ಗ್ರಾಮ ತ್ಯಾಜ್ಯ ಸಂಸ್ಕರಣೆಗೆ ಖನಿಜ ನಿಧಿ

7
ಕಾರ್ಯಕ್ರಮ ರೂಪಿಸಲು ಬಳ್ಳಾರಿ ಜಿಲ್ಲಾ ಪಂಚಾಯ್ತಿ ಚಿಂತನೆ

ಗ್ರಾಮ ತ್ಯಾಜ್ಯ ಸಂಸ್ಕರಣೆಗೆ ಖನಿಜ ನಿಧಿ

Published:
Updated:

ಬಳ್ಳಾರಿ: ಗಣಿಗಾರಿಕೆಯಿಂದ ಬಾಧಿತವಾದ ಹಳ್ಳಿಗಳಲ್ಲಿ ಘನ ಮತ್ತು ಹಸಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ, ತ್ಯಾಜ್ಯ ಸಂಸ್ಕರಣೆ ಮೂಲಕ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಜಿಲ್ಲಾ ಪಂಚಾಯ್ತಿ ನಿರ್ಧರಿಸಿದೆ.

ಅದಕ್ಕಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯನ್ನು ಬಳಸಿಕೊಳ್ಳಲಿದ್ದು, ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕನ್ನು ಆಯ್ಕೆ ಮಾಡಲಾಗಿದೆ.

ಸ್ವಚ್ಛತೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ತಾಲ್ಲೂಕುಗಳಲ್ಲಿ ತ್ಯಾಜ್ಯ ಸಂಸ್ಕರಣೆಯ ಕಾರ್ಯವನ್ನು ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ. ಉದ್ಯೋಗಖಾತ್ರಿ ಯೋಜನೆಯ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಲಿದ್ದಾರೆ.

ಖಾತ್ರಿ ಅನುದಾನ, ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನವನ್ನು ಒಟ್ಟಿಗೇ ಬಳಸಿ ಜಾರಿಗೊಳ್ಳಲಿರುವ ಕಾರ್ಯಕ್ರಮದಲ್ಲಿ ಗ್ರಾಮಗಳ ಸ್ವಸಹಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳುವಂತೆ ಮಾಡಲು ಉದ್ದೇಶಿಸಲಾಗಿದೆ.

ಮಾದರಿ ಪರಿಶೀಲನೆ: ‘ಸಂಡೂರು ತಾಲ್ಲೂಕಿನ ಕೆಲವು ಪಂಚಾಯಿತಿಗಳಲ್ಲಿ ಜೆಎಸ್‌ಡಬ್ಲ್ಯು ಸಂಸ್ಥೆಯು ಈಗಾಗಲೇ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ, ಘನ ಮತ್ತು ಹಸಿ ತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಮತ್ತು ಉಪ ಉತ್ಪನ್ನಗಳ ತಯಾರಿಕೆ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ಡಾ.ರಾಜೇಂದ್ರ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ಮಾರಾಟ: ‘ತ್ಯಾಜ್ಯ ಸಂಗ್ರಹ, ಸಂಸ್ಕರಣೆ ಮೂಲಕ ಎರೆಹುಳು ಗೊಬ್ಬರ ತಯಾರಿಸುವ ಸಂಘಗಳಿಗೆ ಆದಾಯವೂ ದೊರಕಲಿದೆ. ಗ್ರಾಮಸ್ಥರಲ್ಲಿ ಸ್ವಚ್ಛತೆ ನಿರ್ವಹಣೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವುದೂ ಕಾರ್ಯಕ್ರಮದ ಮುಖ್ಯ ಭಾಗ’ ಎಂದು ಹೇಳಿದರು.

‘ಗ್ರಾಮ ಪಂಚಾಯ್ತಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈಗಾಗಲೇ ತ್ಯಾಜ್ಯ ವಿಲೇವಾರಿ, ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ಪಂಚಾಯ್ತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಪಡೆಯಲಾಗುವುದು. ಮಾದರಿ ಪಂಚಾಯ್ತಿಗಳನ್ನು ಅನುಸರಿಸಿಯೇ ಕಾರ್ಯಕ್ರಮ ಜಾರಿಗೊಳ್ಳಲಿದೆ’ ಎಂದರು.

ಶೌಚಾಲಯ:‘ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಚುರುಕುಗೊಂಡಿದ್ದು, ಈ ಮೂರು ತಾಲ್ಲೂಕುಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

**

‘ಸ್ವಚ್ಛತೆ ನಿರ್ವಹಣೆ ಆದ್ಯತೆಯಾಗಲಿ’

‘ತ್ಯಾಜ್ಯ ಸಂಸ್ಕರಣೆ, ಆದಾಯ ಚಟುವಟಿಕೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ ಪಂಚಾಯಿತಿ ಕೇಂದ್ರಗಳಲ್ಲೇ ಸ್ವಚ್ಛತೆ ನಿರ್ವಹಣೆ ಸರಿಯಾಗಿಲ್ಲ. ಸ್ವಚ್ಛತೆಗೆ ಆದ್ಯತೆ ನೀಡುತ್ತಲೇ ತ್ಯಾಜ್ಯ ಘಟಕಗಳ ಸ್ಥಾಪನೆ ಮಾಡುವುದು ಉತ್ತಮ’ ಎಂದು ಬಿ.ಬೆಳಗಲ್‌ ಗ್ರಾಮದ ನರಸಪ್ಪ ಅಭಿಪ್ರಾಯಪಟ್ಟರು.

‘ಚರಂಡಿಗಳ ಸ್ವಚ್ಛತೆಗೆ ಆದ್ಯತೆ ದೊರಕಬೇಕಾಗಿದೆ. ರಸ್ತೆ ಬದಿಯಲ್ಲೇ ಬಹಿರ್ದೆಸೆಗೆ ಕೂರುವ ಪದ್ಧತಿಯನ್ನು ದೂರ ಮಾಡಬೇಕು’ ಎಂದು ಸಿರಿವಾರ ಗ್ರಾಮದ ವೆಂಕಟೇಶ್‌ ಅಭಿಪ್ರಾಯಪಟ್ಟರು.

**

ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯ ಮೂಲಕ ಗ್ರಾಮಗಳಲ್ಲಿ ಸ್ವಚ್ಛತೆ ಅರಿವು ಮತ್ತು ತ್ಯಾಜ್ಯ ಸಂಸ್ಕರಣೆ ಕುರಿತು ಜಾಗೃತಿ ಮೂಡಿಸಲಾಗುವುದು

–ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry