ಸಲಹಾ ಸಮಿತಿ ವಿರೋಧದ ನಡುವೆ ನದಿಗೆ ನೀರು

7
ಭದ್ರಾ ‘ಕಾಡಾ’ ನಿರ್ಧಾರದ ವಿರುದ್ಧ ಅಚ್ಚುಕಟ್ಟು ಪ್ರದೇಶದ ರೈತರ ಆಕ್ರೋಶ; ನಾಲ್ಕು ಬೆಳೆಗಳಿಗೆ ನೀರಿಲ್ಲದೇ ನಷ್ಟ

ಸಲಹಾ ಸಮಿತಿ ವಿರೋಧದ ನಡುವೆ ನದಿಗೆ ನೀರು

Published:
Updated:
ಸಲಹಾ ಸಮಿತಿ ವಿರೋಧದ ನಡುವೆ ನದಿಗೆ ನೀರು

ದಾವಣಗೆರೆ: ನೀರಾವರಿ ಸಲಹಾ ಸಮಿತಿ ವಿರೋಧದ ನಡುವೆಯೂ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಜಲಾಶಯದಿಂದ ರಾತ್ರೋರಾತ್ರಿ ಭದ್ರಾ ನದಿಗೆ ನೀರು ಹರಿಸಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಾರ್ಚ್‌ 14ರಂದು ಉದ್ಘಾಟಿಸಲಾಗುತ್ತದೆ. ಆ ಸಮಯದಲ್ಲಿ ನದಿಯಲ್ಲಿ ನೀರು ಇರುವಂತೆ ನೋಡಿಕೊಳ್ಳಬೇಕಿದೆ. ಆದ್ದರಿಂದ ತಕ್ಷಣ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮಾರ್ಚ್‌ 10ರಂದು ಸೂಚನೆ ನೀಡಿದ್ದರು. ಇದಕ್ಕೆ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಮಾರ್ಚ್‌ 12ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದ ಭದ್ರಾ ಕಾಡಾ, ‘ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರಿನ ಅವಶ್ಯಕತೆಯಿದೆ. ಹೀಗಾಗಿ, ನದಿಗೆ ನೀರು ಬಿಡಲು ಸಾಧ್ಯವಿಲ್ಲ’ ಎಂದು ತನ್ನ ನಿಲುವು ತಿಳಿಸಿತ್ತು. ಆದರೆ, ಮಾರ್ಚ್‌ 22ರಂದು ಮೌಖಿಕ ಆದೇಶ ನೀಡಿರುವ ಪ್ರಾದೇಶಿಕ ಆಯುಕ್ತರು, ‘ಹಿಂದಿನ ಆದೇಶದಂತೆ ತಕ್ಷಣ ನದಿಗೆ ನೀರು ಹರಿಸಿ’ ಎಂದು ಸೂಚಿಸಿದ್ದಾರೆ.

ಹೀಗಾಗಿ ಕಾಡಾ ಅಧಿಕಾರಿಗಳು ರಾತ್ರೋರಾತ್ರಿ ಜಲಾಶಯದ ಕ್ರೆಸ್ಟ್‌ಗೇಟ್‌ಗಳನ್ನು ತೆರೆದಿದ್ದಾರೆ. 22ರಿಂದ 31ರವರೆಗೆ ಪ್ರತಿದಿನವೂ 2,500 ಕ್ಯುಸೆಕ್‌ನಂತೆ ಒಟ್ಟು 2 ಟಿಎಂಸಿ ಅಡಿ ನೀರು ಹರಿಸಲು ಮುಂದಾಗಿದ್ದಾರೆ.

ಕೊನೆಭಾಗದ ರೈತರಿಗೆ ಸಂಕಷ್ಟ: ‘ಭದ್ರಾ ಜಲಾಶಯದ ಕೊನೆಯ ಭಾಗಗಳಾದ ಹರಿಹರ ತಾಲ್ಲೂಕಿನ ಮಲೇಬೆನ್ನೂರು, ದಾವಣಗೆರೆ ತಾಲ್ಲೂಕಿನ ಹಲವು ಪ್ರದೇಶಗಳಿಗೆ ಸಾಕಷ್ಟು ನೀರು ಹರಿದು ಬಂದಿಲ್ಲ. ಸತತ ಬರದಿಂದಾಗಿ ರೈತರು ನಾಲ್ಕು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು. ಇದೀಗ ಭತ್ತ ನಾಟಿ ಮಾಡಿದ್ದಾರೆ. ಕಾಡಾದ ಅಕಾಲಿಕ ಮತ್ತು ಅವೈಜ್ಞಾನಿಕ ನಿರ್ಧಾರದಿಂದಾಗಿ ಈ ಬೆಳೆಯನ್ನೂ ಕಳೆದುಕೊಳ್ಳುವಂತಾಗಿದೆ’ ಎಂದು ನೀರಾವರಿ ಸಲಹಾ ಸಮಿತಿ ಸದಸ್ಯ ಬಿ.ಬಸವರಾಜ್‌ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಗಾಗಿ ಇನ್ನು 1 ಟಿಎಂಸಿ ಅಡಿ ಮಾತ್ರ ಹರಿಸಬೇಕಿದೆ. ಆದರೆ, ಪ್ರಾದೇಶಿಕ ಆಯುಕ್ತರು 2 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೇಸಿಗೆ ಬೆಳೆಗೆ ಸತತ 120 ದಿನ ನೀರು ಹರಿಸುವುದಾಗಿ ನೀರಾವರಿ ಸಲಹಾ ಸಮಿತಿ ಭರವಸೆ ನೀಡಿದ್ದ ಕಾರಣ ರೈತರು ಭತ್ತ ನಾಟಿ ಮಾಡಿದ್ದಾರೆ. ಇದೀಗ ನದಿಗೆ ನೀರು ಬಿಟ್ಟರೆ ಬಲನಾಲೆಯ ಕೊನೆ ಭಾಗದ ರೈತರಿಗೆ ಅನ್ಯಾಯವಾಗುತ್ತದೆ. ಸರ್ಕಾರದ ತೀರ್ಮಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಸಲಹಾ ಸಮಿತಿ ಸದಸ್ಯ, ರೈತ ಮುಖಂಡ ಕೆ.ಟಿ.ಗಂಗಾಧರ್‌ ಎಚ್ಚರಿಸಿದರು. ಭದ್ರಾ ಜಲಾಶಯದಿಂದ ನೀರು ಹರಿಯಬಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಫೋನ್‌ ಮಾಡಿದರೂ ‘ಕಾಡಾ’ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಕರೆ ಸ್ವೀಕರಿಸಲಿಲ್ಲ.

**

ಇನ್ನೂ 44 ದಿನ ನೀರು ಬೇಕು

ಕಾಡಾ ತೀರ್ಮಾನದಂತೆ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಬೆಳೆಗೆ 120 ದಿನ ನೀರು ಹರಿಸಬೇಕು. ಈಗಾಗಲೇ 76 ದಿನ ನೀರು ಹರಿಸಲಾಗಿದ್ದು, ಇನ್ನೂ 44 ದಿನ ನೀರು ಕೊಡಬೇಕು. ಸದ್ಯ ಜಲಾಶಯದಲ್ಲಿ 27.5 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಇದರಲ್ಲಿ ಬೆಳೆಗಳಿಗೆ ಅಂದಾಜು 14.7 ಟಿಎಂಸಿ ಅಡಿ ನೀರು ನೀಡಬಹುದು. 44 ದಿನ ನೀರು ಹರಿಸಲು ಈಗಾಗಲೇ 1 ಟಿಎಂಸಿ ಅಡಿ ನೀರಿನ ಕೊರತೆಯಿದೆ. ಇದೀಗ ಸಿಂಗಟಾಲೂರು ಯೋಜನೆಗಾಗಿ 2 ಟಿಎಂಸಿ ಅಡಿ ನೀರು ಹರಿಯಬಿಟ್ಟರೆ ಇಲ್ಲಿನ ಬೆಳೆಗಳಿಗೆ ಒಟ್ಟು 3 ಟಿಎಂಸಿ ಅಡಿ ನೀರು ಕೊರತೆಯಾಗುತ್ತದೆ. ಭತ್ತ ಹೂಬಿಟ್ಟು, ಕಾಳು ಕಟ್ಟುವಾಗ ನೀರು ಕೊರತೆಯಾದರೆ ಇಳುವರಿ ಕುಸಿದು, ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬಸವರಾಜ್‌ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry