‘ಸಾಮಾಜಿಕ ನ್ಯಾಯ ಸರ್ಕಾರದ ಧ್ಯೇಯ’

7
ಜಮಖಂಡಿ: ಬಸ್‌ ನಿಲ್ದಾಣ, ಡಿಪೊ, ಮಾರುಕಟ್ಟೆ ಉದ್ಘಾಟಿಸಿದ ಈಶ್ವರ ಖಂಡ್ರೆ

‘ಸಾಮಾಜಿಕ ನ್ಯಾಯ ಸರ್ಕಾರದ ಧ್ಯೇಯ’

Published:
Updated:

ಜಮಖಂಡಿ: ‘ಸೂರು ಇಲ್ಲದವರಿಗೆ ಸೂರು, ನೀರು ಎನ್ನುವರಿಗೆ ನೀರು, ರೈತರಿಗೆ ಅಭಯ ಹಸ್ತ ನೀಡಿ ನುಡಿದಂತೆ ನಡೆದವರು ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಹೇಳಿದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ‘ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಿ ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ’ ಎಂದರು.

ನಗರದ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಶ್ರಯದಲ್ಲಿ ನೂತನ ಬಸ್ ನಿಲ್ದಾಣ, ನೂತನ ಬಸ್ ಘಟಕ ಹಾಗೂ ನಗರಸಭೆ ಕಾರ್ಯಾಲಯ ಆಶ್ರಯದಲ್ಲಿನ ನೂತನ ರಾಣಿಚೆನ್ನಮ್ಮ ಮಾರುಕಟ್ಟೆ ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರ ತನ್ನ 4 ವರ್ಷ 10 ತಿಂಗಳ ಆಡಳಿತ ಅವಧಿಯಲ್ಲಿ ಬಸವ, ಬುದ್ದ, ಅಂಬೇಡ್ಕರ್ ಅವರ ಸಮಾನತೆ ತತ್ವದಡಿಯಲ್ಲಿ ಸರ್ವರಿಗೂ ಸಕಲ ಸೌಲಭ್ಯ ನೀಡಿ ಜನಪರ ಕಾರ್ಯ ಮಾಡಿದೆ’ ಎಂದರು.

‘ರಾಜ್ಯದ 175 ತಾಲ್ಲೂಕು ಕೇಂದ್ರ ಗಳಲ್ಲೂ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಿ ಬಡವರಿಗೆ, ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ನೀಡಿ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲಾಗುತ್ತಿದೆ. ಅದರ ಕೀರ್ತಿ ಮುಖ್ಯಮಂತ್ರಿಗೆ ಸಲ್ಲುತ್ತದೆ’ ಎಂದರು.

‘ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಜೊತೆಗೆ ₹2 ಸಾವಿರ ಮಾಸಾಶನ ನೀಡುವ ಜೊತೆಗೆ ಸಂಕಷ್ಟದಲ್ಲಿರುವ ರೈತರು ನೆರವಿಗೆ ಬಂದು ₹ 8 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದರು.

‘ಜಮಖಂಡಿ ನಗರಸಭೆಗೆ ₹25 ಕೊಟಿ ಅನುದಾನ ನೀಡಿದ್ದೇನೆ. ಅಭಿವೃದ್ಧಿ ಕಾರ್ಯಗಳು ನಡೆಯಲಿವೆ’ ಎಂದರು.

‘ಬಯಲು ಶೌಚಮುಕ್ತ ನಗರವನ್ನಾಗಿ ಮಾಡಲು ಶೌಚಗೃಹ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ ₹15 ಸಾವಿರ ಪ್ರೋತ್ಸಾಹ ಧನ ನೀಡ

ಲಾಗುತ್ತಿದೆ. 24x7 ಕುಡಿಯುವ ನೀರಿನ ಯೋಜನೆ, ಕಸ ವಿಲೇವಾರಿ, ಕಸ ಸಂಸ್ಕರಣೆ, ಘನತಾಜ್ಯ ವಿಲೇವಾರಿಗೆ ಅನುದಾನ ಮೀಸಲಿಡಲಾಗಿದೆ’ ಎಂದರು.

ಶಾಸಕ ಸಿದ್ದು ನ್ಯಾಮಗೌಡ ಮಾತನಾಡಿ, ಜಿಲ್ಲಾ ಕೇಂದ್ರದ ಸ್ಥಾನಮಾನ ಪಡೆದುಕೊಳ್ಳುವುದಕ್ಕೆ ಬೇಕಾದ ಸೌಕರ್ಯ ಕಲ್ಪಿಸಿದ್ದೇನೆ. ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಮಂಜೂರು ಮಾಡಿಸಿಕೊಳ್ಳಲಾಗುವುದು. ಸಾವಳಗಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹2 ಕೋಟಿ ಅನುದಾನ ತರಲಾಗುವುದು. ಕ್ಷೇತ್ರದಲ್ಲಿ ಶೇ25 ರಷ್ಟು ಕೆಲಸ ಮಾತ್ರ ಆಗಿವೆ. ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದರು.

ಮಾತು ನಿಲ್ಲಿಸಿದ ಸಚಿವ: ಸಚಿವ ಈಶ್ವರ ಖಂಡ್ರೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲಿ ಆಜಾನ್ (ಪ್ರಾರ್ಥನೆ) ಕೇಳಿಬಂದಿತು. ಆಗ ಮಾತು ನಿಲ್ಲಿಸಿ ಆಜಾನ್ ಮುಗಿದ ನಂತರ ಮಾತು ಆರಂಭಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗವ್ವ ಕುರಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ನಗರಸಭೆ ಉಪಾಧ್ಯಕ್ಷೆ ಶಹಿರಾಬಾನು ಅಪರಾಜ, ಎಂ.ಡಿ.ಹಿಪ್ಪರಗಿ, ಟಿ.ಕೆ.ಪಾಲನೇತ್ರನಾಯಕ್, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಜಿ.ಎಚ್.ಕಾಸೆ, ರಕ್ಷಿತಾ ಈಟಿ, ಸುರೇಖಾ ನಾಡಗೇರ, ಸುಮಿತ್ರಾ ಗುಳಬಾಳ, ರೆವಣೆಪ್ಪ ತೆಲಬಕ್ಕನವರ, ಎ.ಆರ್.ಶಿಂಧೆ, ಫಕ್ಕೀರ್‌ ಸಾಬ್‌ ಬಾಗವಾನ, ಅಜಿತ್‌ ಮೆಂಗಾಣಿ ಇದ್ದರು.

ನಿತಿನ್‌ ಹೆಗಡೆ ಸ್ವಾಗತಿಸಿದರು. ಚಿದಂಬರ ಸವಾಯಿ, ರವಿ ಗೋಲಾ ನಿರೂಪಿಸಿದರು. ಸುರೇಶ ಬಾಗೇವಾಡಿ ವಂದಿಸಿದರು.

ಸಚಿವ ಈಶ್ವರ ಖಂಡ್ರೆ ನಗರದಲ್ಲಿ ₹10 ಕೋಟಿ ವೆಚ್ಚದಲ್ಲಿ 24x7 ಕುಡಿಯುವ ನೀರಿನ ಯೋಜನೆ, ಇಂದಿರಾ ಕ್ಯಾಂಟಿನ್ ಭೂಮಿ ಪೂಜೆ, ಭಕ್ತ ಕನಕದಾಸ ವೃತ್ತದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿದರು.

**

ಸಿದ್ದು ನ್ಯಾಮಗೌಡ ಸಚಿವರಾಗಲಿ

ರಾಜ್ಯದಲ್ಲಿಯೇ ದೂರದೃಷ್ಟಿಯುಳ್ಳ ನಾಯಕ ಸಿದ್ದು ನ್ಯಾಮಗೌಡ, ಅವರ ಕ್ರಿಯಾತ್ಮಕ ಯೋಜನೆಗಳು ಮಾದರಿಯಾಗಿವೆ. ನಾನು ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದುಕೊಂಡಿದ್ದೆ. ಅದರೆ ಇಲ್ಲಿನ ಸಂಸತ್ ಭವನ ಮಾದರಿ ಮಿನಿ ವಿಧಾನ ಸೌಧ, ಸಿಂಗಪುರ ಮಾದರಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ, ಬಸ್ ಡಿಪೊ, ಕಟ್ಟೆ ಕೆರೆ, ಪುಟ್‌ಪಾತ್, ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಿರುವುದು ಅಚ್ಚರಿಮೂಡಿಸಿದೆ’ ಎಂದರು.

‘ಜಮಖಂಡಿ ಜಿಲ್ಲಾ ಕೇಂದ್ರಸ್ಥಾನವಾಗಿಸುವ ನಿಟ್ಟಿನಲ್ಲಿ ಶಾಸಕ ಸಿದ್ದು ನ್ಯಾಮಗೌಡ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಸರ್ಕಾರದ ಮುಂದಿನ ಅವಧಿಯಲ್ಲಿ ಸಂಪುಟದಲ್ಲಿ ಉನ್ನತ ಸ್ಥಾನ ಸಿಗಲಿದೆ. ಅವರ ಸೇವೆ ರಾಜ್ಯದ ಇತರೆಡೆಗೂ ದೊರೆಯಲಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry