ಇಂದಿರಾ ಕ್ಯಾಂಟೀನ್‌: ವೆಚ್ಚ ಭರಿಸಲು ವಿರೋಧ

7
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಲು ಪಾಲಿಕೆ ಪರಿಷತ್‌ ಸಭೆಯಲ್ಲಿ ನಿರ್ಣಯ

ಇಂದಿರಾ ಕ್ಯಾಂಟೀನ್‌: ವೆಚ್ಚ ಭರಿಸಲು ವಿರೋಧ

Published:
Updated:

ಬೆಳಗಾವಿ: ಕಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸುವ ‘ಇಂದಿರಾ ಕ್ಯಾಂಟೀನ್‌’ಗಳನ್ನು ನಡೆಸುವುದಕ್ಕೆ ತಗಲುವ ವೆಚ್ಚದಲ್ಲಿ ವಾರ್ಷಿಕ ₹ 3.57 ಕೋಟಿಯನ್ನು ಪಾಲಿಕೆಯ ಆಂತರಿಕ ಸಂಪನ್ಮೂಲದಿಂದಲೇ ಭರಿಸಬೇಕು ಎಂದು ರಾಜ್ಯ ಸರ್ಕಾರವು ಸೂಚಿಸಿರುವುದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮೊದಲ ಪರಿಷತ್‌ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಲಾಯಿತು.

‘ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇದರ ಅನುಷ್ಠಾನಕ್ಕೆ ಸ್ಥಳೀಯ ಸಂಸ್ಥೆ ಕೈಜೋಡಿಸಬೇಕು, ಶೇ 70ರಷ್ಟು ಖರ್ಚನ್ನು ಪಾಲಿಕೆಯಿಂದ ಒದಗಿಸಬೇಕು ಎಂದು ಆದೇಶ ಬಂದಿದೆ. ಈ ಕುರಿತು ಚರ್ಚಿಸಲು ವಿಷಯ ಮಂಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಸರ್ಕಾರದ ಆದೇಶದ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ದೀಪಕ ಜಮಖಂಡಿ ಮಾತನಾಡಿ, ‘ಇದೊಂದು ಒಳ್ಳೆಯ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಸಾಮಾನ್ಯರಿಗೆ ಇದರಿಂದ ಬಹಳ ಅನುಕೂಲವಿದೆ. ಆದರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಪಾಲಿಕೆಯಿಂದ ಸಂಗ್ರಹಿಸಲಾಗುವ ತೆರಿಗೆಯಿಂದಲೇ ಭರಿಸುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಇದನ್ನು ಮನವರಿಕೆ ಮಾಡಿಕೊಡಬೇಕು. ಇಂದಿರಾ ಕ್ಯಾಂಟೀನ್‌ನಗಳ ನಿರ್ವಹಣೆಗೆಂದೇ ವಿಶೇಷ ಅನುದಾನ ನೀಡುವಂತೆ ಕೋರಬೇಕು. ಇಲ್ಲವಾದಲ್ಲಿ ₹ 100 ಕೋಟಿ ವಿಶೇಷ ಅನುದಾನದಲ್ಲಿಯೇ ನೀಡಲಿ’ ಎಂದು ಹೇಳಿದರು.

‘ಈ ಆದೇಶವನ್ನು ಎಲ್ಲ ಪಾಲಿಕೆಗಳಿಗೂ ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕು. ಇತರ ಪಾಲಿಕೆಯವರು ಏನು ಕ್ರಮ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಪಡೆದು ಮುಂದುವರಿಯಬೇಕು’ ಎಂದರು.

ಇಲ್ಲೇಕೆ ಅನುಮೋದನೆ ಪಡೆದಿಲ್ಲ?: ಎಂಇಎಸ್‌ ಬೆಂಬಲಿತ ಸದಸ್ಯ ರತನ್‌ ಮಾಸೇಕರ್‌, ‘ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸುವುದಕ್ಕೆ ಪಾಲಿಕೆಯ ಜಾಗ ನೀಡಲಾಗಿದೆ. ಈ ಬಗ್ಗೆ ಪರಿಷತ್‌ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದಿಲ್ಲ. ಅಂತೆಯೇ, ಪಾಲಿಕೆಯೂ ನಿರ್ವಹಣಾ ವೆಚ್ಚ ಭರಿಸಬೇಕು ಎಂಬ ವಿಷಯವನ್ನು ಸಭೆಗೆ ತಂದಿರಲಿಲ್ಲ. ಆದಾಗ್ಯೂ ಕ್ಯಾಂಟೀನ್‌ ಆರಂಭಿಸಲಾಗಿದೆ. ಹಾಗಾದರೆ, ಪಾಲಿಕೆ ಏಕೆ ಬೇಕು?’ ಎಂದು ಕೇಳಿದರು.

ಹಿರಿಯ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ‘ವಾರ್ಡ್‌ಗೊಂದು ಇಂದಿರಾ ಕ್ಯಾಂಟೀನ್‌ ಮಾಡಲಿ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಆದರೆ, ಇಷ್ಟು ದೊಡ್ಡ ಮೊತ್ತವನ್ನು ಪಾಲಿಕೆಯಿಂದ ಒದಗಿಸಲಾಗುವುದಿಲ್ಲ. ಸರ್ಕಾರವೇ ನೇರವಾಗಿ ಈ ವೆಚ್ಚ ಭರಿಸಲಿ. ನಮ್ಮಲ್ಲಿರುವ ಹಣಕಾಸು ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಿದರು. ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿಯೇ ಹಣ ನೀಡಲಿ. ಹಣವನ್ನೆಲ್ಲಾ ಕ್ಯಾಂಟೀನ್‌ಗೇ ನೀಡಿದರೆ ಅಭಿವೃದ್ಧಿಪಡಿಸುವುದು ಹೇಗೆ’ ಎಂದು ಸದಸ್ಯ ಕಿರಣ ಸಾಯಿನಾಕ ಪ್ರಶ್ನಿಸಿದರು. ‘ಈ ವಿಷಯ ಕುರಿತು ನಿಯೋಗ ತೆರಳಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಮೇಯರ್‌ ನಿರ್ಣಯ ಪ್ರಕಟಿಸಿದರು.

ಉಪಮೇಯರ್‌ ಮಧುಶ್ರೀ ಪೂಜಾರಿ ಇದ್ದರು.

**

ಕಟ್ಟಡ ನಿರ್ಮಾಣಕ್ಕೆ ಅನುಮತಿ

ನೆಹರೂ ನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಹಾಸ್ಟೆಲ್‌ ಬ್ಲಾಕ್‌ (ಎ ಮತ್ತು ಬಿ), ಕಣಬರಗಿಯಲ್ಲಿ ಕಟ್ಟಡ ನಿರ್ಮಿಸುವುದು, ಪಾಲಿಕೆ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದಕ್ಕೆ ಸಭೆ ಅನುಮೋದನೆ ನೀಡಿತು.

ಕಾಮಗಾರಿಯ ಗುಣಮಟ್ಟ ಕಳಪೆಯಾಗಿರುವುದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ವಿರುದ್ಧ ಹಲ್ಲೆ ಮಾಡಿದ ಗುತ್ತಿಗೆದಾರ ಡಿ.ಎಲ್‌. ಕುಲಕರ್ಣಿ ವಿರುದ್ಧ ಕ್ರಮ ಜರುಗಿಸಬೇಕು ಎಂದು 39ನೇ ವಾರ್ಡ್‌ ಸದಸ್ಯ ಸತೀಶ ದೇವರಪಾಟೀಲ ಆಗ್ರಹಿಸಿದರು. ಗುತ್ತಿಗೆದಾರರ ಈ ಧೋರಣೆ ಸರಿಯಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು.

ತಮ್ಮ ಅಧಿಕಾರಾವಧಿಯ ಮೊದಲ ಸಭೆಯನ್ನು ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಉತ್ತಮವಾಗಿ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry