಕಗೊಂಡಿದ್ದಾರೆ. ಅಲ್ಲಿ ಅವರೇ ಮೇಯರ್‌, ಆಯುಕ್ತ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌’ ಎಂದು ಕಿಡಿಕಾರಿದರು.

‘ಈ ನಾಮಫಲಕದ ಪಕ್ಕದಲ್ಲೇ ಮತ್ತೊಂದು ಫಲಕವನ್ನು ಹಾಕಿಸಿಕೊಳ್ಳುವಂತೆ ಆಶಾ ಸುರೇಶ್‌ಗೆ ಹೇಳು ಎಂದು ಸಹಾಯಕ ಎಂಜಿನಿಯರ್‌ಗೆ ನಂದೀಶ್‌ ಸೂಚಿಸಿದ್ದಾರೆ. ಅವರು ಪಾಲಿಕೆ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಅವರನ್ನು ಕೂಡಲೇ ಅಮಾನತು ಮಾಡಬೇಕು.

‘ಎಸಿಎಫ್‌ ವಾಣಿ ಅವರ ಕಚೇರಿಗೆ ಹೋದರೆ ಕುಳಿತುಕೊಳ್ಳಲು ಕುರ್ಚಿ ಹಾಕುವುದಿಲ್ಲ. ನನಗೆ ಅಗೌರವ ತೋರಿಸುತ್ತಾರೆ. ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ’ ಎಂದು ದೂರಿದರು.

ಬಿಜೆಪಿಯ ಮಮತಾ ವಾಸುದೇವ್‌, ‘ಜೆ.ಪಿ.ಪಾರ್ಕ್‌ ವಾರ್ಡ್‌ನಲ್ಲಿ 2012ರಲ್ಲಿ ರಸ್ತೆಯೊಂದಕ್ಕೆ ಡಿ.ಶ್ರೀನಿವಾಸ ಮೂರ್ತಿ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಅದಕ್ಕೆ ಮಿನುಗುತಾರೆ ಕಲ್ಪನಾ ರಸ್ತೆ ಎಂದು ಇದೇ 18ರಂದು ನಾಮಕರಣ ಮಾಡಲಾಗಿದೆ. ಮುನಿರತ್ನ ನಿರ್ಮಾಪಕರು ಎಂಬ ಕಾರಣಕ್ಕೆ ಎಲ್ಲ ನಟ, ನಟಿಯರ ಹೆಸರು ಇಡುತ್ತಿದ್ದಾರೆ’ ಎಂದು ದೂರಿದರು.

‘ಅವರು ರಂಬೆ, ಮೇನಕೆ ಹೆಸರನ್ನೂ ಇಡುತ್ತಾರೆ. ರಸ್ತೆಯೊಂದಕ್ಕೆ ರಾಜಣ್ಣ ರಸ್ತೆ ಎಂದು 2004ರಲ್ಲಿ ನಾಮಕರಣ ಮಾಡಲಾಗಿತ್ತು. ಆ ರಸ್ತೆಯನ್ನು ದುರಸ್ತಿಗೊಳಿಸಿ, ಆಂಜನೇಯ ರಸ್ತೆ ಎಂದು ಹೊಸ ನಾಮಫಲಕ ಹಾಕಿದ್ದಾರೆ’ ಎಂದರು.

ಮಧ್ಯಪ್ರವೇಶಿಸಿದ ಮೇಯರ್‌ ಆರ್‌.ಸಂಪತ್‌ ರಾಜ್‌, ‘ಸಹಾಯಕ ಎಂಜಿನಿಯರ್‌ಗೆ ಹೇಳಿ ನಾಮಫಲಕವನ್ನು ತೆರವುಗೊಳಿಸಿ’ ಎಂದು ಸೂಚಿಸಿದರು.

ಇದಕ್ಕೆ ಉತ್ತರಿಸಿದ ಆಶಾ, ‘ಎಲ್ಲರಿಗೂ (ಅಧಿಕಾರಿಗಳಿಗೆ) ಮೀಟರ್‌ ಆಫ್‌. ಶೇಕ್‌ ಅಬ್ದುಲ್ಲಾ’ ಎಂದು ವ್ಯಂಗ್ಯವಾಡಿದರು.

ಕೂಡಲೇ ಮೇಯರ್‌ ಅವರು, ‘ನಾನು ಸ್ಟಡಿ ಅಬ್ದುಲ್ಲಾ’ ಎಂದು ಪ್ರತಿಕ್ರಿಯಿಸಿದರು.

‘ಮೆಟ್ರೊ ರೈಲು ಮಾರ್ಗದ ಕೆಳಗೆ ಉದ್ಯಾನ ಹಾಗೂ ತೆರೆದ ಜಿಮ್‌ ಸ್ಥಾಪಿಸಲಾಗಿದೆ. ಇದಕ್ಕೆ ಯಾರು ಅನುಮತಿ ನೀಡಿದರು’ ಎಂದು ಆಶಾಪ್ರಶ್ನಿಸಿದರು.

ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ ಇ.ಇ ನಂದೀಶ್‌, ‘ಮೆಟ್ರೊ ರೈಲು ಮಾರ್ಗದ ಕೆಳಗಿನ ಜಾಗ ಪಾಳು ಬಿದ್ದಿದ್ದರಿಂದ ಅಲ್ಲಿ ಉದ್ಯಾನ ಹಾಗೂ ತೆರೆದ ಜಿಮ್‌ ನಿರ್ಮಿಸಲು ಶಾಸಕರು ಬಿಎಂಆರ್‌ಸಿಎಲ್‌ನಿಂದ ಅನುಮತಿ ಪಡೆದಿದ್ದಾರೆ. ಅದನ್ನು ವಾರ್ಡ್‌ ಮಟ್ಟದಿಂದ ನಿರ್ವಹಣೆ ಮಾಡಲಾಗುತ್ತಿದೆ. ರಸ್ತೆ ಉದ್ಘಾಟನಾ ನಾಮಫಲಕ ಯಾರು ಹಾಕಿದ್ದಾರೆ ಎಂಬ ಮಾಹಿತಿ ಇಲ್ಲ’ ಎಂದರು.

ಇದಕ್ಕೆ ಆಶಾ ಹಾಗೂ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಂದೀಶ್‌ ಅವರನ್ನು ಅಮಾನತುಗೊಳಿಸಬೇಕು ಎಂದು ಪಟ್ಟುಹಿಡಿದರು.

ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳ ಹೆಸರುಗಳನ್ನು ಹಾಕಬೇಕು ಎಂದು ಸುತ್ತೋಲೆ ಹೊರಡಿಸಿದ್ದೇನೆ. ಸ್ಥಳೀಯ ಸದಸ್ಯರ ಹೆಸರು ಇರಲೇಬೇಕು. ತಪ್ಪಿದರೆ, ಆ ಅಧಿಕಾರಿಗಳೇ ನೇರ ಹೊಣೆ. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ, ಅಂತಹ ನಾಮಫಲಕ ಕೂಡಲೇ ತೆರವುಗೊಳಿಸುತ್ತೇವೆ’ ಎಂದರು.

ಈ ಉತ್ತರಕ್ಕೆ ಸಮಾಧಾನಗೊಳ್ಳದ ಸದಸ್ಯರು, ‘ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದರು. ‌ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌, ‘ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ನಿಜ. ಈ ಕುರಿತು ವಿವರ ನೀಡುವಂತೆ ಇಇ, ಎಇ ಹಾಗೂ ಎಇಇಗೆ ಸೂಚಿಸಿದ್ದೇನೆ’ ಎಂದರು.

‘ಬೆದರಿಕೆ ಕರೆ’: ‘ಯಾವುದೇ ಅಧಿಕಾರಿ ನನ್ನ ವಾರ್ಡ್‌ ಕಚೇರಿಗೆ ಬರುವಂತಿಲ್ಲ. ನಾನು ಕಳುಹಿಸುವ ಕಡತಗಳಿಗೆ ಸಹಿ ಮಾಡುವಂತಿಲ್ಲ. ಕಡತ ವಿಲೇವಾರಿ ಮಾಡಿದರೆ ಅವರಿಗೆ ಬೆದರಿಕೆ ಹಾಕುತ್ತಾರೆ. ಹೆಂಡತಿ, ಮಕ್ಕಳು ಕಾಣೆ ಆಗಿದ್ದಾರೆ ಎಂದು ಅಧಿಕಾರಿಗಳಿಗೆ ಬೆದರಿಕೆ ಕರೆಗಳು ಬರುತ್ತವೆ’ ಎಂದು ಆಶಾ ಸುರೇಶ್‌ ದೂರಿದರು.

**

‘ನಕಲಿ ಬಿಲ್‌’

‘ಲಗ್ಗೆರೆ ವಾರ್ಡ್‌ನ ರಾಕ್ಷಸ ಹಳ್ಳದಲ್ಲಿ ಪ್ರವಾಹ ಉಂಟಾಗಿದ್ದು ಇದರಿಂದ ಭಾರಿ ಪ್ರಮಾಣದ ಹಾನಿ ಆಗಿದೆ ಎಂದು ಎಂಜಿನಿಯರ್‌ ಅವರು ₹30 ಲಕ್ಷ ಮೊತ್ತದ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ’ ಎಂದು ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ದೂರಿದರು.

ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ, ‘ರಾಕ್ಷಸ ಹಳ್ಳದಲ್ಲಿ ಯಾವುದೇ ಮನೆ ಇಲ್ಲ. ಆದರೆ, ಮನೆಗೆ ಹಾನಿ ಆಗಿದೆ ಎಂದು ಬಿಲ್‌ ಮಾಡಲಾಗಿದೆ. ಈ ಕುರಿತು ಎಸಿಬಿಗೆ ದೂರು ನೀಡಿದ್ದೇನೆ’ ಎಂದರು.‌

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಆರ್‌.ಸಂಪತ್‌ ರಾಜ್‌, ‘ಈ ಬಗ್ಗೆ ತನಿಖೆ ನಡೆಸಿ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

**

‘65 ಮಂದಿಗೆ ದಂಡ’

‘ವಾರ್ಡ್‌ ಮಟ್ಟದಲ್ಲೇ ಕಸ ಸಂಸ್ಕರಣೆ ಮಾಡುವ ಕುರಿತು ಯೋಜನೆ ಸಿದ್ಧಪಡಿಸದ ಕಾರಣ ತಲಾ 65 ಸದಸ್ಯರು ಹಾಗೂ ಅಧಿಕಾರಿಗಳಿಗೆ ತಲಾ ₹384 ದಂಡವನ್ನು ಕೋರ್ಟ್‌ ವಿಧಿಸಿದೆ. ಇದರಲ್ಲಿ ಮೇಯರ್‌ ಸಹ ಸೇರಿದ್ದಾರೆ’ ಎಂದು ಪದ್ಮನಾಭರೆಡ್ಡಿ ಬೇಸರ ವ್ಯಕ್ತಪಡಿಸಿದರು.

‘ಮೇಯರ್‌ಗೆ ದಂಡ ಹಾಕಿದರೆ, ಇಡೀ ನಗರಕ್ಕೆ ಹಾಕಿದಂತೆ. ಇದು ನಿಮ್ಮ ಆಡಳಿತ ವೈಫಲ್ಯ ಅಥವಾ ನಿಮಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಜರಿದರು.

‘ವಾರ್ಡ್‌ ಮಟ್ಟದ ಸಮಿತಿ ಸಭೆಗಳು ನಡೆಯುತ್ತಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸದಸ್ಯರು ದಂಡ ಪಾವತಿಸುವಂತಾಗಿದೆ. ಈ ವಿಷಯದಲ್ಲಿ ಕಾನೂನು ವಿಭಾಗವು ಸರಿಯಾಗಿ ಕೆಲಸ ಮಾಡಿಲ್ಲ’ ಎಂದು ದೂರಿದರು.

**

ನೈಸ್‌ ಸಂಸ್ಥೆಗೆ ಟಿಡಿಆರ್‌: ₹ 50 ಕೋಟಿ ನಷ್ಟ

‘ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗೆ ರಸ್ತೆ ನಿರ್ಮಿಸಲು ಸಾರ್ವಜನಿಕರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೈಸ್‌ ಸಂಸ್ಥೆಗೆ ನೀಡಲಾಗಿತ್ತು. ಇದರಲ್ಲಿ ಖಾಸಗಿ ಭೂಮಿ ಬಿಟ್ಟು ಕರಾಬು, ಗೋಮಾಳದಂತಹ ಸರ್ಕಾರಿ ಭೂಮಿ 2,173 ಎಕರೆ ಇತ್ತು. ಅದನ್ನು ಒಂದು ಎಕರೆಗೆ ₹1 ನಂತೆ ನೋಂದಣಿ ಮಾಡಿಕೊಡಲಾಗಿದೆ.

‘ಆದರೆ, ಹೊಸಕೆರೆಹಳ್ಳಿ ಬಳಿ ವರ್ತುಲರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ವಿಸ್ತರಿಸಲು ನೈಸ್‌ ಸಂಸ್ಥೆಗೆ ನೀಡಿದ್ದ ಭೂಮಿಯಲ್ಲಿ 83,645 ಚದರಡಿ ಜಾಗವನ್ನು ಪಾಲಿಕೆಯು ಸ್ವಾಧೀನಪಡಿಸಿಕೊಂಡಿತ್ತು.

‘ ಇದಕ್ಕೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್‌) ನೀಡಿದ್ದಾರೆ. ಇದರಿಂದ ಪಾಲಿಕೆಗೆ ₹50 ಕೋಟಿ ನಷ್ಟವಾಗಿದೆ’ ಎಂದು ಪದ್ಮನಾಭರೆಡ್ಡಿ ದೂರಿದರು.

‘ಈ ಭೂಮಿ ಸರ್ಕಾರದ ಸ್ವತ್ತು. ಆದರೂ, ಟಿಡಿಆರ್‌ ಅನ್ನು ಅಧಿಕಾರಿಗಳು ಹೇಗೆ ನೀಡಿದರು? ನೈಸ್‌ ಸಂಸ್ಥೆಯು ಇದನ್ನು ರಾಮ್‌ಸನ್ಸ್‌ ಇಂಡಸ್ಟ್ರಿ ಎಂಬ ಸಂಸ್ಥೆಗೆ ಮಾರಾಟ ಮಾಡಿದೆ. ಆ ಸಂಸ್ಥೆಯು ವಾಸ್ವಾನಿ ಬಿಲ್ಡರ್ಸ್‌ಗೆ ಮಾರಿದೆ’ ಎಂದು ಆರೋಪಿಸಿದರು.

‘ಒಂದು ವೇಳೆ, ಇದು ಖಾಸಗಿ ಭೂಮಿ ಆಗಿದ್ದರೆ ಅದರ ಟಿಡಿಆರ್‌ ಮೌಲ್ಯ ಕೋಟ್ಯಂತರ ರೂಪಾಯಿ ಆಗುತ್ತಿತ್ತು. ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪಾಲಿಕೆಯಲ್ಲಿ ಮೈತ್ರಿ ಆಡಳಿತ ಬಂದ ಬಳಿಕ ಒಂದು ರಸ್ತೆಯನ್ನೂ ವಿಸ್ತರಣೆ ಮಾಡಿಲ್ಲ. ಟಿಡಿಆರ್‌ ಪಡೆಯಬೇಕಾದರೆ ಅನೇಕ ಟೇಬಲ್‌ಗಳನ್ನು ದಾಟಬೇಕು. ಹೀಗಾಗಿ, ‌ಅದನ್ನು ಪಡೆಯಲು ಜನರು ಮುಂದೆ ಬರುತ್ತಿಲ್ಲ. ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಮಾಡದೆಯೇ ₹220 ಕೋಟಿ ವೆಚ್ಚದ ಟೆಂಡರ್‌ ನೀಡಲಾಗಿದೆ. ಭೂಮಿ ನೀಡದ ಕಾರಣ ನಮಗೆ ನಷ್ಟ ಆಗಿದೆ ಎಂದು ಗುತ್ತಿಗೆದಾರರು ಕೋರ್ಟ್‌ ಮೊರೆ ಹೋದರೆ, ಆ ನಷ್ಟವನ್ನು ತುಂಬಿಕೊಡುವವರು ಯಾರು’ ಎಂದು ಪ್ರಶ್ನಿಸಿದರು.

**

ಅಂಕಿ–ಅಂಶ

18.03 ಲಕ್ಷ‌: ನಗರದಲ್ಲಿರುವ ಒಟ್ಟು ಆಸ್ತಿಗಳು

8.82 ಲಕ್ಷ: ಈವರೆಗೆ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಸಿದವರು

9.21 ಲಕ್ಷ: ಚಲನ್‌ ಮೂಲಕ ಪಾವತಿಸಿದವರು

₹3,100 ಕೋಟಿ: 2018–19ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹದ ಗುರಿ

141: ಬೃಹತ್‌ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಕೊಟ್ಟರೂ ಆಸ್ತಿ ತೆರಿಗೆ ವ್ಯಾಪ್ತಿಗೆ ತಂದಿಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry