ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಕಾಯ್ದೆ, ಗಡಿಪಾರು

ರೌಡಿ ಪಟ್ಟಿಯಲ್ಲಿರುವವರಿಗೆ ಪರೇಡ್‌: ಕಮಿಷನರ್‌ ನಾಗರಾಜ ಎಚ್ಚರಿಕೆ
Last Updated 24 ಮಾರ್ಚ್ 2018, 10:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರೌಡಿ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಚುನಾವಣೆ ವೇಳೆ ಸಾರ್ವಜನಿಕರ ಹಕ್ಕು ಮೊಟಕುಗೊಳಿಸಲು ಪ್ರಯತ್ನಿಸಿ ಜನಜೀವನಕ್ಕೆ ತೊಂದರೆ ಮಾಡಿದರೆ ಗೂಂಡಾ ಕಾಯ್ದೆ ಅಡಿ ಪ್ರಕರಣದ ದಾಖಲಿಸಿ ಗಡಿಪಾರು ಮಾಡಬೇಕಾಗುತ್ತದೆ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಎಂ.ಎನ್‌. ನಾಗರಾಜ ಎಚ್ಚರಿಕೆ ನೀಡಿದರು.

ಕಾರವಾರ ರಸ್ತೆಯಲ್ಲಿರುವ ಸಿಎಆರ್‌ ಮೈದಾನದಲ್ಲಿ ಶುಕ್ರವಾರ ರೌಡಿ ಪಟ್ಟಿಯಲ್ಲಿ ಹೆಸರು ಹೊಂದಿರುವವರ ಪರೇಡ್‌ ಸಂದರ್ಭದಲ್ಲಿ ಎಚ್ಚರಿಕೆ ಕೊಟ್ಟರು.

‘ಪಟ್ಟಿಯಲ್ಲಿ ಹೆಸರು ಹೊಂದಿ ಹತ್ತು ವರ್ಷ ಹಾಗೂ ಅದಕ್ಕಿಂತಲೂ ಹೆಚ್ಚು ವರ್ಷ ಆದ ಕೆಲವರನ್ನು ಪಟ್ಟಿಯಿಂದ ಕೈಬಿಡಿ. ಇನ್ನೂ ಕೆಲವರಿಂದ ಬಾಂಡ್‌ ಪಡೆದುಕೊಳ್ಳುವಂತೆ’ ಸೂಚಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಸರಿ ಎನಿಸುವ ವ್ಯಕ್ತಿಯನ್ನು ಆಯ್ಕೆಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಚುನಾವಣೆ ವೇಳೆ ಕೆಲವರು ಭಯದ ವಾತಾವರಣ ಉಂಟುಮಾಡಿ ತೊಂದರೆ ಮಾಡುವ ಪ್ರಯತ್ನದಲ್ಲಿರುತ್ತಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರೌಡಿ ಪಟ್ಟಿಯಲ್ಲಿ ಹೆಸರು ಹೊಂದಿರುವ 2,589 ಜನರ ಪೈಕಿ 874 ಜನರಿಂದ ₹ 50 ಸಾವಿರದಿಂದ ₹ 5 ಲಕ್ಷದವರೆಗೆ ಬಾಂಡ್‌ ಪಡೆದುಕೊಂಡಿದ್ದೇವೆ. 1,200 ಮಂದಿಯ ಚಲನವಲನಗಳ ಬಗ್ಗೆ ವಿಶೇಷ ನಿಗಾ ವಹಿಸಿದ್ದೇವೆ. ನಾಲ್ಕು ಜನರನ್ನು ಗಡಿಪಾರು ಮಾಡಿದ್ದೇವೆ. ಒಬ್ಬನ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. 176 ಜನರ ವಿರುದ್ಧ ಕೋಮು ಸೌಹೌರ್ದಕ್ಕೆ ಧಕ್ಕೆ ತಂದ ಬಗ್ಗೆ ದೂರುಗಳಿವೆ’ ಎಂದು ತಿಳಿಸಿದರು. ಆದರೆ, ಅವರ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದರು.

ಆರೋಪ ಪಟ್ಟಿಯಲ್ಲಿ ಇರುವ ಪ್ರಮುಖರು ಪರೇಡ್‌ಗೆ ಬಂದಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಕೆಲವರ ಬಗ್ಗೆ ಹೆಚ್ಚು ನಿಗಾ ವಹಿಸಬೇಕಿದೆ. ಆದ್ದರಿಂದ, ಅವರನ್ನು ಕಚೇರಿಗೆ ಕರೆಯಿಸಿಕೊಂಡು ನಾನೇ ಎಚ್ಚರಿಕೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಅವರಿಗೂ ಪರೇಡ್‌ ನಡೆಸಲಾಗುವುದು’ ಎಂದರು.

ಪೊಲೀಸರಿಗೂ ಸೂಚನೆ: ‘ವಿಧಾನಸಭಾ ಚುನಾವಣೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಜಿಲ್ಲಾಡಳಿತದ ಯೋಜನೆಗೆ ಪೂರಕವಾಗಿ ಪೊಲೀಸರೂ ಕೆಲಸ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಾಗರಾಜ ಅವರು ತಮ್ಮ ಸಿಬ್ಬಂದಿಗೆ ಸೂಚಿಸಿದರು.

‘ಜನರು ಸ್ವಾತಂತ್ರ್ಯ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ವೇದಿಕೆ ಕಲ್ಪಿಸಿಕೊಡಲಾಗುವುದು. ಶಾಂತಿ ಕದಡುವ ರೌಡಿಗಳು ಹಾಗೂ ಗೂಡಾಗಳ ವಿರುದ್ಧ ಯಾವ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ನೀವೂ ಯಾರೊಂದಿಗೂ ಗುರುತಿಸಿಕೊಳ್ಳದೆ ಶಿಸ್ತಿನಿಂದ ಕೆಲಸ ಮಾಡಬೇಕು’ ಎಂದರು. ಇದಕ್ಕೂ ಮೊದಲು ಪೊಲೀಸರಿಂದ ಆಕರ್ಷಕ ಕವಾಯತು ನಡೆಯಿತು.

ಬಡ್ತಿ ಪಡೆದ ಪೊಲೀಸರಿಗೆ ಸನ್ಮಾನ: ಡಿಎಸ್‌ಪಿಯಾಗಿ ಬಡ್ತಿ ಪಡೆದು ವರ್ಗಾವಣೆಗೊಂಡಿರುವ ಆರ್‌ಪಿಐಗಳಾದ ಸುನೀಲ ಪರಪ್ಪ ಕೊಡ್ಲಿ ಮತ್ತು
ಮುರಿಗೆಪ್ಪ ಉಪಾಸೆ ಅವರನ್ನು ಇದೇ ವೇಳೆ ನಾಗರಾಜ ಸನ್ಮಾನಿಸಿದರು.  ಡಿಸಿಪಿಗಳಾದ ರೇಣುಕಾ ಸುಕುಮಾರ್, ಬಿ.ಎಸ್‌. ನೇಮಗೌಡ ಇದ್ದರು.
**
ಬಾರ್‌ಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಕಡ್ಡಾಯ

ನಗರದ ಎಲ್ಲ ಬಾರ್‌ಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯ ಎಂದು ನಾಗರಾಜ ಹೇಳಿದರು.

‘ನಿಗದಿ ಮಾಡಿದ ವೇಳೆಯ ಒಳಗೆ ಬಾರ್‌ಗಳನ್ನು ಬಂದ್‌ ಮಾಡಬೇಕು. ಬಾರ್‌ನಲ್ಲಿ ಅಹಿತಕರ ಘಟನೆ ನಡೆಯದಂತೆ ಮಾಲೀಕರು ಎಚ್ಚರಿಕೆ ವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT