ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಖಾತರಿಗೆ ವಿವಿ ಪ್ಯಾಟ್

ಜಿಲ್ಲಾಡಳಿತದಿಂದ ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ
Last Updated 24 ಮಾರ್ಚ್ 2018, 9:26 IST
ಅಕ್ಷರ ಗಾತ್ರ

ಬೀದರ್: ‘ಮತದಾರ ತಾನು ಚಲಾಯಿಸಿದ ಮತ ಯಾವ ಅಭ್ಯರ್ಥಿಗೆ ಹೋಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ವಿವಿ ಪ್ಯಾಟ್‌ ವೀಕ್ಷಿಸಬಹುದು. ಇದರಿಂದ ಚುನಾವಣಾ ವ್ಯವಸ್ಥೆ ಬಗ್ಗೆ ಮತದಾರರಲ್ಲಿ ಹೆಚ್ಚು ವಿಶ್ವಾಸ ಮೂಡಲಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಹೇಳಿದರು.

ನಗರದಲ್ಲಿ  ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಮತ ಖಾತರಿಪಡಿಸುವ ವಿವಿ ಪ್ಯಾಟ್ ಯಂತ್ರದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು’ ಎಂದರು.‘ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೇಲೆ ಪಕ್ಷದ ಚಿನ್ಹೆ, ಅಭ್ಯರ್ಥಿಯ ಹೆಸರಿನ ಜತೆಗೆ ಭಾವಚಿತ್ರವೂ ಇರಲಿದೆ. ಹೀಗಾಗಿ ಅನಕ್ಷರಸ್ಥರು ಸಹ ಸುಲಭವಾಗಿ ಮತ ಚಲಾಯಿಸಬಹುದು. ಅವರಿಗೆ ಬೇರೊಬ್ಬ ವ್ಯಕ್ತಿಯ ಸಹಾಯ ಬೇಕಾಗುವುದಿಲ್ಲ. ಇಲ್ಲಿ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ’ ಎಂದರು.‘ವಿವಿ ಪ್ಯಾಟ್‌ನಲ್ಲಿ ಏಳು ಸೆಕೆಂಡ್‌ ಚೀಟಿ ಕಾಣುತ್ತದೆ. ಒಬ್ಬ ಮತದಾರ ಮತದಾನ ಮಾಡಲು ಕನಿಷ್ಠ 10 ಸೆಕೆಂಡ್‌ ಬೇಕಾಗಲಿದೆ. ಹೀಗಾಗಿ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಮತದಾನವನ್ನು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕಾರಣಾಂತರದಿಂದ ಮತ ಯಂತ್ರ ಮಧ್ಯದಲ್ಲೇ ಕೈಕೊಟ್ಟರೆ ವಿವಿ ಪ್ಯಾಟ್‌ನಲ್ಲಿ ಸಂಗ್ರಹವಾಗುವ ಚೀಟಿ ಗಳನ್ನು ದಾಖಲೆ ರೂಪದಲ್ಲಿ ಪಡೆದು ಮತ ಎಣಿಕೆ ಮಾಡಬಹುದು. ಇದರಿಂದ ಮರು ಮತದಾನದ ಅವಶ್ಯಕತೆ ಇರುವುದಿಲ್ಲ. ಹಣ ಹಾಗೂ ಸಮಯದ ಉಳಿತಾಯವೂ ಆಗಲಿದೆ. ಇದಕ್ಕೆ ರಾಜಕೀಯ ಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದರು.

ಗ್ರಾಮಗಳಲ್ಲಿ ಜಾಗೃತಿ: ‘ತಾಲ್ಲೂಕು ಕೇಂದ್ರದಲ್ಲಿ ವಿವಿ ಪ್ಯಾಟ್‌ಗಳನ್ನು ಪ್ರಾತ್ಯಕ್ಷಿಕೆಗೆ ಇಡಲಾಗುವುದು. ಪ್ರತಿಯೊಂದು ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಿಗೆ ತಿಳಿವಳಿಕೆ ನೀಡಲಾಗುವುದು. ತಾಲ್ಲೂಕಿನಲ್ಲಿ ಒಂದು ಮೊಬೈಲ್‌ ವ್ಯಾನ್‌ ಬಳಸಲಾಗುವುದು. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ಹೇಳಿದರು.

‘ಉತ್ತರ ಪ್ರದೇಶದಿಂದ ಈಗಾಗಲೇ 2,250 ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ 1,800 ಕಂಟ್ರೋಲ್ ಯುನಿಟ್‌ಗಳು ಬಂದಿವೆ.
ಹತ್ತು ದಿನಗಳ ಕಾಲ ಮತಯಂತ್ರಗಳ ಪರಿಶೀಲನೆ ಹಾಗೂ ಶುದ್ಧೀಕರಣ ಮಾಡಲಾಗಿದೆ. 189 ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ 72 ಕಂಟ್ರೋಲ್ ಯುನಿಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅವುಗಳನ್ನು ತಿರಸ್ಕರಿಸಲಾಗಿದೆ. ಸರಿಯಾಗಿರುವ ಮತಯಂತ್ರಗಳಲ್ಲಿನ ದತ್ತಾಂಶ ಅಳಿಸಿ, ಆಯಾ ವಿಧಾನಸಭಾ ಚುನಾವಣೆಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 1,449 ಮತಗಟ್ಟೆ ಗಳನ್ನು ಸ್ಥಾಪಿಸಲಾಗುವುದು. ನಗರದ ಒಂದು ಮತಕೇಂದ್ರದಲ್ಲಿ ಗರಿಷ್ಠ 1,350 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಗರಿಷ್ಠ 1,250 ಮತದಾರರ ಹಕ್ಕು ಚಲಾವಣೆಗೆ ವ್ಯವಸ್ಥೆ ಮಾಡಲಾಗಿದೆ. ಕಡಿಮೆ ಬಿದ್ದಿರುವ 190 ಮತಯಂತ್ರಗಳು ಸೇರಿ ಹೆಚ್ಚುವರಿ ಮತಯಂತ್ರಗಳನ್ನು ಕಳಿಸಿಕೊಡುವಂತೆ ಭಾರತ ಎಲೆಕ್ಟ್ರಾನಿಕ್ಸ್‌ಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ ಇದ್ದರು.
**
ಹಾಲೊಗ್ರಾಂಗಳ ಕೊರತೆಯಿಂದ ಹೊಸ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಣೆಯಲ್ಲಿ ವಿಳಂಬವಾಗಿದೆ. ಶೀಘ್ರದಲ್ಲೇ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗುವುದು.

– ಎಚ್.ಆರ್.ಮಹಾದೇವ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT